ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಗಿಲನು ತೆಗಿಸಿ ದರುಶನವ ಕರುಣಿಸಿದೆಯೋ ಭೋಗ ನರಸಿಂಹಸ್ವಾಮಿ ಪ. ನಾಗಶಯನನೆ ದೇವ ಕರಿಗಿರಿ ನಿಲಯ ಹರಿ ಯೋಗಿ ಶ್ರೀಗುರು ಹೃದಯ ನಿಲಯ ಅ.ಪ. ಸಿರಿಯನ್ನೆ ತೊಡೆಯ ಮೇಲೆರಿಸಿಕೊಂಡು ನಗುತ ಪರಿಪರೀ ಸೇವೆಯನು ಭಕ್ತರಿಂ ಕೊಳುತ ಪರಮಾತ್ಮ ಪಂಚಾಮೃತದ ಅಭಿಷೇಕವನು ಎರೆಯುತಿರೆ ಕಂಡು ನಾ ಹರುಷಪಟ್ಟೆನೊ ಸ್ವಾಮಿ 1 ಸುರನದಿಯ ಜಲ ತಂದು ನಿನಗಭಿಷೇಕವನೆ ಎರೆದು ಪರಿಪರಿಯ ಪೂಜೆ ಅಲಂಕಾರವನೆ ಮಾಡಿ ತರತರದ ಷಡ್ರಸವ ಭೋಜನವಗೈಸುತಲಿ ವರ ಮಂಗಳಾರತಿಯನೆತ್ತಿದುದ ಕಂಡೆ 2 ಘನ್ನ ಮಹಿಮೆನೆ ಸ್ವಾಮಿ ಎನ್ನ ಬಿನ್ನಪ ಕೇಳಿ ಮನ್ನಿಸಿ ದರುಶನವ ಇನ್ನು ಕರುಣಿಸಿದೆ ನಿನ್ನ ಸಮರಿನ್ಯಾರೊ ಪನ್ನಗಶಯನನೆ ಧನ್ಯರೋ ನಿನ್ನ ಪದವ ನಂಬಿದವರು3 ಶಾಂತರೂಪವ ಧರಿಸಿ ಶಾಂತ ಮೂರುತಿ ಎನಿಸಿ ಅಂತರಂಗದಿ ನಿನ್ನ ಧ್ಯಾನಿಸುವರ ಸಂತೋಷಪಡಿಸುತಲಿ ಕಾಯ್ವ ಕಮಲಾಕಾಂತ ಅಂತರಂಗವ ತಿಳಿದು ಸಂತೈಸೊ ಎನ್ನ 4 ಪಾಪಿ ದೈತ್ಯನ ಕೊಂದು ಕೋಪಿಸದೆ ಭಕ್ತನೊಳು ಕಾಪಾಡಿದೆಯೊ ಪರಮಪ್ರೇಮದಿಂದ ಗೋಪಾಲಕೃಷ್ಣವಿಠ್ಠಲನೆ ಅದರಂದದಲಿ ಕಾಪಾಡೊ ಭಕ್ತರನು ಹೃದಯದಲಿ ನೆಲಸಿ 5
--------------
ಅಂಬಾಬಾಯಿ
ಮೋಸ ಪೋದೆಯಲ್ಲೇ ಭಾಸುರಾಂಗಿ ನೀನು ಪ ಕಾಶಿ ನಿವಾಸಿ ವಿಶ್ವೇಶ್ವರನಹುದೆಂದು ಅ.ಪ. ವಿಶ್ವೇಶ್ವರನವನಲ್ಲ ತಿಳಿದು ನೋಡು ನೀನು ವಿಶ್ವಪತಿಯಾ ವಿಷ್ಣುವಿನಡಿಯಾಳು ಅವನು ಸುಸ್ವಭಾವದ ಸರಳ ಹೃದಯಾನ್ವಿತಳು ನೀನು ಕಪಟ ಕಿರಾತನವನು 1 ತ್ರಿಪುರ ಸುಂದರಿಯೆಂಬ ಬಿರುದು ಪೊತ್ತಿಹೆ ನೀನು ಕಪಟ ವೇಷದೊಳು ಬಂದ ವಿಷಕಂಠನವನು ಚಪಲಾಕ್ಷಿಯೆ ನಿಜಸ್ಥಿತಿ ಅರಿಯಲಿಲ್ಲ ನೀನು ಗುಪಿತದಲಿ ನಿನ ಕಂಡು ಮರುಳು ಮಾಡ್ದನವನು 2 ರಾಜರಾಜೇಶ್ವರಿಯಾಗಿ ರಾಜಿಸುವೆ ನೀನು ಭೋಜನಕಾಗಿ ಭಿಕ್ಷ ಬೇಡುವನಲ್ಲೆ ಅವನು ಮೂಜಗವು ಮೋಹಿಸುವ ಕೋಮಲಾಂಗಿಯು ನೀನು ಈ ಜಗವರಿಯೆ ಸರ್ವದ ಭಸ್ಮಾಂಗನವನು 3 ಕನಕ ಮಣಿಮಯದಂತಃಪುರವಾಸಿಯು ನೀನು ಶುನಕ ಗೋಮಾಯ್ಗಳೆಡೆ ಮಸಣವಾಸಿಯವನು ಘನ ವಿಶಾಲಾಕ್ಷಿಯೆ ಮಂದಹಾಸಮುಖಿ ನೀನು ಮಿನುಗುವ ಬೆಸಗಣ್ಣಿನುರಿಮೊಗದೊಳಿಹನವನು 4 ಚಾರು ಪೀತಾಂಬರ ಧರಿಸಿ ಶೋಭಿಸುವೆ ನೀನು ಕೋರಿ ಗಜಚರ್ಮಧರಿಸುವ ಭಿಕಾರಿಯವನು ಭೂರಿ ಸುಖಭೋಗಂಗಳನನುಭವಿಸುವೆ ನೀನು ನಾರಸಿಂಹ ಮಂತ್ರ ಜಪಿಪ ವಿರಾಗಿಯವನು5 ಕರುಣಾ ಕಟಾಕ್ಷದಿಂ ಜಗವ ಪೊರೆದಪೆ ನೀನು ಕರುಣವಿಲ್ಲದೆ ಮೂಜಗವನುರುಹುವನವನು ಪರಮ ಭಕತರಿಗೆ ಮುಕುತಿಪಥ ತೋರುವೆ ನೀನು ನರನಾದ ಭಕ್ತನೊಳು ಹೋರಾಡಿದವನು 6 ಮಂಗಳಪ್ರದೆಯೆಂದು ಖ್ಯಾತಿಗೊಂಡಿರುವೆ ನೀನು ಜಂಗಮ ಜೋಗಿಗಳಿಗೆ ನೆಲೆಯಾಗಿಹನವನೂ ಗಂಗಾಜನಕನ ಪ್ರಿಯತಮ ಸೋದರಿಯು ನೀನು ರಂಗೇಶವಿಠಲನ ಚರಣ ಸೇವಕನವನು 7
--------------
ರಂಗೇಶವಿಠಲದಾಸರು