ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲನಾಭ ನಿಮ್ಮ ಪಾದಕಮಲ ನಂಬಿ ಭಜಿಪೆ ಶ್ರೀ ಮಾಧವ ಪ ಪಕ್ಷಿಗಮನ ನಿಮ್ಮ ನಿರ್ಮಲಕ್ಷಯನಾಮ ಎನ್ನ ಜಿಹ್ವೆಗೆ ಲಕ್ಷ್ಯದಿತ್ತು ಪಿಡಿದು ಬಿಡದೆ ರಕ್ಷಿಸ್ಯಾದವ 1 ಮಂದಭಾಗ್ಯ ನಾನು ನಿಮ್ಮ ಬಂಧುರಂಘ್ರಿಕುಸುಮ ಮರೆ ಬಂದು ಬಿದ್ದೆ ದಯದಿ ಕಾಯೋ ಮಂದರೋದ್ಧಾರ 2 ಅರಿಯದೆ ನಾ ಮಾಡಿದಂಥ ಪರಮದುರಿತ ತರಿದು ತವ ಚರಣಸೇವೆ ನೀಡಿ ಪೊರೆಯೈ ಉರಗಶಯನ 3 ನಾನಾ ಬೇನೆಯೊಳಗೆ ಬಿದ್ದು ಹಾನಿಯಾಗಿ ಬಳಲುವಂಥ ಹೀನ ಬವಣೆ ತಪ್ಪಿಸಿನ್ನು ದಾನವಾಂತಕ 4 ಕ್ಷಣಕೆಕ್ಷಣಕೆ ಮಾನವರಿಗೆ ಮಣಿದು ಬೇಡಿ ಜೀವಿಸುವ ಬಿನಗುಕೃತಿ ಗೆಲಿಸು ದಯದಿ ದೀನಮಂದಾರ 5 ಜನಿಸಿದಂದಿನಿಂದ ನಾನು ಘನ ತಾಪತ್ರಯದಿ ನೊಂದೆ ಮನಕೆ ತಂದು ರಕ್ಷಿಸಿನ್ನು ಜನಕಜಾವರ 6 ಬುದ್ಧಿಯಿಲ್ಲದೆ ಕೆಟ್ಟೆನಭವ ಬಧ್ಧಜನರ ಸಂಗದಿ ಬಿದ್ದು ಶುದ್ಧಮತಿಯ ನೀಡಿ ಸಲಹು ಪದ್ಮನಾಭನೆ 7 ವಿಶ್ವ ವಿಶ್ವಾಕಾರ ನಿಮ್ಮ ವಿಶ್ವಾಸೆನಗೆ ಕೃಪೆಯ ಮಾಡಿ ನಶ್ವರೆನಿಪ ಮತಿಯ ಬಿಡಿಸು ವಿಶ್ವರಕ್ಷನೆ 8 ನೀನೆ ಗತಿಯು ಎನಗೆ ದೇವ ನಾನಾದೈವವರಿಯೆ ಸತ್ಯ ಜ್ಞಾನಪಾಲಿಸೊಳಿದು ಬೇಗ ಜ್ಞಾನಸಾಗರ 9 ಕೆಟ್ಟ ಹೊಟ್ಟೆ ಕಷ್ಟಕಡಿದು ದುಷ್ಟ ಭ್ರಷ್ಟ ಸಂಗ ತರಿದು ಶಿಷ್ಟ ಸಂಗ ದೊರಕಿಸೆನಗೆ ಸೃಷ್ಟಿಕರ್ತನೆ 10 ಸುಜನ ಸಹ ವಾಸದಿರಿಸನುಮೇಷ ಎನ್ನ ವಾಸುದೇವನೆ 11 ಹೀನ ಹೀನ ಜಗ ಅಭಿಮಾನ ತೊಲಗಿಸಧಿಕ ನಿಮ್ಮ ಧ್ಯಾನಾನಂದ ಕರುಣಿಸಯ್ಯ ಜನಾರ್ದನ12 ಭಾರವೆನಿಪ ವಿಷಮಸಂಸಾರ ಸುಲಭದಿಂದ ಗೆಲಿಸು ಘೋರ ಭವದ ತಾಪಹರ ನಾರಾಯಣ 13 ದೇಶದೇಶಂಗಳನು ತಿರುಗಿ ಅಸಂಬದ್ಧನಾದೆ ಸ್ವಾಮಿ ದೋಷ ಮನ್ನಿಸಯ್ಯ ಎನ್ನ ಈಶಕೇಶವ 14 ಸಂಚಿತಿಂದೀಗಳಿ( ಯಿ)ಸೆನ್ನ ಮುಂಚಿತಾಗಮ ಗೆಲಿಸು ಜೀಯ ಸಂಚಿತಾಗಮ ರಹಿತ ವಿರಂಚಿತಾತನೆ 15 ಚಾರುವೇದ ಪೊಗಳುವಂಥ ತೋರಿಸಯ್ಯ ನಿನ್ನ ಮೂರ್ತಿ ಮೂರು ಲೋಕ ಸಾರ್ವಭೌಮ ನಾರಸಿಂಹ 16 ಮದನನಯ್ಯ ಮುದದಿ ಬೇಡ್ವೆ ಸದಮಲ ಸಂಪದವ ನೀಡು ಸದಮಲಾಂಗ ಸರ್ವಾಧಾರ ಮಧುಸೂದನ 17 ಸಕಲ ವಿಘ್ನದೂರ ಮಾಡಿ ಮುಕುತಿಪಥಕೆ ಹಚ್ಚು ತ್ವರಿತ ಭಕುತರಿಷ್ಟ ಪೂರ್ಣ ಆದಿಲಕುಮಿನಾಯಕ 18 ದರ್ಜುಮಾಡಿಸೆನ್ನ ನಿಮ್ಮ ಮರ್ಜಿಪಡೆದ ಭಕ್ತರೊಳಗೆ ದುರ್ಜನಾಗಿ ದಯಾರ್ಣವ ನಿರ್ಜರೇಶನೆ 19 ಪೋಷಿಸೆನ್ನನುಮೇಷ ನಿಮ್ಮ ದಾಸನೆನಿಸಿ ವಸುಧೆಯೊಳು ಆಸೆಯಿಂದ ಬೇಡಿಕೊಂಬೆ ಕ್ಲೇಶನಾಶನೆ 20 ನಿರುತ ಮನದಿ ಹರಿಯ ನಾಮ ಬರೆದು ಓದಿ ಕೇಳುವರಿಗೆ ಪರಮ ಮುಕ್ತಿ ಕೊಡುವ ಮಮ ವರದ ಶ್ರೀರಾಮ 21
--------------
ರಾಮದಾಸರು
ವಂದಿಪೆವು ತವಪಾದಪಂಕಜಕೆ ಶ್ರೀ ರಾಘವೇಂದ್ರ | ಇಂದು ಬಿನ್ನೈಸುವೆವು ನಿನ್ನಡಿಗೆ ಪ ಇಂದು ದಿನವಂಭತ್ತು ವದ್ಯದಿ | ವೆಂದು ತೋರುವ ಸುದಿನವೆಮಗೆಅ.ಪ ಕಾಲವನು ಬಣ್ಣಿಸಲು ಭಯವಹುದು | ಏನೆಂದು ಪೇಳಲಿ | ನಾಲಿಗೆಯು ಒಣಗುತ್ತಲಿಹುದು | ಮೇಲೆನಿಪ ಶಾಲ್ಯಾನ್ನವೀದಿನ | ಸಾಲದಾಯಿತು ಹಸಿವುತಾಳದೆ | ಕಾಲಪುರಕೈದುವೆವು ಗುರುವೇ 1 ಹಿಂದೆ ತಂಜಾಊರಿನಲಿ ಕ್ಷಾಮ | ವಂಜಿಸಲು ನಿನಬಳಿ | ಬಂದ ರಾಜನ ಮೊರೆಯ ಕೇಳುತಲಿ | “ಶ್ರೀ” ಬೀಜಮಂತ್ರವ ರಚಿಸಿ ಭಕುತರ | ದನ್ನ ವುಣಿಸಿದೆ ಜನಕೆ ಗುರುವೇ 2 ಧರ್ಮಮಾರ್ಗವೆ ಕಾಣದಂತಾಯ್ತು | ಎಲ್ಲೆಲ್ಲಿ ನೋಡಲ | ಧರ್ಮಕೃತಿಗಳೆ ಕಂಡುಬರುತಿಹವು | ಇಂದು ನಿರ್ಮಲಾತ್ಮಕ ನಿನ್ನ ಬಳಿಯಲಿ ಧರ್ಮಭಿಕ್ಷವ ಬೇಡುತಿಹರೈ3 ಅಖಿಲ ಸಜ್ಜನ ನಿಚಯ ಸಹಿತಾಗಿ ನೀನಿಲ್ಲೆ ನೆಲೆಸು | ಭಕುತರಿಷ್ಟಾರ್ಥವನು ನೀಡುತಲಿ | ಲಕುಮಿಯರಸನ ದಯದಿ ಶರಣರ | ಮುಕುತರಾಗುವ ತೆರದಿ ಹರಸೈ4 ದೇಶದೊಳು ಮಳೆಬೆಳೆಯು ಹುಲುಸಾಗಿ ಸೂಸಿಸಲಿನ್ನು | ದೇಶದೊಳು ಸುಖಶಾಂತಿ ಸ್ಥಾಪಿಸಲಿ | ಶ್ರೀಶಕೇಶವನಲ್ಲಿ ಭಕುತಿಯ | ಲೇಸೆನಿಪ ಧರ್ಮಾರ್ಥ ಮಾರ್ಗದಿ | ದಾಶೆಯಲಿ ಬಿನ್ನಹ ಗುರುವೇ 5
--------------
ಶ್ರೀಶ ಕೇಶವದಾಸರು
ಸಿರಿ ಚರಣದಲ- ಪಾರ ಭಕುತಿಯನೀಯೋ ತವ ಸೇವಕನೆನಿಸಿ ಕೀರುತಿಯನು ಪಡೆಯೋ ಭವಕ್ಲೇಶ ಕಳೆಯೊ ಪ ಸೂರಿ ಸುಬ್ಬಣಾಚಾರ್ಯಕರಸ- ರೋರು ಹಗಲಲಿ ಪೂಜೆಗೊಳುತಲಿ ಚಾರುತರ ಶ್ರೀ ಜಯಮಂಗಳಿಯ ತೀರದೊಳಿರುವ ವೀರ ಮಾರುತಿ ಅ.ಪ. ಪ್ರತಿ ವರುಷ ಮಾಘಸಿತ | ನವಮಿ ದಿನದೊಳು ನೀ- ನತಿವಿಭವದೊಳು ನಗುತ | ಭಕುತರಿಷ್ಟವ ಸಲಿಸೆ ರಥದೊಳಗೆ ಕುಳ್ಳಿರುತ | ವಿಧ ವಿಧ ವಾದ್ಯಗಳ ತತಿಯನಾಲೈಸುತ | ಅತಿ ಮೋದಬಡುತ ಪರಿ ಸಂ- ಸ್ತುತಿಸೆ ಹಿಗ್ಗುತಲವರ ಸ್ವಮನೋ- ರಥಗಳ ನೀ ಸಲಿಸುವೆನೆನುತಲಿ ಅತುಳ ವಿಕ್ರಮದಭಯ ಹಸ್ತದಿ ಕೃತಿರಮಣ ಸಿರಿವರ ಹರಿಯನನು ಮತವ ಪಡೆಯುತ ರಥವ ನಡೆಸಿ ಚತುರ ದಿಕ್ಕಲಿ ಬಿಜಯ ಮಾಡುತ ಸತತ ಹರುಷವಗರೆವ ದೇವ 1 ರಕ್ಕಸಕುಲ ತಮ ಭಾನು | ತಾಮಸರ ಧ್ಯಾನಕೆ ಸಿಕ್ಕುವನಲ್ಲ ನೀನು | ಸುಜನರ ಹೃದಯದೊಳು ಅರ್ಕನೊಲು ಪೊಳೆವನು | ಹರಿಸಿರಿಗಾಳುಳಿದು ಬಕ್ಕ ದಿವಿಜರಿಗಿನ್ನು | ಗುರುಬಲ್ಲೆ ನಾನು ಚಿಕ್ಕ ರೂಪವಗೊಂಡು ಲಂಕೆಯ ಪೊಕ್ಕು ರಾಮನ ಸತಿಯ ಕಂಡು ತುಕ್ಕಿ ವನವನು ಸೂರೆ ಮಾಡಿ ಉಕ್ಕಿನ ಧ್ವಜಸ್ತಂಭದಿಂದ ಸೊಕ್ಕಿ ಬಂದ ದನುಜವ್ರಾತವ ಕುಕ್ಕಿ ಕೆಡಹಿ ಪುರವನುರಹಿ ಅಕ್ಕರದ ಮಣಿಸಹಿತ ಬಂದು ಪಕ್ಕಿದೇರನಿಗೆರಗಿ ನಿಂದೆ 2 ತುತಿಸ ಬಲ್ಲೆನೆ ನಾನು | ನಿನ್ನಯ ಸುಗುಣಗಳ ತತಿಗಳೆಲ್ಲವನು | ತ್ರಿಪುರ ಸುಂದರಿ ಪಾ- ರ್ವತಿ ಪತಿಯ ಪಡೆದವನು | ರಂಗೇಶವಿಠಲಗೆ ಅತಿಪ್ರೀತಿಸುತ ನೀನು | ನಿಷ್ಕಾಮಯುತನು ಪತಿತರನುದ್ಧರಿಸಲು ನೀ ಸಿರಿ ಪತಿಯ ಮತದೊಳು ಹನುಮ ಭೀಮ ಯತಿಯ ರೂಪವ ತಾಳಿ ಹರುಷದಿ ಕ್ಷಿತಿಯ ಭಾರವ ಹರಸಿ ಸಲಹಿದೆ ಅತುಳ ಮಹಿಮ ನಿನ್ನಪರಿಮಿತ ಶ ಕುತಿಗೆ ನಮೊ ನಮೊ ವಾಯುತನಯನೆ ಸತತ ಮುದದೊಳು ನಿನ್ನ ಸ್ಮರಿಸುವ ಮತಿಯ ಪಾಲಿಸು ಪತಿತ ಪಾವನ 3
--------------
ರಂಗೇಶವಿಠಲದಾಸರು