ಶ್ರೀಮದನಂತಸ್ವಾಮಿ ರಕ್ಷಿಸು ಪುಣ್ಯ-
ನಾಮ ಸರ್ವಾಂತರ್ಯಾಮಿ ಪ.
ಸೋಮಾರ್ಕಕಾಮಸೂತ್ರಾಮ ಪ್ರಮುಖಸುರ-
ಸ್ತೋಮವಂದಿತ ಭೀಮಬಲ ಗುಣ-
ಧಾಮ ವರನಿಸ್ಸೀಮ ಮಹಿಮನೆ ಅ.ಪ.
ಅಂತರ್ಬಹಿವ್ರ್ಯಾಪ್ತನೆ ಸತತ ರಮಾ-
ಕಾಂತಗೆ ಪರಮಾಪ್ತನೆ
ಚಿಂತಿಪ ಭಕ್ತರ ಚಿಂತಾಮಣಿ ನಿ-
ಶ್ಚಿಂತನೊಂದೆ ಶಿರದಿ ಸಾಸವೆ-
ಯಂತೆ ಲೋಕವನಾಂತುಕೊಂಡಿಹೆ 1
ರಾಮನ ಸೇವೆಗಾಗಿ ಲಕ್ಷ್ಮಣನೆಂಬ
ನಾಮವ ತಾಳ್ದ ಯೋಗಿ
ಯಾಮಿನೀಚರರ ನಿರ್ನಾಮಗೈದ ವೀರಲ-
ಲಾಮ ನಿರ್ಜಿತಕಾಮ ಸಜ್ಜನ-
ಪ್ರೇಮ ಭೌಮ ನಿರಾಮಯನೆ ಜಯ 2
ಸಂಕರ್ಷಣ ಸುಗುಣಾ-ಭರಣ ನಿ-
ಶ್ಯಂಕ ವೈರಿಭೀಷಣ
ಶಂಕರಾದಿಸುರಸಂಕುಲನುತಪಾದ-
ಪಂಕಜನೆ ತಾಟಂಕಗೋಪಾ-
ಲಂಕೃತಾಂಗ ಶುಭಂಕರನೆ ಜಯ 3
ಸಾರತತ್ತ್ವಬೋಧನೆ ಶರಣುಜನ
ವಾರಿಧಿಚಂದ್ರಮನೆ
ಘೋರಭವಾರ್ಣವತಾರಕನಮಲ ಪಾ-
ದಾರವಿಂದದ ಸೌಂದರ್ಯ ನಿಜ
ಭೂರಿ ನೇತ್ರಗಳಿಂದ ಕಾಣುವೆ 4
ಮಂಜುಳ ನಗರೇಶನೆ ಭಕ್ತಭಯ-
ಭಂಜನ ಸುವಿಲಾಸನೆ
ಕಂಜಾಕ್ಷಸಖ ಲಕ್ಷ್ಮೀನಾರಾಯಣನ ತೇಜಃ-
ಪುಂಜ ಭಗವದ್ಭಕ್ತಜನಮನೋ-ರಂಜನಾತ್ಮ ನಿರಂಜನನೆ ಜಯ 5