ನಿಖಿಲಾತ್ಮ ನಿಖಿಲಾತ್ಮ ಅಖಿಲಬ್ರಹ್ಮಾಂಡಪತಿ
ಸಲಹು ಸರ್ವೋತ್ತಮ ಪ
ಮಂದರಧರ ಎನ್ನ ಮಂದಮತ್ಯಳಿದಾ
ನಂದ ಮತಿಯಿತ್ತು ಚೆಂದದಿಂ ರಕ್ಷಿಸು 1
ನಿತ್ಯನಿರುಪಮ ಸತ್ತು ಚಿತ್ತ ನಿಮ್ಮ
ಭಕ್ತಿ ಭಜನೆ ಎನ್ನ ಚಿತ್ತಕ್ಕೆ ದಯಮಾಡು 2
ಬಗೆದು ಎನ್ನಂತರಂಗzಗಲದೆ ನಿಂತು ನಿಜ
ಸುಗುಣವಿತ್ತು ಪೊರೆ ಸುಗುಣಾಂಬುಧಿ 3
ಕಾಮಿತಜನಕಲ್ಪ ಕಾಮಧೇನು ಎನ್ನ
ಕಾಮ ಪೂರೈಸಿ ನಿನ್ನ ನಾಮವಿತ್ತು ಕಾಯೊ 4
ಭಕ್ತಿದಾಯಕ ನಿನ್ನ ಭಕ್ತಿಯಿಂ ಭಜಿಸುವೆ
ಸತ್ಯ ಶ್ರೀರಾಮ ನಿತ್ಯಮುಕ್ತಿಯಿತ್ತು ಪೊರೆ 5