ಒಟ್ಟು 56 ಕಡೆಗಳಲ್ಲಿ , 24 ದಾಸರು , 42 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದು ಮಧುರೆಗೆ ತಾ ಕೊಂದು ಮಾತುಳನ ಬಂಧನ ರಹಿತವಾಗಲು ಮಾತಾಪಿತರು 1 ಜರೆಯಸುತನ ಬಾಧೆಯು ಘನವಾಗುತಿರಲು ಜಲದೊಳು ದ್ವಾರಕಾಪುರವ ನಿರ್ಮಿಸಿದ 2 ಯದುನಂದನ ತನ್ನಗ್ರಜ ಬಲರಾಮನ ಕೂಡ ಮುದದಿಂದಾವಾಸ ಯಾದವರ ಸಹಿತಾಗಿ3 ಇರುತಿರೆ ರುಕುಮ ತನ್ನನುಜೆ ಸಹಿತಾಗಿ ಚೆಲುವ ಸುಂದರಿಗೆ ಬ್ಯಾಗ್ವಿವಾಹದುತ್ಸವವು 4 ಅಕ್ಕರದನುಜೆ ರುಕ್ಮಿಣೀದೇವಿಗಿನ್ನು ಚಿಕ್ಕ ಚೆನ್ನಿಗನಾದ ತಕ್ಕ ವರನ್ಯಾರು 5 ವಸುಧೆಪಾಲರ ಮಧ್ಯ ಶಿಶುಪಾಲನೀಗಧಿಕ ಕುಸುಮಗಂಧಿನಿಗೆ ನಿಶ್ಚಯವ ಮಾಡಿದರು 6 ಅಗ್ರಜನ್ವಾಕ್ಯವ ಕೇಳಿ ಮನದಲ್ಯೋಚಿಸುತ ಘನಮಹಿಮಗೆ ಓಲೆ ಬರೆದಳು ಲಿಖಿತ 7 ಹರಿ ನೀನೆ ಮುರವೈರಿ ಸರುವಾಂತರಯಾಮಿ ನಿನ್ನ ಸ್ಮರಣೆ ದರುಶನ ಮಾತ್ರಕೆ ಪರಮಲಾಭೆನಗೆ 8 ಎಂದೆಂದಿಗೆನ ಕೂಡಾನಂದವ ಬಟ್ಟು ಇಂದೆ ಕೈಬಿಟ್ಟು ದೂರಿಂದ ನೋಡುವರೆ 9 ಪ್ರಾಣಪತಿ ನೀ ಪಾಣಿಗ್ರಾಣ (ಗ್ರಹಣ?) ಮಾಡದಲೆ ಇರೆ ಪ್ರಾಣ ಉಳಿಯದು ಕೇಳೆನ್ನಾಸೆ ಹುಸಿಯಲ್ಲ 10 ಸರ್ವರ್ವಂದಿತ ನಿನ್ನ ಅರಮನೆದ್ವಾರ ಕಾದಿರುವೋ ಭೃತ್ಯರಿಗೊಪ್ಪಿಸಿಕೊಡದೆ ಕರುಣಾಳು 11 ದೇಶಕಾಲಕೆ ನಾ ನಿನ್ನ ಸಮಳ್ವಾಸುದೇವ ಗುಣಕಸಮಳೆಂದು ಉದಾಸೀನ ಮಾಡಬ್ಯಾಡ 12 ವಕ್ಷಸ್ಥಳದ ವಾಸಿಯ ತುಚ್ಛಮಾಡದಲೆ ಲಕ್ಷೀಲೆ ಕರೆದೊಯ್ಯೊ ಪಕ್ಷಿವಾಹನನೆ 13 ಎನ್ನ ಬಿನ್ನಪ ಕೇಳಿ ಮನ್ನಿಸೊ ಕೃಷ್ಣ ಪನ್ನಂಗಶಯನ ನಿನ್ನ ಪಾದಕ್ಕೆರಗುವೆನು 14 ಪಾದ ಉರಗ ಮೆಟ್ಟಿದ ಪಾದ ನಿನ್ನ ಧ್ವಜವಜ್ರಾಂಕುಶ ಪಾದಕ್ಕೆರಗಿ ನಮಿಸುವೆನು 15 ಬರೆದ ಓಲೆಗೆ ಹಚ್ಚಿ ಅರೆದರಿಷಿಣವ ಕರವ ಜೋಡಿಸಿ ಕೊಟ್ಟು ಕಳುಹೆ ದ್ವಾರಕೆಗೆ16 ಜಗದೀಶಗೆ ಪತ್ರವ ಜಾಣೆ ತಾ ಬರೆದು ದ್ವಿಜನ ಕೈಯಲಿ ಕೊಟ್ಟು ಕಳುಹೆ ದ್ವಾರಕೆಗೆ 17 ವ್ಯಾಳ್ಯ ಮೀರುವುದೆಂದು ಎದ್ದಾಗ ರುಕುಮ ಭೇರಿ ತಾಡನ ಮಾಡಿಸೆ ಭೋರೆಂಬೊ ರಭಸ 18 ಎರೆದು ಮುಡಿಯನ್ಹಿಕ್ಕಿ ಜಡೆಯಬಂಗಾರ ಚೌರಿ ರಾಗಟೆ ಗೊಂಡ್ಯ ಧರೆಗೆ ಮುಟ್ಟುತಿರೆ 19 ಅಚ್ಚ ಜರತಾರಿ ಹೊಳೆವಷ್ಟಪತ್ರಿಕೆಯು ಮ್ಯಾಲೊಪ್ಪುವೊ ಪಟ್ಟೀನೊಡ್ಯಾಣ ಸರಿಸಿಟ್ಟು 20 ಕಂಕಣ ಚೂಡ್ಯ ದ್ವಾರ್ಯ ್ಹರಡಿ ಕೈಕಟ್ಟು ಮ್ಯಾ- ಕಂಚುಕ ತೊಟ್ಟು 21 ಹರಳು ಮಾಣಿಕ್ಯದ್ವಾಲೆ ಬುಗುಡಿ ಬಾವುಲಿಯು ಹೊಳೆವೊ ಮುತ್ತಿನ ಮೂಗುತಿ ಥಳಥಳಸುತಲಿ 22 ಹಾರ ಪದಕದ ಮಧ್ಯ ಮೇಲಾದೇಕಾವಳಿಯು ತೋರ ಮುತ್ತಿನ ದಂಡೆ ಲೋಲ್ಯಾಡುತಿರಲು 23 ಕನ್ನಡ್ಯಂದದಿ ಗಲ್ಲ ಕಳೆಯ ಸುರಿಸುತಲಿ ಸಣ್ಣಮುತ್ತಿನ ಗೊಂಚಲು ಸರಗಳಲೆಯುತಲಿ 24 ಝಗಝಗಿಸುತ ಬಂದಳು ಜಗದ ಮೋಹಿನಿಯು ಮುಗುಳು ನಗೆಯಿಂದ ಮೂರ್ಜಗವ ಮೋಹಿಸುತ 25 25 ಗೆಜ್ಜೆ ಸರಪಳಿ ಅಂದಿಗೆ ಹೆಜ್ಜೆಸರಿಸಿಡುತ ನಿರ್ಜರೇಶನ ಮಾರ್ಗದ ನಿರೀಕ್ಷಣದಿಂದ 26 ಸುತ್ತ ಮುತ್ತೈದೇರು ಕತ್ತಿಕೈ ಭಟರು ತುತ್ತೂರಿ ವಾದ್ಯ ಭೇರಿ ತಮ್ಮಟೆ ಕಾ(ಕಹ?) ಳೆ 27 ನಡೆದು ರುಕ್ಮಿಣಿ ಹೊಕ್ಕಳು ಗುಡಿಯ ಮಹಾದ್ವಾರ ಮೃಡನರಸಿಯ ಪೂಜಿಸಿ ದೃಢಭಕ್ತಿಯಲಾಗ 28 ಹಿರಿಯ ಮುತ್ತೈದೇರಿಗೆ ಮರದ ಬಾಗಿನವ ಅರೆದರಿಷಿಣ ಕುಂಕುಮ ಕರದಲ್ಲಿ ಗಂಧ 29 ಕಡಲೆ ಕಬ್ಬು ಕಾಯಿ ಉಡಿಯ ತುಂಬುತಲಿ ಕಡಲಶಯನನ ಮಾರ್ಗವ ಬಿಡದೆ ನೋಡುತಲಿ 30 ಮಂಗಳಗೌರಿಯೆದುರಿಗೆ ಮುತ್ತೈದೇರು ಅಂಗನೆ ಭೈಷ್ಮಿ ಪೀಠದಲಿ ಕುಳ್ಳಿರಿಸಿ 31 ಮಂಗಳಾಂಗನು ನಿನ್ನ ಪತಿಯಾಗಲೆಂದು ಮಂಗಳಸೂತ್ರ ಬಂಧನ ಮಾಡಲು ನಗುತ 32 ಮಾರನಯ್ಯನ ಮೋರೆ ನೋಡಿದಾಕ್ಷಣದಿ ಮಹಾ- ದ್ವಾರದಿ ಮುತ್ತು ಸೂರ್ಯಾಡೇನೀಕ್ಷಣದಿ 33 ಹರನ್ವಲ್ಲಭೆ ತೋರೆ ಮುರಹರನ ಕರಿವರನ ಭಯ- ಹರನ ಶ್ರೀಧರನ ಕೊಡುವೆನೀ ದೇವರನು 34 ಮಚ್ಛಲೋಚನೆ ಧ್ಯಾನ ಅಚ್ಚ್ಯುತನಲ್ಲೇ ಇಡೆ ಭಕ್ತ- ವತ್ಸಲ ಬಂದನೆಂದೆಚ್ಚರಿಸಿದರು35 ಹತವಾದ ಪ್ರಾಣ ಬರಲತಿ ಹರುಷವ್ಹ್ಯಾಗೋ ರಥವ ಕಾಣುತ ರುಕ್ಮಿಣಿ ಕೃತಕೃತ್ಯಳಾಗ 36 ಸೃಗಾಲದ ಮಧ್ಯ ಒಂದು ಸಿಂಹ ಹೊಕ್ಕಂತೆ ಶ್ರೀನಾಥ ರುಕ್ಮಿಣಿಯ ಸ್ವೀಕಾರ ಮಾಡಿದನು 37 ರಥವು ಮುಂದಕೆ ಸಾಗೆ ಪಥವು ತೋರದಲೆ ಅಲೆ ಬಾಯ ಬಿಡುತ ಶ್ರೀಪತಿಯ ಬೆನ್ನ ್ಹತ್ತಿ 38 ಬಂದ ರುಕುಮನ ಗಡ್ಡ ಮಂಡಿ ಸವರುತಲಿ ಬಂಧನ ರಥಕೆ ಮಾಡಿದ ನಂದಸುತನು 39 ವಾರೆನೋಟದಿ ನೋಡಿ ಮೋರೆ ತಗ್ಗಿಸಿದ ನಾರಿ ರುಕ್ಮಿಣಿಯ ಮುಖ ನೋಡಿ ಶ್ರೀಕೃಷ್ಣ 40 ಕರುಣವಿರಲಿಕ್ಕೆ ನೀ ಬರೆದ್ಯಾತಕೆ ಓಲೆ ತಿಳಿಯಲಿಲ್ಲವೆ ಎಂದೀಪರಿ ಹಾಸ್ಯದಿ ನುಡಿದ41 ಒಡಹುಟ್ಟಿದವನಲ್ಲಿ ಕಡು ಮೋಹವಿನ್ನೂ ಹಿಡಿಯದೆನ್ನೊಳು ಕೋಪ ಬಿಡುರುಕ್ಮಿಣಿ ಎಂದ 42 <ಈಔಓಖಿ ಜಿಚಿಛಿe='ಓuಜ
--------------
ಹರಪನಹಳ್ಳಿಭೀಮವ್ವ
(5) ಶ್ರೀನಿವಾಸ ವಿಪ್ರವಂದಿತ ಪಾಪಕೋಟಿ ಕುಲನಾಶಾ ಶ್ರೀವೆಂಕಟೇಶಾ ಪ ನಿಜನುಡಿಯ ಭೃಗುನುಡಿಯೆ ಮುನಿಮಂಡಲಿಯ ನಡೆಯೆ ತ್ರಿಜಗಾಗ್ರಪೂಜಿತ ಪರಬ್ರಹ್ಮ ನೀನೇ 1 ಪಶುವತ್ಸಗೋಪಾಲ ಸರ್ವವೂ ನೀನಾಗೆ ಬಿಸಜಭವ ಬೆದರುತ್ತ ಪದಕೆರಗಿದ 2 ಮೋಹಿನಿಯವೇಶದಿಂ ರಕ್ಕಸನ ಭಸ್ಮಿಸಿ ಪಾಹಿಮೆನಲಾ ದಕ್ಷ ವೈರಿಯ ರಕ್ಷಿಸಿದೆ 3 ಗಿರಯನೇ ಕೊಡೆವಿಡಿದು ಗೋಕುಲವನೆ ಕಾಯ್ದೆ ಸುರರಾಜ ಗರಿಮುದುರಿ ಶರಣೆಂದು ಬಂದ 4 ವಿಧವರದಿ ಬೆರೆದ ಹಿರಣ್ಯಕಶಿಪುವ ಬಗೆದು ಸದೆದೆ ಶಿವಕಾವಲಿನ ಬಾಣನಂ ಬಿಡವೇ 5 ಸಾಸಿರಗಳರವತ್ತು ಸಗರಸುತರನು ಸುಟ್ಟು ಘಾಸಿಹರಿಸಿದೆ ಜಗದೆ ಜೀವ ಜಂತುಳಿಗೆ 6 ಪಾತಕಿಯ ರಾವಣನು ಕಾರವರ ಕೊಂದೇ 7 ಬಲಿದ ಶಾಪವ ಕಳೆದು ಕಾಯ್ವ ಬಂಧೂ 8 ಸಾವುಂಡ ಶಿಶುವನು ಗುರುವಿಗೆ ನೀ ತಂದಿತ್ತೆ ನೋವುಂಡ ಇಂದ್ರಂಗೆ ಲೋಕಗಳನಳೆದೆ 9 ಅಜಕಪಾಲವ ಬಿಡಿಸಿ ಮೃತ್ಯುಂಜಯನ ಹರಸಿ ಅಜಮಿಳನ ನೀ ಮುಕ್ತಿಸ್ಥಾನಕ್ಕೆ ತಂದೆ 10 ಸರ್ವಕಾಲಗಳಲ್ಲು ಅಪರಾಧಿ ನಾನಯ್ಯ ಗರ್ವಿಯೆನಿಸದೆ ತಪ್ಪು ಕ್ಷಮಿಸಯ್ಯ ತಂದೆ 11 ಆನೆ ಅಳುವುದು ಕೇಳಿ ಮೊಸಳೆಬಾಯನು ಸೀಳ್ದೆ ನೀನೆ ಆಪದ್ಭಂದು ಕಾರುಣ್ಯಸಿಂಧು12 ಅರಗಿನ ಮನೆಯಲ್ಲಿ ಭರದಿಂದ ಬಾಂಧವರಿಗೆ ಉರಿಭಯವ ತಪ್ಪಿಸಿ ಪೊರೆದ ಪ್ರಭುವೇ13 ದ್ರುಪದ ಪುತ್ರಿಗೆ ಮಾನ ಸಂರಕ್ಷಣೆಯನು ಮಾಡಿ ಕೃಪೆತೋರಿಪಾರ್ಥಂಗೆ ಸಾರಥಿಯು ಆದೆ 14 ಕಾಲ ವಾಲಿಪ್ರಾಣಕೆ ಶೂಲ ಲೀಲೆಯಿಂ ಭಕ್ತರಂ ಪಾಲಿಸುವೆ 15 ಪಾವನದ ಪಾದಗಳನಿಂತು ಮುಡಿಯಮೇಲೆ ಭಾವಿಸುವೆ ಭವಕಳೆಯೆ ನಾತಾಳೆ ನಾಳೆ 16 ತಾಪಗಳು ಮೂರನುಂ ಹರಿಪ ಸಂಕಟದೂರ ಕಾಪಾಡು ಶ್ರೀಹರಿ ಬಂಧುಬೇರಿಲ್ಲ ಭಕ್ತಸತ್ರಾ 17 ಶರಣಸಂರಕ್ಷಣ ಬಿರುದು ಧರಸಿಹೆ ನಿತ್ಯ ಭರದಿ ಶಾಂತಿನೀಡೋ ಚರಣಕ್ಕೆ ಶರಣು 18 ಕ್ಷಾಮಡಾಮರ ಕಳೆಯೆ ಸುವೃಷ್ಟಿಯ ಕರೆವೆ ಕಾಮಿತಾರ್ಥದ ಕಾಮಧೇನು ಸ್ವಾಮಿ ತಾಯಿತಂದೆ 19 ಚಕ್ರಧರ ಚಕ್ರಧರ ಭಜಿಪ ಭಕ್ತರ ಪಾಲ ನರಸಿಂಹ ನರಸಿಂಹ 20 ಕ್ಷೇಮಕರಗರುಡನೇ ಧ್ವಜನು ವಾಹನನು ಭೀಮ ಹನುಮ ಪ್ರೇಮ ಹೆಜ್ಜಾಜಿಶ್ಯಾಮ ಸ್ವಾಮಿ21
--------------
ಶಾಮಶರ್ಮರು
(ಶ್ರೀಹರಿಯ ಮೋಹಿನಿ ರೂಪ) ನೋಡಿರೊ ಸ್ತ್ರೀರೂಪವ ನೋಡಿರೋ ಪ. ನೋಡಿರೊ ಹರಿಯ ಸ್ತ್ರೀರೂಪ ಸ್ತುತಿ ಮಾಡಿರೊ ಮಹಿತಾ ಪ್ರತಾಪ ಅಹ ಜೋಡಾದ ಸತಿಯರ ನೋಡಿ ನಗುತ ನಲಿ- ದಾಡುವ ಶ್ರೀಕೃಷ್ಣ ಪ್ರಹುಡೆಯಾಗಿರುವುದ ಅ.ಪ. ಭಾರ್ಗವ ವಾಸರದಲ್ಲಿ ಯತಿ ವರ್ಗವೆಲ್ಲವು ಸೇರುತಿಲ್ಲಿ ಪಂಚ ಮಾರ್ಗಣಪಿತನಿದಿರಲ್ಲಿ ಅಷ್ಟವರ್ಗೋಪಚಾರಗಳಲ್ಲಿ ವಿಧಿ ಭರ್ಗ ವಂದ್ಯ ಪ್ರಭು ದುರ್ಗಾರಮಣ ಸತ್ವ ಸರ್ಗಪಾಲನ ಸನ್ಮಾರ್ಗದಿ ಸ್ತುತಿಪುದ 1 ಧೀರಮರಾಸುರರಂದು ಕ್ಷೀರವಾರಿಧಿ ತಡಿಯಲ್ಲಿ ಬಂದು ಬಹು ಮಂದರ ಕಟ್ಟಿ ನಿಂದು ಸುಧ ಸಾರವ ತೆಗೆಯಲು ಕಾರುಣ್ಯದಲಿ ದಾನ ವಾರಿಗಳಿಗೆ ಕೊಟ್ಟ ನಾರಾಯಣಿಯನ್ನು 2 ನಾಯಕ ಧೀರ ಕಂಜ ನಿವಹ ರಕ್ಷಿಸು ಗಂಭೀರಾ ಅಹ ಪವನಾವತಾರನ ಸ್ತವನಕೊಲಿದು ಬಂದ ಕವಿ ಶೇಷಗಿರಿವಾಸ ಭವಭಯಹಾರಿಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಂಬಾ ಮಹೇಶ್ವರ ಮನಮೋಹಿನಿ ಪ ರಮಾವಿನುತ ಹರಿಸಹೋದರೀ ನಮಾಮಿ ಶಂಕರೀ ಲೋಕೇಶ್ವರೀ 1 ಮಾರವೈರಿರಾಣಿ ನೀರಜಾತಪಾಣಿ ಶಾರದೇ ಶರ್ವಾಣಿ ಗೌರಿ ಕಲ್ಯಾಣಿ ಸಾರ ಮಧುರವಾಣಿ ನಾರಿ ಭುಜಗವೇಣಿ ಘೋರದೈತ್ಯ ಸಂಹಾರಿಣಿ ದೇವಿ ರುದ್ರಾಣಿ 2 ಈಶ ಮನೋಹರೆ ಪಾಶಾಂಕುಶಧರೇ ಶ್ರೀಶಿತಿಕಂಠ ವಿಲಾಸ ವಿಹಾರೆ ಕ್ಲೇಶನಾಶಕರೇ ಭಾಸುರ ಮುಕುರೇ ಶ್ರೀಶ ಮಾಂಗಿರಿವಾಸ ತೋಷಣಚತುರೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಅರುಣೋದಯಕೆ ಮುಂಚೆ ಬಲು ಕತ್ತಲಂತೆ ಪ ಸಿರಿ ಬರುವುದಕೆ ಮುಂಚೆ ಮುಖ ಸುತ್ತು ಜನಕೆ ಅ.ಪ ಹೊಟ್ಟಿ ಹಸಿದರೆ ಅನ್ನ ಬಹಳ ರುಚಿಯಂತೆ ಕೆಟ್ಟು ಬದುಕುವ ಮನುಜ ಬಲು ಘಟ್ಟಿಯಂತೆ ಸಿಟ್ಟು ಮಾಡುವ ಮನುಜ ಕೊನೆಗೆ ಕುರಿಯಂತೆ ಬಿಟ್ಟಿ ಬಯಸುವ ನರನು ಬಲು ಮೋಸವಂತೆ 1 ಸುಳ್ಳು ಹೇಳುವ ನರಗೆ ಪರದಾಟವಂತೆ ಜಳ್ಳುರಾಶಿಯ ನೋಡೆ ದೊಡ್ಡಗಿರಿಯಂತೆ ಕಳ್ಳ ಒಳಗಿರಲಲ್ಲಿ ಶಾಂತಿಯಿಲ್ಲಂತೆ ಕುಳ್ಳ ಹೋರಾಡಿದರೆ ಜಯವಿಲ್ಲವಂತೆ 2 ಭಾರಿ ಮಳೆ ಸುರಿಯಲಿರೆ ಬಹಳ ಬಿಸಿಲಂತೆ ಊರು ಸೇರುವ ಮುನ್ನ ಬಹಳ ದಣಿಯಂತೆ ಕೀರುತಿಯ ಪಡೆಯುವಗೆ ಬಹು ಶತ್ರುವಂತೆ ಮೂರು ಜ್ಞಾನಿಗಳಿರಲು ಭಾರಿ ಸಭೆಯಂತೆ 3 ಮುಳ್ಳಿರುವ ಗಿಡಗಳಲಿ ಬಹು ಪುಷ್ಪವಂತೆ ಹಳ್ಳದಲಿ ಸಿಗುವ ಜಲ ಬಹಳ ರುಚಿಯಂತೆ ಹಳ್ಳಿಗಾರನ ಸತ್ಯ ಬಹಳ ಒರಟಂತೆ ಎಳ್ಳು ಕಾಳುಗಳು ಶನಿಯ ಓಡಿಸುವುದಂತೆ 4 ಮುಟ್ಟಲಾಗದ ನಾಯಿ ದಾಸಾನುದಾಸ ಶ್ರೇಷ್ಠರೆಂದರಿತಿರುವರೆಲ್ಲ ಬಲು ಮೋಸ ಧಟ್ಟನೆ ಹೊಳೆಯುವಗೆ ಬಲು ಮನವಿಕಾಸ ಬಿಟ್ಟಿರುವ ಮನುಜನಿಗೆ ಜಗದಿ ಸುಖವಾಸ 5 ಮುದಿತನವು ಭೂಷಣವು ಸ್ಥಾನವಿರುವವರಿಗೆ ಕುದಿಯುವುದೆ ಭೂಷಣವು ಕ್ಷೀರಜಲದಲ್ಲಿ ಹೆದರುವುದೆ ಭೂಷಣವು ದುಷ್ಟಸಂಗದಲಿ ಗದಗದವೆ ಭೂಷಣವು ಭಕ್ತಿರಸದಲ್ಲಿ 6 ತನ್ನ ತಾ ಶೋಧಿಸಲು ಬಲು ದುಃಖವಂತೆ ಅನ್ಯರನು ಶೋಧಿಸಲು ಸಂತೋಷವಂತೆ ಕನ್ನಡಿಯ ನೋಡದಿರೆ ಬಲು ಚೆಲುವನಂತೆ ಕನ್ನಡಿಯ ನೋಡಿದರೆ ತಾನಳುವನಂತೆ 7 ನಗರ ಸುಂದರಲ್ಲಂತೆ ಬಚ್ಚಿಟ್ಟ ಧನವು ತಾ ಕದ್ದವನಿಗಂತೆ ಸ್ವಚ್ಛ ಬಡತನದವಗೆ ಬಲು ಭಕುತಿಯಂತೆ ಬಿಚ್ಚೊಲೆ ಗಿರಿಜೆಗತಿ ಪ್ರಿಯವಸ್ತುವಂತೆ 8 ಗುಂಡು ಬ್ರಾಹ್ಮಣ ಬರಲು ಅಪಶಕುನವಂತೆ ಹೆಂಡದಾ ಪೀಪಾಯಿ ಬಲು ಶಕುನವಂತೆ ಮಂಡೆ ಬೋಳಿರುವವಳು ಬರಬಾರದಂತೆ ತೊಂಡು ಸೂಳೆಯು ಬರಲು ಬಹಳ ಶಕುನವಂತೆ 9 ಖ್ಯಾತಿ ಬಾರದು ನರಗೆ ಬದುಕಿರುವ ತನಕ ಗೋತ ಹೊಡೆದವನು ಬಲು ಗುಣಶಾಲಿಯಂತೆ ನೀತಿ ಹೇಳುವ ಸ್ಥಳದಲೊಬ್ಬರಿಲ್ಲಂತೆ ಕೋತಿ ಕುಣಿಯುತಿರಲು ನೂರು ಜನರಂತೆ 10 ಬಹು ಧನಿಕ ಬಲು ಬಲಗೆ ಮಕ್ಕಳಿಲ್ಲಂತೆ ದಹಿಸುತಿಹ ದಾರಿದ್ರಗೆ ವರ್ಷಕೊಂದಂತೆ ಅಮೃತ ಸಮವಂತೆ ಸಿಹಿಯಾದ ಕ್ಷೀರ ಮಕ್ಕಳಿಗೆ ಬೇಡಂತೆ 11 ಸಾಲಿಗ್ರಾಮ ತೊಳೆಯಲತಿ ಬೇಸರಂತೆ ಸಾಲು ಎಮ್ಮೆಯ ತೊಳೆಯಲಿ ಉತ್ಸಾಹವಂತೆ ಶೀಲವಾಡುವ ನುಡಿಗೆ ಸಂದೇಹವಂತೆ ಗಾಳಿ ಸುದ್ದಿಗಳೆಲ್ಲ ಬಲು ಸತ್ಯವಂತೆ 12 ಒಳಿತವನು ಜಗದಲ್ಲಿ ತಲೆ ಎತ್ತನಂತೆ ಕಲಿಪುರುಷನಂಥವನು ಬಲು ಮೇಲೆಯಂತೆ ಹುಲಿ ಚಿರತೆ ಕರಡಿಗಳ ಬಲಿಯ ಕೊಡರಂತೆ ಗೆಳತಿ ಮಾರಿಗೆ ಕುರಿಯ ಬಲಿಯೆ ಬೇಕಂತೆ 13 ಅತಿ ಚೆಲುವೆ ಸತಿಯಲ್ಲಿ ಹಿತವಿಲ್ಲವಂತೆ ಗತಿಗೆಟ್ಟ ನಾರಿಯಲಿ ಅತಿ ಮೋಹವಂತೆ ಇತರ ಜನರೇಳಿಗೆಗೆ ಹೊಟ್ಟಿಯುರಿಯಂತೆ ಪ್ರತಿಕ್ಷಣವು ತನಗಾಗಿ ಹಂಬಲಕೆಯಂತೆ 14 ಭೂಮಿ ಎಲ್ಲವು ಇನ್ನು ಉಳುವಾತಗಂತೆ ಭೂಮಿಯೊಡೆಯಗೆ ದೊಡ್ಡನಾಮ ಬಿತ್ತಂತೆ ರಾಮರಾಜ್ಯದಿ ಕಾರು ಓಡಿಸುವವಗಂತೆ ಆ ಮದುವೆ ಕನ್ಯೆಯು ಪುರೋಹಿತಗಂತೆ 15 ಬಕಳಿಸುವ ನಾಯಕರೆ ಸರಕಾರವಂತೆ ಪ್ರಕೃತಿ ನಡೆನುಡಿ ನೀತಿಗೆ ಧಿಕ್ಕಾರವಂತೆ ಸುಖದ ಅನುಭವ ಜನಕೆ ಕುದುರೆ ಕೊಂಬಂತೆ ಮುಖವಿಲ್ಲ ಕಣ್ಣಿಲ್ಲ ಸುಖರಾಜ್ಯವಂತೆ 16 ಚಂದ್ರಲೋಕಕೆ ಪಯಣ ಕಾದಿರುವುದಂತೆ ಮುಂದಲ್ಲಿ ನೆಲಕೆ ಬಲು ಕಟ್ಟು ನಿಟ್ಟಂತೆ ಮುಂದರಿದ ಜನಕಲ್ಲಿ ಸ್ಥಾನವಿಹುದಂತೆ ಹಿಂದುಳಿದ ಗುಂಪಿಗವಕಾಶವಿಲ್ಲಂತೆ 17 ಪುಷ್ಪಾಕ್ಷತೆಯ ಪೂಜೆ ಗೋಮಾತೆಗಂತೆ ಶುಷ್ಕ ತೃಣವನಕೆಲ್ಲ ಮಳೆಗಳ ಕಂತೆ ನಿಷ್ಫಲದ ಗಿಡಬಳ್ಳಿ ತೋಟದಲ್ಲಂತೆ ಪುಷ್ಕಳದ ಫಲ ವೃಕ್ಷಗಳು ಸೌದೆಗಂತೆ 18 ಬರಿಯ ಪಾತ್ರೆಗಳಲಿ ಬಹಳ ಸದ್ದಂತೆ ಅರಿಯುವಜ್ಞಾನಿಗಳು ತಲೆಹರಟೆಯಂತೆ ಅರಿತವನು ನುರಿತನಾದರು ಬೇಡವಂತೆ ಬದಿಯ ಬಹು ದಡ್ಡನಿಗೆ ಮಾರ್ಯಾದೆಯಂತೆ19 ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ ಥೈಲಿಯಿದ್ದರೆ ಖೂನಿ ಮಾಡಬಹುದಂತೆ ಶೈಲವೇರುವ ನರನು ಮೇಧಾವಿಯಂತೆ 20 ನರಬಲಿಯ ಕೊಡುವವರು ಹಿರಿಯ ಜನರಂತೆ ಹಿರಿಯ ಮಾರ್ಗದ ಜನರು ಧರೆ ಭಾರವಂತೆ ಗುರುಗಳಿಗೆ ತಿರುಮಂತ್ರ ಹೇಳಬೇಕಂತೆ ಸುರಿಸುವರು ಧನಧಾನ್ಯ ಸುರಿಮಳೆಗಳಂತೆ21 ಮಂತ್ರವಾದಿಯು ನೋಡಿ ಗ್ರಹಭಯವಿದೆಂದ ಯಂತ್ರದಲಿ ನೋಡಿದವ ಹೃದಯರೋಗೆಂದ ಚಿಂತಿಸುತ ಪಂಡಿತನು ಮೋಹಿನಿಯಿದೆಂದ ಅಂತ್ಯದಲಿ ರೋಗಿ ತನಗೊಂದಿಲ್ಲವೆಂದ 22 ಶಿಂಗಪ್ಪ ಕದ್ದು ತಾ ಜೈಲು ಸೇರಿದನು ಕಾಂಗ್ರಪ್ಪ ಜೈಲಿನಿಂದ ಬಂದು ಕುಳತಿಹನು ಹೇಂಗ್ರಪ್ಪ ಬದುಕುವುದು ಎಂದು ಫಲವೇನು ನುಂಗ್ರಪ್ಪ ಸುಖ ದು:ಖಗಳನು ಸಹಿಸುತಲಿ 23 ವೇದಾಂತಿಯಾಗೆನಲು ಹೊಟ್ಟೆಗಿಲ್ಲಂತೆ ಕಾದಾಡಿ ಬದುಕಲನುಭವವಿಲ್ಲವಂತೆ ಓದು ಬದುಕೆಂದರವಕಾಶವಿಲ್ಲಂತೆ ಆದುದಾಯಿತು ಹರಿಗೆ ಶರಣು ಹೊಡಿ ತಮ್ಮ25 ಯಮನು ತಲ್ಲಣಿಸುವನು ಸ್ಥಳವಿಲ್ಲವಂತೆ ಸುಮನಸರು ಆಳುತಿಹರು ಜನವಿಲ್ಲವಂತೆ ಕಮಲೆರಮಣಗೆ ಬಂತು ಪೀಕ್ಲಾಟವಂತೆ ಎಮಗೆಂಥ ಕಷ್ಟವು ಪ್ರಸನ್ನ ಹರಿಯಿರಲು26
--------------
ವಿದ್ಯಾಪ್ರಸನ್ನತೀರ್ಥರು
ಆಲದೆಲಿಯ ಮ್ಯಾಲ ಮಲಗ್ಯುಂಗುಟ ಚಪ್ಪರಿವನು ನೀನಾರೈ ಮೂಲರೂಪದ ನಿಜದೋರದೆ ಬಾಲಕನಾಗಿಹ ನೀನಾರೈಧ್ರುವ ಚಲುವ ಕಂಗಳ ನೋಡದಲ್ಹೊಳವುತ ಜಲದೊಳಗಾಡುವನಾರೈ ಕಾಲುಡಿಗಿಸಿ ಬೆನ್ನಿಲೆ ಬಲು ಕಠಿಣವ ತಾಳಿದವ ನಿನಾರೈ 1 ಕೋರ್ಹಲ್ಲಿಲಿ ಬೇರನೆ ಅಗಳ್ಯಾಡುತ ದೋರುವ ನೀನಾರೈ ನರಮೃಗರೂಪದಿ ತರಳಗೊಳಿದು ಭರದಲಿ ಬಂದವನಾರೈ 2 ಒಪ್ಪಿಲಿ ಮೂರುಪಾದ ಭೂಮಿಯೊಪ್ಪಿಸಿಕೊಂಡವನಾರೈ ಚಪ್ಪಗೊಡಲಿ ಕೈಯಲಿ ಪಿಡಕೊಂಡು ಇಪ್ಪವ ನೀನಾರೈ 3 ಬಳ್ಳಿಹಿಡಿದು ಕಲ್ಲನೆ ಉದ್ಧರಿಸಿದ ಮಲ್ಲನು ನೀನಾರೈ ಗೊಲ್ಲತೆಯರ ಮೋಹಿನಿ ಎಳಿದಾಡುವ ಚಲುವನು ನೀನಾರೈ 4 ಚದುರನು ನೀನಾರೈ ಕುದುರೆಯನೇರಿ ಹದನದಿ ತಿರವ್ಯಾಡುವ ರಾವುತನಾರೈ 5 ಕುರುಹುದೋರದೆ ನರನಾರಿಯರ ರೂಪದಲ್ಯಾಡಿದವನಾರೈ ಬಡಿಸಿದವ ನೀನಾರೈ 6 ಅಗಣಿತ ಗುಣದಲಿ ಬಗೆ ಬಗೆ ಅಡುವ ಸುಗುಣ ನೀನಾರೆ ೈ ಝಗಝಗಿಸುವ ಜಗನ್ಮನೋಹರನಾಗ್ಯಾಡುವ ನೀನಾರೈ 7 ಖೂನ ಕುರುಹದೋರಿದ ಭಾನುಕೋಟಿ ತೇಜನಹುದೋ ಬಾರೈ ದೀನ ಮಹಿಪತಿ ಸನಾಥಮಾಡಿದ ದೀನೋದ್ಧಾರಹುದಹುದೈ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದ್ರಾಕ್ಷಿ ಸಲಹೆ ಬಂದು | ಸಂರಕ್ಷಿಸಿ ಇಂದ್ರಾಕ್ಷಿ ಸಲಹೆ ಬಂದು ಪ ಚಂದ್ರಶೇಖರನಂಕ ಸಂಸ್ಥಿತೆ ಚಂದ್ರ ಬಿಂಬಾನನೆ ದಯಾನ್ವಿತೆ ಇಂದ್ರ ಮುಖ ಸುರಗಣ ಸಮರ್ಚಿತೆ ತಂದ್ರ ಪರಿಹೃತೆ ಭಕ್ತತತಿ ಹಿತೆ ಅ.ಪ. ಅರಿಯದ ತರಳನಮ್ಮ | ನಿನ್ನಂಘ್ರಿ ಸೇವಿಪ ಮೆರೆವ ಭಾಗ್ಯವ ನೀಡಮ್ಮ | ಮರೆಯದಿರಮ್ಮಾ ಶರಣ ಜನರನು ಪೊರೆವೆನೆನ್ನುತ ಕರದಿ ಪಿಡಿದಿಹೆ ಬಿಡದೆ ಉನ್ನತ ದರವಿಯನು ಸಿದ್ದಾನ್ನ ಪಾತ್ರೆಯ ಕರುಣಿ ತ್ರಿಜಗಜ್ಜನನಿ ಸುಗುಣಿಯೆ 1 ನಿತ್ಯಾನಂದಿನಿ ಮೋಹಿನಿ | ಸುಗತಿ ಪ್ರದಾಯಿನಿ ಭೃತ್ಯಾನುಗ್ರಹ ಕಾರಿಣಿ | ಬುಧ್ಯಾಭಿಮಾನಿ ನಿತ್ಯಮಂಗಳೆ ಭೃತ್ಯವತ್ಸಲೆ ಸತ್ಯರೂಪಿಣಿ ಮೃತ್ಯುನಾಶಿನಿ ನಿತ್ಯತ್ವತ್ಪದ ಭಜಿಪ ಸಂಪದ- ವಿತ್ತು ಪಾಲಿಸೆ ಶ್ರೀ ಕಾತ್ಯಾಯಿನಿ 2 ಭೀಮಾ ಭೈರವನಾದಿನಿ | ಕುಮಾರ ಜನನಿ ಕಾಮನಿಗ್ರಹನ ರಾಣಿ | ವರವರ್ಣಿನಿ ಬ್ರಾಹ್ಮಿ ವೈಷ್ಣವಿ ಬ್ರಹ್ಮಚಾರಿಣಿ ಚಾಮುಂಡೇಶ್ವರಿ ಕೋಲರೂಪಿಣಿ ಭ್ರಮರಿ ಶಾಕಾಂಬರಿ ನೃಸಿಂಹಿಣಿ ಅಮಿತರೂಪಿಣಿ ಅಹಿತ ಮಾರಿಣಿ 3 ಸರ್ವಮಂಗಳ ಮಾಂಗಲ್ಯೆ | ಸರ್ವಾರ್ಥದೆ ಶಿವೆ ಶರ್ವನರ್ಧಾಂಗಿಯೆ | ಪರ್ವತನ ತನಯೆ ಶರ್ವಬ್ರಹ್ಮರ ವರದಿ ಕೊಬ್ಬಿ ಸು- ಪರ್ವರನು ಕಂಗೆಡಿಸೆ ದನುಜರು ಸರ್ವಶಕ್ತಳೆ ಮುರಿದು ಖಳರನು ಉರ್ವಿಭಾರವ ನಿಳುಹಿ ಪೊರೆದೌ 4 ಅಜಿತೆ ಭದ್ರದೆ ಆನಂದೆ | ನಿನ್ನನು ಬಿಡದೆ ಭಜಿಪರ ಪೊರೆವಳೆಂದೆ | ನಾನಿಂದು ಬಂದೆ ಕುಜನಮರ್ಧಿನಿ ಕುಟಿಲ ಹಾರಿಣಿ ಗಜಗಮನೆ ಗಂಭೀರೆ ಗುಣಮಣಿ ವೃಜಿನ ಪರಿಹರೆ ವಿಘ್ನಸಂಹರೆ ನಿಜ ಪದಾಂಬುಜ ಭಜಕನೆನಿಸಿ 5 ಶಿವದೂತಿ ಪರಮೇಶ್ವರಿ | ರುದ್ರಾಣಿ ಚಂಡಿಕೆ ಶಿವೆ ಭವೆ ಜ್ಞಾನೇಶ್ವರಿ | ಸೌಂದರ್ಯಲºರಿ ಭುವನ ಮೋಹಿನಿ ದೈತ್ಯನಾಶಿನಿ ತಾಪ ಜ್ವರ ನಿವಾರಿಣಿ ಕವಿಭಿರೀಡಿತೆ ದೇವ ಪೂಜಿತೆ ವಿವಿಧ ಫಲಗಳ ಒಲಿದು ಕೊಡುವಳೆ 6 ಶೃತಿ ಸ್ಮøತಿ ಶ್ರದ್ಧೆ ಮೇಧಾ | ವಿದ್ಯಾಸರಸ್ವತಿ ಧೃತಿ ಶಾಂತಿ ಕಾಂತಿ ವಾದಾ | ಎನಿಸುತ್ತ ಮೆರೆವ ವಿತತ ಮಹಿಮಳೆ ವಿಶ್ವತೋಮುಖೆ ಅತುಳ ಭುಜಬಲೆ ಭದ್ರಕಾಳಿಯೆ ಪಾವನಿ ಸತ್ವಶಾಲಿನಿ ಸತಿ ಶಿವಪ್ರಿಯೆ ನೀಡಿ ಸುಮತಿಯ 7 ಅರಿದರಾಂಕುಶ ಮುಸಲ | ಮುದ್ಗರಚಾಪ ಮಾರ್ಗಣ ಪಾಶ ಪರಶು ಘಂಟಾ ಶಕ್ತಿ ಪಾತ್ರೆಯು ವರಗದಾಭಯ ಕರದೊಳೊಪ್ಪುತ ದುರುಳರನು ಸಂಹರಿಸಿ ಸಂತತ ಸುರನರೋರಗರನ್ನು ಪೊರೆಯುವ 8 ಮಾರಿ ಮಸಣಿ ಹೆಮ್ಮಾರಿ | ಕರೆಕರೆದುಗೊಳಿಸುವ ಕ್ರೂರ ಶಾಕಿನಿ ಡಾಕಿನಿ | ಪೂತಣಿಯೆ ಮುಖರು ಘೋರ ರೂಪದಿ ಬಂದು ಪೋರರ ಗಾರುಗೊಳಿಸುತ್ತಿರಲು ತವಪದ ಸಾರಿ ನೆನೆದರೆ ತೋರಿ ಹಿಮ್ಮಡಿ ದೂರ ಸರಿವರು ಮುಗಿದು ಕರಗಳ 9 ತಾಪತ್ರಿತಯ ತಪ್ತರ | ಆಹ್ಲಾದಪಡಿಸಲು ಗೋಪತಿ ಮುಖವ ತೋರ | ಕೃಪಾಂಬುನಿಧಿಯೆ ತಾಪಸಾರಾಧಿತ ಪದಾಂಬುಜೆ ಶ್ರೀಪತಿಯ ಸೊದರಿಯೆ ನೀ ನಿಜ- ರೂಪುದೋರಲು ಪಾಪತಾಪ ಪ್ರ- ಳಾಪ ಮಾಡದೆ ರಾಪುಗೈವುದೆ 10 ದುರ್ಗಮ ಸಂಕಟದಿ | ಬಿದ್ದಿಹೆನಮ್ಮಾ ನಿರ್ಗಮ ಕಾಣೆನಮ್ಮಾ | ಉದ್ಧರಿಸಮ್ಮಾ ದುರ್ಗದಿಂತಾರಿಸುವೆ ಭಕ್ತರ ದುರ್ಗೆ ನಾಮಾಂಕಿತದಿ ಎಂಬರು ಕರವ ಸು- ಮಾರ್ಗ ತೋರಿಸೆ ದುರ್ಗೆ ಜನನಿಯೆ 11 ಸುರಾಸುರ ಸಂಗ್ರಾಮದಿ | ಮುರವೈರಿ ದಯದಿ ಸುರರು ಗೆಲ್ಲರು ಮುದದಿ | ಗರ್ವಿಸಲು ಭರದಿ ಹರಿಯ ರೂಪಾಂತರದಿ ತೃಣವನು ಧರೆಯೊಳಿರಿಸುತ ಬಲ ಪರೀಕ್ಷಿಸಿ ಸುರರು ಜಯಿಸದೆ ಮರುಳರಾಗಲು ಬರದೆ ಪರತತ್ವವನು ಕರುಣದಿ 12 ಕಿಂಕರ ಶಂಕರಿಯೆ | ಶತ್ರು ಭಯಂಕರೆ ಓಂಕಾರೆ ಹೂಂಕಾರೆಯೇ | ಸ್ಮಿತ ಅಟ್ಟಹಾಸೆ ಪಂಕಜಾಂಬಕಿ ರಕ್ತನಯನ ಕ ಳಂಕಮುಖಿ ಅತ್ಯುಗ್ರವದನೆ ನಿ ಶ್ಯಂಕ ಬಿಂಕದಿ ಬಂದೆ ಕಾಲದಿ ಮಂಕುಹರೆ ಸಂಕಟದೆಯೆನಿಸುವೆ 13 ರಕ್ತಬೀಜಾಸುರನ | ರಕ್ತವನು ಹೀರಿದ ಶಕ್ತಳೆಂದೆನುತ ನಿನ್ನ | ನಂಬಿದೆನು ಎನ್ನ ಉಕ್ತಿಲಾಲಿಸಿ ಒತ್ತಿ ವಿಘ್ನವ ಇತ್ತು ಜ್ಞಾನ ವಿರಾಗ ಭಕ್ತಿಯ ಮುಕ್ತಪಾವನ ಮಾಡಿ ಸಂತತ ಮುಕ್ತಿಕಾಂತನ ಸ್ಮರಣೆ ಪಾಲಿಸಿ14 ಮಹಿಷನ ಸಂಹರಿಸಿ | ಮಹಿಯನ್ನು ಪಾಲಿಸಿ ಮಹಿಸೂರೆ ನೆಲೆಯೆನಿಸಿ | ಪತಿಸಹಿತವಸಿಸಿ ಮಹಿಪತಿಗಳಾದಿಯಲಿ ಸರ್ವರಿಂ ಅಹರಹರ್ ಸೇವೆಯನು ಕೊಳುತ ಮಹಿಮೆ ತೋರುತಿರುವೆ ಪ್ರತಿದಿನ ಅಹಹ ಬಣ್ಣಿಸಲೊರೆವೆ ನರರಿಗೆ 15 ಚಂಡ ಮುಂಡರ ಮರ್ದಿಸಿ | ಚಾಮುಂಡಿಯೆನಿಸಿ ಖಂಡೆಯವನು ಝಳಪಿಸಿ | ಪುಂಡರನು ವಧಿಸಿ ಖಂಡ ಪರುಶುವಿನಂತೆ ಅದÀಟರ ರುಂಡಮಾಲೆಯ ಕೊಂಡು ಭೂತಗ- ಳ್ಹಿಂಡು ಡಿಂಡಿಮ ಡಂಡೆಣಿಸಲು ತಾಂಡವಾಡಿದ ಚಂಡಕಾಳಿಯೆ 16 ಶುಂಭ ನಿಶುಂಭರನು | ಕುಂಭಿಣಿಗೆ ಕೆಡಹೆ ಸುರರು | ಕುಂದುಭಿಯ ಹೊಡೆಯೆ ಡೊಂಬ ಕೊಳಾಸುರನ ಸೂಕರ ಡಿಂಬ ತಾಳುತ ಸೀಳಿ ದೈತ್ಯ ಕ- ದಂಬವೆಲ್ಲಕೆ ಕಂಭ ಸಂಭವ ನಿಂಬು ರೂಪವ ನಂಬಿ ತೋರಿದೆ 17 ಸಕಲ ಶಕ್ತ್ಯಾತ್ಮಕಳೆ | ಭುವಿಯಲಿ ಈ ಪರಿ ಪ್ರಕಟಳಾಗುತ ಖಳರ | ಕಟಕವನು ತರಿದು ಭಕುತವರ್ಗಕೆ ಬಂದ ಸಂಕಟ ನಿಕರ ಪರ್ವತ ವಜ್ರವೆನಿಸುತ ಮುಕುರದಂದದಿ ಪೊಳೆದು ಪೊರೆಯುವೆ ವಿಕಟನಾಮದಿ ನಿಕಟದಿರುತ 18 ಜ್ಞಾನೇಚ್ಚಾ ಕ್ರಿಯ ರೂಪಳೆ | ನಿನ್ನನು ನುತಿಸಿ ಆನತಿಸಿದವರಿಗೆ | ಪ್ರಸನ್ನಳಾಗಿ ಮಾನ ಸತಿಸುತ ಧ್ಯಾನ ಧನಮನೆ ಜ್ಞಾನ ಭಕ್ತಿ ವಿರಕ್ತಿ ಮುಂತವ ದೇನು ಬೇಡಲು ಕೊಡುವೆ ನಿನ್ನ ಸಮಾನರಾರನು ಕಾಣೆ ಜಗದೊಳು 19 ಅಂಗನಾಮಣಿಯರಿಗೆ | ಮಾಂಗಲ್ಯವೃದ್ಧಿಗೆ ಮಂಗಳಗೌರಿಯೆಂದು | ಪ್ರಸಿದ್ಧಿಗೊಂಡು ರಂಗುಮಾಣಿಕದ್ಹಸೆಯ ಪೀಠದಿ ಮಂಗಳದ್ರವ್ಯಗಳಿಂದೊಪ್ಪುತ ಮಂಗಳೇಕ್ಷಣದಿಂದ ಕುಳಿತಿಹೆ 20 ವೈದ್ಯ ಜ್ಯೋತಿಷ ಪುರಾಣ | ವೇದಾಂತ ಮುಂತಹ- ಗಾಧ ಗ್ರಂಥಗಳನು | ನಿಜಪತಿಯ ಮುಖದಿ ಸಾಧಿಸಿದೆ ಸಜ್ಜನರಿಗೋಸುಗ ಬೋಧಿಸಿದೆ ಗುಹ ಗಣಪ ಮುಖರಿಗೆ ಆದಿದೇವನ ಒಲಿಮೆ ಪಡೆಯಲು ಹಾದಿ ತೋರಿದೆ ಹೇ ದಯಾನಿಧೆ 21 ಅಷ್ಟಬಾಹುಗಳಿಂದಲಿ | ಅಷ್ಟಾಯುಧಂಗಳ ದಿಟ್ಟತೆಯಿಂ ಧರಿಸಿ | ಅಷ್ಟಾತ್ಮನಂವೆರಸಿ ಶಿಷ್ಟ ನಾಲ್ಮಡಿ ಕೃಷ್ಣ ಭೂಪನ ಇಷ್ಟದೇವತೆಯಾಗಿ ನೆಟ್ಟನೆ ಬೆಟ್ಟದಲಿ ರಂಜಿಸುವೆ ಭಕ್ತರಿಷ್ಟ ಹರಿಸುತ ಕೊಟ್ಟಭೀಷ್ಟವ 22 ಸಂತರ ನುಡಿಗಳು | ನಾನಾಂತು ನಿನ್ನಯ ಚಿಂತಿತಾರ್ಥದ ಪದವ | ಸ್ವಾಂತದಲಿ ತಂದು ಇಂತು ತುತಿಸಿದೆನರಿಯೆನನ್ಯಯಥ ಪಂಥವನು ಎನ್ನಂತರಂಗವ ನಂತು ತಿಳಿದಿಹೆ ಜನನಿ ಕೊಡು ಶ್ರೀ- ಕಾಂತ ಭಕ್ತಿಯ ಮುಂತೆ ಕರುಣದಿ 23
--------------
ಲಕ್ಷ್ಮೀನಾರಯಣರಾಯರು
ಈ ಸೊಬಗನಿನ್ನ್ಯಾವ ದೇವರೊಳು ಕಾಣೆ ಈಶ ಪರಮೇಶ ಜಗದೀಶ ಶ್ರೀ ಶಿವನ ಪ ಸುಂದರತ್ವದಿ ನೋಡೆ ತ್ರಿಪುರಸುಂದರಿಯರಸ ಬಂಧುತ್ವದಲಿ ವಿಷ್ಣು ಸೋದರಿಯ ರಮಣ ಅಂದ ಚಂದದಿ ನೋಡೆ ಸುಂದರೇಶ್ವರನಿವನು ಚಂದ್ರ ನಾಗಾಭರಣ ಲೋಕ ಶಂಕರನು 1 ಭೋಗದಲಿ ನೋಡೆ ತಾಂ ಮೋಹಿನಿಯನಾಳ್ದವನು ಯೋಗದಲಿ ಯೋಗೇಶ ಯೋಗ ಭಾವಿತನು ತ್ಯಾಗದಲಿ ನೋಡೆ ತಾಂ ಸರ್ವಸಂಗ ತ್ಯಾಗಿ ನಿಗಮ ಗೋಚರನು 2 ವೀರತನದೊಳಗಿವನು ತ್ರಿಪುರ ಸಂಹಾರಕನು ಧೀರತನದೊಳಗಿವನು ಮದನವಿಧ್ವಂಸಿ ಸಾರತನದೊಳಗಿವನು ಶ್ರೀ ಮಹಾದೇವನು ಕಾರಣಕೆ ಕಾರಣನು ಜಗದಾದಿ ಗುರುವು 3 ಹುಟ್ಟು ಸಾವುಗಳೆಲ್ಲ ಎಷ್ಟಾರ್ಥದಾಯಕನು ಪಟ್ಟಣವು ರತ್ನ ರಜತಾದ್ರಿಯಾಗಿಹುದು ಪುಟ್ಟ ಬಾಲನಿಗೊಲಿದು ಕಟ್ಟು ಮಾಡಿದ ಯಮನ ಅಷ್ಟ ಮೂರ್ತಿಯು ಲೋಕ ಸೃಷ್ಟಿ ಕಾರಣನು 4 ಎಲ್ಲಿ ನೋಡಿದರಲ್ಲಿ ವಿಶ್ವರೂಪದೊಳಿಹನು ಎಲ್ಲಿ ನೋಡಿದರಲ್ಲಿ ಸೂಕ್ಷ್ಮದಿಂದಿಹನು ಎಲ್ಲಿ ನೋಡಿದರಲ್ಲಿ ಸರ್ವಾತ್ಮನಾಗಿಹನು ಎಲ್ಲಿ ನೋಡಲು ಧೇನುಪುರನಾಥ ಶಿವನು 5
--------------
ಬೇಟೆರಾಯ ದೀಕ್ಷಿತರು
ಏಕಾದಶಿ ಉತ್ಸವಗೀತೆ ಲೋಕನಾಯಕನ ಏಕಾದಶಿಯ ಉತ್ಸವಕೆ ಅ ನೇಕ ವಿಧದಿಂದ ಪಟ್ಟಣವ ಸಿಂಗರಿಸಿ 1 ಸುಣ್ಣ ಕೆಮ್ಮಣ್ಣಿಂದ ಕಾರಣೆಯನು ರಚಿಸಿ ಚೀಣೆ ಚೀಣಾಂಬರದ ಮೇಲುಕಟ್ಟುಗಳು 2 ಕದಳಿಯ ಕಂಬಗಳು ಗೊನೆಸಹಿತ ನಿಲ್ಲಿಸಿ ತೆಂಗು ಕ್ರಮುಕದ ಫಲವ ತಂದು ಸಿಂಗರಿಸಿ 3 ವಿಧ ವಿಧವಾದ ಪುಷ್ಪಗಳನು ತರಿಸಿ ಮದನನಯ್ಯನ ಮಂಟಪವ ಸಿಂಗರಿಸಿ 4 ಶುದ್ಧ ಪಾಡ್ಯದ ದಿವಸ ಮುದ್ದು ಶ್ರೀರಂಗ ಅಧ್ಯಯನೋತ್ಸವಕೆಂದು ಪೊರಟು ತಾ ಬಂದ 5 ಭಟ್ಟರು ವೇದಾಂತಿ ಜಯಿಸಿದರ್ಥವನು [ನಟ್ಟ]ಮಾವಾಸೆರಾತ್ರಿಯಲಿ ಅರೆಯರ್ಪಾಡಿದರು 6 ಸಂಧ್ಯಾರಾಗವ ಪೋಲ್ವ ಅಂಗಿಕುಲಾವಿ ಛಂದ ಛಂದದ ಆಭರಣವನು ಧರಿಸಿ 7 ಸಿಂಹನಡೆಯಿಂದ ಮೂರಡಿಯಲಿ ನಿಂದು ಮಹಾಶ್ರೀವೈಷ್ಣವರಿಗೆ ಶ್ರೀಪಾದವಿತ್ತು 8 ಮಂತ್ರಿ ಎದುರಲಿ ನಿಂತು ಮಾಲೆಗಳನಿತ್ತು ಕಂತುಪಿತ ಬಂದ ನಾಗಿಣಿಯ ಮಂಟಪಕೆ 9 ವಾಸುಕೀಶಯನಮಂಟಪದಲಿ ನಿಂತು ದಾಸಿ ವರವನು ಸಲಿಸಿದ ಕ್ಲೇಶನಾಶಕನ 10 ಸುರರಿಗೊಡೆಯನು ಸುಂದರಾಂಗ ತಾ ಬಂದು [ವರ]ಸುಲ್ತಾನಿ ಎದುರಲಿ ನಲಿನಲಿದು ನಿಂದು 11 ಕುಂದಣದ ಛತ್ರಿ ಚಾಮರಗಳಲುಗಾಡೆ ಇಂದಿರಾರಮಣ ಸತಿಯಿದುರೆ ನಲಿದಾಡೆ 12 ಆದಿಮೂರುತಿ ಮಂಟಪದೊಳು ನಿಂತು ಆದಿ ಆಳ್ವಾರುಗಳಿಗೆಲ್ಲ ಆಸ್ಥಾನವಿತ್ತು 13 ವಿಷ್ಣುಚಿತ್ತರು ಮಾಡಿದರ್ಥಂಗಳನ್ನು [ವಿಶೇಷ]ದಭಿನಯದಿಂದ ಪೇಳಿದರು14 ಅರೆಯರು ಬಂದು ತಾವೆದುರಲ್ಲಿ ಪಾಡೆ ಭೂ ಸುರೋತ್ತಮರೆಲ್ಲ ಹರುಷದಿಂ ನೋಡೆ 15 ಮಂಟಪದಲ್ಲಿ ನೇವೇದ್ಯವನ್ನು ಗ್ರಹಿಸಿ ವೈ ಕುಂಠವಾಸನು ಬಂದ ವೈಯ್ಯಾರದಿಂದ16 ದರ್ಪಣದೆದುರಲ್ಲಿ ನಿಂತು ಶ್ರೀರಂಗ ಕಂ ದರ್ಪನಾಪಿತ ಬಂದ ಆನಂದದಿಂದ 17 ಮದಗಜದಂತೆ ಮೆಲ್ಲಡಿಯಿಟ್ಟು ಬಂದು ಒದಗಿ ಮೂರಡಿಯಲ್ಲಿ ತಿರಿಗುತಾ ನಿಂದು 18 ಅಡಿಗೊಂದು ಉಭಯವನ ಗ್ರಹಿಸಿ ಶ್ರೀರಂಗ ಬೆಡಗಿನಿಂದಲೆ ಬಂದ ಮಂಟಪಕೆ ಭವಭಂಗ 19 ಶ್ರೀಧರನು ಮಂಟಪದಲ್ಲಿ ತಾ ನಿಂತು ಮ ರ್ಯಾದೆಯನಿತ್ತು ಶ್ರೀವೈಷ್ಣವರಿಗೆ 20 ವೈಯ್ಯಾರ ನಡೆಯಿಂದ ಒಲಿದೊಲಿದು ಬಂದು [ನಯ] ಸೋಪಾನದೆದುರಲಿ ನಲಿನಲಿದು ನಿಂದು 21 ಕರ್ಪೂರ ಪುಷ್ಪವನು ಬೆರೆಸಿ ತಾವ್ತಂದು ಅಪ್ರಮೇಯನ ಶಿರದೊಳೆರೆಚಿದರು [ಅ]ಂದು 22 ಇಂದಿರಾರಮಣ ಗುಂಭಾರತಿಯ ಗ್ರಹಿಸಿ ಎಂದಿನಂದದಿ ತನ್ನ ಮಂದಿರಕೆ ನಡೆದ 23 ಬಿದಿಗೆ ತದಿಗೆಯು ಚೌತಿ ಪಂಚಮಿಯಲ್ಲಿ ವಿಧವಿಧದ ಆಭರಣಮನೆ ಧರಿಸಿ 24 ಷಷ್ಠಿ ಸಪ್ತಮಿ ಅಷ್ಟಮಿ ನೌಮಿಯಲ್ಲಿ ಸೃಷ್ಟಿಯೊಳಗುಳ್ಳ ಶೃಂಗಾರವನೆ ಮಾಡಿ 25 ದಶಮಿಯ ದಿವಸದಲಿ ಕುಸುಮನಾಭನಿಗೆ ಶಶಿಮುಖಿಯ ಅಲಂಕಾರವನ್ನು ಮಾಡಿದರು 26 ಸುರರು ಅಸುರರು ಕೂಡಿ ಶರಧಿಯನು ಮಥಿಸೆ ಭರದಿ ಅಮೃತವು ಬರಲು ಅಸುರರಪಹರಿಸೆ 27 ಸುರರೆಲ್ಲರು ಬಂದು ಶ್ರೀಹರಿಗೆ ಇಡಲು ಮೊರೆ ಸಾಧಿಸುವೆನೆಂದೆನುತ ವರಗಳನು ಕೊಡಲು 28 ಎನಗೆ ತನಗೆಂದು ಹೋರಾಡುವ ಸಮಯದಿ ವನಜನಾಭನು ಮೋಹಿನಿಯ ರೂಪಿನಲಿ 29 ವಾರೆಗೊಂಡೆಯವನು ವೈಯ್ಯಾರದಿಂದ ಧರಿಸಿ ತೋರಮುತ್ತಿನ ಕುಚ್ಚುಗಳ ಅಳವಡಿಸಿ 30 ಹೆರಳು ರಾಗಟೆಯು ಬಂಗಾರಗೊಂಡ್ಯಗಳು ಅರಳುಮಲ್ಲಿಗೆ ಹೂವ ದಂಡೆಗಳ ಮುಡಿದು 31 ಪಾನಪಟ್ಟಿಯು ಸೂರ್ಯಚಂದ್ರಮರನಿಟ್ಟು ಫಣೆಯಲ್ಲಿ ತಿದ್ದಿದ ಕಸ್ತೂರಿ ಬಟ್ಟು 32 ಚಾಪವನು ಪೋಲುವಾ ಪುಬ್ಬಿನಾ ಮಾಯ ಆಪ್ತಭಕ್ತರನು ಕರುಣದಿಂ ನೋಡುವ ನೋಟ 33 ತಿಲಕುಸುಮವನು ಪೋಲ್ವ ನಾಸಿಕದ ಚಂದ ಥಳಥಳಿಸೆ ಮುತ್ತಿನ ಮುಕುರದ ಅಂದ 34 ಕುಂದಕುಸುಮವ ಪೋಲ್ವ ದಂತಪಂಕ್ತಿಗಳು ಕೆಂ[ದ]ವಳಲತೆಯಂತಿರುವ ಅಧರಕಾಂತಿಗಳು 35 ಚಳತುಂಬು ಬುಗುಡಿ ಬಾವುಲಿಗಳನಿಟ್ಟು ಥಳಥಳಿಪ ವಜ್ರದ ಓಲೆ ಅಳವಟ್ಟು 36 ಗಲ್ಲದಲಿ ಪೊಳೆಯುವ ದೃಷ್ಟಿಯ ಬೊಟ್ಟು ಮೊಗ ದಲ್ಲಿ ಮಂದಹಾಸದ ಕಾಂತಿ ಇನ್ನಷ್ಟು 37 ಕೊರಳೊಳಗೆ ಹಾರ ಪದಕವನು ತಾನಿಟ್ಟು [ಉರದಿ] ದುಂಡುಮುತ್ತಿನ ದಿವ್ಯಸರಗಳಳವಟ್ಟು 38 ಧರಿಸಿ ನಾನಾವಿಧ ಪುಷ್ಪ ಗಿಣಿಮಾಲೆಯನು ಅರಳುಮಲ್ಲಿಗೆ ಹೂವಸರಗಳಲಂಕರಿಸಿ 39 ಉಂಗುರ ವಂಕಿ ಬಾಜಿಯ ಬಂದುದ್ವಾರ್ಯ(?) ಕೈಕಟ್ಟು ಮುಂಗೈ ಮುರಾರಿಯನ್ನು ಇಟ್ಟು 40 ಬಿಳಿಯ ಪೀತಾಂಬರವ ನಿರಿಹಿಡಿದುಟ್ಟು ಥಳಥಳಿಪ ಕುಂದಣದ ವಡ್ಯಾಣವಿಟ್ಟು 41 ಅಂದುಗೆ ಗೆಜ್ಜೆಗಳ ಚಂದದಿಂದಿಟ್ಟು ಕುಂದಣದ ಪಾಡಗವನ್ನು ಅಳವಟ್ಟು 42 ಈ ರೂಪಿನಿಂದ ಅಸುರರನು ಮೋಹಿಸುತ ಸುರರಿಗೆ ಅಮೃತವನು ಎರೆದು ಪಾಲಿಸುತ 43 ಮೂರುಕಣ್ಣುಳ್ಳವನು ಮೋಹಿಸಿದ ರೂಪ ಈ[ರೇಳು]ಲೋಕದವರಿಗೆ ತೋರಿದನು ಭೂಪ 44 ಗರುಡಮಂಟಪದಲ್ಲಿ ನಿಂತು ಶ್ರೀರಂಗ ಬೆರಗಿನಿಂದೆಲ್ಲರಿಗೆ ಬಿಡದೆ ಸೇವೆಯನಿತ್ತು 45 ಆಳ್ವಾರುಗಳಿಗೆಲ್ಲ ವಸ್ತ್ರಗಂಧವನಿತ್ತು ಅವರವರ ಆಸ್ಥಾನಕ್ಕವರ ಕಳುಹಿಸುತ 46 ಬಂದು ಬಾಗಿಲ ಹಾಕಿ ಇಂದಿರಾರಮಣ ನಿಂದ ವೆಂಕಟರಂಗ ಆನಂದದಿಂದ 47
--------------
ಯದುಗಿರಿಯಮ್ಮ
ಏನೆಂದ್ಹೇಳಲಿರಂಗನಟ್ಟುಳಿ ಮಾನವರಂತಿವನಲ್ಲಾ ತಾನಾರಿಗೆ ತನ್ನೆಲೆಗುಡ ಗೋಪೀ ಮಾನಿನಿಮಗ ಬಲುಹೊಲ್ಲಾ ಪ ಕೆಳಗಿಲ್ಲದಲಿರೆ ಗೋರಸ ಭ್ಯಾಂಡ್ಯವು | ನೆಲವಿನ ಅಡಕಲ ನೋಡಿ ಅದು | ನಿಲಕದಲಿರೆ ಕೈಗೂಡಿ ಕಡ | ಗೋಲಿಲಿ ಯಜ್ಞ ಮಾಡೀ | ಗೆಳೆಯರ್ವೆರ ಸೈದ ಬಲುಸೂರ್ಯಾಡಿ | ಸಿಲುಕದ ಲ್ಹೋಗುವ ಪೋಡಿ | 1 ಇಕ್ಕಿದ ಕದಗಳು ಇಕ್ಕಿರಬೇಕು | ಫಕ್ಕನೆ ಮನೆಯೊಳು ಸುಳಿದು | ಚಿತ್ತಕ ಮೋಹಿನಿಂದು ಅವ | ರಕ್ಕರದಲಿ ನೆರೆದು ಚಿಕ್ಕ ಬಾರಕೆ | ಠಕ್ಕಿಸಿ ಹೊರುವ ಆ ಮಕ್ಕಳಾಟಿಕೇನಿದು2 ಖೂನಕೆ ಬಾರದೆ ತಾನಲ್ಲಿದಲಿಹ | ನಾನಾ ವೃತ್ತಿಗೆ ಬಂದು ಇದು | ಧೇನಿಸಿ ನೆಲೆ ತಿಳಿಯದ | ನಾನಾ ನೆಂಬವರಿಗೆ ಇದು | ಶ್ರೀನಿಧಿ ಗುರುಮಹಿಪತಿ ಪ್ರಭುವಿನ | ಅನುಮಾನದಲೇ ದೂರುವುದು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೈಯ ತೋರೋ ರಂಗ ಕೈಯ ತೋರೋ ಪ. ಕೈಯ ತೋರೋ ಕರುಣೆಗಳರಸನೆ ಅ.ಪ. ಶರಧಿ ಮಥನದಿ ದೇವಾಸುರರಿಗೆ ಮೋಹಿನಿಯೋಲ್ ಸುರರಿಗೆ ಸುಧೆಯಿತ್ತು ಸುರರಿಗಾಸರೆಯನಿತ್ತಾ 1 ಶಿರಮಂ ಸದ್ಗತಿವೊಂದಿಸಿ ಹರನಂ ನಲವಡಿಸಿದ 2 ಹರನ ವರದಿ ಭಸ್ಮಾಸುರ ಗರ್ವಿತನಾಗಿ [ಆ] ಹರನಂ ಬೆನ್ನಟ್ಟಿ ಬರೆ ದುರುಳನ ದಂಡಿಸಿದಾ 3 ತರಳಧ್ರುವ ತಾಯ ಬಿರುನುಡಿಗೆ ಮನನೊಂದು ಶರಣೆನೆ ಮೈದೋರಿ ತರಳನ ಮೈದಡಹಿದ4 ಕಂದ ಪ್ರಹ್ಲಾದನ ತಂದೆಯುಗ್ರದಿ ಜಡಿಯೆ ಕಂಬದಿಂ ಬಂದು ಖಳನ ಕರುಳನು ಕಿತ್ತೆಸೆದಾ 5 ಮೊಸಳೆ ಬಾಯೊಳು ಸಿಕ್ಕಿ ಬಸವಳಿದು ಬಾಯ್ಬಿಡುತಿರೆ ಎಸೆದ ಚಕ್ರದಿ ಸೀಳಿ ನಕ್ರನ ಕರಿಯನುದ್ಧರಿಸಿದ 6 ಚಕ್ರಧರ ರುಕ್ಮಿಣಿಯ ಕೈಪಿಡಿದ7 ತರುಣಿಯಭಿಮಾನವ ನೆರೆಕಾಯ್ದು ನರನಿಗೆ ವರಸಾರಥಿಯಾಗಿ ತೇರನೆ ನಡೆಸಿದ 8 ವರಶೇಷಗಿರಿಯಲ್ಲಿ ಸ್ಥಿರವಾಗಿ ಶರಣರ ಕರೆದಾದರಿಸಿ ವರಗಳ ಕೊಡುತಿಪ್ಪ 9
--------------
ನಂಜನಗೂಡು ತಿರುಮಲಾಂಬಾ
ನಾಟಕ ರಂಗದಲಿ ನಟಶಿರೋಮಣಿಯೊಬ್ಬ ಪಟುತನದಿ ವಿಧವಿಧನ ನಟನೆಗಳ ತೋರುವನು ಪ ಅಘಟನಾಘಟನ ಶಕ್ತನ ಕಪಟನಾಟಕವು ಘಟಕರಲ್ಲದ ಜನಕೆ ಎಟುಕದಾನೋಟ ಅ.ಪ ಮುಖ್ಯಪಾತ್ರವು ನಮ್ಮ ರುಕ್ಮಿಣಿ ರಮಣನದು ಮುಖ್ಯತಾರೆಯು ಲೋಕ ಜನನಿ ಲಕುಮಿ ಇಕ್ಕಿದನು ಗೋರೂಪ ಚತುರಾನನನು ಮುದದಿ ಮುಖ್ಯಪ್ರಾಣನೆ ತುರಗ ಮುಕ್ಕಣ್ಣ ಕರುವಾದ 1 ಸುಖಸಾರನನು ಪಡೆದು ಧನ್ಯಳಾದ ಯಶೋದೆ ಬಕುಳೆಯೆ ತಾನಾದಳೀ ನಾಟಕದಲಿ ಅಕಳಂಕ ಮಹಿಮನನು ಅಗಲದಿದ್ದ ಸತಿಯು ಮುಖನೋಡಿ ಕೋಪದಲಿ ಕಲ್ಲುಗಳನೆಸೆದಳು 2 ಸರ್ವತ್ರ ವ್ಯಾಪ್ತನಿಗೆ ಇರಲು ಜಗವು ಸಿಗದೆ ಕಿರಿದ ತಾ ಹಲ್ಲುಗಳ ವರಹನಲ್ಲಿ ಹರನ ತಾತನು ತಾನು ಸ್ಮರನ ಬಾಣದಿ ನೊಂದ ಸುರಮೋಹಿನಿಯು ಇಂಥ ಕೊರವಂಜಿಯಾದಳು3 ಹುಟ್ಟಿಸುವ ಬೊಮ್ಮನನು ಪುಟ್ಟಶಿಶುವನೆ ಮಾಡಿ ಹೊಟ್ಟೆಗಿಲ್ಲದೆ ಬಹಳ ಬಾಡಿ ಇರಲು ಮೃಷ್ಟಾನ್ನವನು ಚಿನ್ನ ತಟ್ಟೆಯಲಿ ತಂದಿಡಲು ಶ್ರೇಷ್ಠವಿದು ಜನನಿಗೆನ್ನುತ ತಿಂದು ತೇಗಿದಳು 4 ಬಡುಕನೆದೆಗೊದೆಯಲವನಡಿಗಳಿಗೆ ಶರಣೆಂದ ಕಡು ಕೋಪಿ ಗೋವಳನ ಕೊಡಲಿಗೊಡ್ಡಿದ ಶಿರವ ಹಿಡಿ ಮಣ್ಣು ಪಿಂಡಗಳನಿತ್ತ ಚಂಡಾಲನಿಗೆ ಸಡಗರದಿ ಲಕುಮಿಯನೇ ಕರದಲಿತ್ತ ಪ್ರಸನ್ನ 5
--------------
ವಿದ್ಯಾಪ್ರಸನ್ನತೀರ್ಥರು
ನಾರಾಯಣ ನಿನ್ನ ಸ್ಮರಣೆಯಲಿ ಮನ ಬೇರು ವೂರಿರುವಂತೆ ಕಾರುಣ್ಯದಲಿ ಕಾಯೊ ಪ ವೇದನಾಲ್ಕರ ಕದ್ದಂಥಾ ದೈತ್ಯನ ಕೊಲ್ವಾ ಶದಿ ಮತ್ಯಾವತಾರ ಧರಿಸಿದೆ ಹರಿಯೇ 1 ಮಂದರ ಪೊತ್ತೆ ಭಾವಕಿಯಳ ಮೋಹಿಸಿ ಮೋಹಿನಿಯಾದೆ 2 ವರಹರೂಪದಿ ಪೋಗಿ ಧರೆಯನು ಧರಿಸಿದೆ ದುರುಳ ಹಿರಣ್ಯಕನಕರದಿಂದ ಸೀಳಿದೆ 3 ಕಂದನ ನುಡಿಕೇಳಿ ಕಂಬದಿಂದುದಿಸಿದೆ ತಂದೆಯ ಬಗೆದವನಾ ಛಂದದಿ ಸಲಹಿದೆ 4 ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ತುಳಿದು ಆತನ ಮನೆ ಬಾಗಿಲ ಕಾಯ್ದೆಯೊ 5 ತಾತನ ಮಾತನು ಕೇಳಿ ಮಾತೆಯ ಕೊಂದೆ ಖ್ಯಾತಿಯಿಂದಲಿ ಕ್ಷತ್ರಿಯರನು ಸಂಹರಿಸಿದೆ 6 ಮಾತೆಯ ವರ ಕೇಳಿ ನೀತಿಯಿಂದಲಿ ಪೋದೆ ಸೇತುವೆ ಕಟ್ಟಿ ನೀಖ್ಯಾತರಾವಣನಕೊಂದೆ 7 ಪುಟ್ಟ ಶಿಶುವಾಗಿ ಗೋಪಿಗೆ ಮುದ್ದು ತೋರಿದೆ ಬೊಟ್ಟಿಲಿ ಗಿರಿಯನು ನೆಗಹಿದೆ ಶ್ರೀ ಕೃಷ್ಣಾ 8 ತ್ರಿಪುರರ ಸತಿಯರ ವ್ರತವಗೆಡಿಸುವಂಥಾ ಅಪರಿಮಿತದಿ ಮೋಹಿಸುವಾ ಮೂರ್ತಿಯಾದೆ 9 ಭಕ್ತವತ್ಸಲ ದೇವಾ ಯುಕ್ತಿಯಿಂದಲಿ ಕಾಯ್ವ ವ್ಯಕ್ತಿ ಕಲ್ಕ್ಯಾವತಾರ ಧರಿಸಿದ ಹರಿಯೇ 10 ಶಬ್ದವ ನುಡಿಸುವ ಅಬ್ದಿನಿನ್ನದೊ ದೇವಾ ಶಬ್ದವಾಲಿಸದ ನಿಶ್ಯಬ್ದದೊಳಿರಿಸೆನ್ನಾ 11 ಅಂತರದೊಳಗೆನ್ನಾ ಕಂತುನಾರಾಯಣಾ ಸಂತಸದೊಳು ನಿಜ ಶಾಂತಿ ಪಾಲಿಪ ಗುರು 12
--------------
ಶಾಂತಿಬಾಯಿ
ಪತಿಯ ಮಂದಿರದಲಿ ಸುಖವಾಗಿ ಬಾಳಮ್ಮ ಮತಿವಂತೆ ಎನಿಸಿ ಸನ್ಮತಿ ಪಡೆದು ಪ ಚತುರಳೆ ನಿನ್ನ ಸಖಿಯರೆಲ್ಲರು ಅತಿಶಯದಿ ನಿನ್ನ ಪತಿಯ ಗುಣಗಾನ ಕಥನ ಮಾಡುತ ನಿನ್ನೆದುರಿನಲಿ ಸ್ತುತಿಸಿ ಹಿಗ್ಗಿ ಪೊಗಳುವರೆ ಪಾರ್ವತಿ ಅ.ಪ ವಸತಿ ಇಲ್ಲದೆ ಸ್ಮಶಾನದಲಿ ವಾಸಿಪನೆಂದು ಅಪಹಾಸ್ಯ ಮಾಡುವರೆ ವಸನ ಪೀತಾಂಬರವನುಡುವುದನರಿಯದೆ ಹಸಿಯ ಚರ್ಮವನುಡುತಿಹನೆಂಬರೆ ಅಸನಕಿಲ್ಲದೆಗರಳ ವಿಷವನುಂಬುವನೆಂದು ಗುಸುಗುಸು ನುಡಿಯುವರೆ ಅಸಮನೇತ್ರನು ಭಸುಮ ಲೇಪಿಸಿ ವೃಷಭರಾಜನ ಏರಿ ಬರುವನು ಶಶಿಮುಖಿಯೆ ನೀನರಿಯದಲೆ ಈ ಪಶುಪತಿಗೆ ಸತಿಯಾದೆ ಎಂಬರು 1 ಸರಿಸವತಿಯ ತನ್ನ ಸಿರಮೇಲಿರಿಸಿದಿ ಗಿರಿಜೆ ತರವಲ್ಲ ಕೇಳೆ ಪರಿಪರಿ ರತ್ನಾಭರಣಂಗಳರಿಯದೆ ಉರಗಗಳ ಭೂಷಿತನಾದ ನಮ್ಮ ಗÀರಳ ಕಂಠನಿಗೆ ನೀನರಿಯದೆ ಸತಿಯಾದೆ ಎಂದು ತರಳರೆಲ್ಲರು ಹಾಸ್ಯ ಮಾಡುವರೆ ಸರಸವಾಡುತ ನೋಡು ಕಂಠದಿ ಸಿರದ ಮಾಲೆಯ ಧರಿಸಿಕೊಂಡಿಹ ಪರಮ ಆಶ್ಚರ್ಯದಲಿ ನಾವೆಲ್ಲ ಅರುಹಲೀಗ ಬಂದಿಹೆವು ಎನುವರು 2 ಅಂದು ಮೋಹಿನಿ ರೂಪವ ಕಂಡು ಪರಶಿವನು ಇನ್ನೊಮ್ಮೆ ನೋಡಲು ಬೇಡೆ ಪರಮಾತ್ಮನಾ ಸುಂದರಾಕೃತಿಯ ನೋಡುತ ಪಿಡಿಯಲು ಪೋಗಿ ನಂದ ಕಂದನ ರೂಪ ನೋಡಿದನು ಹಿಂದೆ ಮೂಕಾಸುರನೆಂಬ ದೈತ್ಯನ ಕೊಲಿಸಿದ ಇಂದಿರೇಶನಿಗೆ ಸೇವಕನಾದ ಶಿವನು ಇಂದು ಶಿವನನು ನಿಂದಿಸಿದೆವೆಂದೆನಲು ಬೇಡ ಶ್ರೀ- ತಂದೆ ಕಮಲನಾಭ ವಿಠ್ಠಲನ ಚಂದದಲಿ ಭಜಿಸುವನು ಎನುವರು3
--------------
ನಿಡಗುರುಕಿ ಜೀವೂಬಾಯಿ
ಪಾದ ಮಾನಸಾನಂದಿಸೋ ಶತ ಭಾನುತೇಜನೇ ಪ ಹನ ಚಿತ್ರಭಾನು ದನುಜಾರಿ ಹರಿ ಅ.ಪ ಮಾಡುವೆನಯ್ಯ ಇಂದುವದನಾ ಶ್ರೀ ಪುಲಿಗಿರಿ ಮಂದಿರ ಮಂದರಧರ 1 ದುಷ್ಟಮನುಜರ ಕೂಡಿ ಭ್ರಷ್ಟನಾದೆನು ಇಷ್ಟಫಲ ದಾಯಕ ತ್ರಿವಿಷ್ಟಪಾಧಿಪಾನುಭವ್ಯ ಅಷ್ಟಸಿದ್ಧಿಪ್ರದ ನಿನ್ನ ಗಟ್ಟಿಯಾಗಿ ನಂಬಿದೆನು 2 ಉರಿಹಸ್ತ ಬೇಡಲು ಲೋಕಮೋಹಿನಿಯ ರೂಪು ಸ್ವೀಕರಿಸಿ ಶಿವನಕಾಯ್ದೆ 3 ಕೀರ್ತಿ ನೋಡಿಸೋ ನಿನ್ನಯಮೂರ್ತಿ ಬೇಡಿಸದಿರು ನಿನ್ನ ನಾಡಿನೊಳಗಾಡಿಸೋ ಮುರಾರಿಹರಿ4 ಶುಭ ವೇಷವಿಪುಲ ದುರಿತಗಣ ಶೋಷಣ ಶ್ರೀವರದವಿಠಲ 5
--------------
ಸರಗೂರು ವೆಂಕಟವರದಾರ್ಯರು