ಗೋಪಿ ಚಂದನದಿಂದ ಎ
ನ್ನೊಡೆಯ ಮಧ್ವಾರ್ಯ ಹೃದಯವಾಸಾ ಕೃಷ್ಣ ಪ.
ಮೃಡಸಖ ನಿನ್ನಯ ರೂಹವ ತೋರೆ
ಕಡಲಿಂದೊಡನೆ ಬಂದೆ ಆನಂದತೀರ್ಥರ ಮುಂದೆ ನಿಂದೆ ಅ.ಪ.
ಗೆಜ್ಜೆ ಕಾಲ್ ಕಡಗ ಸಜ್ಜಿನಿಂದಿಟ್ಟು
ಮಜ್ಜಿಗೆ ಕಡಗೋಲು ನೇಣು ಸಹ
ಸಜ್ಜನರ ಸಲಹಲು ಮಧ್ವಾರ್ಯರ ಮುಂದೆ
ಗೆಜ್ಜೆ ಧ್ವನಿ ಮಾಡಿ ಕುಣಿಯುತ ಕೃಷ್ಣ 1
ಉಟ್ಟ ಪೀತಾಂಬರ ಉಡಿಗೆಜ್ಜೆ ವಡ್ಯಾಣ್ಯ
ಇಟ್ಟು ಕೌಸ್ತುಭಹಾರ ತುಳಸಿಮಾಲಾ
ಕೊಟ್ಟು ಅಭಯ ಹಸ್ತ ಸಲಹುವೆನೆಂಬಾ
ಬಿರುದಿಟ್ಟು ಕಂಕಣ ತೊಟ್ಟು ಶ್ರೀ ಕೃಷ್ಣ 2
ಮಕರಕುಂಡಲ ಕಿರೀಟ ಶೋಭಿಸುತಲಿ
ಅಕಳಂಕ ಚರಿತ ಶ್ರೀ ಶ್ರೀನಿವಾಸ
ನಿಖಿಲ ಬ್ರಹ್ಮಾಂಡದೊಳೆಲ್ಲೆಲ್ಲು ಕಾಣೆ
ಸಕಲ ದೇವರ ದೇವಾ ಶ್ರೀ ಕೃಷ್ಣ ಪ್ರಭುವೆ 3