ಲೋಕನೀತಿ
1
ಕಾಮಧೇನು ಕಲ್ಪತರು ಕಾಮಿತಾರ್ಥವನೀವ ಹರಿಯೇ ಎನಗಿರೆ
ಎನಗ್ಯಾತಕೆ ಚಿಂತೆ
ಕಾಮಿತಾರ್ಥವನೀವ ದೊರೆಯಿರಲು ಯನಗ್ಯಾತರ ಕೊರೆತೆ
ಹರಿಕಾವದೇವ ನೀನಿರಲು
ಕೋಳಿ ತನ್ನ ಮರಿಗೆ ಹಾಲುಕೊಟ್ಟು ಸಾಕುವದೆ
ಕಾಳ ರಾತ್ರಿಯು ಕಳೆದು ಹರಿ ಉದಿಸುವನೆಂದು
ಕೋಳಿಕೂಗಿದರೂ ಏಳದೆ ಮಲಗಿ ಕಾಲಕಳೆವರು ಮನುಜರುಹರಿಯೆ
ಕಾಲಕೂಟ ಸಮ ಕಾಮಿತಾರ್ಥವ ಬೇಡುವರು
ಕಾಲದೂತರು ಬರುವ ವ್ಯಾಳೆತನಕ ನಿನಧ್ಯಾನಿಸದೆ
ಕಾಲಕಳೆವರು ಮನುಜರು ಕಾಲಮೂರುತಿ ನೀನೆ ಎಂದರಿಯರು ಹರಿ
ಕಾಲ ಅಕಾಲ ನಿನಗುಂಟೆ ಎನಗುಂಟೆ ದೇವ ನೀ ಎನಗೆ ಇಂಥಾ
ಕೀಳು ಬುದ್ಧಿಯ ಕೊಡದಿರೊ, ಏಳು ಬೆಟ್ಟದ ಒಡೆಯ ಶ್ರೀ ಶ್ರೀನಿವಾಸ
2
ಬೆಳಗೆದ್ದು ಹರಿ ನಿನ್ನ ಧ್ಯಾನಿಸದೆ ಪರಧ್ಯಾನ ಪರನಿಂದೆಯಲ್ಲಿಹರು
ನಿತ್ಯ ನಿನ್ನ
ಧ್ಯಾನ ಬಿಟ್ಟು ಬೆಳಗಾಗೆ ನಿನ್ನ ಸೂರ್ಯರಶ್ಮಿ ಬಿದ್ದರೂ
ಏಳರು ಶಯನ ಬಿಟ್ಟು ಈ ಜಗದಿ
ದೇವ ಈ ಕಲಿ ಜನರು ಇಂಥಾ ಬೆಳಗ ಎನಗೀಯದೆ
ನೀ ಎನ್ನೊಳಗಿದ್ದು ಬೆಳಗಿನ ಜಾವದಿ ನಿನ್ನ ಕಳೆಕಳೆರೂಪ
ಎನಗೆ ತೋರೋ ಘಳಿರನೆ ಶ್ರೀ ಶ್ರೀನಿವಾಸ
3
ಎರಡನೆ ಜಾವದಲಿ ಹುಂಜ ಹರಿಪೂರ್ವದಲಿ ಬರುವ
ಏಳಿರೆಂದು ಕೂಗಲು
ಸತಿ ಸಹಿತ ಕಾಮಕೇಳಿಯಲಿಹರು
ಮೂರನೆ ಝಾವದಲಿ ಹರಿ ಉದಿಸಿ ಬ್ರಾಹ್ಮೀಮುಹೂರ್ತದೊಳು
ಹರಿ ಬೆಳಕೀವ ಲೋಕಕೆ ಎಂದು ಕೂಗುವುದು ಕೋಳಿ
ಕೇಳಿ ಕರ್ಣದಲಿ ಶಯನ ಬಿಟ್ಟೇಳರೊ ಈ ಜಗದಿ
ಮೂರೆರಡು ಶತಶ್ವಾಸ ಜಪ ಮಾಡಿಸುವ ಹರಿಭಕ್ತ
ಹನುಮನೆಂದರಿಯದೆ ಮಲಗಿ
ಕಾಲ ಎರಗಿ ಬರುವುದು ಆಯುಷ್ಯವೆಂದರಿಯದೆ
ಭಾರತೀಪತಿ ಅಂತರ್ಯಾಮಿ ನಿನ್ನಧ್ಯಾನಿಸದೆ ಇಹರಲ್ಲೋ ಈ ಜಗದಿ
ಶ್ರೀ ಶ್ರೀನಿವಾಸ ಎನ್ನ ನೀನವರ ಸಂಗ ಸೇರಿಸದೆ ಕಾಯೊ
ಹರಿಯೆ ಎನ್ನ ದೊರೆಯೆ
4
ಸೂರ್ಯನಂತರ್ಯಾಮಿ ನೀನಲದೆ ಮತ್ಯಾರಿಹರು ಹರಿ
ಸೂರ್ಯಾಂತರ್ಗತ ಸೂರ್ಯನಾರಾಯಣ ಸೂರ್ಯಕೋಟಿ
ತೇಜದಿ ಮೆರೆವೆ
ಸೂರ್ಯ ಸಹಸ್ರ ಉದಿಸಿದಂತೆ ಬರುವೆ
ಕರ್ಮ ನೀ ಮಾಡಿಸಿ
ಪೆರ್ಮೆಯಿಂದವರ ಕಾಯ್ವ ಶರ್ವಾದಿವಂದಿತ ಗರ್ವರಹಿತ
ವೈಕುಂಠಪತಿ ನೀ ನಿನ್ನವರ ಕಾಯಲು ಸರ್ವದಾ ಅವರಿಗೆ
ವಲಿದು ಕಾವೆ ಆದಿನಾರಾಯಣ ಶ್ರೀ ಶ್ರೀನಿವಾಸ ಕಾಯೆನ್ನ
ಸೂರ್ಯಾಂತರ್ಗತ ವೆಂಕಟೇಶಾ
5
ಹಗಲಿರುಳು ಎನ್ನದೆ ನಿನ್ನ ಸ್ತುತಿಪರು ಭಕ್ತರು
ಅಘಹರನೆ ನಿನ್ನ ಪ್ರೇರಣೆಯಿಂದಲವರಿರಲು
ಬಗೆಬಗೆಯ ರೂಪದಿ ಬಂದವರ ಸಲಹುವೆ
ನಗೆ ಮೊಗದ ಶ್ರೀ ರಮೆಯರಸ ಲಕ್ಷ್ಮೀಶ
ನಿನ್ನ ಬಗೆ ಅರಿತಿಹರಾರಿರೀಜಗದಿ
ಪಗಲಿರುಳೆನ್ನದೆ ನೀನವರಲ್ಲಿದ್ದು ಸಲಹಲು
ಬಗೆವರೆ ಅನ್ಯರಿಗೆ ಅಲ್ಪರಿವರೆ ನಿನ್ನವರು
ಜಗದಾಖ್ಯ ವೃಕ್ಷನೀನಿರಲು ನಿನ್ನ ಭಕ್ತರು ನಿನಗಲ್ಲದೆ
ಜಗದೊಡೆಯ ಶ್ರೀ ಶ್ರೀನಿವಾಸ