ತನುವೆಂಬ ಭವನದಲಿ ಮನವೆಂಬ ಮಂಟಪದಿ
ವನರುಹಾಸನ ವಿಹುದು ನಿನಗಾಗಿ ಕೃಷ್ಣಾ ಪ
ಅನವರತ ಸ್ವಾಗತವ ಇನಿದಾಗಿ ಪೇಳುತಲಿ
ಸನುಮತದೊಳೀರೈದು ಮುನಿವರರು ನಿಂದಿಹರು ಅ.ಪ
ಎನಗೆ ತನಗೆಂದಿಬ್ಬರನುವಾಗಿ ಕಾದಿಹರು
ಘನ ಮೌನಿಯಂತೊಬ್ಬ ಮಣಿಯುತಿಹನು
ವನಜ ಸಂಭವ ಜನಕ ಮುನಿಯೊಡನೆ ನೀ ಬಂದು
ಕನಕಮಂಟಪವೇರು ಅವರಿಬ್ಬರೋಡುವರು 1
ಕರಿಯ ಮೈಯವನೊಬ್ಬ ದುರದುರನೆ ನೊಡುವನು
ಪರಿವಾರದವರನ್ನು ತೋರುತಿಹನೊಬ್ಬ
ಕರದಿ ಸನ್ನೆಯ ಮಾಡುತಿಬ್ಬರೂ ಬರುತಿಹರು
ತರಿದವರ ಮಂಟಪವನೇರೊ ಮಾಂಗಿರಿರಂಗ 2