ಒಟ್ಟು 7 ಕಡೆಗಳಲ್ಲಿ , 1 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷಣತೋರಿ ಇಲ್ಲದಂತಾಗುವ ವಿಷಮ ಮಹ ಕನಸಿನ ಮೋಹದಿಂ ಕೆಡಬೇಡ ಮನುಜ ಪ ಹಲವು ಜನಮದಿ ಬಿದ್ದು ತಿಳಿಯದೆ ಇಹ್ಯಪರಕೆ ತೊಳಲುತ ಬಳಲುತ ತಿರುತಿರುಗಿ ಗಳಿಸಿದ ನರಜನುಮ ವಿವರಿಸಿ ನೋಡದೆ ಕಳಕೊಂಡು ಬಳಿಕಿನ್ನು ಸುಲಭವಲ್ಲೆಲೆ ಖೋಡಿ 1 ನೀರಮೇಲಣ ಗುರುಳೆಯಂತೆ ಕಾಂಬುವ ಈ ನರಕ ಮೂತ್ರದ ತನುಭಾಂಡವಿದು ಅರಿಯದೆ ಮೋಹಿಸಿ ಪರಿಪರಿ ಕುಣಿಕುಣಿದು ಪರಮ ರೌರವ ನರಕಕ್ಹೋಗ ಬೇಡೆಲೆ ಖೋಡಿ 2 ಜವನÀದೂತರು ಬಂದು ಕವಿದುಕೊಳ್ಳಲು ಆಗ ಕಾಯುವರಾರಿಲ್ಲ ಕೈಪಿಡಿದು ದಿವನಿಶೆಯೆನ್ನದೆ ಭವಹರ ಶ್ರೀರಾಮ ದೇವನ ನೆರೆನಂಬಿ ಭವಮಾಲೆ ಗೆಲಿಯೊ 3
--------------
ರಾಮದಾಸರು
ದಾಸನಾಗೋ ಪ್ರಾಣಿ ಬರಿದೆ ಕಾಣಿ ಪ ದಾಸನಾಗು ರಮೇಶನ ಪಾದ ಹೇಸಿಮನಸಿನ ಕ್ಲೇಶವ ನೀಗಿ ಅ.ಪ ಹಮ್ಮು ಬಿಟ್ಟುಬಿಡೋ ಈಶತ್ವ ಸುಮ್ಮನಲ್ಲ ನೋಡೋ ಸಮ್ಮತ್ಹೇಳಬೇಡೋ ಮಹವಾಕ್ಯ ಮರ್ಮಶೋಧ ಮಾಡೋ ಹಮ್ಮು ಅಹಂಕಾರ ದೂಡಿ ನಿರ್ಮಲಮತಿಗೂಡಿ ಒಮ್ಮನದಿಂ ಪರಬ್ರಹ್ಮನ ಪಾಡಿ 1 ಶಂಕೆಯನೀಡ್ಯಾಡೋ ಚಿತ್ತದ ಕ ಲಂಕ ದೂರ ಮಾಡೋ ಓಂಕಾರರ್ಥ ಮಾಡೋ ಬ್ರಹ್ಮದ ಅಂಕಿತಿಟ್ಟು ಪಾಡೋ ಕಿಂಕರನಾಗದೆ ಶಂಕರ ನಿನಗೆಲ್ಲಿ ಮಂಕುತವನವ ಬಿಟ್ಟು ಸಂಕರುಷಣನ 2 ಹಾಳು ವಾಸನೆ ತೂರಿ ನಿಜವಾದ ಶೀಲಜನರ ಸೇರಿ ಮೂಲತತ್ತ್ವದಾರಿ ಅನುಭವ ಕೀಲಿ ತಿಳಿದು ಭೇರಿ ತಾಳನಿಕ್ಕುತ ಮಮಶೀಲ ಶ್ರೀರಾಮನ ಮೇಲೆಂದು ನಂಬಿ ಭವಮಾಲೆ ಗೆಲಿದು ನಿಜ 3
--------------
ರಾಮದಾಸರು
ನರನಾಗಿ ಜನಿಸಿ ಫಲವೇನು ಜಗದಿ ಹರಿಪಾದ ಸ್ಮರಣೆಯ ಅರಿಯದ ಮನುಜ ಪ ಕಮಲಪೀಠಪಿತನ ವಿಮಲಶ್ರೀಪಾದಗಳ ಅಮಿತ ಮಹಿಮೆ ಪೊಗಳಿ ಯಮಪಾಶ ಗೆಲಿಯುವ 1 ಭುವನವೀರೇಳಕ್ಕೆ ಜೀವಾಳುಯೆನಿಸಿದ ಭವದೂರನರ್ಚಿಸಿ ಭವಮಾಲೆ ಗೆಲಿಯದ 2 ಪಕ್ಷಿಗಮನ ಪರಮಮೋಕ್ಷದಾಯಕ ಭಕ್ತ ಪಕ್ಷ ಶ್ರೀರಾಮನೊಲಿಸಿ ಮೋಕ್ಷವ ಪಡೆಯದ 3
--------------
ರಾಮದಾಸರು
ಭಕುತಾಭಿಮಾನಿ ಸಕಲದೇವರ ಧಣಿ ನಿಖಿಲವ್ಯಾಪಕ ವಿಮಲ ಮುಕುತಿದಾಯಕನೆ ನೀ ಪ ವೇದವೇದಕ್ಕೆ ಸಿಲ್ಕದಾದಿಮೂರುತಿ ನಿನ್ನ ಪಾದಧ್ಯಾನದ ಶಕ್ತಿ ಸಾಧನಕೊಡು ಹರಿಯೆ 1 ಕಮಲಪೀಠಾದಿಸುರರು ಭ್ರಮಿಸುವ ತವಪಾದ ಕಮಲಕೃಪೆಯಿತ್ತೆನಗೆ ವಿಮಲಪತಿಯೆ ನೀಡೊ 2 ಭವಮಾಲೆ ಗೆಲಿಸೆನ್ನ ದಯದಿಂದ ಸಲಹಯ್ಯ ಭವರೋಗವೈದ್ಯನೆ ದಯಾಕರ ಶ್ರೀರಾಮ 3
--------------
ರಾಮದಾಸರು
ಮರುಳೆ ಸುಖ ನೀನೆನು ಪಡೆದಿ ನರಜನುಮ ತಾಳಿ ಇಹ್ಯದಿ ಪ ಪರಿಪರಿ ಜನುಮ ತಾಳಿ ಪರಮ ಬಂಧದೊಳೊರಲ ಉರುಳಿ ವರಮುಕ್ತಿ ದೊರೆವ ಕೀಲಿ ಸ್ಮರಿಸಿ ಬಂದಿ ಹರಿಯ ಬಳಲಿ 1 ಅರಿಯದೆ ಮತ್ತು ಭವಮಾಲೆ ಕೊರಳಿಗ್ಹಾಕಿಕೊಂಡಿ ದುರುಳ ಮರೆಯಮೋಸ ಕಾಂಬೋದೆಲ್ಲ ಹರಿದು ಪೋಗ್ವುದು ಸ್ಥಿರವಲ್ಲ 2 ಸಮಯ ಮಿಂಚಿಪೋದ ಬಳಿಕ ಕ್ರಮದಿ ಮತ್ತೆ ಸಿಗುವುದೆ ಮೂರ್ಖ ವಿಮಲ ಶ್ರೀರಾಮ ಪಾದಕಮಲ ನಮಿಸಿ ಪಡಕೊ ಮುಕ್ತಿಮಾಲಾ 3
--------------
ರಾಮದಾಸರು
ಲೀಲೆಯೊಳಾಡಿಸೊ ಹರಿ ನಿನ್ನ ಲೀಲೆಯೊಳಾಡಿಸೊ ಪ ಲೀಲೆಯೊಳಾಡಿಸೊ ಕಾಲಕಾಲದಿ ನಿನ್ನ ಶೀಲನಾಮವೆನ್ನ ನಾಲಗ್ಗೆ ಕರುಣಿಸು ಅ.ಪ ಮಂದಮತಿಯ ಹರಿಸೋ ಮನ ಗೋ ವಿಂದನೊಳೊಡಗೊಡಿಸೊ ಎಂದೆಂದಿಗು ಆ ನಂದನ ಕಂದನ ಪಾದ ಮನಮಂದಿರದಿರಿಸೊ 1 ಶೀಲಗುಣವ ಕಲಿಸೊ ಭವಗುಣ ಜಾಲವ ಪರಹರಿಸೊ ಪಾಲಿಸಿ ನಿಮ್ಮ ಧ್ಯಾನಲೋಲನೆನಿಸಿ ಯಮ ದಾಳಿ ನೀಗಿಸಿ ಭವಮಾಲೆಯ ಗೆಲಿಸೊ 2 ಮೋಸ ಮಾಯ ಹರಿಸೊ ವಿಷಯ ದಾಸೆಯ ಪರಿಹರಿಸೊ ಭಾಸುರಕೋಟಿಪ್ರಭೆ ಸಾಸಿರನಾಮದ ಶ್ರೀಶ ಶ್ರೀರಾಮ ನಿಮ್ಮದಾಸೆನಿಸೊ 3
--------------
ರಾಮದಾಸರು
ಲೋಕೈಕ ಬಂಧು ಹೇ ದಯಾಸಿಂಧು ಜೋಕೆಮಾಡಭವ ನೀನೆನ್ನೊಳು ನಿಂದು ಪ ಹೇಯಪ್ರಪಂಚದ ಮಾಯಾಮೋಹದಿ ಎನ್ನ ಕಾವದೇವರು ನೀನೆ ಕೈಯ ಪಿಡಿದು ಸಲಹೊ 1 ದಿವನಿಶಿ ಬಿಡದೊಂದೇಸಮನೆ ಬೆನ್ನ್ಹತ್ತಿ ಮಾಯ ಕವಿದು ವಿಧವಿಧದೆನ್ನ ಸುವಿಚಾರ ಮರೆಸಿ ಭವಭವದೊಳಗೆಳಸಿ ಭವಿಯೆಂದೆನಿಸಿ ಕೆಟ್ಟ ಜವನಿಗೀಡೆನಿಸುವ ಭವಮಾಲೆ ಗೆಲಿಸು 2 ಘನದು:ಖಮಯವಾದ ಜನನಮರಣಬಾಧೆ ರಿಣಭಾದೆ ತನುಭಾದೆಯನು ಪರಿಹರಿಸಿ ತನುತ್ರಯದಲಿ ನಿನ್ನ ನೆನೆವೆನಗೆ ಪಾಲಿಸು ಕನಿಕರದಿಂ ಕಾಯೊ ಜನಕ ಶ್ರೀರಾಮ ಪ್ರಭು 3
--------------
ರಾಮದಾಸರು