ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಾಮ ನಿನ್ನ ಪದಕೆರಗಿ ನಮಿಸಿವೆನು ತೋರೆನಗೆ ನಿಜರೂಪ ಪರಿವಾರ ಸಹಿತ ಪ. ಶ್ರೀ ಗುರುಗಳಿಗೆರಗಿ ಅವರ ಕರುಣಾಬಲದಿ ಈಗ ಈ ಜನ್ಮದಲಿ ನಿನ್ನ ಭಜಿಪೆ ನಾಗಶಯನನೆ ನಿನ್ನ ಜನ್ಮಕರ್ಮದ ದಿನದಿ ಬೇಗ ಬಂದೆನ್ನೊಳಗೆ ನೆಲಸಿದೆಯೊ ದೇವ 1 ನಿನ್ನ ದರುಶನಕೆಂದು ಘನ್ನ ಯೋಗಿಗಳು ಬರೆ ಮನ್ನಿಸೆ ಇರುತಿರಲು ದ್ವಾರಪಾಲಕರು ಇನ್ನವರ ಶಾಪದಲಿ ದೈತ್ಯಕುಲದಲಿ ಜನಿಸೆ ಮುನ್ನವರ ಪೊರೆಯಲು ಭೂಮಿಯೊಳು ಬಂದೆ 2 ದಶರಥಗೆ ಸುತನಾಗಿ ತಾಟಕಿಯ ಸಂಹರಿಸಿ ಅನುಜ ಕುಶಲದಿಂದಲಿ ಶಿಲೆಯ ಹೆಣ್ಣುಗೈಯುತ ಬಂದು ಶಶಿಮುಖಿ ಸೀತೆಯನು ಕರಪಿಡಿದ ದೇವ 3 ಧನುವ ಮುರಿದುದ ಕೇಳೀ ಜಮದಗ್ನಿ ಕುವರನು ನಿನ ಸಂಗಡದಲಿ ಕಾಳಗಕೆ ಬರಲು ದನುಜರಿಗೆ ಭ್ರಮೆಗೊಳಿಸಿ ಕನಲುತಿಬ್ಬರು ಕಾದಿ ಘನಬಲ ಗೆಲಿದಂಥ ಅನುಗುಣನೆ ರಾಮ 4 ಅನುಜ ಸೀತೆ ಸಹಿತದಿ ವನಕೆ ಪ್ರೀತಿಯಿಂದಲಿ ಪೋದೆ ನೀತಿಯನು ತಿಳಿದು ಪಾತಕವ ಹರಿಸುವ ಪರಮ ಪಾವನ ಮೂರ್ತಿ ಈ ತೆರದ ಲೀಲೆಯನು ತೋರಿದೆಯೊ ಜಗಕೆ 5 ಕಂಡು ಮಾಯಾಮೃಗವ ಅಂಡಲೆದು ಅದರೊಡನೆ ಭಂಡ ರಾವಣ ಬಂದು ಭಿಕ್ಷುಕನ ತೆರದಿ ಲಂಡನತದಲಿ ಸೀತೆಯನು ಕದ್ದು ಓಡಲು ಕಂಡು ನಿರ್ಜನ ಗೃಹವ ಬೆಂಡಾದ ರಾಮ 6 ಅನುಜನೊಡನೆ ವನವ ಅಲೆದಲೆದು ಕಂಗೆಟ್ಟು ಘನ ಪಕ್ಷಿಯಿಂದಲಿ ವಾರ್ತೆ ತಿಳಿದು ಹನುಮ ಸುಗ್ರೀವರಿಗೆ ಒಲಿದು ವಾಲಿಯ ಕೊಂದು ವನಿತೆ ಸೀತೆಯನರಸೆ ವಾನರರ ಕಳುಹಿದೆ 7 ಹನುಮನಿಂದಲಿ ಸುಟ್ಟು ದನುಜಪುರ ಉಂಗುರವ ವನಿತೆ ಸೀತೆಗೆ ಕೊಟ್ಟು ವಾರ್ತೆ ತರಿಸಿ ವನಧಿಗೆ ಸೇತುವೆಯ ಕಟ್ಟಿ ವಾನರರೊಡನೆ ದನುಜ ರಾವಣ ಸಹಿತ ರಕ್ಕಸರ ಕೊಂದೆ 8 ಅಗ್ನಿಯಿಂ ಸೀತೆಯನು ಶುದ್ಧಳೆನಿಸಿ ಗ್ರಹಿಸಿ ವಿಘ್ನವಿಲ್ಲದ ಪದ ವಿಭೀಷಣಗಿತ್ತು ಮಗ್ನನಾಗಿರೆ ಭರತ ನಿನ್ನ ಪದಧ್ಯಾನದಲಿ ಅಗ್ನಿಸಖಸುತನೊಡನೆ ವಾರ್ತೆ ಕಳುಹಿಸಿದೆ 9 ಬಂದೆದುರುಗೊಳ್ಳೆ ಭರತನು ಸಕಲ ಪರಿವಾರ ಬಂದಯೋಧ್ಯೆಗೆ ಸಕಲ ಸನ್ನಾಹದಿ ಅಂದು ಸಿಂಹಾಸನದಿ ಪಟ್ಟಾಭಿಷೇಕವಗೊಂಡು ಬಂದ ಭಕ್ತರಿಗೆ ಇಷ್ಟ್ಟಾರ್ಥ ಸಲಿಸಿದೆಯೊ 10 ಕೊಟ್ಟು ಕಪಿಗೆ ಬ್ರಹ್ಮಪಟ್ಟದ ಪದವಿಯನು ಶ್ರೇಷ್ಠನೆನಿಸಿದೆಯೊ ಜಗಕೆ ಬೆಟ್ಟದೊಡೆಯ ಇಷ್ಟ ಶ್ರೀ ಗೋಪಾಲಕೃಷ್ಣವಿಠ್ಠಲ ಎನಗೆಕೆಟ್ಟ ಸಂಸೃತಿ ಬಿಡಿಸಿ ಕೊಟ್ಟಭಯ ಸಲಹೊ 11
--------------
ಅಂಬಾಬಾಯಿ