(ಧರ್ಮಸ್ಥಳ ಮಂಜುನಾಥನನ್ನು ನೆನೆದು)
ಯಾಕೆನ್ನ ಮೇಲೆ ನಿರ್ದಯ ಶ್ರೀಮಂಜುನಾಥ
ಲೋಕೇಶ ಮಾಡು ನಿರ್ಭಯ ಪ.
ಪಾಕಹಪ್ರಮುಖದಿವೌಕಸಮುನಿಜನಾ-
ನೀಕವಂದಿತಪದಕೋಕನದ ಕೋವಿದ ಅ.ಪ.
ಪಾಪಾತ್ಮಪಾಪಸಂಭವ ನಾನೆಂಬುವದಕಾ-
ಕ್ಷೇಪವೇನಿಲ್ಲೋ ಮಾಧವ
ಶ್ರೀಪರಮೇಶ್ವರ ಕೋಪಕಲುಷಹರ
ತಾಪತ್ರಯಶಮನಾಪದ್ಭಾಂಧವ
ಗೋಪತುರಂಗ ಮಹಾಪುರುಷ ಗಿರೀಶ 1
ಸೋಮಸುರ್ಯಾಗ್ನಿಲೋಚನ ಸದ್ಗುಣಪುಣ್ಯ-
ನಾಮ ಪಾಪವಿಮೋಚನ
ವ್ಯೋಮಕೇಶಾಚ್ಯುತಪ್ರೇಮ ಮಹಾಮಹಿಮ
ಕಾಮಾರಿ ನಿನ್ನ ನಾ ಮರೆಹೊಕ್ಕೆನು
ಹೇ ವiಹಾದೇವ ಸೋಮಚೂಡಾಮಣಿ 2
ಧರ್ಮಮಾರ್ಗನಿಯಾಮಕ ಸತ್ಯಾತ್ಮ ಪರ-
ಬ್ರಹ್ಮ ಸುಜ್ಞಾನದಾಯಕ
ನಿತ್ಯ ಸತ್ಕರ್ಮಪ್ರೇರಕ ಗಜ-
ಚರ್ಮಾಂಬರಧರ ದುರ್ಮತಿಪ್ರಹರ
ಭರ್ಮಗರ್ಭಜ ಭವಾರ್ಣವತಾರಕ 3
ಕಪ್ಪ ಕಾಣಿಕೆಗಳನು ತರಿಸುವರ-
ಣ್ಣಪ್ಪದೈವವೆ ದೂತನು
ತಪ್ಪದೆ ಚಂದಯ ಹೆಗ್ಗಡೆಯರ ಮನದೊ
ಳಿಪ್ಪ ದಧಿಮಥನ ತುಪ್ಪದಂತೆಸೆವ
ಕರ್ಪೂರಗೌರ ಸರ್ಪವಿಭೂಷಣ 4
ಪೊಡವಿಗಧಿಕವಾಗಿಹ ಕುಡುಮಪುರ-
ಕ್ಕೊಡೆಯ ಭಕ್ತಭಯಾಪಹ
ಕಡಲಶಯನ ಲಕ್ಷ್ಮೀನಾರಾಯಣಗತಿ-
ಬಿಡೆಯದವನು ನಿನ್ನಡಿಗೆರಗುವೆ ವರ
ಮೃಡಶಂಕರ ಕೊಡು ಕೊಡು ಮನದಷ್ಟವ 5