ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎತ್ತಣದನಿಯಿದು ಎತ್ತಣ ಮಧುರವ ಚಿತ್ತಾಕರ್ಷಕ ಬಾನುಲಿಯೇ ಪ ಮತ್ತ ಭೃಂಗಾಳಿಯ ಝೇಂಕೃತಿ ಶ್ರುತಿಯು ಸುತ್ತ ಮಯೂರದ ನಾಟ್ಯದ ನಲವೋ ಅ.ಪ ಏಣಲೋಚನೆಯರ ಕಾಂಚನ ಕಿರುಗೆಜ್ಜೆ ವೀಣಾನಾದವ ಅಣಕಿಪುದು ತಾಣವದೆಲ್ಲಿಯೋ ಕಾಣಿರೆ ಸಖಿಯರೇ ವೇಣು ಗೋಪಾಲನ ನಾಟ್ಯವಿದಲ್ತೇ 1 ಅಲ್ಲಿ ನೋಡೇ ತಂಗಿ ಬಾನೆಡೆಯಿಂದಲಿ ಮಲ್ಲಿಗೆ ಪೂಮಳೆ ಸುರಿಯುತಿದೆ ನಲ್ಲೆಯರಿಂಚರ ಸರಿಗಮಪದನಿಯು ಎಲ್ಲ ರಾಗಗಳಲಿ ನಲಿಯುತಲಿಹುದು 2 ಅಂಗನೆಯರೆ ನಮ್ಮ ಗೆಜ್ಜೆಯ ಝಣರವ ಮಂಗಳಗಾನಕೆ ಇಂಬಿರಲಿ ಹೊಂಗೊಳಲೂದುವ ಚಿನ್ಮಯ ಮಾಂಗಿರಿ ರಂಗನ ದರ್ಶನ ಮಾಡುವ ಬನ್ನಿ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾರೈ ನಂದನ ಕಂದನೆ ನೀರಜನೇತ್ರ ಪ ನೀಲಮಣಿ ಮಂಟಪದ ಮೇಲೆ ಮಾಣಿಕ್ಯಕಲಶ ಜಾಲು ಜಲ್ಲರಿ ರತ್ನ ನೀಲಪೀಠಕೆ ನೀ 1 ಮುತ್ತಿನಾಕ್ಷತೆಗಳ ನೆತ್ತಿಯಲಿಡುವೋಲು ಸುತ್ತಭೂಸುರರೆಲ್ಲರಸುತ್ತ ಬಾರೆನ್ನುವರು 2 ಶೃಂಗಾರಶೀಲನೆ ಸಂಗೀತಲೋಲನೆ ರಂಗನಾಯಕಿಸಹಿತ ತುಂಗಪೀಠಕೆ ನೀ 3 ಅಂಗನೆಯರು ಕೂಡಿ ಮಂಗಳಗಾನ ಪಾಡಿ ರಂಗ ಬಾರೆನ್ನುವರು ಮಾಂಗಿರಿನಿಲಯ4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂಗಳಗಾನ ವಿಲೋಲಾ | ಮುನಿಪಾಲಾ ಫಣಿಮಾಲಾ ಮುನಿಪಾಲಾ ಫಣಿಮಾಲಾನಂತ ಶೀಲಾನಂತ ಶೀಲಾ ಪ ಕುಲಿಶ ಧರಾರ್ಚಿತ ಯಲರುಣಿ ತಲ್ಪಸುಶಯನ | ಸುಶಯನಾ ಶಶಿವದನಾ ವಿಪಗಮನಾ 1 ಘುನಗುಣನಿಧಿ ವನಜಾಸನ ಜನಕಾ ದಿವಕೋಟ ಪ್ರಕಾಶ ಅಘುನಾಶ ಜಗದೀಶಾ ಜಗದೀಶಾ ಶ್ರೀನಿವಾಸಾ 2 ಸಾಮಜ ಭಯಹರ ರಾಮ ಶ್ರೀರಾಮಾ ಶಾಮಸುಂದರ ರಘುವೀರಾ ಭವದೂರ ಮುರಹರಾ ಮುರಹರಾ ಸುಕುಮಾರ 3
--------------
ಶಾಮಸುಂದರ ವಿಠಲ
ಸುಲಲಿತ ಮಧುಕರ ಕೊಳಲನೂದುವುದನು ಕಲಿಸಿದರಾರೇ ನಳಿನಮುಖೀ ರಾಧೇ ಪ ಬಲಿಸಂಹಾರನು ಲೋಕದ ನಾರಿಯ ರಲಸದೆ ಗಾನವ ಕಲಿಸಿದನೇನೇ ಅ.ಪ ಕರು ತುರುಗಳ ಬಳಿ ಸರಸವನಾಡುತ ಮುರಳಿಯನೂದುವ ಸರಸಿಜನಾಭ ಕರೆಕರೆದು ನಿನ್ನ ಬೆರಳಿಗುಂಗುರವಿಟ್ಟು ಸ್ವರಗಳ ಬೋಧಿಸಿ ನಲಿನಲಿದಿಹನೇನೇ 1 ಬೃಂದಾವನದಲಿ ನಂದಕುಮಾರನ ವಂದಿಸೆ ನಾರದ ಬಂದುಹಾಡಿದನೇ ಅಂದದ ಕಲಿಕೆಯ ತುಂಬುರ ನಿನಗಾ ನಂದದಿ ಗಾನವ ಕಲಿಸಿದನೇನೆ 2 ಅಂಗಜಪಿತನಿಗೆ ಮಂಗಳಗಾನವ ಅಂಗನೆ ಶಾರದೆ ಪಾಡಿದಳೇನೇ ಮಾಂಗಿರಿರಂಗ ಮಾತಂಗವರದನಂತ ರಂಗದರಾಣಿ ನೀ ಕಲಿಯೆಂದನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್