ಗಾನ ವಿಲೋಲನ ನಾಮ ಸುಧಾರಸ
ಪಾನಮಾಡು ಸತತ ಪ
ಹೀನ ಮನವ ಬಿಟ್ಟು ಸಾನುರಾಗದಿಂದ
ಜಾನಕಿ ವಲ್ಲಭ ಆನಂದಮಯನೆಂದ ಅ.ಪ
ಉಡಿಗೆ ತೊಡುಗೆಗಳ ಸಡಗರವೆಲ್ಲವು
ಕಡು ದು:ಖ ದೇಹವು ನಡುಗುವತನಕ
ನಡುಗಲು ದೇಹವು ಮಡದಿ ಮಕ್ಕಳುಗಳು
ಒಡೆಯನಾದರು ನಿನ್ನ ಸಿಡುಗುಟ್ಟುವರು 1
ಹಸಿವು ಬಾಯಾರಿಕೆ ಶಿಶು ಮೋಹಗಳಿಂದ
ಪಶುಪಕ್ಷಿಗಳೆಲ್ಲ ನಿನಗೆ ಸಮ
ವಸುಧೆಯೊಳಗೆ ನಿನಗೆ ಅಸಮ ವಿವೇಕವ
ಬಿಸಜಾಕ್ಷನೀಯಲು ಸುಸಮಯವೆಂದರಿತು 2
ತನ್ನನು ನೆನೆಯಲು ಘನ್ನ ಮಹಿಮೆ ಪ್ರ
ಸನ್ನ ಮೂರುತಿಯು ಎನ್ನವನೆಂದು
ನಿನ್ನಪರಾಧವ ಮನ್ನಿಸಿ ಸಲಹುವ
ಚಿನ್ಮಯ ಮೂರುತಿ ಬಿನ್ನೈಸುವೆನೆಂದು 3