ತೆರಳಿದರು ವಿಜಯರಾಯರು ವಿಜಯ ವಿಠಲನ
ಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ಪ
ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕ
ರವು ಗುರುವಾರ ಪ್ರಥಮ ಯಾಮದೀ
ಪವನಾಂತರಾತ್ಮಕ ಶ್ರೀ ಹರಿಯ ದರ್ಶನೋ
ತ್ಸವ ಸಂಪಾದಿಸುವ ಬಹು ಲವಲವಿಕೆಯಿಂದ 1
ಧರಣಿಯೊಳು ಬಾಸ್ಕರ ಕ್ಷೇತ್ರವೆನಿಸುವ ಚಿಪ್ಪ
ಗಿರಿಯೆಂಬ ಗ್ರಾಮದಿ ವಿಬುಧರ ಮುಖದಿ
ಭಾಗವತ ಬ್ರಹ್ಮಸೂತ್ರ ಭಾರತ ಗೀತ
ಮರುತ ಶಾಸ್ತ್ರಾರ್ಥ ಗ್ರಂಥಗಳನಾಲಿಸುತಲಿ 2
ಸುಖತೀರ್ಥ ಮುನಿಯ ಮನಕನುಕೂಲ ಸಚ್ಛಾಸ್ತ್ರ
ನಿಕರಗಳ ಕವನ ರೂಪದಲ್ಲಿ ರಚಿಸಿ
ಭಕತರಿಗೆ ಸನ್ಮಾರ್ಗ ತೋರಿ ಸಂತೋಷದಲಿ
ವಿಖನಸಾರ್ಚಿತ ಜಗನ್ನಾಥ ವಿಠಲನ ಪದಕೆ 3