ನೀನೆನನ್ಹುಟ್ಟಿಸಿದ್ಯೋ ನಾನೆ ನಿನ್ನ್ಹುಟ್ಟಿಸಿದೆನೋ
ಜಾನಕೀಶ ನೀನೆನಗೆ ಸಿಟ್ಟಾಗದ್ಹೇಳೈ ಪ
ತಂದೆ ಮಗನ್ನ್ಹೆತ್ತನೋ ಮಗ ತಂದೆನ್ಹೆತ್ತನೋ
ತಂದೆ ಮಗನ್ನೀರ್ವರನು ತಾಯಿ ಹೆತ್ತಳೇನೋ
ತಂದೆತಾಯಿಮಗತ್ರಯರು ಬಿಂದಿನಲುದ್ಭವಿಸಿದರೆ
ಅಂದಮಾದ ಸಂಧಿದನು ಚೆನ್ನಾಗಿ ಬಿಡಿಸೈ 1
ಬೀಜದಿಂದ್ವøಕ್ಷಾಯ್ತೋ ವೃಕ್ಷದಲಿ ಬೀಜಾಯ್ತೋ
ಬೀಜವ್ಯಕ್ಷಗಳೆರಡು ಹಣ್ಣಿನೋಳ್ಹುಟ್ಟಿದವೇ
ಬೀಜವೃಕ್ಷ್ಹಣ್ಣುಮೂರು ಭೂಮಿಯೋಳ್ಹುಟ್ಟಿದವೇ
ಸೋಜಿಗದ ಸಂಧಿದನು ನೈಜದಿಂ ಬಿಡಿಸೈ 2
ಜೀವದಿಂ ಮಾಯವೋ ಮಾಯದಿಂ ಜೀವವೋ
ಜೀವಮಾಯಗಳೆರೆಡು ಭಾವದ್ಹುಟ್ಟಿಹ್ಯವೋ
ಜೀವ ಮಾಯ ಮೂರು ಕಾಯದಲಿ ಜನಿಸಿದವೋ
ನ್ಯಾಯದ ಸಂಧಿದನು ದಿವ್ಯವಾಗಿ ಬಿಡಿಸೈ 3
ಉತ್ಪತ್ತಿಯಿಂ ಲಯವೋ ಲಯದಿಂದ ಉತ್ಪತ್ತ್ಯೋ
ಉತ್ಪತ್ತಿಲಯವೆರಡು ಸ್ಥಿತಿಯಿಂ ತೋರುವವೋ
ಉತ್ಪತ್ತಿಲಯಸ್ಥಿತಿ ತತ್ವದೊಳು ಜನಿಸಿಹ್ಯವೋ
ಗುಪ್ತದ ಸಂಧಿದನು ನಿರ್ತಾಗಿ ಬಿಡಿಸೈ 4
ವೇದದಿಂ ಸಾಧನವೋ ಸಾಧನದಿಂ ವೇದವೋ
ವೇದಸಾಧನವೆರಡು ನಾದದ್ಹುಟ್ಟಿಹ್ಯವೋ
ವೇದಸಾಧನ ನಾದಶೋಧದಿಂ ಜನಿಸಿಹ್ಯವೋ
ಮೋದದ ಸಂಧಿದನು ಬೋಧದಿಂ ಬಿಡಿಸೈ 5
ಪಿಂಡಾಂಡದಿಂ ಬ್ರಹ್ಮಾಂಡೋ ಬ್ರಹ್ಮಾಂಡದಿಂ ಪಿಂಡಾಂಡೋ
ಪಿಂಡಾಂಡಬ್ರಹ್ಮಾಂಡೆರಡು ಖಂಡನಿಂದ್ಹುಟ್ಟಿಹ್ಯವೋ
ಪಿಂಡಾಂಡಬ್ರಹ್ಮಾಂಡ ಖಂಡನ್ಯೋಗಿಯಲಿ ಜನಸಿಹ್ಯವೊ
ಗಂಡಾಂತರದ ಸಂಧಿದನು ಖಂಡಿತದಿಂ ಬಿಡಿಸೈ 6
ಕಾಮದಿಂ ನೇಮವೋ ನೇಮದಿಂ ಕಾಮವೋ
ಕಾಮನೇಮಗಳೆರಡು ನಿತ್ಯದ್ಹುಟ್ಟಿಹ್ಯವೋ
ನಿತ್ಯ ಶ್ರೀರಾಮ ನಿನ್ನಾಟವೋ
ಈ ಮಹಸಂಧ್ಯೆನಗೆ ಪ್ರೇಮದಿಂ ಬಿಡಿಸೈ 7