ಜಾನಕಿಯು ನಮ್ಮಮ್ಮ
ನಮಗೆ ಭಯವೇನು ಪ
ಪವಮಾನ ತನಯನು ಪಾಲಿಪ ಗುರುವಯ್ಯಾ ಅ.ಪ
ಕಾಲಕಾಲದಿ ತಪ್ಪದೆ | ಭತ್ಯವ ಹಾಕಿ
ಬಾಲಲೀಲೆಗಳಾಡಿಸಿ
ಮೇಲೆ ತುಡುಗಾಟವಾಡಿದರೆ ಕೆನ್ನೆಯ ಹಿಂಡಿ
ಹಾಲ ಕುಡಿಸಿ ಮಕ್ಕಳರ್ಥಿಯ ನೋಡುವ 1
ಇತರ ಮಕ್ಕಳಿಗೆಲ್ಲಾ | ಅವರ ಮಾತಾ
ಪಿತರು ವಡವೆಗಳಿಟ್ಟು
ಮಿತಿಯಿಲ್ಲದೆ ಬೈದು ಬಲು ಚಿಂತೆಯ ಪಡುವರು 2
ಕಳ್ಳರಿಗೆ ಸಿಕ್ಕದೈಯ್ಯ | ನಮ್ಮೊಡವೆಗಳ್
ಕಳಚುವುದಕೆ ಬಾರದು
ಒಳ್ಳೆ ವಸ್ತ್ರವ ಉಡಿಸಿ ಉಚಿತ ತಿಂಡಿಯ ಕೊಡಿಸಿ
ಸುಳ್ಳಾಡದಂದದಿ ಸುತ್ತಿಸಿ ನಗುವರು 3
ಓದು ಬರಹವ ಕಲಿಸಿ | ನಮ್ಮನು ಕೆಲವು
ಹೊತ್ತು ಆಟಗಳಾಡಿಸಿ
ಆದರಿಸುತ ಜನ್ಮ ಜನ್ಮಗಳಲಿ ಬಿಡದೆ ಕಾದು
ಕೊಂಡಿರುವರು ಕಡೆಗೂ ನಮ್ಮಗಲರು 4
ಇಂತಹ ನಮ್ಮವರ ಬಿಟ್ಟು | ಬರಿದೇ ಲೋಕ
ಸಂತೆಯವರನು ನಂಬುವರೆ
ಎಂತಾದರೂ ಗುರುರಾಮ ವಿಠಲನ ನಾಮ
ಸ್ವಂತವಾದರೆ ಮುಕ್ತಿ ಸ್ವಾಧೀನವಾಗುವುದು5