ಛೀ ಹಳಿ ಥೂ ಖೋಡಿ ಪಾಪಿ ಮನವೆ, ನಿನ್ನ ಪ
ಕುಹಕ ಬುದ್ಧಿಗಳೆಲ್ಲ ಬಿಡು ಕಂಡ್ಯ ಮನವೆಅ.ಪ
ಬಣ್ಣದ ಬೀಸಣೆಗ್ಯಂತೆ ಹೆಣ್ಣು ತಿರುಗೋದ ಕಂಡು
ಕಣ್ಣು ಸನ್ನೆಯಮಾಡಿ ಕೈ ಹೊನ್ನು ತೋರಿ
ತಣ್ಣೀರು ಹೊಯಿದ ಹೊಸ ಸುಣ್ಣದಂತೆ ಕುದಿದು ನಿನ್ನ
ಕಣ್ಣಿಗೆ ಮಣ್ಣು ಚೆಲ್ಲಿಕೊಂಬರೆ ಮನವೆ 1
ನೆರೆಹೊರೆ ಮನೆಗಳಲಿ ಪ್ರಸ್ಥವನ್ನು ಮಾಡಿದರೆ
ಕರೆಯದೆಲೆ ಮೊದಲ್ಹೋಗಿ ಹಾಳು ಹರಟೆ
ಬಡಿಗಂಟು ಸುದ್ದಿ ನೂರಾರು ಹೇಳಿ ಅವರ
ಹಿರಿಯ ಮಗನಂತೆ ಉದರವ ಪೊರೆವೆ ಮನವೆ 2
ಉತ್ತಮಾನ್ನವ ನೀಡೆ ಮುಸುರೆ ಬಯಸುವಂತೆ
ಚಿತ್ತದೊಲ್ಲಭನ ಸಂಗಡದಿ ನಲಿದು
ಮತ್ತೆ ಉಪರತಿಗೆ ಪರಪುರುಷನ ಬಯಸುವ
ತೊತ್ತು ಬುದ್ಧಿಯನೆಲ್ಲ ಬಿಡು ಕಂಡ್ಯ ಮನವೆ 3
ಪಗಡೆ ಚದುರಂಗ ಕವಡೆಯನಾಡÀ ಕರೆದರೆ
ನಿಗುರುವುವು ಕರ್ಣಗಳು ಮೊಚ್ಚೆಯಂತೆ
ಜಗದೀಶನ ದಿನದಿ ಜಾಗರಕೆ ಕರೆದರೆ
ಮುಗಿಲ್ಹರಿದು ಬಿದ್ದಂತೆ ಧರೆಗಿಳಿವೆ ಮನವೆ 4
ವಾಸುದೇವನ ಪೂಜೆಯೊಮ್ಮೆ ಮಾಡೆಂದರೆ
ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ
ಆ ಸಮಯದೊಳಗೊಬ್ಬ ಕಾಸು ಕೊಟ್ಟೇನೆನಲು
ದಾಸಿ ಮಗನಂತೆ ಬೆನ್ನಟ್ಟಿ ಪೋದೆ ಮನವೆ 5
ಕುಳ್ಳಿರುವ ಸ್ಥಳವೆಷ್ಟು ಕೂಳು ತಿಂಬುವುದೆಷ್ಟು
ಉಳ್ಳನಕ ಕೀರ್ತಿಯಪಕೀರ್ತಿಯೆಷ್ಟು
ಗುಳ್ಳೆಯಂದದ ದೇಹನೆಚ್ಚಿ ನೀ ಕೆಡಬೇಡ
ಉಳ್ಳಿಪÀರೆ ಸುಲಿದರೆ ಹುರುಳಿಲ್ಲ ಮನವೆ 6
ಬಿಂದು ಮಾತ್ರವೊ ಸುಖವು ದು:ಖ ಪರ್ವತದಷ್ಟು
ಸಂದೇಹವಿಲ್ಲವಿದು ಶಾಸ್ತ್ರಸಿದ್ಧ
ಎಂದೆಂದು ಸಿರಿಯರಸ ವಿಜಯವಿಠ್ಠಲನಂಘ್ರಿ
ಕುಂದದೆ ಹೃದಯದೊಳು ನೆನೆಕಂಡ್ಯ ಮನವೆ 7