ಓಹೋ ಸುಮ್ಮನೆ ಮರುಳಾದೆ
ಮಹಿಮೆಯನರಿಯದೆ ಪ.
ದೇವಾಧಿ ದೇವ ಬಂದು ಮನೆಯಲಿಂದು
ಕಾವಲಾಗಿರುವನೆಂದು ತಾ ತಿಳಿದಿರಲಿಂದು
ನಾ ವನಿತೆಯ ಒಡಗೂಡುತ ಪೊರಟರೆ
ಕಾವರಿದಾರೆಂಬುದ ಭ್ರಮೆಗೊಂಡು 1
ನೀರಿನ ಮೇಲೆ ಧರೆಯ ನಿಲ್ಲಿಸಿದಂಥ
ಈರೇಳು ಲೋಕದ ದೊರೆಯ ವಕ್ಷಸ್ಥಿತ ಸಿರಿಯ
ಸೇರಿದ ದಾಸರಿಗಾರಿಂದಲು ಭಯ
ಬಾರದೆಂಬ ಶ್ರುತಿಸಾರವ ಗ್ರಹಿಸದೆ 2
ಎಲ್ಲಿ ನೋಡಿದರಲ್ಲಿಪ್ಪ ಶ್ರೀವನಿತೆಯ
ನಲ್ಲ ಭೂಪತಿ ನಮ್ಮಪ್ಪ ನೆನೆದಲ್ಲಿಗೆ ಬಪ್ಪ
ಅಲ್ಲಿ ಇಲ್ಲಿ ಭಯವೆಲ್ಲವು ಬಿಡಿಸಲು
ಬಲ್ಲ ಶೇಷಗಿರಿವಲ್ಲಭನಿರುತಿರೆ 3