ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನ ತಾ ತಿಳಿದು | ಧನ್ಯನಾಗೊ ಬಗೆ ಇದು | ಖಿನ್ನವಳಿದು ಪೂರ್ಣ ಬ್ರಹ್ಮವನ್ನು ಕಾಂಬುದು ಪ ತತ್ತ್ವ ಶಾಸ್ತ್ರವನ್ನು ಓದಿ | ಭಕ್ತಿಯಿಂದ ಮನನ ಮಾಡಿ | ಯುಕ್ತಿ ಭಾವವೆಲ್ಲ ಕಳೆದು ಮುಕ್ತನಾಗುತಾ || ನಿತ್ಯವಾದ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು | ಸತ್ಯ ಶರಣರಡಿಯ ಪಿಡಿದು ಚಿತ್ತದಲ್ಲಿ ನಲಿವುದು 1 ಆಶೆ ಮೂರರಲ್ಲಿ ಇನ್ನು | ಬೇಸರಾಗಿ ವಿಷಯದ | ವಾಸನೆಗಳ ಜರಿದು ಪಾಶ ಕ್ಲೇಶವಳಿಯುತ || ನಾಸಿಕಾಗ್ರದಲ್ಲಿ ಮನವ | ಸೂಸದಂತೆ ನಿಲಿಸಿ ಜಗ- | ದೀಶನಾಟವನ್ನು ನೋಡಿ ನಾದ ಘೋಷ ಕೇಳ್ವುದು 2 ಹಿಂದೆ ಒಂದು ನೆನೆಸದಿನ್ನು | ಮುಂದೆ ಉಳಿದ ಕರ್ಮವನ್ನು | ಬಂದುದೆಲ್ಲ ಉಂಡು ಗೆದ್ದು ಹರುಷದಿಂದಲಿ || ತಂದೆ ಭವತಾರಕನ | ಹೊಂದಿ ಸದಾನಂದದಿಂದ | ಮುಂದೆ ಭವಕೆ ಬೀಳದಂತೆ ಛಂದದಿಂದ ನಲಿವುದು 3
--------------
ಭಾವತರಕರು
ಸಿರಿರಮಣ ತವ ಚರಣಕೆರಗಿ ಬೇಡುವೆ ನಾನು ತ್ವರದಿ ಉದ್ಧರಿಸೋ ಈ ಭವದಿ ಬೇಗಾ ಪ ಪೊಟ್ಟಿಯೊಳಿರುವ ಶಿಶು ಕಷ್ಟವನೆ ಕೊಡಲು ಸಹ ಕೆಟ್ಹೋಗಲೆಂದು ತಾ ಬಯಸಳು ಸೃಷ್ಟಿ ನಿನ್ನೊಳಗಿರಲು ಹೊಟ್ಟೆಯೊಳಗಿರುವೆನು ಅಷ್ಟು ತಪ್ಪೇನು ಕ್ಷಮಿಸಿ ಪೊರೆವುದಾ ತೆರದಿ 1 ಜ್ಞಾನವಿಲ್ಲದೆ ಹರಿಯೇ ನಾನು ನೀನು ಸರಿಸ- ಮಾನರೆಂದರಿತು ನಾ ಮೋಸ ಹೋದೆ ನಾನು ನಿನ್ನಾಧೀನವಿರುವೆನೇ ಹೊರ್ತು ನೀ ನೆನ್ನಧೀನನೆಂದಿಗೂ ಅಲ್ಲವೊ ದೊರೆಯೇ 2 ಏಸು ಜನ್ಮಗಳಿಂದ ವೇಷವಾ ಧರಿಸಿ ಹನು- ಮೇಶ ವಿಠಲನೆ ನಾ ತೋರಿಸಿದೆನೋ ಕೇಶವಾ ಕೊಡು ನೀ ಸಂತೋಷವಾಗಿರೆ ಮುಕ್ತಿ ಬೇಸರಾಗಿರೆ ಇನ್ನು ವೇಷವನು ಬಿಡಿಸೊ 3
--------------
ಹನುಮೇಶವಿಠಲ