ಇವನೆ ಪ್ರಹ್ಲಾದನಿಂದಲಿ ಉಪಾಸ್ಯ
ಪವಮಾನ ಪಿತ ಭಕ್ತವರದ ಲಕ್ಷ್ಮೀಶ ಪ.
ವಲಯಕಾರದಿ ಶೇಷ ಛತ್ತರಿಯಾಗಿ
ಹಲ ಮುಸಲ ಧರಿಸಿ ಎಡದಲಿ ವಾರುಣೀ
ಬಲದಲ್ಲಿ ಶಂಬುಕ ವರ್ಣನೆಂಬ ಪುತ್ರನ ಸಹಿತ
ನಲಿದು ಸೇರಿಸೆ ಇಂಥ ಆಸನದಿ ಕುಳಿತಾ 1
ಯೋಗಾಸನವನ್ಹಾಕಿ ಎಡತೊಡೆಯ ಮೇಲ್ ಸಿರಿಯು
ಆಗಮನುತ ಬಲದ ತೊಡೆಯಲ್ಲಿ ವಾಯು
ಭೋಗ ರೂಪನು ಸರ್ವ ಆಭರಣ ಶೃಂಗಾರ
ಸಾಗರಾತ್ಮಜೆ ಪತಿಯು ಧರಿಸಿ ಮೆರೆವಂಥಾ2
ಶಿರದಿ ನವರತ್ನ ಮಕುಟವು ಫಣೆಯು ತಿಲಕವೂ
ಕರ್ಣ ಕುಂಡಲವೂ
ನಾಸಿಕ ಗಲ್ಲ ತೆರದ ಬಾಯ್‍ದಾಡೆಗಳು
ದುರುಳರಿಗೆ ಘೋರ ವರಭಕ್ತರಿಗೆ ಅಭಯ 3
ಕಂಠ ಕೌಸ್ತುಭಮಣಿಯು ಶ್ರೀವತ್ಸ ತುಳಸಿ ಸರ
ವೈಜಯಂತಿ ಹಾರಾ
ಕರ ಶಂಖ ಚಕ್ರವು ಪದ್ಮ ಗದೆ ಅಭಯ
ವಂಟಿ ಕರಶಿರಿ ಭುಜದಿ ದ್ವಯ ಯೋಗ ಚಿಹ್ನೆ 4
ಉರ ಉದರ ಶೃಂಗಾರ
ಅರವಿಂದ ಪೊಕ್ಕಳಲಿ ಬ್ರಹ್ಮ ಮೆರೆಯೇ
ಮಿರುಗುವೋ ಮಕುಟ ಉಟ್ಟಿರುವ ನಡು ಕಿರುಗೆಜ್ಜೆ
ಕರಿಸೊಂಡಲಿನ ತೊಡೆಯು ಸುರವರದ ಚರಣಾ5
ಚರಣದಾಭರಣ ಸಾಲ್ಯೆರಳನಖ ಕಾಂತಿಗಳು
ಪಾದ ಪದುಮಾ
ಮೃಗ ಮುಖವು ನರಮೃಗಾಕೃತಿರೂಪ
ತರಳ ಪ್ರಹ್ಲಾದನಲಿ ಕರುಣಾರ್ದ ದೃಷ್ಟಿ 6
ಎಡತೊಡೆಯಲಿ ಸಿರಿಯು ಬಲಕರದಿ ಪದುಮವ ಪಿಡಿದು
ಎಡತೊಡೆಯ ಮೇಲೆ ಮದನನ ಕುಳ್ಳಿರಿಸುತಾ
ಮದನ ಇರಿಸಿ ಹೂ ಬಾಣವನು
ಪಿಡಿದು ರತಿ ಪದುಮ ಕರದಿಂದ ಶೋಭಿಸಲೂ 7
ಹರಿಗೆ ಬಲತೊಡೆಯಲಿದ್ದಂಥ ವಾಯುವು ತನ್ನ
ಅರಸಿ ಭಾರತಿಯ ಎಡತೊಡೆಯಲಿಟ್ಟೂ
ತರಳ ವಿಷ್ವಕ್ಸೇನನನು ಬಲದ ತೊಡೆಯಲ್ಲಿ
ಇರಿಸಿಕೊಂಡತುಲ ಸಂತಸದಿಂದ ಮೆರೆಯೇ 8
ಚತುರ ಹಸ್ತನು ವಾಯು ಎಡಗೈಲಿ ಪಿಡಿದು ಗದೆ
ಹಿತದಿ ಬಲಗೈಯ್ಯ ಭಕ್ತರಿಗಭಯ ತೋರ್ವ
ಅತಿಭಕ್ತಿಯಿಂದುಭಯಕರ ಅಂಜಲಿಯ ಮಾಡಿ
ಪತಿ ಭಿಕ್ಷೆ ಬೇಡುವಾ9
ನಾಭಿಯಲಿ ಬ್ರಹ್ಮ ಉದ್ಭವಿಸಿ ಹಸ್ತದಿ ವೇದ
ಶೋಭಿಸಲು ಎಡತೊಡೆಯ ಮೇಲೆ ವಾಣೀ
ಆಭರಣ ಶೃಂಗರದಿ ವೀಣೆ ಪುಸ್ತಕ ಧರಿಸಿ
ವೈಭವದಿ ದೇವ ಮುನಿ ಎಡೆ ತೊಡೆಯೊಳಿರಲೂ10
ಬ್ರಹ್ಮ ಬಲತೊಡೆಯಲ್ಲಿ ಪಂಚಮುಖ ರುದ್ರನ್ನ
ಸುಮ್ಮಾನದಿಂದ ಕುಳ್ಳಿರಿಸಿಕೊಂಡಿರಲೂ
ಬ್ರಹ್ಮಸುತ ಕರದಿ ಆಯುಧ ಗೌರಿ ಎಡದಲ್ಲಿ
ಷಣ್ಮುಖನ ಬಲ ತೊಡೆಯಲ್ಲಿಟ್ಟು ಮೆರೆಯೇ 11
ಗೌರಿಗಣಪನ ತನ್ನ ತೊಡೆಯೊಳಿಟ್ಟಿರಲು
ಈ ರೀತಿಯಿಂದ ಪರಿವಾರ ಸಹಿತಾ
ಶೌರಿ ಮೆರೆಯುವ ದಿವ್ಯ ಅದ್ಭುತಾಕೃತಿ ನೃಹರಿ
ಪತಿ ಮನದಿ ತೊರೆ ಭಕ್ತರಿಗೆ 12
ಕಾಲನಾಮಕ ಗರುಡ ಬಾಲೆ ಸೌಪರ್ಣಿ
ಲೀಲೆಯಿಂದಲಿ ಕೂಡಿ ಸಮ್ಮುಖದಿ ನಿಂದೂ
ಓಲಗವ ಕೊಡುತ ಹರಿಗನುಕೂಲನಾಗಿರುವ
ಲೀಲ ಮಾನುಷ ಇಂಥ ವೈಭವದಿ ಮೆರೆವಾ13
ಇಂತೆಸೆವ ಹರಿ ಎದುರು ನಿಂತು ಪ್ರಹ್ಲಾದ ಗುಣ
ವಂತೆ ಸಾಧ್ವೀ ಸಾಧುಮತಿ ಸತಿಯ ಸಹಿತಾ
ಅಂತರಂಗದಿ ಚಿಂತಿಸುತ ಅಂಜಲಿಯ ಕರದಿ
ಶಾಂತಮನದಲಿ ಸುಖಿಸಿ ಆನಂದಿಸುವನೂ14
ವರಭಕ್ತ ಪ್ರಹ್ಲಾದ ವರದನ್ನ ಈ ರೂಪ
ನರರು ಚಿಂತಿಸಲಳವೆ ಚರಿಪ ಭಕ್ತಿಯಲೀ
ಪರಮ ಉತ್ಸಾರಕರನೊಂದೊಂದು ಅಂಶದಲಿ
ವರ ಭಕ್ತರಲಿ ನೆಲಸೆ ಚಿಂತನೆಗೆ ನಿಲುವಾ 15
ಪರಿವಾರ ಆಭರಣ ಆಯುಧಗಳಿಂ ಮೆರೆವ
ನರಹರಿಯ ಈ ರೂಪ ನಿರುತ ಸ್ಮರಿಸೇ
ಗುರುವರದ ಕರಿಗಿರೀ ಯೋಗ ಭೋಗಾ ನೃಹರಿ
ಕರುಣಿಸುವ ಮುಕ್ತಿ ಗೋಪಾಲಕೃಷ್ಣವಿಠಲಾ16