ಕಂಡೆನೋ ನಿನ್ನ ಚರಣ ಕಮಲವ
ಸೊಂಡಿಲಿಂದಿಹ ಗಣಪತಿ ಕೊಡು ವರವ ಪ
ಮಣಿ ಕುಂಡಲ ಭೂಷಾ
ಉಂಡಲಿಗೆ ಚಕ್ಕುಲಿಯೊಳಗೆ ಸಂತೋಷ
ಚಂಡ ಪ್ರಬಲನಲ ಅಖಂಡ ಪ್ರಕಾಶ ಭೂ
ಮಂಡಲದೊಳು ನಿನ್ನ ಕೀರ್ತಿ ವಿಶೇಷ 1
ಚಂದನಾಗರು ಧೂಪ ದೀಪಾವಳಿಯಿಂದಾ
ನಂದದಿಂದಲಿ ಪೂಜಿಪೆ ಭಕ್ತಯಿಂದ
ನಂದಿವಾಹನನಿಗೆ ಮೋಹದ ಕಂದ
ಮಂದಮತಿಯ ಬಿಡಿಸೈಯ್ಯ ನೀ ಮುದದಿಂದ 2
ಚಿಕ್ಕ ಮೂಷಿಕವೇರಿ ಗಕ್ಕಾನೆ ಬರುವೆ
ಅಕ್ಕರಿಂದಲಿ ಭಕ್ತರೆಲ್ಲಾರ ಪೊರೆವೆ
ಮಿಕ್ಕ ಮಾತುಗಳೇನೋ ಪೊಗಳಲೆನ್ನಳವೇ
ಇಕ್ಕೇರಿಯೊಳು ಟೆಂಕಸಾಲೆಯೊಳಿರುವೆ 3