ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಿದೆ ಚಿಂತಿಸಬೇಡ ಮನವೆ ಭಯಗೊಂಡು ಹರಿಯೊಲುಮೆ ನಮ್ಮಲ್ಲಿ ಸ್ಥಿರವಾಗಿ ಉಂಟು ಪ ಕೊಲ್ಲುವನೊ ಕಾವನೋ ನಿಲ್ಲುವನೊ ಪೋಗುವನೋ ಬಲ್ಲನೊ ಅರಿಯನೋ ಇದನೆಲ್ಲವೆನುತ ಸೊಲ್ಲುಸೊಲ್ಲಿಗೆ ಕರೆದು ಎಲ್ಲವನು ತಿಳುಹಿದರೆ ಕಲ್ಲಾಗುವನೆ ಸ್ವಾಮಿ ಜಗದ ವಲ್ಲಭನು 1 ಕರಿರಾಜ ಧ್ರುವನು ಪ್ರಹ್ಲಾದ ದ್ರೌಪದಿ ದೇವಿ ಮರೆವಿನೊಳಜಾಮಿಳನು ಕರೆಯಲಾಗಿ ಮೊರೆಯ ಲಾಲಿಸಿ ತಾಯಿ ಕರುವನರಸುವ ತೆರದಿ ಉರಗ ಗಿರಿವಾಸ 2 ಗರ್ಭದೊಳಗಿರುವಾಗ ಹಬ್ಬಿರುವ ಮಾಂಸಲತೆ ಉಬ್ಬಸವ ಬಿಡುತಿರಲು ಅಬ್ಬೆ ಸಲಹಿದಳೆ ಉಬ್ಬರದ ನೋವಿನೊಳು ಒಬ್ಬನೇ ಬರುವಾಗ ಹೆಬ್ಬಾಗಿಲನು ಮುಂದೆ ತೋರಿದ (ರಾ)ರೊ ನಿನಗೆ 3 ಮಡದಿ ಮಕ್ಕಳನೆಲ್ಲ ಒಡಗೊಂಡು ಮಲಗಿರಲು ಕಡಸಾರ ಬಂದವಳು ಕಾಲು ಸುತ್ತಿ ನಡುವಿರುಳು ಹಿಡಿದಿರ್ದ ಹಿಡಿತಲೆಯ ಮೃತ್ಯುವನು ಬಿಡಿಸಿ ಸಲಹಿದರಾರು ಜಡನಾದ ಮನವೆ 4 ಹರಿಯನರಿಯದೆ ಮನದಿ ಮರುಗಿ ಕರಗಲು ಬೇಡ ಎರವು ಮಾಡದೆ ಸ್ವಾಮಿ ಪರಿಪರಿಯ ಸೌಖ್ಯವನು ಕರೆದು ಈವನು ನಮಗೆ ವರಾಹತಿಮ್ಮಪ್ಪ 5
--------------
ವರಹತಿಮ್ಮಪ್ಪ
ಯಾರ ಭಯವೇನಿಹುದು ಶ್ರೀವೇಂಕಟೇಶ ನೀನೆ ದಯವಾದ ಮೇಲ್ಯಾರ ಹಂಗೇನು ಪ ಪೊಡವಿಯಾಳುವ ದೊರೆಯು ಒಡವೆವೊಯ್ದರೆಯೇನು ಅಡವಿಯೊಳು ಮೃಗಬಂದು ತಡೆದರೇನು ತೊಡೆಯನೇರುವ ಮಗನ ಅಡವಿಗಟ್ಟಿದರೇನು ನೆಗಳು ಕಾಲ್ಪಿಡಿದರೇನು 1 ವ್ಯಾಳ ಬಹುರೋಷದಲಿ ಕಾಲು ಸುತ್ತಿದರೇನು ಕಾಳ ರಾಕ್ಷಸ ಕೈಯ ಪಿಡಿದರೇನು ಜ್ವಾಲೆ ನಾಲ್ದೆಸೆಯಿಂದ ಮೇಲೆ ಮುಸುಕಿದರೇನು ಹಗೆ ತನಗೆ ವಿಷವಿಕ್ಕಲೇನು 2 ಯಾಗಕೋಸುಗ ಮೃಗವ ಹೋಗಿ ತರುವೆನುಯೆಂದು ರಾಗದೊಳು ಬಲವಂತ ಕರೆಯಲಾಗಿ ಮೃಗ ಬಂದು ಬಾಗಿಲೊಳು ಕಾಲ್ಪಿಡಿಯೆ ಆಗ ಬಿಡಿಸಿದವರಾರು ನಾಗಗಿರಿವಾಸ 3 ಕಡುಗಲಿಯು ದ್ರೌಪದಿಯ ಉಡಿಮಡಿಯ ಸೆಳೆವಂದು ಒಡೆಯ ರಕ್ಷಿಸುಯೆಂದು ನಡುಗುತಿರಲು ಮಡದಿಗಕ್ಷಯವಿತ್ತು ನುಡಿದ ಭಾಷೆಯ ಸಲಿಸಿ ಕೊಡಲಿಲ್ಲವೆ ನೀನು ಒಡೆಯ ಗಿರಿವಾಸ 4 ಕೆಡೆನುಡಿದು ಬಾಲಕನ ಅಡವಿಗಟ್ಟಲು ಪಿತನು ಸಡಗರದ ಮಡದಿಯಳ ಮಾತ ಕೇಳಿ ಒಡೆಯ ನೀನೆಯೆಂದು ಕಡುತಪವನರ್ಚಿಸಲು ಉಡುಗಣಕೆ ಮೇಲಾದ ಪದವ ತೋರಿದೆಲಾ 5 ಮೃಗ ಜಲದ ಹೊಂಡದೊಳಗಾಡುತಿರೆ ಕಂಡು ಕಡು ರೋಷದಲಿ ಕಾಲ್ಪಿಡಿಯಲು ಪುಂಡರಿಕಾಕ್ಷನನು ಭಯಗೊಂಡು ಕರೆದರೆ ತುಂಡಿಸಿದೆ ಚಕ್ರದೊಳು ನೆಗಳ ಗಂಟಲನು 6 ಒಬ್ಬನೆ ಪಥದೊಳಗೆ ಸರ್ಬಬಲನೈದುತಿರೆ ಹೆಬ್ಬಾವು ಆತನನು ಮೈಸುತ್ತಲು ಗರ್ಭದೊಳು ನಡುನಡುಗಿ ಉಬ್ಬಸವ ಬಿಡುತಿರಲು ಎಬ್ಬಿಸಿದರಾರಲ್ಲಿ ನಿರ್ಭಯವ ತೋರಿ 7 ದುರುಳ ದೈತ್ಯನು ತನ್ನ ಕುವರನನು ಕೊಲುವುತಿರೆ ಭರದಿಂದ ಕಂಬದೊಳು ಹೊರಟು ಬಂದು ನರಹರಿಯ ರೂಪದಲಿ ಕರುಳ ಮಾಲೆಯ ಧರಿಸಿ ತರಳನನು ಕಾಯಿದವರಾರು ಶ್ರೀಹರಿಯೆ 8 ಉರಿಯ ಮನೆಯಂದರಿಯದರಸರೈವರ ಹೊಗಲು ಇರಿಸಿರ್ದ ಬಾಗಿಲೊಳು ಉರಿ ಮುಸುಕಲು ಬೆರಸಿರ್ದ ನಿದ್ರೆಯೊಳು ಇರಿಸಿ ಕಾಯಿದವರಾರು ಕರೆಸಿ ದ್ರೌಪದಿಯನ್ನು ಕೊಡಿಸಿದವರಾರು 9 ಚಂದ್ರಹಾಸನು ವಿಷವ ತಿಂದು ಸಾಯಲಿಯೆಂದು ತಂದೆ ಬರೆದಿಹ ಲಿಖಿತ ನಂದನನು ನೋಡಿ ಮಂದಗಮನೆಯ ಕೊಟ್ಟು ಚಂದ್ರಹಾಸನ ನಿಲಿಸಾ ನಂದಳಿದ ಮಾಯವೇನೆಂದು ಹೇಳಯ್ಯ 10 ಕಾಯ ಭಯ ಹೊರತಾಗಿ ಮೀರಿದಾಪತ್ತಿನಲಿ ಕಡೆ ಸೇರಿಸೊ ಭೂರಮಣ ವರಾಹತಿಮ್ಮಪ್ಪ ಚರಣವನು ಕುಲಿಶ ನೀನಾಗು 11
--------------
ವರಹತಿಮ್ಮಪ್ಪ