ಮೊರೆ ಕೇಳು ಭಕುತಬಂಧು
ಮರೀಬೇಡ ಕರುಣಾಸಿಂಧು ಪ
ಮರೆಯಬಿದ್ದು ಸೆರಗನೊಡ್ಡಿ
ನಿರುತ ನಿಮ್ಮ ಚರಣ ಭಜಿಪೆ
ಶರಣಾಗತರ ವರಪ್ರದಾತ
ನಿರುತ ಪರಿಪಾಲಿಸಭವ 1
ಶುದ್ಧ ನಿಮ್ಮ ಭಕ್ತನೆನಿಸೊ
ಬದ್ಧನೆನಿಸಿಬೇಡ ದೇವ
ಬಿದ್ದು ಬೇಡ್ವೆ ನಿಮ್ಮ ಪದಕೆ
ತಿದ್ದಿಕಾಯೋ ಎನ್ನ ತಪ್ಪ 2
ತರಳನ್ಹೊರೆದಿ ಭರದಿ ಬಂದು
ನರನ ಕಾಯ್ದಿ ಧುರದಿ ನಿಂದು
ಪರಮಸಿದ್ಧಿ ನೀಡು ಈಗ
ಚರಣದಾಸಗೆ ವರ ಶ್ರೀರಾಮ 3