ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ತ್ರಾಣವು ಎನ್ನೊಳಿನಿತಿಲ್ಲವಯ್ಯ ಭಾವಜಪಿತ ನೀನೆ ದಯಮಾಡಬೇಕೊ ಪ ಗುಡಿಯ ಕಟ್ಟಿಸಲೆ ನಾ ಒಡುಕುಕವಡೆನಗಿಲ್ಲ ಬಡವರಿಗೆ ಅನ್ನಿಟ್ಟಿಲೆ ಹಿಡಿಧಾನ್ಯವಿಲ್ಲ ಕೊಡುವೆನೆನೆ ಧರ್ಮವ ಪಡೆದು ನಾ ಬಂದಿಲ್ಲ ಬಿಡುವೆನೇ ದು:ಸ್ಸಂಗ ಅಡರಿಹ್ಯರು ರಿಣವು 1 ದೃಢಧ್ಯಾತ್ಮಗೈವೆನೆನೆ ನಡೆವ ಶಕ್ತ್ಯೆನಗಿಲ್ಲ ಮಡಿಮಾಡ್ವೆನೆನೆ ಮನವು ತಡೆವಶಕ್ತಿಲ್ಲ ಸುಡಲೆ ಕಾಮಾದಿಗಳು ತೊಡರಿಹ್ಯದು ಸಂಸಾರ ನುಡಿಯಲೆ ಸತ್ಯ ಸದಾ ಬಡವನಾಗಿಹೆನು 2 ಒಡೆಯ ಶ್ರೀರಾಮ ನಿನ್ನಡಿಯ ಗುರುತರಿಯೆ ಕಡುಮೂರ್ಖ ಜನ್ಮವನು ಪಡೆದಿಹೆನು ಜಗದಿ ಒಡೆಯ ಸರ್ವಕೆ ನೀನೆ ಜಡಮತಿಯು ಗಡ ಕಡಿದು ದೃಢಭಕ್ತಿ ಸುಖವಿತ್ತು ಪಿಡಿದು ಸಲಹಯ್ಯ 3
--------------
ರಾಮದಾಸರು
ಗುರು ರಾಘವೇಂದ್ರ ತವ ಚರಣ ದರುಶನಕೆ ಬರಲಿಲ್ಲವೆಂದು ಕೋಪವ ಮಾಡ್ವದ್ಯಾಕೊ ಪ ಧನವಿಲ್ಲ ಕೈಯೊಳಗೆ ತನುವಿನಲಿ ಬಲವಿಲ್ಲಾ ಅನುಕೂಲವಿಲ್ಲವೊ ಎನ್ನ ಮನೆಯೊಳಗೆ ಘನ ಸುಪ್ರಯಾಸ ನಿನ ದಾಸಗೊದಗಿದ ಮೇಲೆ ಎನ ಮೇಲೆ ದೋಷವೇನಿರುವದಿದರೊಳಗೆ 1 ಗೆಲುವಿಲ್ಲ ಮನದೊಳಗೆ ಫಲವಿಲ್ಲ ಸಂಸಾರ ಬಲೆಯೊಳಗೆ ಸಿಲುಕಿ ನಾ ಬೇಸತ್ತೆನೋ ಹಲುಬುವೆನೊ ದಾರಿದ್ರ್ಯ ಬವಣೆಯನು ತಪ್ಪಿಸಿ ಸುಲಭ ಸಾಧನೆ ಪೇಳಿ ಸಲಹೊ ಗುರುವರನೇ2 ಒಂದು ಬಗೆಯನು ತೋರೋ ಇಂದೇ ನಾ ಹೊರಡುವೆನೂ ಛಂದದಿಂದಲಿ ಪರಿವಾರ ಸಹಿತಾ ತಂದೆ ಹನುಮೇಶ ವಿಠಲನ ಕಂದನೆ ನಿನ್ನ ಬಂದು ನೋಡುವೆ ಮಾಡ್ವೆ ಸೇವೆ ತವ ದೂತಾ 3
--------------
ಹನುಮೇಶವಿಠಲ
ತಡವ ಮಾಡಲಿ ಬೇಡ ಹಡೆದವ್ವ ಎ ನ್ನೊಡೆಯನನು ಹುಡುಕಿ ತಾರೆ ಪಿಡಿವೆ ಪಾದವ ಪ ತಡವ ಮಾಡದೆ ಪೊಡವಿಯೊಳು ಕಡು ಸಡಗರಾರ್ಯನ ಹುಡುಕಿ ತಂದರೆ ಹಡೆದು ನಿನ್ನ್ಹೆಸರಿಸಿವುವೆನೆನ್ನವ್ವ ಸರಿಮಾಡ್ವೆನವ್ವ ಅ.ಪ ಜೀವದರಸನ ಹಂಬಲೆನಗವ್ವ ಅತ್ಯಧಿಕವಾಗಿ ಕಾಯಸೊರಗಿ ಕ್ಷೀಣವಾಯ್ತೆವ್ವ ಪ್ರಾಯಬಂದರೆ ಸುಮ್ಮನೆ ಹೋಗುತಾದವ್ವ ಪ್ರಾಯಕ್ಕೆ ತಕ್ಕ ಚಾಯಗಾರ ಕಂಡೇನ್ಹೇಗವ್ವ ಕಾಯರಹಿತ ಕಾರುಣ್ಯನಿಧಿ ಮಾಯತಿಳಿಯುವರಿಲ್ಲ ಆತನ ದಿವ್ಯಚರಿತ ನೆನೆದು ನೆನೆದು ಬಾಯ ಬಿಡುವೆನೆ ಆಯತಾಂಬಕಿ 1 ವಸ್ತೊಡೆವೈಷ್ಟಿರಲು ಏನವ್ವ ಅತಿಶೋಭೆಯೆನಿಪ ಮುತ್ತುಯಿಲ್ಲದ ಮೋರೆಯಾಕವ್ವ ಹತ್ತಿರಕೆ ಬರಗೊಡರವ್ವಾ ಮುತ್ತೈದೆರೆಲ್ಲರು ಅತ್ತ ಇತ್ತೆಂದೆಳೆಯುತಿಹ್ಯರವ್ವ ಮತ್ತೆ ಬೇಡಲು ದೊರೆಯದಂಥ ಹೊತ್ತು ಸುಮ್ಮನೆ ಹೋಗುತಿದೆ ಕರ್ತ ತುರ್ತು ದೊರೆಯದನಕ ಚಿತ್ತ ಸ್ವಸ್ಥವಾಗದವ್ವ 2 ಭೂಮಿತ್ರಯದೊಳಧಿಕ ಕೇಳವ್ವ ಆತನಹೆಸರು ಕಾಮಿತವನೀಗರಿತುಕೊಂಡೆನವ್ವ ನೇಮದಿಂದ ಭಜಿಸುತಿಹೆನವ್ವ ಎನ್ನಕಡೆಗಾತ ಪ್ರೇಮದಿಂದ ಸುಳಿಯದಿಹ್ಯನವ್ವ ಭಾಮೆಬಾರೆಂದು ಬದಿಲಿಕರೆದು ಪ್ರೇಮದಿಂದ ಅಪ್ಪಿ ನಿನ್ನಯ ಸ್ವಾಮಿ ಶ್ರೀ ರಾಮ ನಾನೆಂದ್ಹೇಳಲು ಕ್ಷೇಮ ಪಡೆದು ಬಾಳ್ವೆನವ್ವ 3
--------------
ರಾಮದಾಸರು
ಪಾಲಿಸು ಶ್ರೀನಿವಾಸ ಪಾಲಿಸೋ ಪ ಪಾಲಿಸೋ ಯದುಕುಲ ಬಾಲಾ ಗಾನ- ಲೋಲನೆ ಯಾಕಿಂಥ ಜ್ವಾಲಾ ಜನ್ಮ ಬಲ್ಲೇನಾ ಸಂಸಾರಶೂಲಾ ನಿನ್ನ ಚಾಲನದಿಂದಾದವೆಲ್ಲಾ ಪದ್ಯ ಮಾಲೆಹಾಕುವೆ ಸಿರಿಲೋಲಾ ಆಹಾ ಬಾಲನ ಪಡೆದು ಪಾಲಿಸಲಾರೆನೆಂದರೆ ಸೀಲನೇ ಜನನಿ ಪದ್ಮಾಯಗಳಿಗೆ ಪೇಳ್ವೆ 1 ನಾನು ಮಾಡುವುದೆಂಬುದಿಲ್ಲಾ ಯೆನಗಾವ ಸ್ವಾತಂತ್ರ್ಯವು ಇಲ್ಲಾ ಇರೆ ಅನುಗಾಲ ಕಷ್ಟವು ಸಲ್ಲಾ ಎನಗೆ ಜನುಮಾದಿ ಭಯವು ಬಿಟ್ಟಿಲ್ಲ ನೀನು ತನುಸ್ಥಾನ ಬಿಟ್ಹೋದ ಮ್ಯಾಲೆ ಎನ್ನ ಸ್ವಾತಂತ್ರ್ಯವು ಇಲ್ಲವಾಯಿತಲ್ಲ ಆಹಾ ಅನುದಿನ ಹಸಿವೆ ತೃಷೆಗಳಿಂದ ಬಳಲೋ ದಾ- ಸನು ನಿನ್ನವನಿಗೆ ಸ್ವಾಧೀನವೆಲ್ಲಿಹುದೈಯ್ಯಾ 2 ನಿತ್ಯ ಸಂಸಾರಿಯಾದೆನಗೆ ಮತ್ತೆ ಮೃತ್ಯು ಬೆನ್ಹತ್ತಿರುವವಗೆ ಮಾಡೋ ಕರ್ಮ ಬದ್ಧ ಎನಗೆ ನೀ- ಚತ್ವದಿದುಪಜೀವಿಸುವವಗೆ ನಾನು ನಿತ್ಯನೆಂಬುವ ದುರಾತ್ಮನಿಗೆ ಆಹಾ ಮುಕ್ತಿಗೊಡೆಯ ಪುರುಷೋತ್ತಮ ನಿನ್ನ ದಾ- ಸತ್ವನಿತ್ತು ಸುಶಕ್ತನಮಾಡು ನೀ 3 ನಿನ್ನ ಆಧೀನವೊ ಎಲ್ಲಾ ನಾನು ನಿನ್ನ ದಾಸನು ಶಿರಿನಲ್ಲಾ ಅನು- ದಿನ ಮಾಡುವ ಕಾರ್ಯವೆಲ್ಲ ನೀನು ಚಲನೆದಂದದಿ ಮಾಡ್ವೆನಲ್ಲಾ ಯೆಂನೊ- ಳಾವ ತಪ್ಪಿತವೇನೋ ಇಲ್ಲಾ ನಿನ್ನ ಸಂಕಲ್ಪದಂತಾಗೋದೆಲ್ಲಾ ಆಹಾ ತನುವ ಕೊಟ್ಟವ ನೀನೆ ತನು ಕೊಂಡೊಯ್ವನೂ ನೀನೆ ಹನುಮೇಶವಿಠಲಾ ನಿನ್ನವನಾದ ಮ್ಯಾಲೆನ್ನಾ4
--------------
ಹನುಮೇಶವಿಠಲ
ಬಂದದ್ದನುಭವ ಮಾಡ್ವೆ ಕಂದನಾಗಿರುವೆ ತಂದೆ ನಿನ್ನಯ ದಯವೊಂದಿರಲಿ ಹರಿಯೆ ಪ ಮಂದಿ ಮಕ್ಕಳು ಎನ್ನ ಕುಂದಿಟ್ಟು ಜರೆಯಲಿ ಬಂಧು ಬಾಂಧವರೆಲ್ಲ ನಿಂದಿಸಿ ನುಡಿಲಿ ಬಂಧನವು ಬಿಡರಿರಲಿ ಎಂದೆಂದು ಮರೆಯದಂತೆ ಇಂದಿರೇಶ ನಿಮ್ಮ ಧ್ಯಾನವೊಂದೇ ಎನಗಿರಲಿ 1 ಭೂಪತಿಗಳೆನ್ನೊಳ್ಕೋಪಮಂ ತಾಳಲಿ ತಾಪಬಡಿಸಲಿ ಮಹಪಾಪಿವನೆನುತ ತಾಪತ್ರಯ ಬಿಡದಿರಲಿ ಪಾಪಲೋಪನೆ ಜಗ ದ್ಯ್ಯಾಪಕನೆ ನಿನ್ನ ಧ್ಯಾಸಪರೂಪ ಎನಗಿರಲಿ 2 ಕಂಡಕಂಡಂತೆ ಜನರು ಭಂಡನೆಂದೆನ್ನಲಿ ತಂಡತಂಡದಿ ಕಷ್ಟ ಅಂಡಲೆದು ಬರಲಿ ಹೆಂಡರು ಸೇರದೆ ಗಂಡನೆಲ್ಲೆಂದೆನಲಿ ಪಂಢರೀಶ ನಿನ್ನ ಪದೆನ್ನ ಮಂಡೆಮೇಲಿರಲಿ 3 ಎತ್ತ ಪೋದರು ಜನರು ಹತ್ರ ಬಡಿಯಲಿ ಎನಗೆ ವಿತ್ತಕೊಟ್ಟೊಡೆಯರು ನಿತ್ತರಿಸದೊದಿಲಿ ಮುತ್ತಿಕೊಂಡ್ವೈರಿಗಳು ಕುತ್ತಿಗೆ ಕೊಯ್ಯಲಿ ಚಿತ್ತಜಪಿತನಿನ್ನ ಭಕ್ತ್ಯೊಂದೆನಗಿರಲಿ 4 ಪೀಡಿಸಲಿ ಬಡತನವು ಕಾಡಿಸಲಿ ದಾರಿದ್ರ್ಯ ಓಡಿಸಲಿ ಪೊಡವಿಪರು ನಾಡ ಬಿಟ್ಟೆನ್ನ ನೋಡಲಿ ಮುನಿದೆನ್ನ ನಾಡದೈವಗಳೆಲ್ಲ ಬೇಡೆನೆ ಶ್ರೀರಾಮ ನಿನ್ನಡಿ ಬಲೊಂದೆನಗಿರಲಿ5
--------------
ರಾಮದಾಸರು