ಸತ್ತು ಚಿತ್ತಾನಂದ ಭಕ್ತಜನಬೆಂಬಲನೆ
ಸತ್ಯಾತ್ಮ ಸರ್ವೋತ್ತಮ ಪ
ಮೃತ್ಯುಸಂಹರ ಸರ್ಗಮತ್ರ್ಯಪಾತಾಳತ್ರಯ
ಶೌರಿ ಅ.ಪ
ಬದ್ಧಕುಲಹರಣ ಗೋವರ್ಧನೋದ್ಧಾರ ಕ್ಷೀ
ರಾಬ್ಧಿ ಕನ್ನಿಕಾರಮಣ
ಬದ್ಧಸಂಸಾರದೊಳಗೆ ಬಿದ್ದು ಬಳಲುವ ಎನ್ನ
ನುದ್ಧರಿಸು ದಯಭೂಷಣ
ಬಿದ್ದೆ ನಿಮ್ಮಯಪದಕೆ ಮಧ್ವಮುನಿಪ್ರಿಯನೆ ಪರಿ
ಶುದ್ಧನೆಂದೆನಿಸೆನ್ನ
ಶುದ್ಧಪದ್ಧತಿಗಳನು ತಿದ್ದು ಎನ್ನೊಳಗಿದ್ದು
ಶುದ್ಧಚೈತನ್ಯರೂಪ ಭೂಪ 1
ಕಪಟಬುದ್ಧಿಯ ಕಳೆದು ಅಪರೂಪ ನಿಜಜ್ಞಾನ
ಕೃಪೆಮಾಡು ಭಕ್ತಲೋಲ
ಅಪರೋಕ್ಷಮತಿ ನೀಡಿ ಅಪಮೃತ್ಯು ಪರಿಹರಿಸು
ಅಪರಿಮಿತ ಮಹಿಮ ಜಾಲ
ಸುಫಲದಾಯಕ ನಿಮ್ಮ ಜಪವೆನ್ನ ಜಿಹ್ವೆಯೊಳು
ಸ್ಥಾಪಿಸೈ ಭಜಕಜನಪಾಲ
ಕಪಿವರದ ವನಮಾಲ ಕಪಟಗಳಕುಲಕಾಲ
ಕೃಪಾದೃಷ್ಟಿನೀಡೆನ್ನೊಳು ಕೇಳು 2
ಭ್ರಷ್ಟನು ಇವನೆಂದು ಬಿಟ್ಟಿ ಬೇಸರ ಬೇಡ
ಮುಟ್ಟಿಭಜಿಪೆ ತವಪಾದವ
ಎಷ್ಟು ತಪ್ಪಿರ್ದರು ಸುಟ್ಟು ಸಫಲೆನಿಸೆನ್ನ
ಕೆಟ್ಟ ಬವಣೆ ಕಳಿಯಭವ
ಹುಟ್ಟಿ ಸಾಯುವ ಮಹಕೆಟ್ಟ ಕಷ್ಟದ ಹಾದಿ
ಕಟ್ಟುಮಾಡು ಹೇ ಮಾಧವ
ದಿಟ್ಟ ಶ್ರೀರಾಮ ಎನ್ನ ಇಷ್ಟದೇವರು ನೀನೆ
ಶಿಷ್ಟ ಸಜ್ಜನರ ಪ್ರೇಮಿ ಸ್ವಾಮಿ 3