ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಬಂಧುಗಳೆಲೋ ಜೀವ ವಿಚಾರಿಸೋ ಕಾವ ಸಮರ್ಥದೇವ ಹರಿಯಲ್ಲದೆ ಪ ಮಾಯಮೋಹವ ನೀಗಿ ಕಾಯಶುದ್ಧಲಿ ಮನ ಪಾದ ದಿವ್ಯಭಕ್ತಿಲಿ ಭಜಿಸೊ ಅ.ಪ ಜನನಿ ಬಂದಹಳೆಂಬೆ ಜನನಿರ್ದಳಾಧ್ರುವಗೆ ಜನಕನ ತೊಡೆಯಿಂದ ಕನಿಕರಿಲ್ಲದೆ ಮಲ- ಜನನಿ ನೂಕಲು ಕಂದ ವನಕ್ಹೊರಟು ಪೋಗಲು ಜನನಿ ಸಲಹಿದಳೆನೋ ವನಜಾಕ್ಷನಲ್ಲದೆ 1 ಸತಿಹಿತದವಳೆನುವೆ ಸತಿಯಿರ್ದು ಸುಗ್ರೀವ ಖತಿಪಟ್ಟಾಗ್ರಜನಿಂ ವ್ಯಥೆಯಿಂದುಸುರ ಬಿಡಲು ಸತಿಬಂದು ಪತಿಯನ್ನು ಹಿತದಿ ಕರೆದೊಯ್ದಳೆ ಹಿತದ ಬಂಧುಗಳಿವರೇ ಕ್ಷಿತಿಪತಿಯಲ್ಲದೆ 2 ಸುತರ ಬಲವಿಹುದೆನುವೆ ಸುತರತಿ ಬಲಾನ್ವಿತರು ಜಿತಮಾರನಿಗಿರೆ ಉರಿಹಸ್ತ ವರವಿತ್ತು ಗತಿದೋರದಿರುತಿರೆ ಸುತರು ನೆರವಾದರೆ ಗತಿ ರಮಾಪತಿಯೆನೆ ಹಿತದಿಂ ಮೊರೆಕಾಯ್ದ 3 ಬಂಧುಗಳತಿಶಯದ ವೃಂದನೆರೆದು ಇರ ಲಂದು ಕರಿಮಕರಿಕೆಯಿಂದ ಬಂಧನ ಪಡಲ ವಂದು ಬೆಂಬಲಗೊಟ್ಟು ಬಂಧನವ ಬಿಡಿಸಿದುವೆ ತಂದೆಯಾ ಶ್ರಿ ಮುಕ್ಕುಂದನಲ್ಲದಲೆ 4 ಹರಿಯೆ ಪರದೈವವೋ ಹರಿಯೆ ಪರಲೋಕವು ಹರಿಯೇ ಸ್ಥಿರಸುಖವು ಹರಿಯೆ ವರ ಮುಕ್ತಿಯೋ ಹರಿಯೆಂದು ಅಜಮಿಳ ನರಕಯಾತನೆ ಗೆದ್ದ ಪಾದ 5
--------------
ರಾಮದಾಸರು
ಮನದಣಿ ನೋಡಿದೆನೊ ಸನಕಾದಿನಮಿತ ಮನದಣಿ ನೋಡಿದೆನು ದೃಢದಿ ಪ ನಿನಗೆ ಸರಿಯಿಲ್ಲ ಭುವನತ್ರಯದಿ ಮನಕೆ ಬೇಸರವಿಲ್ಲದನುದಿನ ತನುವನಪ್ಪಿಹಿಡಿದು ಭಕುತರ ಮನದ ವರಗಳನಡೆಸಿ ಸಲಹುವ ಕನಿಕರಾರ್ಣವ ವಿಠಲ ನಿನ್ನಡಿ ಅ.ಪ ಒಂದು ದಿನ ಆ ತ್ರೇತಾಯುಗದಲ್ಲಿ ಋಷಿಗಡಣ ಕೂಡಿ ಬಂದು ನಿಮ್ಮಯ ಚರಣಸನ್ನಿಧಿಲಿ ಭಯಭಕುತಿಯಿಂದ ವಂದಿಸಾಲಿಂಗನೆಯ ಕೋರುತಲಿ ಅಭಯ ಬೇಡುತಲಿ ನಿಂದ ಋಷಿಗಳಿಗ್ಹಲವು ಪರಿಯಲಿ ತಂದೆ ನೀ ಸಮ್ಮತವ ಪೇಳಿ ಬಂದು ದ್ವಾಪರಾಂತ್ಯಯುಗದಲಿ ಒಂದು ಅರಲವ ಅಗಲದಲೆ ನಿಮ್ಮ ಪೊಂದಿ ಆಲಿಂಗನವನೀಯುವೆ ನೆಂದು ವರವಿತ್ತ ವಿಠಲ ನಿಮ್ಮಡಿ 1 ಅಪಾರಮಹಿಮಜಾಲ ಅವತರಿತಿಸಿದಿ ದ್ವಾಪರಯುಗದಿ ಬಾಲಕೃಷ್ಣ ನೀನಾಗಿ ಶ್ರೀಪತಿ ಸುಜನಪಾಲ ದನುಜಕುಲಕಾಲ ಪಾಪಸಂಹಿತ ಅಮಿತಲೀಲ ಶಾಪಪರಿಹಾರ ವೇಣುಲೋಲ ತಾಪಸೋತ್ತಮರಿಷ್ಟ ನೀಡಲು ಗೋಪಿಕಾಸ್ತ್ರೀಯರೆನಿಸಿ ಪುಟ್ಟಿಸಿ ಗೌಪ್ಯದಾಲಿಂಗನವನಿತ್ತ ಭೂಪ ಭೂಪತಿ ವಿಠಲ ನಿಮ್ಮಡಿ 2 ಸುಗುಣ ಸಂತರಹೃದಯಸಂಚಾರ ದಾಸಾನುದಾಸರು ಪೊಗಳಿ ಭಜಿಸುವ ಗಾನಪ್ರಿಯಕರ ಮೌಲಕೌಸ್ತುಭ ಜಗದಜೀವನ ಪಾವನಾಕಾರ ಪರಮಸುಖಕರ ಅಗಣಿತಾಗಣಿತಮಹಿಮಭರಿತ ಪೊಗಳಲಳವೆ ನಿಮ್ಮ ಚರಿತ ತ್ರಿ ಜಗನಾಟಕ ಸುಲಭದಲಿ ನೀ ಅಗಲದನವರತಸಮ ಈ ಕಲಿ ಯುಗದಿ ಭಕ್ತರಿಗಾಲಿಂಗನೀಯುವ ನಿಗಮಗೋಚರ ವಿಠಲ ನಿನ್ನಡಿ 3 ಮಂದಹಾಸ ಮಂದರೋದ್ಧಾರ ಸುರಕಲ್ಪಧೇನು ಇಂದಿರೆಯರ ಪ್ರಾಣ ಮನೋಹರ ಹೇ ದೀನಬಂಧು ಸುಂದರಾಂಗ ಸುಗುಣಗುಣಹಾರ ಬಂಧನಿವಾರ ಸಿಂಧುಕಲಕಿದಪಾರ ಶೂರ ಕುಂದದೆ ಮೊರೆಕಾಯ್ದ ಸುರರ ಹೊಂದಿಭಜಿಸುವ ಭಕುತಜನಕಾ ನಂದ ನೀಡುತ ಚಂದನೋಡುತ ಸಿಂಧುನಿಲಯ ಮುಕ್ಕುಂದ ಮುರಹರಿ ಅಂದಮಾದ ವಿಠಲ ನಿಮ್ಮಡಿ 4 ಸುತ್ತಮುತ್ತ ಭಕ್ತರಾಲಯವು ಹಿಂಭಾಗದಲ್ಲಿ ಸತ್ಯಭಾಮ ರುಕ್ಮಿಣೀಕಾಂತನು ಮುಂಭಾಗದಲಿ ನಿತ್ಯನಿರ್ಮಲ ಚಂದ್ರಭಾಗಿನಿಯು ನಡುಮಧ್ಯ ರಂಗವು ಭಕ್ತಗೊಲಿದು ಭೂವೈಕುಂಠವ ಸತ್ಯವೆನಿಸಿ ಮೀರಿ ಮೆರೆವ ಭಕ್ತಜನರ ಕೈಯೆತ್ತಿ ಸಾರುವ ಪೃಥ್ವಿಗಧಿಕ ಮಹ ಪಂಢರಾಪುರ ಮುಕ್ತಿ ತವರೆಂಬ ಮಂದಿರದಲ್ಲಿ ಕರ್ತುಶ್ರೀರಾಮ ವಿಠಲ ನಿನ್ನಡಿ5
--------------
ರಾಮದಾಸರು