ಅರೋಗಣೆಯ ಮಾಡೊ ಅಂಜನಾದ್ರಿಯ ವಾಸ
ಆಲಸ್ಯವೇತಕೋ ಆಯಿತು ವೆಂಕಟೇಶ ಪ
ತಳಿಗೆಯ ತೊಳೆದಿಟ್ಟು ಸುಳಿಬಾಳೆ ಎಲೆಯಿಕ್ಕಿ
ನಳಿನಲೋಚನೆಯರುಗಳಿಂದ ಅಭಿಘರಿಸಿ
ಎಳೆಯ ಮಾವಿನ ಮಿಡಿಯು ಉಪ್ಪು ಬೇವಿನ ಸೊಪ್ಪು
ಹುಳಿಗೂಡಿ ಅರೆದಿಟ್ಟ ಶುಂಠಿ ಕಡಲೆ ಹಂಬೆ 1
ಕಣಿಲೆ ಕಂಚಿನಕಾಯಿ ಅಣಿಲೆ ಅಂಬಟನೆಲ್ಲಿ
ಒಣಗಿದ ಮೆಣಸಿನ ಉರಿಯು ಉಪ್ಪಿನ ಹೆರೆಯು
ಕಣುಮನಕ್ಕೊದಗಿಯೇ ಅಣಿಯಾಯಿತೆಡೆಯೊಳು 2
ಹೆರೆದ ತೆಂಗಿನಕಾಯ ಅರೆದ ಸಾಸಿವೆಯಿಕ್ಕಿ
ಅರೆದು ಬೇಯ್ಸಿದ ಓಗರದೊಳು ಕಲಸಿಟ್ಟು
ತರಿದ ಗುಳ್ಳದಕಾಯಿ ಹಾಗಲು ಕುಂಬಳಕಾಯಿ
ಕೊರೆದ ಬಾಳೆಯಕಾಯಿ ಹುರಿದದೇ ತುಪ್ಪದಿ 3
ಸಣ್ಣಕ್ಕಿಯೋಗರವು ಬೆಣ್ಣೆಕಾಸಿದ ತುಪ್ಪ
ಗಿಣ್ಣಲನೊರೆಹಾಲು ಸಣ್ಣ ಮೆಣಸು ಸಾರು
ಅನ್ನ ಚಿತ್ರಾನ್ನವು ಮೊಸರನ್ನ ಹೆಸರ್ಹುಗ್ಗಿ
ಉಣ್ಣಬಾರೆಲೋ ನೀನು ಇನ್ನು ತಡ ಬೇಡ 4
ಕೇಸಕ್ಕಿಯೋಗರವು ದೋಸೆ ಪಾಯಸವನ್ನು
ಬೀಸು ಹಾರಿಗೆಯತಿರಸವು ಮಂಡಿಗೆಯು
ಏಸು ಹೋಳಿಗೆ ಬೇಕೈಸನೀ ಉಣಲೇಳು 5
ಚಕ್ಕುಲಿ ಕರಜಿಯಕಾಯಿ ಮನೋಹರವು
ಚೊಕ್ಕ ಬಿಳಿಯ ಬೇಳೆಸುಕ್ಕಿನುಂಡೆಯು
ಕದಳಿ ರಸಾಯನವು
ಇಕ್ಕಿಸಿಕೊಳ್ಳೊ ನೀ ಮಕ್ಕಳಾಟಿಕೆ ಬೇಡ 6
ಏಲಕ್ಕಿ ನಾಗರನಿಂಬೆ ಬೇವಿನಸೊಪ್ಪು
ಮೇಲೆ ಒಗ್ಗರಿಸಿದ ನೀರು ಮಜ್ಜಿಗೆಯು
ಹಾಲು ಮೊಸರು ಹಸಿಮಜ್ಜಿಗೆ ಸಹವಾಗಿ
ಜಲವು ಮುಟ್ಟದ ಹಾಗೆ ಬೇರೆ ಬೇರಿರಿಸಿದೆ 7
ಗಾಯಿತ್ರಿ ಮಂತ್ರದಿಂ ತೋಯವ ಪ್ರೋಕ್ಷಿಸಿ
ಬಾಯೊಳು ಪ್ರಣವವನು ಜಪಿಸಲಾಕ್ಷಣದಿ
ರಾಯವೆಂಕಟಪತಿಯು ಆಪ್ಯಾಯನವ ಮಾಡಿ
ದಾಯವಾಗಿತ್ತನು ಭಕ್ತಜನರಿಗೆಲ್ಲ 8
ಈ ರೀತಿಯಿಂದಲೆ ಆರೋಗಿಸುವುದೆಂದು
ವಾರಿಜನಾಭನ ಸಾರಿ ವರ್ಣಿಸಲು
ಮೋರೆಯ ಪ್ರಸಾದ ಕರೆದು ಇವನು ನಮ್ಮ
ವರಾಹತಿಮ್ಮಪ್ಪನೊಂದುಗೂಡಿರುವನು 9