ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಲಜನಾಭನ ಪೂಜೆ ಅತಿ ಸುಲಭವು ಪ ಚಲಿಸಿದ ಮನವನ್ನು ಪೊಂದಿರುವ ಸುಜನರಿಗೆ ಅ.ಪ ತಾಳ ಕೇಳುವನಲ್ಲ ಮೇಳ ಕೇಳುವನಲ್ಲ ಬಾಳೆ ಮಾವುಗಳ ವೈಭವವ ಕೇಳುವನಲ್ಲ ಸೂಳೆಯಂದದಿ ಬಹಳ ನಟನೆಗಳು ಬೇಕಿಲ್ಲ ಬಾಲಕೃಷ್ಣನಲಿ ದೃಢಭಕುತಿಯುಳ್ಳವಗೆ 1 ನವರತ್ನ ಮಂಟಪದ ಝವೆಯ ಬಯಸುವನಲ್ಲ ಹವಳಗಳ ಸರದ ವೈಭವವು ಬೇಕಿಲ್ಲ ಧವಳ ಮುಕ್ತಾಹಾರಗಳ ಬಯಸುವನಲ್ಲ ಭುವನ ಭೂಷಣನೊಳತಿ ಭಕುತಿಯುಳ್ಳವಗೆ 2 ಹೊನ್ನಿನಾಭರಣಗಳನ್ನು ಬಯಸನು ವಿವಿಧ ಅನ್ನಗಳ ರುಚಿಗೆ ಲೋಭವ ಪೊಂದನು ಅನ್ನಾದಿಮಯ ಹರಿಯು ತನ್ನಲ್ಲಿ ತುಳಸೀದಳ ವನ್ನು ಭಕುತಿಯೊಳಿಡೆ ಪ್ರಸನ್ನನಾಗುವನು 3
--------------
ವಿದ್ಯಾಪ್ರಸನ್ನತೀರ್ಥರು