ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಆಳ್ವಾರಾಚಾರ್ಯ ಸ್ತುತಿಗಳು (1) ಆಂಜನೇಯ ನೋಡಿರೈ ಕಣ್ದಣಿಯಾ ಸಜ್ಜನರೆಲ್ಲ ಪಾಡಿರೈ ಮನದಣಿಯಾ ಪ ಗಾಢಭಕುತಿಯನಾಂತು ಭಜನೆಯ ಮಾಡುವರ ದುರಿತಗಳನೋಡಿಸಿ ಕೂಡೆನಿರ್ಮಲರೆನಿಸಿ ಪೊರೆವಾ ರೂಢನಹ ಮಾರುತಿಯ ಮೂರ್ತಿಯ ಅ.ಪ ಉಡಿಯೋಳ್ ಘಂಟೆಗಳೆಸೆಯೆ ಚರಣದೊಳುಳ್ಳ ತೊಡರುಗಗ್ಗರಮುಲಿಯೆ ರ್ಕಡೆಯ ಕರ್ಣದಿ ಪೊಳೆಯೆ ಕಡಗ ಮಣಿಮಕುಟಗಳ ಪೇರುರ ದೆಡೆಯ ವಜ್ರದಪದಕ ಮೊದಲಹ ತೊಡಿಗೆಗಳ ಸಡಗರದೊಳೊಪ್ಪುವ ದೃಢತರದ ಮಾರುತಿಯ ಮೂರ್ತಿಯ 1 ಭರದಿಂದ ಶರನಿಧಿಯಾ ಲಂಘಿಸಿ ಪೊಕ್ಕಾ ನಿರುಪಮತರ ಲಂಕೆಯ ಗುರಿಗೊಂಡರಸಿ ಸೀತೆಯಾ ಕಂಡಾರಘು ವರನುರುಮುದ್ರಿಕೆಯ ಕರದೊಳಿತ್ತಾರಮಣಿಯಿಂ ವಿ ಸ್ಫುರಿಪ ಚೂಡಾಮಣಿಯ ಕೈಕೊಂ ಡಿರದೆ ಬಂದೊಡೆಯಂಗೆ ಸಲಿಸಿದ ಪರಮಬಲಯುತನಮಳಮೂರ್ತಿಯ 2 ವಾದವಿದೂರನನು ಪಾವನ ಮೃದು ಪಾದಾರವಿಂದನನು ವೇದಾಂತವೇದ್ಯನನು-ಸನ್ನುತಪರ ನಾದಾನುಮೋದನನು ಸಾದರದೊಳೈತಂದು ಪ್ರಾರ್ಥಿಪ ಸಾಧುಸಂತತಿಗೊಲಿದು ಪರಮಾ ಮೋದದಿಂ ಪರಮಾರ್ಥವಿಷಯವ ಬೋಧಿಸುವ ಮಾರುತಿಯ ಮೂರ್ತಿಯ 3 ರಂಗನಾಥನದೂತನ ಸತ್ಕರುಣಾಂತ ರಂಗನಾರ್ತಪ್ರೀತನ ಕಂಗೊಳಿಸುವ ನೂತನಪುರವರದೊಳು ಹಿಂಗದೊಪ್ಪಿರುವಾತನ ಮಂಗಳಾತ್ಮನ ಮೋಹದೂರನ ಸಂಗರಹಿತನ ಸತ್ಯಚರಿತನ ರಂಗದಾಸಪ್ರಣಿತಮಹಿಮೋ ತ್ತುಂಗ ಶ್ರೀ ಮಾರುತಿಯ ಮೂರ್ತಿಯ 4
--------------
ರಂಗದಾಸರು
ಆರುಸರಿ ಮಾರುತಿಯೆ ನಿನಗೆ ಆರುಯೆಂಟು ಭುವನದೊಳಗೆ ಪ ಎತ್ತಿ ತೂಗಿದಿ ಶಿವನಪುರಿ ಕಿತ್ತು ತಂದಿ ಸಂಜೀವನ ಗಿರಿ ಮತ್ತೆರಕ್ಕಸಬಲವ ತೂರಿ ಮುತ್ತಿ ತರಿದೋ ಹಾರಿ ಹಾರಿ1 ಲಂಘಿಸಿ ಬಲವಂತ ಭರದಿ ಲಿಂಗ ತಂದು ಸಮರ್ಪಿಸಿದಿ ಮಂಗಳಾತ್ಮನಿಂದ ಪಡೆದಿ ಲಿಂಗಕೋಟಿ ರೋಮರೋಮದಿ 2 ನಾಮಬಲವ ಗಳಿಸಿದಿ ಈ ಮಹಭವಸಾಗರ ತುಳಿದಿ ಭೂಮಿಗಧಿಕ ಸ್ವಾಮಿ ಶ್ರೀ ರಾಮನೊಲಿಸಿ ಧನ್ಯನಾದಿ 3
--------------
ರಾಮದಾಸರು
ಕಂಡೆ ಕಂಗಳಲೆನ್ನ ಮಂಗಳಾತ್ಮನ ಕಂಡೆ ಕಂಡೆ ಮಂಗಳಾಂಗ ಶ್ರೀ ಗುರುರಂಗನ ಕಂಡೆ ಧ್ರುವ ಬಾಲ ಲೀಲೆ ತೋರಿದ ನೀಲವರ್ಣನ ಕಂಡೆ ಪಾಲಗಡಲಲಿಹ್ಯ ಗೋಪಾಲನ ಕಂಡೆ ಮೂಲರೂಪದಲಿ ಫಲ್ಗುಣಗೊಲಿದನ ಕಂಡೆ ಕುಲಕೋಟಿ ಬಂಧುವಾದ ಬಳಗನ ಕಂಡೆ 1 ಮೂರ್ತಿ ನಳಿನನಾಭವ ಕಂಡೆ ಪಾದ ಹೊಳೆವನ ಕಂಡೆ ಕಳ್ಳ ಮೊಸರ ಬೆಣ್ಣೆ ಮೆಲುವ ಚೆಲುವನ ಕಂಡೆ ಇಳೆಯೊಳು ಗೋಕುಲದಿ ಸುಳಿದನ ಕಂಡೆ 2 ಕಿರೀಟ ಕುಂಡಲಕರ್ಣ ಕೌಸ್ತುಭಧರನ ಕಂಡೆ ಪರಿಪರಿ ಭೂಷಣ ಸರ್ವಾಂಗನ ಕಂಡೆ ವಾಹನ ಸ್ವಾಮಿ ಉರಗಶಯನ ಕಂಡೆ ಸಿರಿಯ ಲೋಲಲಿಹ ಸರ್ವೋತ್ತಮನ ಕಂಡೆ 3 ಮದನ ಮೋಹನನ ಕಂಡೆ ಆದಿ ಅವಿನಾಶ ಶ್ರೀಧರನ ಕಂಡೆ ಯದುಕುಲೋತ್ತಮ ಮಧುಸೂದನನ ಕಂಡೆ ಸಾಧು ಹೃದಯ ಪ್ರಾಣ ಶ್ರೀಮಾಧವನ ಕಂಡೆ 4 ತುರುಗಳ ಕಾಯ್ದ ಶ್ರೀಹರಿ ಗಿರಿಧರನ ಕಂಡೆ ಮುರಹರನೆನಿಸಿದ ಸುರಾಧೀಶನ ಕಂಡೆ ಕರಿಯ ವರದಾಯಕ ಹರಿ ದಯಾಳುನ ಕಂಡೆ ನರಹರಿ ಶ್ರೀನಾರಾಯಣನ ಕಂಡೆ 5 ದುಷ್ಟಮರ್ದನ ದೂರ ವಿಷ್ಣುದೇವನ ಕಂಡೆ ಶಿಷ್ಟ ಜನ ಪಾಲಕ ಸೃಷ್ಟೀಶನ ಕಂಡೆ ದೃಷ್ಟಿಯೊಳು ಸುಳಿದು ದೃಷ್ಟಾಂತಾದವನ ಕಂಡೆ ಕಷ್ಟ ಪರಿಹರಿವ ಶ್ರೀಕೃಷ್ಣನ ಕಂಡೆ 6 ಗುರು ಶಿರೋಮಣಿ ತ್ರೈಲೋಕ್ಯನಾಥನ ಕಂಡೆ ಪರಮಭಕ್ತರ ಸಂಜೀವನ ಕಂಡೆ ಶರಣ ರಕ್ಷಕ ನಮ್ಮ ಕರುಣ ಸಿಂಧುನ ಕಂಡೆ ತರಳ ಮಹಿಪತಿ ಪ್ರಾಣಹೊರೆವ ಕಂಡೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ ಗಂಭೀರನ ಪ. ತೇಜಿಯನೇರಿ ಮೆರೆವನ ಅ.ಪ. ಕೋಮಲಾಂಗನ ಕಂತುದಹನನ ಸೋಮಾರ್ಕ ಶಿಖಿನೇತ್ರನ ವಾಮದೇವನ ವನಜಭವಸಂಭವ ಮುನಿಸ್ತೋಮ ವಿನುತ ಎನ್ನ ಪ್ರೇಮನ 1 ನೀಲಕಂಠನ ನಿಗಮಸಾರನ ಬಾಲಶಶಿಧರ ಭರ್ಗನ ಶೀಲಸದ್ಗುಣ ಫಾಲನೇತ್ರನ ಕಾಲಾಂತಕ ಎನ್ನ ಕಾಯ್ವನ 2 ಮಂಗಳಾತ್ಮನ ಮಲ್ಲರಿಪುದಲ್ಲಣ ದೇವೋತ್ತುಂಗ ಹೆಳವನಕಟ್ಟೆ ರಂಗಗತಿಸಖನಾದ ನೀಲಗಿರಿ ಲಿಂಗ ಮೂರುತಿಯ3
--------------
ಹೆಳವನಕಟ್ಟೆ ಗಿರಿಯಮ್ಮ
ಭವ ಹಿಂಗವ್ವ ಸುಳ್ಳೆ ಮಂಗ್ಯಳಾಗಿ ತಿರುಗಬೇಡವ್ವ ಪ ಪಿಂಗಟದಿಂದ ಭವಸಂಕಟದಲಿ ಬಿದ್ದು ಭಂಗದಿಂ ಕಂಗೆಡಬೇಡವ್ವ ಅ.ಪ ಮುಂಗಿಯ ಮನೆಯೊಳು ನಿಂತೆವ್ವ ತಂಗಿ ಹ್ಯಾಂಗಿದ್ದದರಂತರಿಯವ್ವ ಕಂಗಳಿನಿಕ್ಕಿ ಮಹ ಮಂಗಳಾತ್ಮನ ಕಂಡು ಪಿಂಗದ ಸವಿಸುಖ ಸುರಿಯವ್ವ 1 ಹಾಳು ಜಗದ ಗಾಳಿ ಬೇಡವ್ವ ನಿಜ ಬಾಳುವ ಮಾರ್ಗವ ತಿಳಿಯವ್ವ ನೀಲ ಶ್ಯಾಮನ ಧ್ಯಾನ ತಾಳಿಯ ಕಟ್ಟಿಕೊಂಡು ಕಾಲನ ದಾಳಿಯ ಗೆಲಿಯವ್ವ 2 ಮೈಲಿ ಮುಟ್ಟು ಚಟ್ಟಳಿಯವ್ವ ನೀ ಮೇಲುಮಂಟಪ ಹತ್ತಿ ನೋಡವ್ವ ಬೈಲಿಗೆ ಬೈಲು ನಿರ್ಬೈಲು ಶ್ರೀರಾಮನ ಲೀಲೆಯೊಳಗೆ ನಿಂತು ನಲಿಯವ್ವ 3
--------------
ರಾಮದಾಸರು
ಭಾರ ನಿನ್ನದು ತಂದೆ ಸಿಂಧು ಎಂದೆಂದು | ಗುರುವರ್ಯ ಬಂದು ಕರುಣಿಸುವನು ಮದ್ಬಂಧೊ 1 ಮಂಗಳಾತ್ಮನೆ ಎನ್ನ ಅಂಗದಲಿ ನೀನಿಂದು ಪೊಂಗಳಧರನ ತೋರಯ್ಯ | ಅಜರಾಯ ಭಂಗಬಡಲಾರೆ ಭವದೊಳÀು 2 ನಾರಾಯಣನ ಪುತ್ರ ನಾರಾಯಣಗೆ ಮಿತ್ರ ನಿರವದ್ಯ | ನೀಡಭಯ ಕರುಣಾತ್ಮ ಗುರುವೆ ಒಲಿದಿಂದು 3 ಕಾಮರೂಪನೆ ಹರಿಯನೇಮದಲಿ ಕಪಿಯಾಗಿ ಆ ಮಹಿಮೆಗುಂಗುರ ಅರ್ಪಿಸಿ | ಅಗ್ನಿಯಲಿ ತಾಮಸರ ಹುರಿದೆ ಪುರದಲ್ಲಿ 4 ಮರಳಿ ಶರಧಿಯ ದಾಂಟಿ ಭರದಿ ರಘುಪತಿ ಚರಣ ಸರಸಿಜದಿ ಚೂಡಾಮಣಿಯನ್ನು | ಒಪ್ಪಿಸಿ ಹರಿ ಅಂಗ ಸಂಗ ಪಡೆದಯ್ಯ 5 ಸಿಂಧÀುವನು ಬಂಧಿಸಿ ಬಂದ ವಿಭೀಷಣಗೆ ಕುಂದದೆ ಅಭಯ ಕೊಡಿಸಿದೆ | ದಯಸಿಂಧು ನಿಂದೆನ್ನ ಒಳಗೆ ಮುದವೀಯೊ 6 ದೇವೇಶನಾಜ್ಞೆಯಲಿ ಜೀವೇಶ ಸಂಜೀವ ಪರ್ವತ ತಂದು ಕಪಿಸೈನ್ಯ | ಎಬ್ಬಿಸಿ ಮೊದಲೆಡೆಗೆ ಬಗೆದ ಕುಶಲಾತ್ಮ 7 ದಶಶಿರನ ಕೊಲ್ಲಿಸಿ ವಸುಧಿಪುತ್ರಿಯ ತಂದು ನಸುನಗುತ ರಾಮಚಂದ್ರಾಗೆ | ಒಪ್ಪಿಸಿ ವಿ ಭೀಷಣಗೆ ರಾಷ್ಟ್ರ ಕೊಡಿಸಿದೆ 8 ಪ್ರೇಮದಿ ಭರತನು ಸ್ವಾಮಿ ಬರಲಿಲ್ಲೆಂದು ಕಾಯ ಬಿಡುತೀರೆ | ಉಳುಹಿದೆ ಶ್ರೀ ರಾಮನಾಗಮನ ತಿಳುಹೀಸಿ9 ತುಷ್ಟನಾದೆನು ಹನುಮ ಇಷ್ಟ ನೀ ಬೇಡೆನಲು ಪಾದ ಪಿಡಿಯಲು | ಭಕ್ತಿಯಲಿ ಪಟ್ಟಾಭಿರಾಮ ತನ್ನಿತ್ತ 10 ಆಖಣಾತ್ಮಕಾಯನೆ ಅಕಳಂಕ ಗುಣಧಾಮ ನಿಖಿಲಾತ್ಮ ಹರಿಯ ಪೂಜಿಪ | ದೃಢಮಹಿಮ ಶ್ರೀಕೃಷ್ಣ ಭಕ್ತಾ ಕಲಿಭೀಮ 11 ಶಿಶುಭಾವದಲಿ ನೀನು ಶತಶೃಂಗ ಗಿರಿವಡೆದು ನಸುನಗುತ ಜನನಿಗಭಯವ | ನಿತ್ತಂಥ ಪಶುಪಾಲ ಪರನೆ ಪೊರೆಯೆನ್ನ 12 ದುರ್ಯೋಧನನ ತ್ರಾಣ ತಂತುಗಳ ಹರಿದಾಡಿ ಸರ್ವೇಶ ಹರಿಗೆ ಪ್ರಿಯಮಾಡಿ | ನಲಿದಂಥ ಸರ್ವಜ್ಞ ಭೀಮ ಬಿಡೆ ನಿನ್ನ 13 ದುಶ್ಯಾಸನನ ಮಹಾದುಶ್ಯೀಲ ಸ್ಮರಿಸುತ್ತ ಪಶುವಂತೆ ವಧೆಯ ಮಾಡಿದಿ | ರಣದೊಳು ಸುಸ್ವಾದ ಗುಣಸಾರ ಮಹವೀರ 14 ಮಾನಿನಿಯ ಸಂಕಲ್ಪ ತ್ರಾಣನೀ ಪೂರೈಸಿ ಪ್ರಾಣಸಖನಾಗಿ ಸಲಹಿದೆ | ಜಯಭೀಮ ಪಾಣೆ ಪಿಡಿಯೆನ್ನ ಮಹಘನ್ನ 15 ದುರಾರಾಧಕ ದುಷ್ಟ ಜರಸಂಧನ ಸೀಳಿ ಮುರಾರಿ ಮತ್ಪ್ರೀತಿ ಬಿಡಿಸಿದೆ | ದೀಕ್ಷೆಯಲಿ ತ್ರಿ ಪುರಾರಿ ವಂದ್ಯಾಗತಿ ನೀನೆ 16 ನಾರಾಯಣಾಸ್ತ್ರವನು ವೀರ ಗುರುಸುತ ಬಿಡಲು ಚೀರಿ ನಮೋಯೆನ್ನೆ ನೃಪರೆಲ್ಲ | ಸ್ಮøತಿ ತಪ್ಪೆ ಧೀರ ಎದುರಾಗಿ ನೀ ನಿಂತೆ 17 ಗರಡಿಯಲಿ ಕೀಚಕನ ಮುರಿದು ಮುದ್ದೆಯ ಮಾಡಿ ಮರಿಯದೆ ಅವನ ಅನುಜರ | ಸದೆಬಡಿದು ಮೋದ ನೀನಿತ್ತೆ 18 ಉರಗ ಬಂಧವ ಹರಿದು ಕರಿ ಮುಂದೆ | ನೀನಿಂತೆ ಸರ್ವನಿತ್ಯಾತ್ಮ ಕೃಷ್ಣಾತ್ಮ 19 ಮಧುವೈರಿ ಧ್ಯಾನದಲಿ ಕುದುರೆ ಆಟವನಾಡಿ ಮುದದಿಂದ ಕುರುಪನ್ಹೆಗಲೇರಿ | ಹುದುಗ್ಯವನ ಮುದದಿಂದ ನಲಿದೆ ಕಮಲಾಕ್ಷ 20 ಅರಗಿನ ಮನೆಯಲ್ಲಿ ವೈರಿಜನರ ಕೊಂದು ಪೊರೆದೆ ನೀ ಜನನಿ ಅನುಜರ | ಪಂಜರನೆ ಧರೆಯೊಳಗೆ ಎನ್ನ ಸಲಹಯ್ಯ 21 ಹಿಡಿಂಬನ ಕೊಂದು ವರ ಹಿಡಿಂಬಿಯ ಕೈಪಿಡಿದು ನಡೆದೇಕ ಚಕ್ರಪುರದಲ್ಲಿ | ಬಕನೊರಸಿ ನಡಕ ಬಿಡಿಸೀದಿ ಸುಜನರ 22 ವ್ಯಾಸದೇವನ ಕಂಡು ಸೂಸಿದ ಸದ್ಭಕ್ತಿ ಪಾಶದಲಿ ಕಟ್ಟಿ ಒಳಗಿಟ್ಟು | ಪೂಜಿಸುತ ಲೇಸಾಗಿ ಮುಂದೆ ನಡೆದಯ್ಯ 23 ನೀ ಸ್ವಯಂವರ ಸಭೆಯ ವೇಷಾಂತರದಿ ಪೊಕ್ಕು ವಾಸುದೇವನ ಕಂಡು ಆನಂದ | ತುಳುಕುತ್ತ ಆ ಸತಿಯ ತಂದೆ ವಿಜಯಾತ್ಮ 24 ರಾಜರೆಲ್ಲರ ಹಿಡಿದು ರಾಜಸೂಯಯಾಗವನು ಪೂಜೆಯನು ಮಾಡಿ ಮೆರದಯ್ಯ 25 ಲಕ್ಷ್ಮೀವನಕ್ಹೋದಂತೆ ಪಕ್ಷಿಯರ ಒಡಗೂಡಿ ದಕ್ಷನೆ ನೀನು ವನವಾಸ | ಅಜ್ಞಾತ ಪಕ್ಷವ ಕಳೆದು ಮರಳಿದೆ26 ಸಂಗರವ ನೀ ಹೂಡಿ ಭಂಗಿಸಿ ಕೌರವನ ರಂಗನ ಮುಂದೆ ಅರ್ಪಿಸಿ | ವಂದಿಸಿ ಮಂಗಳಾತ್ಮಕನೆ ಸಲಹೆಮ್ಮ 27 ನಿರ್ಮಲ ರಾಜ್ಯವನು ಧರ್ಮಂಗೆ ನೀನಿತ್ತೆ ನಿರ್ಮೂಲಗೈದು ಅರಿಗಳ | ಕೊಂದ ಪರ ಧರ್ಮಪರರನ್ನು ಪೊರೆದಯ್ಯ 28 ಮಧ್ವಾಖ್ಯ ಮಹವೀರ ಶುದ್ಧ ಸತ್ವ ಶರೀರ ಉದ್ಧರಿಪುದೊಂದೆ ವ್ಯಾಪಾರ | ಕೈಕೊಂಡ ವಿದ್ಯಾಧಿಪತಿಯೆ ಸಲಹೆನ್ನ 29 ಶ್ವಾಸ ನಿಯಾಮಕ ಪ್ರಭುವಾಸವೆ ನಿನ್ನಿಂದ ಉಸರಲೇನಯ್ಯ ನಿನ್ನಲ್ಲಿ | ಜೀವೇಶ ಸೂಸುವ ಭಕ್ತಿ ನೀಡಯ್ಯ 30 ವೇದ ಚೋರನ ಮಡುಹಿ ಸಾದರದಿ ಸುಜನಕ್ಕೆ ಬೋಧ ಮಾಡೆಂದು ಶ್ರೀ ವಿಷ್ಣು | ಕಳುಹಿದ ಮಧ್ವಾಖ್ಯ ಗುರುವೆ ಪರಿಪಾಹಿ 31 ಸುರರು ದುಂದಭಿ ಮೊರೆಯೆ ದುರುಳರ ಎದೆಯು ನಡುಗಲು | ಹರುಷದಲಿ ಮೆರೆದು ನೆರೆದರು ಸುಜನರು 32 ಕೈವಲ್ಯ ನೀನಿತ್ತೆ ಶ್ರೀವಲ್ಲಭನ ಪ್ರಥಮಾಂಗ | ಪ್ರಸನ್ನ ನೀವಲಿದು ಹರಿಯ ತೋರಯ್ಯ 33 ಹುಣಿಸೆ ಬೀಜದಿ ಪಿತನ ಘನೃಣವ ತೀರಿಸಿದಿ ಅಣಿಮಾದಿ ಸಿದ್ಧಿ ತೃಣವಯ್ಯ | ನಿನಗಿನ್ನು ಗುಣಪೂರ್ಣ ಹರಿಯ ಪ್ರತಿಬಿಂಬ 34 ಶಿವಭಟ್ಟನನು ಗೆದ್ದು ಜಯಾಂಕ ರಸ ತೋರೆ ವಿಪ್ರ ಸುರರು ಪೂಜಿಸೆ | ನಲವಿಂದ ಅವನಿಯೊಳು ಪೊಳೆದೆ ರವಿಯಂತೆ 35 ವಿದ್ಯಾಧಿಪತಿ ಗುರುವೆ ವಿದ್ಯೆ ಪೇಳಿದ ದ್ವಿಜಗೆ ಸದ್ಭಕ್ತಿ ದಕ್ಷಿಣೆ ನೀನಿತ್ತೆ | ಕರುಣಾತ್ಮ ಉದ್ಧರಿಸು ಎನ್ನ ದ್ವಿಜರತ್ನ 36 ಜನನಿ ಜನಕರು ತಡಿಯೆ ಅನುವಾದ ಸುತನಿತ್ತು ಘನವಾದ ತುರ್ಯ ಆಶÀ್ರಮ | ಕೈಗೊಂಡು ಸುನವ ಪದ್ಧತಿಯ ತೋರಿದೆ 37 ಅಚ್ಯುತ ಪ್ರೇಕ್ಷಕರಿಗೆ ಹೆಚ್ಚಾದ ದಯದಿ ಹರಿ ನಿನ್ನ | ವೊಯ್ದಿತ್ತ ಅಚ್ಚುಮೆಚ್ಚುವ ನೀ ಹರಿಗೆಂದು 38 ವಾದಿಗಳ ಭಂಗಿಸಲು ಸಾದರದಿ ಯತಿ ಕರಿಯೆ ಛೇದಿಸಿ ಖಳರ ಮದವನ್ನು | ಹರಿಸಿದೆ ಸ್ವಾದ ಗುಣಸಿಂಧು ಮದ್ಬಂಧು 39 ಬಾಳೆಗೊನೆಗಳ ಮೆದ್ದು ಬಾಡಲೇತಕೆ ಉದರ ಪೇಳೆಂದ ಯತಿಗೆ ಜಠರಾಗ್ನಿ | ಬ್ರಹ್ಮಾಂಡ ಕೊಳ್ಳುವದುಯೆಂದು ವರದಯ್ಯ 40 ವಾದಗಳ ಪರಿಹರಿಸಿ ಬೋಧಿಸಲು ಆ ದ್ವಿಜರು ಪಾದಕ್ಕೆ ಎರಗಿ ನಮೋ ಎಂದು ಅಮರರಿಗೆ ಆ ಬೋಧವೊ ಮಹಿಮೆಯೆಂದಾರು 41 ಬದರಿಯಾತ್ರೆಯಲಿ ಸುರನದಿಯು ತಾ ಮಹಿಪಡೆದು ಮುದದಲ್ಲಿ ಬಂದು ನಮಿಸಲು | ಶಿಷ್ಯಜನ ಯೈದಿ ಭಕ್ತಿಯನು ನಮೋ ಎಂದು 42 ಹರಿಯಂತೆ ನರಿಗಳನು ತುರಕ ದೂತರ ಜರಿದು ನರಪನಿಂದರ್ಧ ಮಹಿಮೆಯನ್ನು | ಪಡೆದಂಥ ಯರಡೇಳು ಭುವನ ಅಧಿಪತಿ 43 ಸತ್ಯತೀರ್ಥರ ಬಳಿಗೆ ದೈತ್ಯ ವ್ಯಾಘ್ರನು ಬರಲು ಮೃತ್ಯುವಿನ ಪುರಕೆ ಕಳುಹಿದೆ | ಲೀಲೆಯಲಿ ಭೃತ್ಯತ್ವಯೆನಗೆ ನೀಡಯ್ಯ 44 ಸೂಸುವಾ ಭಕ್ತಿಯಲಿ ವ್ಯಾಸದೇವನ ಕಂಡು ಈಶ ಸಲಹೆಂದು ಎರಗಲು | ಮನವುಬ್ಬಿ ಬಾ ಸುತನೆ ಎಂದು ತಬ್ಬಿದ 45 ಆನಂದ ಮೂರ್ತಿಯ ಆನಂದ ಸಂಗವನು ಆನಂದದಿಂದ ನೀ ಯೈದಿ | ನಂದ ಆನಂದ ತೀರ್ಥ ಕೊಟ್ಟೆಯೊ 46 ನಾರಾಯಣನಲಿ ಕರೆದೊಯ್ಯೆ ಬದರಿಪನ ಚರಣಾಬ್ಜಕೆರಗಿ ಹರಿಲೀಲೆ | ಸ್ಮರಿಸಿದ ಗುರುರತ್ನ ಸಲಹೊ ಧನ್ಯಾತ್ಮ 47 ಅಚ್ಯುತನ ಸಂಗದಲಿ ಚಿತ್ಸುಖವ ಉಂಡುಬ್ಬಿ ಹೆಚ್ಚಿನ ಪದವಿ ಇಲ್ಲೆಂದು | ನಲಿದಂಥ ಅಚ್ಯುತಾತ್ಮಾನೆ ಸಲಹೆನ್ನ 48
--------------
ಜಯೇಶವಿಠಲ
ಹತ್ತಿಲಿಹÀ ವಸ್ತುನೋಡೊ ಮನವೆ ನಿತ್ಯ ನಿಜನಿರ್ಗುಣವ ಕೂಡೊ ಮನವೆ ಧ್ರುವ ಅತ್ತಲಿತ್ತಲಾಗದಿರು ಮನವೆ ಚಿತ್ತ ಚಂಚಲ ಮಾಡದಿರೆನ್ನ ಮನವೆ ಉತ್ತುಮ ಸುಪಥ ನೋಡು ಮನವೆ ನೆತ್ತಿಯೊಳಿಹ ಸುವಸ್ತು ಕೂಡೊ ಮನವೆ 1 ಹೋಕಹೋಗದಂತೆ ಎನ್ನ ಮನವೆ ಏಕರಸವಾಗಿ ಕೂಡೊ ಎನ್ನ ಮನವೆ ನಾಲ್ಕು ಶೂನ್ಯವ ಮೆಟ್ಟಿ ನೋಡು ಮನವೆ ಜೋಕೆಯಿಂದ ಜ್ಯೋತಿರ್ಮಯ ಕೂಡೊ ಮನವೆ 2 ಧನ್ಯವಿದು ರಾಜಯೋಗಮನವೆ ಭಿನ್ನವಿಲ್ಲದೆ ಬೆರೆದು ಕೂಡೊ ಮನವೆ ಚೆನ್ನಾಗಿ ಚಿನ್ಮಯ ನೋಡು ಮನವೆ ಅನ್ಯಪಥವಿನ್ಯಾತಕ ನೋಡು ಮನವೆ 3 ಗರ್ವಗುಣ ಹಿಡಿಯದಿರು ಮನವೆ ನಿರ್ವಿಕಲ್ಪನ ತಿಳಿದು ನೋಡು ಮನವೆ ಪೂರ್ವಪುಣ್ಯಹಾದಿ ಇದು ಮನವೆ ಸರ್ವರೊಳು ವಸ್ತುಮಯ ಒಂದೆ ಮನವೆ 4 ದೃಷ್ಟಿಸಿ ಆತ್ಮನ ನೋಡು ಮನವೆ ಪುಷ್ಟವಾಗಿ ಘನದೋರುವದು ಮನವೆ ಭ್ರಷ್ಟವಾಗಿ ಬಾಳಬ್ಯಾಡ ಮನವೆ ನಿಷ್ಠನಾಗಿ ನಿಜನೆಲೆಯಗೊಳ್ಳ ಮನವೆ 5 ಏರಿ ಆರುಚಕ್ರ ನೋಡು ಮನವೆ ಪರಮಾನಂದ ಸುಪಥ ಕೂಡೊ ಮನವೆ ಆರು ಅರಿಯದ ಹಾದಿ ಮನವೆ ತೋರಿಕೊಡುವ ಸದ್ಗುರು ಎನ್ನ ಮನವೆ 6 ಹರಿಭಕ್ತಿಯೊಳಗಿರು ಮನವೆ ಸಿರಿ ಸದ್ಗತಿ ಸುಖವ ಕೂಡೊ ಮನವೆ ಗುರುವಾಕ್ಯ ನಂಬಿ ನಡೆ ಮನವೆ ಪರಲೋಕಕ್ಕೆ ಸೋಪಾನವಿದು ಮನವೆ 7 ಪರದ್ರವ್ಯಗಲ್ಪದಿರು ಮನವೆ ಪರಸತಿಯ ನೋಡದಿರೆನ್ನ ಮನವೆ ಪರರ ನಿಂದ್ಯ ಮಾಡದಿರು ಮನವೆ ದಾರಿ ಹೋಗದಿರು ದುಷ್ಟರ ನೀ ಮನವೆ 8 ಸಜ್ಜನರ ಸಂಗ ಮಾಡೊ ಮನವೆ ಹೆಜ್ಜೆವಿಡಿದು ಪರಲೋಕ ಕೂಡೊ ಮನವೆ ಭೆಜ್ಜರಿಕೆ ಹಿಡಿಯೊ ಎನ್ನ ಮನವೆ ದುರ್ಜನರ ಸಂಗ ಮಾಡಬ್ಯಾಡೊ ಮನವೆ 9 ಕಂಗಳ ತೆರೆದು ನೋಡು ಮನವೆ ಮಂಗಳಾತ್ಮನ ಶ್ರೀಪಾದ ಕೂಡೊ ಮನವೆ ಹಿಂಗದಂತೆ ಕೂಡೊ ಬ್ಯಾಗೆ ಮನವೆ ಗಂಗೆಯೊಳು ಜಲಬೆರೆದಂತೆ ಮನವೆ 10 ಭೇದ ಬುದ್ಧಿಯ ಮಾಡಬ್ಯಾಡ ಮನವೆ ಸಾಧುಸಂತರ ಸುಬೋಧ ಕೇಳು ಮನವೆ ಭೇದಿಸಿ ತಿಳಿದುನೋಡು ಮನವೆ ಸದಮಲ ಬ್ರಹ್ಮ ಸೂಸುತಿದೆ ಮನವೆ 11 ಯುಕ್ತಿ ನಿನಗಿದು ನೋಡು ಮನವೆ ಭಕ್ತವತ್ಸಲ ಸ್ಮರಿಸು ಮನವೆ ಮುಕ್ತಿಯಿಂದಧಿಕಸುಖ ಮನವೆ ಭಕ್ತಿರಸದೊಳು ಮುಳಗ್ಯಾಡು ಮನವೆ 12 ಲೇಸು ಲೇಸು ಮಹಿಪತಿ ಸು ಮನವೆ ದಾಸನಾಗಿರುವ ವಾಸುದೇವನ ಮನವೆ ಭಾಸಿ ಪಾಲಿಪನ ಕೂಡೊ ಎನ್ನ ಮನವೆ ಭಾಸ್ಕರ ಮೂರ್ತಿಯ ನೋಡು ಮನವೆ 13
--------------
ಕಾಖಂಡಕಿ ಶ್ರೀ ಮಹಿಪತಿರಾಯರು