ನಮೋ ನಮೋ ಕಾಲಭೈರವ ಹರಿಯ ಚರಣ-
ಸಮೀಪದೊಳಗಿದ್ದು ಮೆರೆವ ಪ.
ಸಮೀಚೀನಜ್ಞಾನಭಕ್ತ-
ಸಮೂಹವ ಕಾವ ಲಕ್ಷ್ಮೀ-
ರಮಣನ ಕಾರ್ಯಮಂತ್ರಿ-
ಯು ಮಾಧವನ ಸಮಾನಬಲ ಅ.ಪ.
ಬೆಟ್ಟದೊಡೆಯ ಶ್ರೀನಿವಾಸನ ಪಾದಕಮಲ-
ಮುಟ್ಟಿ ಭಜಿಪ ವೈರಿಮರ್ದನ
ಸೃಷ್ಟಿ ಮೂರರಲ್ಲಿ ಕೀರ್ತಿ-
ಪಟ್ಟ ದಿಟ್ಟ ಧೀರ ಪರಮ
ನಿಷ್ಠ ಪುಷ್ಪ ತುಷ್ಟಿಪ್ರದ ಬ-
ಲಿಷ್ಠ ಶ್ರೇಷ್ಠ ಭೂತಪತಿಯೆ 1
ಶ್ರೀನಿವಾಸನಾಜ್ಞೆ ಮೀರದೆ ನಡೆಸುವದೆ ಪ್ರ-
ಧಾನ ಕಾರ್ಯ ನಿನ್ನದೆಂಬುದೆ
ತಾನು ಕಿಂಚಿದರಿತು ಸನ್ನಿ-
ಧಾನವನ್ನೋಲೈಸಿ ಬಂದೆ
ದೀನಬಂಧು ಸುಗುಣಸಿಂಧು
ಮಾನತ್ರಾಣವಿತ್ತು ಸಲಹೊ 2
ಅಂತರಂಗದಲ್ಲಿ ಪ್ರಾರ್ಥನೆ-ಮಾಡಿದರೆ
ಸ್ವಂತ ಬಂದು ಮಾಡು ರಕ್ಷಣೆ
ಅಂತ್ಯಕಾಲದಲ್ಲಿ ಹರಿಯ
ಚಿಂತನೆಗೆ ವಿಘ್ನ ಬಾರ-
ದಂತೆ ಕಾವ ಮಹಾ ತೇಜೋ-
ಸೂರಿ 3
ಕಾಲಕಾಲದಲ್ಲಿ ಭಕ್ತರ ಮನೋಭೀಷ್ಟ
ಪಾಲಿಸುವ ಚಂದ್ರಶೇಖರ
ಖೂಳ ಜನರ ಗರ್ವಮುರಿವ
ಶೂಲಪಾಣಿ ಸುಗುಣಶ್ರೇಣಿ
ಮೂಲಪತಿಯ ಪಾದಪದ್ಮ
ಮೂಲದೊಳಗೆ ನಲಿವ ಚೆಲುವ 4
ಭೂರಿ ಮಹಿಮೆಯ ಭಕ್ತರಿಂಗಾ-
ಧಾರವಾಗಿ ರಾಜಿಸಿರುವೆಯ
ಧೀರ ಲಕ್ಷ್ಮೀನಾರಾಯಣನ
ಸೇರಿದಾನತರ್ಗೆ ಮಂ-
ದಾರ ಮಹೋದಾರ ಗಂ-
ಭೀರ ಧೀರ ಚಾರುಚರಿತ 5