ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮ ಕಾರುಣ್ಯ ಗುರು ಕರುಣಿಸೆನಗ್ಹರಿ ಪದವ ಶರಣೆಂದು ನಮಿಪೆ ನಿಮಗೆ ಪ. ಹರಿಯ ದಾಸತ್ವದಲಿ ವರದೀಕ್ಷೆಯನೆ ಕೊಟ್ಟು ಕರುಣಿಸಿ ಕೃಪೆಗೈದಿರಿ ಗುರುವೆ ಅ.ಪ. ಅಂಕಿತವ ಮೊದಲಿತ್ತು ಹೃದಯಾಂಕದಲಿ ನಿಲಸಿ ಮಂಕುಬುದ್ಧಿಯ ತೊಲಗಿಸಿ ಶಂಖ ಚಕ್ರಾಂಕಿತನ ಪದಕಮಲವನು ಮನ ಪಂಕಜದೊಳಗೆ ತೋರಿ ಶಂಕರಾರ್ಚಿತನ ಕೃಪೆ ಎನ್ನೊಳಾಗಲಿ ಎಂದು ಶಂಕಿಸದೆ ವರವಿತ್ತಿರಿ ಗುರುವೆ 1 ಶ್ರೀನಿವಾಸನು ನಿಮ್ಮೊಳ್ ಸಾನುರಾಗದಿ ನೆಲಸಿ ತಾನಿತ್ತ ದಾಸತ್ವವ ಏನೆಂಬೆ ಈಗಭಿಮಾನವ ತೊರೆ ಎನುತ ತಾ ನುಡಿಸುತಿಹನು ನಿಮ್ಮೊಳ್ ಮಾನಾಭಿಮಾನ ಹರಿ ಗುರುವಶವಾಗಿರಲು ನಾನಳುಕಲಿದಕೇತಕೆ ಗುರುವೆ 2 ಸ್ವಪ್ನದಲಿ ದಾಸತ್ವ ಸಿದ್ಧಿಸಲಿ ಎಂದೆನುವ ಅಪ್ರತಿಮ ನುಡಿ ಕೇಳಿದೆ ಕ್ಷಿಪ್ರದಿಂದಲಿ ಕರುಣಿಸಿದಿರೆನಗಾಗಿದನಿನ್ನು ತಪ್ತವಾಯಿತು ಭವದ ದುರಿತ ಆಪ್ತಗುರು ನಿಮ್ಮಂಥ ಮಹಿಮರನು ನಾ ಕಾಣೆ ಗುಪ್ತದಲಿ ಜಗದಿ ಮೆರೆವ ಗುರುವೆ 3 ಇತ್ತಿರೆನಗೊಂದೊಂದೆ ದಾಸತ್ವ ಸಾಮಗ್ರಿ ಅತ್ಯಧಿಕ ಕರುಣೆಯಿಂದ ನಿತ್ಯವಾಗಿರಲಿ ಹರಿದಾಸತ್ವ ಇಹ ಪರದಿ ಸತ್ಯವಂತರ ಕೃಪೆಯಲಿ ನಿತ್ಯದಲಿ ನೀತ ಗುರು ನಿಮ್ಮಿಂದ ನಿಜ ರೂಪ ವ್ಯಕ್ತವಾಗಲಿ ಜ್ಞಾನದೀ ಗುರುವೆ 4 ಸಿರಿ ತಂದೆ ಮುದ್ದುಮೋಹನದಾಸರಾಯ ಗುರುವೆ ನಿಮ್ಮ ಕರುಣದಿ ಪರಿ ಪರಿ ಭವಪಾಶ ದುರಿತಗಳು ದೂರಾದವು ಪರಮ ಸಾತ್ವಿಕರೆ ಸಿರಿವರನ ಪದ ಭಜಿಪಂಥ ವರದೇವತಾಂಶರೆನಿಪ ಗುರುವೆ 5 ಮಂದರಿಗೆ ಬಹು ಮಲಿನರಂದದಲಿ ತೋರುತ ಕಂದರ್ಪಪಿತನ ಸ್ಮರಿಪ ಒಂದೊಂದು ವ್ಯಾಪಾರ ಅರಿಯಲಳವಲ್ಲಿನ್ನು ಮಂದಮತಿಯಾದ ಎನಗೆ ಬಂದು ಭೂಲೋಕದಲಿ ಸಜ್ಜನರನುದ್ಧರಿಪ ತಂದೆ ನಿಮ್ಮರಿವರ್ಯಾರೊ ಗುರುವೆ 6 ಅರಿಯೆ ಅನ್ಯರನಿನ್ನು ಶ್ರೀ ಗುರುವೆ ಕರುಣಿಸಿರಿ ವರಜ್ಞಾನ ಸುಧೆಯನಿತ್ತು ವರಶೇಷಶಯನನ ನಿರುತ ಸೇವಿಸುವಂಥ ಪರಮಭಾಗ್ಯವ ಕರುಣಿಸಿ ಸಿರಿವರ ಗೋಪಾಲಕೃಷ್ಣವಿಠ್ಠಲನ ರೂಪ ತ್ವರಿತದಿಂ ತೋರಿ ಪೊರೆಯೊ ಗುರುವೆ 7
--------------
ಅಂಬಾಬಾಯಿ
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು