ಒಪ್ಪಿಸಿದೆ ಒರೆದು ದೂರ ಮುಂದೆನ್ನ
ತಪ್ಪನೆಣಿಸದಿರು ಧೀರ
ಅಪ್ಪಳಿಸು ಕಡು ಮೂರ್ಖರ ನಿನಗೆಂದು
ತಪ್ಪುವುದೆ ಭಕ್ತಭಾರ ಪ.
ದುರ್ಗಾಧಿಪತಿ ಲಾಲಿಸು ಮನಸಿಜನ
ಮಾರ್ಗಣಕೆ ಸಿಲುಕಿ ಮನಸು
ನಿರ್ಗಮಿಸದೊಳಸರಿದು ಮುಳುಗಿ ಸ-
ನ್ಮಾರ್ಗಗಾಣದೆ ಕುಂದಿತು 1
ಪಂಚಾಂಗ ಪಲುಗುತಿರಲು ಮನೆಯ ಮ್ಯಾ-
ಲ್ಹಂಚುಗಳಸ್ಥಿರವಾಗಲು
ಚಂಚಲದಿ ಮನ ಕೆದರಲೂ ತದಧೀನ
ಪಂಚಕರಣವು ಕೆಡುವವು 2
ಹೀಗಾದ ಬಳಿಕ ನಿನ್ನ ಸೇವೆ ಚೆ-
ನ್ನಾಗುವದ ಕಾಣೆ ಮುನ್ನ
ಶ್ರೀ ಗುರುವೆ ತ್ವರೆಯೊಳೆನನ ಮನವ ಪದ
ರಾಗಿಯಾಗಿಸು ರನ್ನ 3
ಮೂರು ಋಣಬಾಧೆಯನು ಸಹಿಸುವದ-
ಕಾರಿಂದ ಶಕ್ಯವಿನ್ನು
ತೋರು ತ್ವಕ್ಕರುಣವನ್ನು ದಾಸನ್ನ
ದೂರ ಬಿಡಲ್ಯಾತಕಿನ್ನು 4
ಸಂದಣಿಸಿಕೊಂಡು ಬರುವ ಸರ್ವ ಪ್ರತಿ
ಬಂಧಕಗಳೆಲ್ಲ ತರಿವ
ಕರವ ಶಿರದಿ ಭುಜ-
ಗೇಂದ್ರ ಗಿರಿನಾಥ ದೇವ 5