ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಕಂಡೆ ಪಂಡರೀಶನ | ಕಂಡೆ ಕಂಡೆ ಪ. ಕಂಡೆ ಪಂಡರಿಪುರದಿ ಮೆರೆವನ ಕಂಡೆ ಭಕ್ತರ ಕಾವ ಬಿರುದನ ಕಂಡೆ ಮಂಡೆಯ ಚರಣದಲ್ಲಿಡೆ ಹಿಂಡು ಅಘಗಳ ತರಿವ ವಿಠಲನ ಅ.ಪ. ಕಟಿಯಲೀ ಕರವಿಟ್ಟು ಮೆರೆವನ ಹಟದಿ ವಗದಿಟ್ಟಿಗೆಲಿ ನಿಂತನ ಕಟಕ ಮಕುಟನ ವಟದೆಲೆ ಮೇಲೊರಗಿದಂಥನ ಕುಟಿಲ ಕುಂತಳ ಫಣಿಯ ತಿಲುಕನ ತೃಟಿಯು ತೆರವಿಲ್ಲದಲೆ ನಮಿತನ ವಟುವೆನಿಸಿ ಬಲಿರಾಯಗೊಲಿದನ ನಟನೆಗೈಯ್ಯವ ದಿವ್ಯರೂಪನ 1 ಚಂದ್ರಭಾಗಾ ತೀರದಲ್ಲಿಹನ ಚಂದ್ರ ಕೋಟಿಸ್ಮರನ ರೂಪನ ಇಂದಿರೆಯ ಸಹಿತದಲಿ ನೆಲಸುತ ಚಂದ್ರದ್ಹಾರಗಳಿಂದಲೆಸವನ ಬಂದ ಭಕ್ತರ ಭೇದ ನೋಡದೆ ಸಂದರುಶನಾನಂದವೀವನ ಚಂದ್ರಮಂಡಲ ಮಧ್ಯವರ್ತಿಯ ಚಂದ್ರಕುಲಕೆ ತಾ ಚಂದ್ರನೆನಿಪನ 2 ವಿಠ್ಠಲನ ಪುರದಲ್ಲಿ ಹರಿಯುವ ಶ್ರೇಷ್ಠ ಇಂದುಭಾಗೆಯಲಿ ಮಿಂದು ಮುಟ್ಟಿ ವಿಠಲನ ಚರಣಕಮಲವ ಬಿಟ್ಟು ಮನದ್ಹಂಬಲಗಳೆಲ್ಲವ ವಿಠ್ಠಲಾ ನೀನೆ ಗತಿ ಕೈ ಗೊಟ್ಟು ಕಾಯೆಂದೆನುತ ಸ್ತುತಿಸಿ ಕಷ್ಟಹರ ಗೋಪಾಲಕೃಷ್ಣ ವಿಠ್ಠಲನ ಚರಣಾಂಬುಜಗಳನು 3
--------------
ಅಂಬಾಬಾಯಿ
ಚಿತ್ತಾಭಿಮಾನಿ ನೀನು ಮತ್ತೆ ನಾ ಬಲಗೊಂಡು ದುಷ್ಟವಿಷಯಕ್ಕೆ ಎರಗುವÀ ಮನವನ್ನು ಅಚ್ಚುತನ ಚರಣದಲಿ ಇರಿಸುವೆ1 ಮನದಭಿಮಾನಿಯೆ ಇವನ ನಾ ಬಲಗೊಂಡು ದುರುಳ ವಿಷಯಕೆ ಎರಗುವ ಮನವನ್ನು ನರಹರಿಯ ಚರಣದಲಿ ಇರಿಸುವೆ 2 ಅಚ್ಚುತನೆ ನಾ ನಿನ್ನ ಹೆಚ್ಚು ಬೇಡೋದಿಲ್ಲ ಕಷ್ಟಕಾಲದಲ್ಲಿ ಹರಿಯೆಂಬ ಸ್ಮರಣೀಯೊ ರಕ್ಷಿಸೋ ಲಕ್ಷ್ಮೀರಮಣನೆ 3 ನರಹರಿಯೆ ನಾ ನಿನ್ನ ಹಿರಿದ ಬೇಡೋಳಲ್ಲ ಸರ್ವಕಾಲದಲಿ ಹರಿಯೆಂಬೋ ಸ್ಮರಣೀಯ ಕರುಣಿಸೋ ಲಕ್ಷ್ಮೀರಮಣನೆ 4 ಪಾಲ್ಗಂಜಿಯೆಂದರೆ ಅರಗಂಜಿಯಾಹೋದೆ ಲಕ್ಷ್ಮೀರಮಣಗೆ ಎಂಟುಗುಣಳುಂಟೆಂದರೆ ಮೇಲಿದ್ದ ಗುಣಗಳಡಗೋದೆ 5 ಪಂಚಕನ ದೇಹದಲಿ ನಿಂತೆರಡು ಪಕ್ಷಿಗಳು ಸಂತತ ದುಃಖಿ ಸುಖಿಯೊಬ್ಬ ಜೀವಗೆ ನಿಂತು ಸುಖ ದುಃಖ ಕೊಡುತಿತ್ತು 6 ಪಂಚಮೂರುತಿ ಹರಿಯ ಅಂತರಂಗದಿ ಇಟ್ಟು ಸಂತತ ಸ್ವಪ್ನ ಸುಷುಪ್ತಿ ಏರಿಸುವ ಪ್ರಾರ್ಥಿಸಿ ಪ್ರಾಜ್ಞರಿಗೆ ಸರಿಯೆಂಬೆ7 ಈ ಜಾಗ್ರದವಸ್ಥೆಯಲಿ ನಾನಾವಿಧ ಕರ್ಮಗಳ ಪ್ರೇರಿಸಿ ಸಕಲ ಶ್ರೀಕಾರ ಮಾಡುವೊ ಸ್ವಾಮಿ ಶ್ರೀಹರಿಗೆ ಶರಣೆಂಬೆ 8 ನಡೆವುದು ನಿನ್ನ ಯಾತ್ರೆ ನುಡಿವುದು ನಿನ್ನ ನಾಮಸ್ಮರಣೆ ಅಡಿಯಿಡೋದೆಲ್ಲ ಹರಿಯಾತ್ರೆ ಗುರುಪೂಜೆ ಸ್ಮರಣೇಯ ಪಾಲಿಸೋ ಲಕ್ಷ್ಮೀರಮಣನೆ 9 ವಿಷ್ಣುಭಕ್ತಿಯಿಲ್ಲದೋರ ಹತ್ತಿರ ನಾನಿರೆ ಎಚ್ಚರಿತು ಮಾಡೆ ಗೆಳೆತನವ ಅವರ ಕಂಡರೆ ನಾನು ಕಿಚ್ಚ ಕಂಡಂತೆ ಕೊಲ್ಲಿಸುವೆ 10 ಹರಿಭಕ್ತಿಯಿಲ್ಲದೋರ ಹತ್ತಿರಲಿ ನಾನಿರೆ ಅರೆಘಳಿಗೆ ಮಾಡಿ ಗೆಳೆತನವ ಅವರ ಕಂಡರೆ ತಾನು ಉರಿಯ ಕಂಡಂತೆ ತೊಲಗುವೆ 11 ಕಾಶೀಪಟ್ಟಣ ಶ್ರೀ ವಾಸುದೇವರು ಭೂಮಿ ಹರಿದಾಸರು ಕಟ್ಟಿಸಿದ ಸ್ಥಳದಲ್ಲಿ ಹರಿಯ ನಿಜದಾಸಗೆ ವಿಶ್ವನಾಥನೆಂತೆಂಬೊ ಪೆಸರುಂಟು 12 ಹರಿದಾಸರ ಒಳಗೆ ಪರಮ ವೈಷ್ಣವನ್ಯಾರೆ ಕಿರಿಯ ಕೆಂಜೆÉಡೆಯ ಮಕುಟನೆ ಅಜನ ಸುತನಾ ಶಿವನು ಹರಿದಾಸಕಾಣೆ ಹುಸಿಯಲ್ಲ13 ಗುಣಮಣಿಧಾಮಗೆ ಮಣಿದೊಮ್ಮೆ ಇಕ್ಕದೆ ಹಲವು ದೈವಗಳ ಭಜಿಸಿದ ಪಾಪಿ ನೀನು ಮಣಿಮಂತ ಹೋದಗತಿಗ್ಹೋಗ್ವೆ 14 ಎದ್ದು ತಮಸಿಗೆ ಉರುಳುವೊ ಪಾಪಿ ನೀ ಅದ್ವೈತ ಹ್ಯಾಗೆ ಬಿಡದ್ಹೋದಿ 15 ಅಳಿದ್ಹೋಗೊ ಶರೀರವನು ನರಹರಿಗೆ ಸರಿಯೆಂಬೆ ಬಿಡದೆ ತಮಸಿಗೆ ಉರುಳವೊ ಪಾಪಿ ನೀ ಚಲಹವನು ಹ್ಯಾಗೆ ಬಿಡದ್ಹೋದಿ 16 ನಾಶ್ವಾಗೊ ಶರೀರವನು ವಾಸುದೇವಗೆ ಸರಿಯೆಂಬೆ ಹೇಸದೆ ತಮಸಿಗೆ ಉರುಳವೊ ಪಾಪಿ ನೀ ವಾಸನೆ ಹ್ಯಾಗೆ ಬಿಡದ್ಹೋದಿ 17 ಈ ಸೃಷ್ಟಿಯೊಳಗೆ ಅಚ್ಚುತಗೆ ಸರಿಯುಂಟೆ ಮೆಚ್ಚಿ ನೀ ಮನವೆ ಕೆಡಬೇಡ ಅಲ್ಲಿತ್ತಾರಾ(ಅಲ್ಲದ?) ಎಲೆಯ ಒತ್ತಿ ಹಿಂಡಿದರೆ ರಸವುಂಟೆ 18 ಭೂಮಿಯೊಳಗೆ ಶ್ರೀರಾಮನಿಗೆ ಸರಿಯುಂಟೆ ಮಾನುನೀ ಮನವೇ ಕೆಡಬೇಡ ಅಲ್ಲಿತ್ತಾರಾ(ಅಲ್ಲದ?)ಎಲೆಯ ಒತ್ತಿ ಹಿಂಡಿದರೆ ರಸವುಂಟೆ 19 ಭೂಮಂಡಲದೊಳಗೆ ರಂಗಗೆ ಸರಿಯುಂಟೆ ಅಂದು ನೀ ಮನವೆ ಕೆಡಬೇಡ ಅಲ್ಲಿತ್ತಾರಾ (ಅಲ್ಲದ?) ಎಲೆಯ ಒತ್ತಿ ಹಿಂಡಿದರೆ ರಸವುಂಟೆ 20 ವಿಷ್ಣು ಸರ್ವೋತ್ತಮನೆಂದು ಇಟ್ಟರೆ ಮುಂಡಿಗೆಯ ಮುಟ್ಟಲಂಜಿದನೆ ಪರವಾದಿ ಪರವಾದಿ ತತ್ವದ ಬಟ್ಟೇನೂ ಕಾಣದಿರುತಿದ್ದ21 ಹರಿಸರ್ವೋತ್ತಮನೆಂದು ಇರಿಸಿದರೆ ಮುಂಡಿಗೆಯ ಹಿಡಿಯಲಂಜಿದನೆ ಪರವಾದಿ ಪರವಾದಿ ತತ್ವದ ವಿವರವನು ಕಾಣದಿರುತಿಹ 22 ಅರಣ್ಯದ ಅಡವೀಲಿ ಗೋಡೇನು ಹಾಕಿದರೆ ಯಾರು ಕೂಲೀನಕೊಡುವೋರು ಸಂಕರನ ಮತವನು ಮಾಯದಿಂ ಮೆಚ್ಚಿ ಕೆಡಬ್ಯಾಡ 23 ಅತ್ತಿಹಣ್ಣಿನಂತೆ ಮಿಥ್ಯವಾದಿಮತ ಬಿಚ್ಚಿನೋಡಿದರೆ ಕ್ರಿಮಿರಾಶಿ ಮಧ್ವರಾಯರ ಮತ ಮುತ್ತಿನ ಸರವ ತೆಗೆದಂತೆ 24 ಆಲಹಂಣೀನಸಂತೆ ಮಾಯಾವಾದಿಮತ ಸೀಳಿ ನೋಡಿದರೆ ಕ್ರಿಮಿರಾಶಿ ಮಧ್ವರಾಯರ ಮತ ಹೂವ್ವಿನ ಸರವ ತೆಗೆದಂತೆ 25 ಭಾಗವತ ಅರ್ಥಸಾರವೆಲ್ಲವ ತಿಳಿದು ಹೇಳಿದನೆ ತತ್ವ ಕಥೆಗಳ ಜ್ಞಾನ ಭಕ್ತಿವೈರಾಗ್ಯವ ಈವನೆ ನಮ್ಮ ಹಯವದನ 26
--------------
ವಾದಿರಾಜ
ನೆನವಿರೆ ಸಾಕೆನಗೆ ಶ್ರೀಶನ ನೆನವಿರೆ ಸಾಕೆನಗೆ ಪ. ಘನದುರಿತ ಮಹೋದಯವ ನದಿಯ ದಾಟಲು ನೆನವಿರೆ ಸಾಕೆನಗೆ ಅ.ಪ. ಶ್ರೀ ಮಹೀಶ ಸಕಲಾಮರಗಣಸುತ ಕಾಮದ ಕೈರವದಳಧಾಮ ರಾಮಚಂದ್ರ ಸರ್ವಾಮಯ ಹರನಿ- ಸ್ಸೀಮಮಹಿಮ ನಿ:ಶ್ಯಾಮಲ ಮೂರ್ತಿಯ 1 ನೋಡುವ ಕರುಣ ಕಟಾಕ್ಷದಿ ಸ್ಮರಣೆಯ ಮಾಡುವ ಜನರನು ಮಮತೆಯಲಿ ಪಾಡಿ ಪೊಗಳಿ ಕುಣಿದಾಡಲು ತನ್ನನೆ ನೀಡಿ ನಿತ್ಯದಲಿ ನಲಿದಾಡುವ ಕರುಣಿಯ 2 ಮಂಗಲಮೋದತರಂಗ ಮಹೋದಧಿ ಭಂಗುರ ಭವಭಯ ಭಂಗದನ ಇಂಗಿತದಾವನ ತುಂಗ ಶೇಷಗಿರಿ ಶೃಂಗವಾಸ ಕನಕಾಂಗದ ಮಕುಟನ3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ಕಮಲನೇತುರ | ಪುಣ್ಯಗಾತುರ | ಸಾಕಾರ ಕ್ಷಣ ಮಾತುರ | ನೀ ಕರುಣದಿಂದ | ವಾಕು ಲಾಲಿಸು | ಬೇಕು ವೇಗದಲಿ | ಗೋಕುಲಾಂಬುಧಿ ರಾಕಾಂಬುಜ ಲಾ | ವಕರ ತೊಲಗಿಸಿ | ಸಾಕುವುದೆನ್ನ ನಿ | ಜಕರ ವಿಡಿದೂ ಪ ನಿತ್ಯ ಅಜಾತಾ | ಕುಂಭ ಮಕುಟನೀತಾ | ಮಾವ ಮರ್ದನ ನಿರ್ಭೀತಾ || ದೇವಮರರ ಕಾ | ವ ಭಕ್ತರ | ಜೀವನೆ ವರ | ವೀವನನುದಿನ | ಆವು ಕಾವುತ ಪೋಗಿ | ದಾ ವಿಷ ಬಿಡಿಸದೆ || ಶ್ರೀ ವಲ್ಲಭ ನಿನಗಾವವನೆಣೆ ತ್ರಿ | ಭುವನದೊಳಗತಿ | ಸೇವಕ ಜನರಿಗೆ ಕೈವಲ್ಯವನು ಕೊಡುವಾ 1 ಪೂತನಿ ಪ್ರಾಣಾಪಹಾರಾ | ಪರಮ ಸುಂದರಾ | ಪರಿಹಾರಾ | ಮರಣಜರ ವಿದೂರಾ | ಭೂತಿ ಉಳ್ಳಿಂದ್ರ ಕುಮಾರಾ | ಸೂತ ನೀನಾಗಿ ಭೂತಳದೊಳು | ವ್ರಾತ ಯಮುನೆಯ | ಭ್ರಾತನ್ನ ನಗರಿಯ | ಯಾತನಿಗಟ್ಟಿದೆ | ಪೂತುರೆ ನಿನ್ನ ಮಾ | ಯಾತನಕೇನೆಂಬೆ | ಖ್ಯಾತಿ ಮೂರುತಿ ಬೆನ್ನಾತು ಕಾಯೊ ಪಾರಿ | ಜಾತವ ತಂದ | ಮಿತ ಮಹಿಮ ಜಗ | ತಾತಾ ಬೊಮ್ಮಾದಿ ವಿನುತಾ 2 ತೋಷ ಗೋಪಾಲ ಮಾನಿಸಾ ವೇಷ | ಆ ಪಾರ ರತುನ ಭೂಷಾ | ನಂತಪ್ರಕಾಳಾ | ತಾಪಸಿಗಳ ವಿಲಾಸಾ || ಕೋಪ ಮೊದಲಾದ ತಾಪತ್ರಯಗಳ | ನೀ ಪೋಗಾಡು ಉ | ಡುಪಿ ಸದನನೆ ಪಾಪರಹಿತ ಮಧ್ವಪತಿ ಕರದಿಂ | ದ ಪೂಜೆಗೊಂಡ ಪ್ರತಾಪನೆ ಜ್ಞಾನದ | ದೀಪ ಬೆಳಗಲಿ | ರೂಪವ ತೋರಿಸು ಯದುಪಾ ಎನ್ನ ಸಮೀಪಾ 3
--------------
ವಿಜಯದಾಸ