ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೇಷಪ್ರಭುಗಳ ರಚನೆಗಳು ಪಾಲಿಸು ಶ್ರೀಹರಿಯೇ | ಸದ್ಗುಣ | ಶೀಲ ಭಾಗ್ಯನಿಧಿಯೇ | ಶ್ರೀಲಲಾಮ ಶೇಷಾಚಲಾಧೀಶ ಶ್ರೀಲೋಲ ಬಾಲಭಾಸ್ಕರ ಸಂಕಾಶನೆ ಪ ಕಂಡವರಿಗೆರಗಿ ದೈನ್ಯವ | ಗೊಂಡೆ ಖಿನ್ನನಾಗಿ ಭಂಡನಾಗಿ ಬಳಲಿಸಿ ಬಹು ಕಾಯವ ದಂಡಿಸಿದೆನು ರಕ್ಷಿಸೋ ಶ್ರೀಹರಿಯೇ 1 ಯಾರಿಗೆ ದೂರುವೆನು ಭಕ್ತೋ | ದ್ಧಾರನಲ್ಲವೆ ನೀನು | ಘೋರದುರಿತ ದಾರಿದ್ರ್ಯದ ವ್ಯಥೆಯ ಇ- ನ್ಯಾರಿಗೊರೆವೆ ಅದನ್ಯಾರು ಕಾವರೈ 2 ಏನಪರಾಧವ | ಗೈದೆ ನಾ -ನೇನು ಪಾಪಾತುಮನೋ | ಈಸಪರಾಧವನೆಣಿಸದೆ | ಎನ್ನಯ | ಕ್ಲೇಶವ ಪರಿಹರಿಸೋ ದಯಾನಿಧೇ 3 ಪರ ಪುರುಷೋತ್ತಮ | ಪರಂಜ್ಯೋತಿ ಪರಬ್ರಹ್ಮಸ್ವರೂಪನೆ 4 ಗಮನ ಮಾಧವ ಕರುಣಾ-| ಪಾಂಗರಂಗ ಮಂಗಲಾಂಗ ರಕ್ಷಿಸು 5
--------------
ಅನ್ಯದಾಸರು
(ಬಾಗಿಲು ತಡೆ) ಸಾರಸ ನಿಲಯೆ ಸಾಗರ ತನಯೆ ಸಾರೆ ಬಂದೆನು ಈಗ ಬೇಗ ಸಾರಿ ಬಾಗಿಲ ತೆಗೆ ಬೇಗ ಪ. ಸಾರು ಸಾರೆಲೊ ಸಾರಿಕೂಗುವನಾರೊ ಸಾರು ಬಾಗಿಲ ತೆಗೆ ನಾನು ಅ.ಪ. ಏಕಿಂತು ಕೋಪವೆ ಕೋಕಿಲಾರವೆ ನೀಂ ಕಟಾಕ್ಷಿಸು ಎನ್ನ ಮುನ ಸಾಕುಮಾಡುವುದಿದೆನ್ನ 1 ಸಾಕು ಸಾಕಿಂತು ಏಕೆ ಕೂಗುತಿರ್ಪೆ ಕಾಕು ನುಡಿಗಳುಸಲ್ಲ 2 ಪುಂಡರ ತಡೆವುದ ಕಂಡುಂಟು ಜಗದೊಳು ಗಂಡನ ತಡೆವರೆ ಭಾಮೆ ರಾಮೆ ಕಂಡವರೇನೆಂಬರೆ ಭಾಮೆ 3 ಗಂಡನಾರಿಗೆ ಹೆಂಡತಿಯಾರಿಗೆ ಪುಂಡಾಟವಾಡದೆ ಪೋಗು ಸಾಗು ಭಂಡನಾಗಿರ್ಪೆ ಪೋಗು 4 ವಲ್ಲಭೆ ನಿನ್ನೆದೆ ಕಲ್ಲಾಗಿರುವುದೆ ಬಲ್ಲವಳೆಂಬುವುದೆಲ್ಲೆ 5 ಬಲ್ಲೆ ಬಲ್ಲೆನೀ ಚಲ್ಲಾಟಗಳ ಸೊಲ್ಲಿಸದಾರನ್ನು 6 ದಶರಥರಾಮನೆ ಸೀತೆ ಖ್ಯಾತೆ ಪುಸಿಯಲ್ಲವೆಲೆ ಭೀತೆ 7 ನಿಶಿಚರರಿಲ್ಲಿಹರೇನೈ ಜ್ಞಾನಿ ವಿಷಮವರ್ತನವೇನೈ 8 ಅಂಗನೆ ನಿನ್ನ ಮೋಹನಾಂಗನಾದ ಶ್ರೀ ರಂಗ ನಾನೆಲೆ ಚಪ ಲಾಕ್ಷಿ ಲಕ್ಷ್ಮಿ | ಭಂಗಿಸಬೇಡೆನ್ನ ಲಕ್ಷ್ಮಿ 9 ತುಂಗ ವಿಕ್ರಮ ರಘು ರಾಮ ಶ್ಯಾಮ ರಂಗ ಕಾರುಣ್ಯಧಾಮ 10 ಪರಿ ಪೇಳುತೆ ಕೈಪಿಡಿದಳು ತ ನ್ನೋಪನ ವಂದಿಸಿ ರಾಣಿ ರಮಣಿ ಕೋಪರಹಿತೆ ಸುವಾಣಿ 11 ಭೂಪಶೇಷಾದ್ರೀಶನು ಕಾಂತೆಯ ಕೈಪಿಡಿದನು ನಲವೇರೆ ಅರರೆ ತಾಪಸನುತ ನಲವೇರೆ 12
--------------
ನಂಜನಗೂಡು ತಿರುಮಲಾಂಬಾ
ಅಧಮನಲ್ಲವೆ ಅವನು ಅಧಮನಲ್ಲವೆ | ಯದುಪತಿಯ ಭಜಿಸಿ ಸದಾ | ಬದುಕದಿದ್ದ ನರಜನ್ಮ ಪ ಕರವ ಮುಗಿದು ಜಿಹ್ವೆಯಲ್ಲಿ | ಹರಿ ಹರಿ ಎಂದು ಸ್ಮರಣೆ ಮಾಡಿ | ಹರುಷವಾಗದಿದ್ದ ನರನು 1 ಕುಡತಿ ಜಲವ ಕೊಂಡು ರವಿಗೆ | ಕಡಿಯದಘ್ರ್ಯವೆರೆದು ಪುಣ್ಯ | ಪಡೆಯದಿದ್ದ ಹೀನ ನರನು 2 ಹಾದಿ ಹಿಡಿತು ಬರುತ ಸುಮ್ಮನಾದರನ್ನ | ಇರದೆ ವೇಣು | ನಾದ ಕೃಷ್ಣ ಕೃಷ್ಣಯೆಂದೂ | ಓದಿಕೊಳುತ ಬಾರದವನು 3 ಕಲಶ ತುಂಬಿದ ನೀರು ತಂದು ಕುಳಿತು ಘಳಿಗೆ | ಕೊಳದ ಯಿದ್ದ ಹೀನ ನರನು 4 ಪೊಡವಿಯರಸ ಕೇಶವನ್ನ | ಅಡಿಗೆ ಏರಿಸಿ ನಗುತ ತನ್ನ | ಮುಡಿಯಲಿಟ್ಟುಕೊಳದ ನರನು |5 ಸಿರಿ | ವಿಠ್ಠಲನ ಮುಂದೆ ತಂದು | ಇಟ್ಟು ಅರ್ಪಿತವೆಂದು ಸುಖ | ಬಟ್ಟು ಉಣದ ಮಂಕು ನರನು6 ಉಂಡು ತಿಂದು ತೇಗಿಕೊಳುತ | ತಂಡ ತಂಡದ ವಿಷಯದಲ್ಲಿ | ಭಂಡನಾಗಿ ನಮ್ಮ ಕೃಷ್ಣ ಭಂಡನೆಂದೂ ಅನದ ನರನು 7 ಊರು ಕೇರಿಗೆ ಪೋಗುವಾಗ | ಭಾರಪೊತ್ತು ತಿರುಗುವಾಗ | ಕಂಸಾರಿ ಎನದ ಹೀನ ನರನು 8 ಮಂತ್ರವಿಲ್ಲ ತಂತ್ರವಿಲ್ಲ | ಕಂತುಪಿತನ ಮುಂದೆ ನಿಂತು | ಸಂತರ್ಪಣೆ ಎಂದು ಮನದಿ | ಚಿಂತೆ ಮಾಡದಿದ್ದ ನರನು 9 ಮಲಗಿ ನಿದ್ರೆಗೊಳುತರೊಮ್ಮೆ | ಕಳವಳಿಸಿ ಭೀತಿಯಲಿ | ತಳಮಳವಗೊಂಡು ಹರಿಯ | ಜಲಜಪಾದ ನೆನೆಯದವನು 10 ಎಲ್ಲ ಬಿಟ್ಟು ವಿಜಯವಿಠ್ಠಲ ವೆಂಕಟನೆ ದೈವ | ಸೊಲ್ಲು ಪೇಳಿ ಬಾಳದವನು 11
--------------
ವಿಜಯದಾಸ
ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು ಈ ವರಗೆ ಪ. ಶೃಂಗಾರಪುರುಷರು ಬಹುಮಂದಿಯಿರಲುಅ.ಪ. ಮುಟ್ಟಿನೋಡಿದರೆ ಮೈಯತಿ ಕಠಿಣವು ಸೊಟ್ಟ ಮೋರೆಯು ಇವಗೆ ಎಷ್ಟುದ್ದ ಹಲ್ಲುಗಳು ಇಷ್ಟು ಘೋರಮುಖದಳಿಯನೆಲ್ಲ್ಲಿ ದೊರಕಿದನೊ 1 ಬಡವನು ಭಿಕ್ಷುಕನು ಬಡಬನಂದದಿ ಕೋಪವು ನೋಡಿದರೆ ತಲೆ ಜಟಿಯು ಕಟ್ಟಿಹುದು ಜಾರ ಚೋರನಿಗೆ ನೋಡಿ ನೋಡಿ ಹೆಣ್ಣ ಹ್ಯಾಂಗೆ ಕೊಟ್ಟನು 2 ಭಂಡನಾಗಿರುವನು ಕಂಡವರೊಡನೆ ಕಾಳಗವ ಕೊಂಡುಬಹ ಬಲು ಉದ್ದಂಡನಿವನು ಅಂಡಜವಾಹನಗೆ ಯೋಗ್ಯವಾದ ಹೆಣ್ಣ ಕಂಡುಕಂಡೀ ಹಯವದನಗೆ ಕೊಟ್ಟನ್ಹ್ಯಾಗೆ 3
--------------
ವಾದಿರಾಜ