ಬೀಸಿದ ಗುಂಡಗೆ ಬುಕ್ಕಿದ್ದೇ ಲಾಭ ಬೇಸರವಿಲ್ಲದೆ ಪ
ವಾಸುಕಿಶಯನನ ಲೇಶವು ಭಜಿಸದೆ ಅ.ಪ
ಹಗಲು ಇರುಳು ವಿಷಯಗಳಲಿ ಮುಳುಗಿ
ಪೊಗಳದಿರಲು ಹರಿ ನಾಮವನು
ಜಗದೊಳೆನಗೆ ಸಮರಾರೆಂದೆನುತಲಿ
ಬೊಗಳಿ ನರಕಕ್ಕುರುಳುವೆನೆಂದರಿಯದೆ 1
ಮೋಸದಿಂದ ಧನರಾಶಿಗಳಿಸಿ ಅತಿ
ಹೇಸಿಗೆ ಭೋಗಗಳಾಶಿಸುವ
ಈಶನಂತೆ ಬಲು ಮೆರೆಯುತ ಮದದಲಿ
ಶ್ರೀಶ ಸಹಾಯವ ಬಯಸದ ತನಕ 2
ಗಂಗಾ ಶುಚಿಜಲ ದೊರಕುತಿರೆ ಹಲ
ವಂಗವ ನೀರನು ಬಯಸುವರೇ
ಮಂಗಳ ಕರ್ಮಗಳಾಚರಿಸದೆ ನೀ
ಮಂಗನಂದದಲಿ ಕುಣಿಯುವ ತನಕ 3
ಕಂಗಳಿಲ್ಲದ ಕುರುಡನಿಗೆ ಬೆಳ
ದಿಂಗಳ ಸೌಖ್ಯವು ತೋರುವುದೆ
ರಂಗನ ಮಹಿಮೆಯನರಿಯದ ಮೂಢನು
ತಂಗಳು ಭೋಗವ ಬಯಸುವ ತನಕ 4
ಕನ್ನಡಿಯೊಳಗಿನ ಗಂಟಿನಂತಿರುವುದು
ನಿನ್ನ ನಶ್ವರದ ಭೋಗಗಳು
ಇನ್ನಾದರು ನಿನ್ನ ಮೂಢತನವ ಬಿಟ್ಟು
ಸಂತತ ಭಜಿಸೋ ಪ್ರಸನ್ನ ಶ್ರೀಹರಿಯ 5