ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕುಪೇಕ್ಷಿಸುವಿ ಕರುಣೈಕನಿಧಿ ನರಸಿಂಹ ವೈರಿ ಪುಂಜನನ ಶ್ರೀಕರನೆ ನೀನೆನಗೆ ಶರಣೆಂದು ನಂಬಿದೆನು ಸಾಕಬೇಕಯ್ಯ ದಾಸರನು ಪ. ಹುಡುಗ ಪ್ರಲ್ಹಾದ ಜಗದೊಡೆಯ ನೀನಹುದೆಂಬ ನುಡಿಯಲಾಲಿಸುತವನ ಪಿತನು ಕಡಿವೆನೆಂದೆದ್ದು ಮುಂದಡಿಯಿಟ್ಟು ಮುಂದರಸಿ ದೃಢ ಮುಷ್ಟಿಯಿಂದ ಖಂಬವನು ಬಡಿಯುತಿರೆ ಶತಕೋಟಿ ಸಿಡಿಲಂತೆ ಗರ್ಜಿಸುತ ಘುಡುಘುಡಿಸಿ ಬಂದು ದೈತ್ಯನನು ಪಿಡಿದೆತ್ತಿ ತೊಡೆಯ ಮೇಲ್ ಕೆಡಹಿ ದಶನಖದಿಂದ ಒಡಲ ಬಗೆದನೆ ನೀಚರನು 1 ನರಸಿಂಹನೆಂಬ ಈರೆರಡು ವರ್ಣವ ಜಪಿಸೆ ದುರಿತ ದೂರೋಡುತಿಹವೆಂದು ಸರಸಿಜೋದ್ಭವ ಶಂಭು ಸುರನಾಥ ಮುಖ್ಯಮುನಿ ವರರು ಕೊಂಡಾಡುತಿಹರಿಂದು ಅರಿತದನು ತ್ವತ್ಪಾದ ಸರಸಿಜವೆ ಶರಣೆಂದು ದೊರೆ ನಿನ್ನ ನಂಬಿಕೊಂಡಿಹೆನು ಅರಿಭಾವ ಸಾಧಿಸುವ ದುರುಳರನು ಪಿಡಿದವರ ಕರುಳ ತೆಗೆದೆತ್ತಿ ಬೀರದನು 2 ಅತಿ ಸೂಕ್ಷ್ಮಯಂದಗ್ನಿ ಗತಿಯನ್ನುಪೇಕ್ಷಿಸಲು ವಿತತವಾಗುವುದು ಕ್ಷಣದೊಳಗೆ ಜತನ ಮಾಡುವರದರ ಗತಿಯನಳಿಸುವುದು ಸ- ಮ್ಮತವಾಗಿರುವುದು ಜಗದೊಳಗೆ ಪತಿತಪಾವನ ಶೇಷಗಿರಿರಾಜ ನೀ ಯೆನಗೆ ಗತಿಯಾಗಿ ಸಲಹುವುದರಿಂದ ವಿತಥಾಭಿಲಾಷೆಯಾತತಾಯಿಗಳ ತ್ವರೆಯಿಂದ ಹತಮಾಡಿಸು ಶ್ರೀ ಮುಕುಂದ 3
--------------
ತುಪಾಕಿ ವೆಂಕಟರಮಣಾಚಾರ್ಯ