ಒಟ್ಟು 195 ಕಡೆಗಳಲ್ಲಿ , 49 ದಾಸರು , 147 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀವೇಂಕಟೇಶ ಸುಪ್ರಭಾತ ಶ್ರೀವೆಂಕಟೇಶಂಗೆ ಜಯ ಸುಪ್ರಭಾತ ದೇವಾದಿದೇವಂಗೆ ನವಸುಪ್ರಭಾತ ಪ ಪಾವನ ಶರೀರಂಗೆ ಜಯ ಸುಪ್ರಭಾತ ದೇವಪರಮಾತ್ಮಂಗೆ ನವಸುಪ್ರಭಾತ ಅ.ಪ ಅಂದು ಕೌಸಲ್ಯೆಯಣುಗ ರಾಮಾ ಏಳು ಎಂದಿನಂತೆ ಆಹ್ನಿಕವ ಮಾಡೆಂದು ನುಡಿಯಾ ಮುಂದೆ ವಿಶ್ವಾಮಿತ್ರ ಮುನಿ ರಾಮಭದ್ರಂಗೆ ಮಂದಹಾಸದಿ ಪೇಳ್ದ ಸರಯೂಬಳಿಯಲ್ಲಿ 1 ಎದ್ದೇಳು ಗೊವಿಂದ ಗರುಡಧ್ವಜಸ್ವಾಮಿ ಉದ್ಧರಿಸ ಬೇಕಯ್ಯ ಕರುಣಾಂತರಂಗ ಎದ್ದೇಳು ಚೈತನ್ಯ ಪುಣ್ಯದಾತ [ಎದ್ದೇಳು ಕಮಲಾಕಾಂತರಂಗ] 2 ಮಧುಕೈಟಭಾರಿಯಾ ವಕ್ಷಸ್ಥಲದಲಿ ನಿಂದ ಹದಿನಾಲ್ಕು ಲೋಕಗಳ ಮಾತೆಯೆನಿಸಿ ಪದುಮಾಕ್ಷಿ ಲಕ್ಷ್ಮೀಗೆ ಜಯಸುಪ್ರಭಾತ 3 ಸರ್ವಭುವನೇಶ್ವರಿ ಸರ್ವ ಭಕ್ತಂಕರಿ ಸರ್ವಲೋಕ ವಿಖ್ಯಾತೆ ಜಾತೆ ವಿನೀತೇ ಸರ್ವಲೋಕೇಶನ ರಾಣಿ ಕಲ್ಯಾಣಿ ಸರ್ವಸನ್ನುತೆ ನಿನಗೆ ಸುಪ್ರಭಾತ 4 ಸಪ್ತರ್ಷಿ ಮಂಡಲವು ಔಪಾಸನೆಯಾಗೆ ತೃಪ್ತರಾಗಿರುತಿಹರು ನಭದ ನದಿಯೊಳು ವ್ಯಾಪ್ತವಾದಖಿಳ ಕರಪುಷ್ಪಗಳ ಅರ್ಪಿಸಿ ಒಪ್ಪಿರ್ಪರೇಳೇಳು ವೆಂಕಟೇಶ 5 ಅಜ ನಿರಂಜನ ಸ್ಮರಿಸಿ ತ್ರೈವಿಕ್ರಮನ ಚರಿತೆಗೇಳು ಶಿರಬಾಗಿ ವಂದಿಪರು ಗುರು ಶುಭವ ಪೇಳುವನು ವರದರಾಜ ಏಳು ವೇಂಕಟೇಶ 6 ಈಗ ವಿಕಸಿತವಾದ ಕಮಲಸೌರಭದೊಡನೆ ರಾಗ ರಸ ತಂಪಿಂಪು ಮಿಳಿತಮಾಗಿ ಸಾಗುತಿದೆ ತಂಗಾಳಿ ಉಲ್ಲಾಸಮಂ ಬೀರಿ ತ್ಯಾಗಿ ನೀನೇಳಯ್ಯ ವೇಂಕಟೇಶ 7 ಕದಳಿ ಖರ್ಜೂರಗಳ ರಸಯುಕ್ತ ಪಾಯಸ ಮುದದಿ ಸಂಸೇವಿಸುತ ಉತ್ಸಾಹದೀ ಮಧುರ ಗಾನವ ಪಾಡಿ ಶುಕಪಿಕಗಳುಲಿಯುತಿವೆ ಪದುಮನಾಭ ಏಳು ವೇಂಕಟೇಶ 8 ದೇವರ್ಷಿನಾರದನು ಮಹತಿ ವೀಣೆಯ ನುಡಿಸಿ ದೇವದೇವನೆ ನಿನ್ನ ನುತಿಸುತಿಹನು ಭಾವರಸಯುತವಾದ ಗಾನಕೇಳುತಿಹುದು ಪಾವನಾತ್ಮನೇ ಏಳು ವೇಂಕಟೇಶ 9 ಸುರಿವ ಮಕರಂದವನು ಹೀರಿ ಹೀರಿ ಅರುಣನುದಯವ ತಿಳಿದು ಅರಳುತಿಹ ಕಮಲದಿಂ ಸರಸರನೆ ಝೇಂಕರಿಸಿ ಬರುತಿರ್ಪುವೈ ಸಿರಿಯ ದುಂಬಿಗಳೇಳು ವೆಂಕಟೇಶ 10 ಮಡದಿಯರು ಕೆನೆಮೊಸರನಾಂತ ಭಾಂಡಗಳಲ್ಲಿ ಕಡೆಗೋಲಿನಿಂ ಮಥಿಸಿ ಹಾಡುತಿಹರು ಅಡಿಗಡಿಗೆ ಜಯ ಘೋಷ ಕೇಳುತಿದೆಯಯ್ಯ ಪೊಡವೀಶ ನೀನೇಳು ವೇಂಕಟೇಶ 11 ಕಮಲದಿಂದೈತಂದ ದುಂಬಿಗಳು ಸುತ್ತಲಿನ ಕುಮುದಗಳ ಮೈಗಪ್ಪಿ ಝರಿಝರಿ ಗರ್ವದಿ ಅಮರ ದುಂದುಭಿಯಂತೆ ಝೇಂಕರಿಸುತಿವೆಯಿದೋ ವಿಮಲಾಂಗ ನೀನೇಳು ವೇಂಕಟೇಶ 12 ಶ್ರೀರಮೆಯ ನಿತ್ಯಯೋಗಸ್ಥಾನ ಹೇಸ್ವಾಮಿ ಭೂರಿಭಕ್ತರ ಕಾಯ್ವ ಕರುಣಾನಿಧೇ ಸ್ವಾಮಿ ಮೂರು ಲೋಕವನಳೆದು ಪಾಲಿಸುವ ಸ್ವಾಮಿ ಮಾರಮಣ ನೀನೇಳು ವೇಂಕಟೇಶ 13 ಅಜ ರುದ್ರ ಸನಕಾದಿ ಪರಮ ಭಕ್ತರ ಬಂಧು ಭಜಿಸಿ ತವ ದರ್ಶನವ ಕಾಯುತಿಹರು ವಿಜಯ ಜಯರೀರ್ವರು ತಡೆಯುತ್ತಲಿಹರಯ್ಯ ಗಜವಿನುತ ನೀನೇಳು ವೇಂಕಟೇಶ 14 ಶೌರಿ ನಿನ್ನಾವಾಸ ತಾಣ ವೈಕುಂಠದಿಂದ ನಾರಾಯಣಾದ್ರಿ ಗರುಡಾದ್ರಿ ಎಂತೆಂಬ ಆರೇಳು ನಾಮಗಳ ಪೇಳ್ವರಿದು ಶೇಷಾದ್ರಿ ಸಾರತರ ನಾಮವೈ ವೇಂಕಟೇಶ 15 ಭುವಿಯ ಗೋಪಾಲಕರು ಅನುಮತಿಯ ಬೇಡುವರು ರವಿಯಗ್ನಿಯುಕ್ತ ನವಗ್ರಹಗಳು ಕಾದಿಹರು ಭವದೂರನೇ ನಿನಗೆ ಸುಪ್ರಭಾತ 16 ದಿವಿಮೋಕ್ಷ ಬೇಡ ತವದರ್ಶನವು ಸಾಕೆಂದು ನವಭಕ್ತಿಯಿಂ ತಳೆದು ಭಜನೆ ಮಾಡುತಿಹರು ಪವಮಾನನುತ ನಿನಗೆ ಸುಪ್ರಭಾತ 17 ನಿನ್ನ ಧಾಮದ ಶಿಖರ ವೀಕ್ಷಣೆಯೊಳಾನಂದ ವನ್ನು ಪಡುತಿಹರೆಲ್ಲ ಶರಣ ಜನರು ನಿನ್ನ ದರ್ಶನವೊಂದೆ ಪರಮ ಪದವದನು ಸನ್ನುತಾಂಗನೆ [ತೋರೇಳು]ಸುಪ್ರಭಾತ 18 ಭೂಮಿಪತಿ ಕರುಣಾಂಬುಸಾಗರನೆ| ಧೀರ ಶೂರಾನಂತ ಗರುಡ ವಿಷ್ವಕ್ಸೇನ ರಾರಾಜಿಸುತ್ತಿಹರು ನಿನ್ನ ದರ್ಶನಕಾಗಿ ನಾರಾಯಣಾ ನಿನಗೆ ಸುಪ್ರಭಾತ|| 19 ಕಮಲನಾಭ ದೇವ ಪುರುಷೋತ್ತಮಾ ಸ್ವಾಮಿ ಅಮಲಸದ್ಗುಣಧಾಮ ಕೃಷ್ಣ ವೈಕುಂಠ ಸುಮಬಾಣಕೋಟಿ ಸೌಂದರ್ಯನುತ ಮಾರಮಣ ಕಮಲನಯನಾ ನಿನಗೆ ಸುಪ್ರಭಾತ|| 20 ದೀನರಕ್ಷಣೆಗಾಗಿ ಹತ್ತುಜನ್ಮದಿ ಬಂದೆ ಮಾನವ ಶ್ರೇಷ್ಠರೂ ಆಕಾಶಗಂಗೆಯಲಿ ನಾನಾ ಸುಗಂಧಗಳ ಬೆರೆಸಿ ಕಾಯುತ್ತಿಹರು ಭಾನುತೇಜನೆ ನಿನಗೆ ಸುಪ್ರಭಾತ 21 ದಿನಪನುದಯಿಸುತ್ತಿಹನು ಕಮಲವರಳುತ್ತಿಹುದು ಬನದ ಪಕ್ಷಿಗಳೆಲ್ಲ ಹಾಡುತ್ತಲಿಹವು ಘನವೈಷ್ಣವರು ಮಂಗಳಂಗಳಂ ಪಾಡುವರು ಮನುಜಪುಂಗವ ನಿನಗೆ ಸುಪ್ರಭಾತ 22 ಕಮಲಜಾದ್ಯಮರರೂ ಸಪ್ತರ್ಷಿಯೋಗಿಗಳು ವಿಮಲ ಮಾನಸರಾಗಿ ನಿನಗಾಗಿ ಕಾದಿಹರು ತಿಮಿರಸಾಗರವನ್ನು ದಾಟಿಸುವ ಪರಮಾತ್ಮ ಕಮನೀಯಗುಣ ನಿನಗೆ ಸುಪ್ರಭಾತ|| 23 ಭಾವನೆಯೊಳೀಯದ್ರಿ ವೈಕುಂಠವಾಗಿಹುದು ಮಾವನಿತೆಯುಪಚಾರದಭ್ಯರ್ಥಿಯಾಗಿಹಳು ಶ್ರೀವೈಷ್ಣವ ಕೇಳು ಕೈಮುಗಿದು ಕಾದಿಹರು ಕಾವಕಾರುಣ್ಯನಿಧಿ [ನಿನಗೆ ಸುಪ್ರಭಾತ] 24 ಅರುಣೋದಯದೊಳೆದ್ದು ಈ ಸುಪ್ರಭಾತವನು ಪರಮ ಭಕ್ತಿಯೊಳೊಮ್ಮೆ ಪಾಡುವರಿಗೆ ಪರಮಪುರುಷನು ದಿವ್ಯತಾಣವನು ನೀಡುವನು ಹಿರಿಯರಾ ವಚನವಿದು ಪರಮ ಚರಿತಾರ್ಥ25 ಶರಣಾಗತಿ ಒಂದೆರಡು ಮೂರು ನಾಲ್ಕೈದಾರು ಮೊಗದವರು ಬಂದು ವಂದಿಸುತಿಹರು ಪುರುಷೋತ್ತಮ ಬಂಧುರ ಶರೀರನೀ ಪಾಲಿಸೆಮ್ಮ ವೆಂಕಟೇಶ 26 ನಾನಾಪರಾಧಗಳ ಮಾಡಿರುವೆನಯ್ಯ ನೀನೆಲ್ಲವನು ಕ್ಷಮಿಸಿ ಪರಿಪಾಲಿಸಯ್ಯ ನೀನೇ ಸರ್ವಾಧಾರ ಕರುಣಾಂತರಂಗನು ದಾನಶೀಲಾ ಸ್ವಾಮಿ ಶ್ರೀವೇಂಕಟೇಶ 27 ಗೋಪಿಕಾ ಪರಿವೃತನೆ ಪರವಾಸುದೇವನೆ ಗೋಪಿಕಾ ಗೀತಗುಣ ಸಂಪೂಜ್ಯ ದೇವನೆ ಗೋಪಿಕಾ ಮನ್ಮಥನೆ ದೈತ್ಯಾರಿ ಶ್ರೀಕೃಷ್ಣ ನೀ ಪೊರತು ಬೇರೆ ದೇವರ ಕಾಣೆ ವೆಂಕಟೇಶ28 ದಶರಥನ ಸುತನಾಗಿ ಜಾನಕಿಯ ಕರವಿಡಿದು ದಶಮುಖಾದ್ಯಸುರರನು ಸಂಹರಿಸಿದಾತ ಶಶಿಮೌಳಿ ವಂದ್ಯನೆ ಲೋಕಮೋಹನ ಸ್ವಾಮಿ ಕ್ಲೇಶಗಳ ಸಹಿಸಿ ಶಾಶ್ವತ ಸುಖವ ನೀಡಯ್ಯ ವೆಂಕಟೇಶ 29 ಕಂಜಾಯತಾಕ್ಷಿಯೆ ಸರ್ವಲೋಕ ಶರಣೇ ಕಂಜವದನೆಯೆ ಸರ್ವವಾತ್ಸಲ್ಯ ಪೂರ್ಣೇ ಕಂಜನಾಭನ ದಿವ್ಯ ವಕ್ಷಸ್ಥಲಾವಾಸಿ ಕಂಜಸರ್ವಾಂಗಿ ಪೊರೆ ಪುಣ್ಯಚರಿತೆ ಶ್ರೀಯೆ 30 ಸರ್ವಲೋಕ ಶರಣ್ಯ ಸರ್ವಗುಣ ಸಂಪೂರ್ಣ ಸರ್ವದೇವರದೇವ ವೇದವಂದಿತ ಸರ್ವಕಾರುಣ್ಯನಿಧಿ ಸರ್ವಾತ್ಮ ಸಂಚಾರಿ ಸರ್ವಪೂಜಿತ ನಿನಗೆ ಶರಣು ವೆಂಕಟೇಶ 31 ರಕ್ಷಿಸು ಜಗನ್ಮಯ ರಕ್ಷಿಸು ದಯಾಮಯ ರಕ್ಷಿಸು ಮನೋಮಯಾ ಮಾಯ ನಿರ್ಮಾಯ ರಕ್ಷಿಸೈ ಸರ್ವಜ್ಞ ಸರ್ವಲೋಕಾಧ್ಯಕ್ಷ ರಕ್ಷಸೈ ಹರಿ ನಿನ್ನ ಚರಣ ವೆಂಕಟೇಶ 32 ಆವನಾದಿಯನಂತನೆಂದೆನಿಪನೊ ವರವ ಈವ ಕರುಣಾಳುವೋ ಜೀವರಾಶಿಯನೆಲ್ಲ ಕಾವನೋ ಸಹಸ್ರಾಕ್ಷನೆಂದೆನಿಪ ದೇವನಾ ಶ್ರೀವನಜ ಪದವೆನಗೆ ಶರಣು ವೆಂಕಟೇಶ 33 ವೇದಗಳ ತಂದು ಮಂದರವೆತ್ತಿ ಹರಿಯ ಮೇದಿನಿಯ ನಳೆದ ಭಾರ್ಗವನಾದ ರಾಮನೀ ನಾದೆ ಕಂಸನಕೊಂದೆ ಗೋಪಾಲಕೃಷ್ಣ ನಾದ ಕಲ್ಕೀ ನಿನ್ನ ಚರಣ ವೆಂಕಟೇಶ34 ಮೂರು ವೇಣಿಗಳುಳ್ಳ ಗಂಗೆ ಪುಟ್ಟಿದ ಪಾದ ಮೂರು ಲೋಕವನಳೆದ ಸುಪ್ರಸಿದ್ಧದ ಪಾದ ಮೂರು ಕಣ್ಣಾಂತವನು ಜಪಿಸುತಿರುವ ಪಾದ ಚಾರುತರ ಪದವೆನಗೆ ಶರಣು ವೆಂಕಟೇಶ 35 ಕಾಳಿಂಗನಾ ಹೆಡೆಯ ತುಳಿದು ಕುಣಿದಾ ಪಾದ ಖೂಳ ಶಕಟನನೊದ್ದು ಕೊಂದ ಪಾದ ಚೋಳರಾಯನು ತೊಳೆದು ವಂದಿಸಿದ ಪಾದ ನಾಳೀಕ ಪದವೆನಗೆ ಶರಣು ವೆಂಕಟೇಶ36 ಕ್ಷೀರವಾರಿಧಿತನುಜೆಯೊಪ್ಪಿ ವೊತ್ತುವ ಪಾದ ನಾರದಾದಿಗಳೆಲ್ಲ ಪಿಡಿದು ನಲಿವಾ ಪಾದ ಶ್ರೀರಮಣಿ ಮುದದಿಂದ ಕಣ್ಗೊತ್ತುವ ಪಾದ ಮಾರಮೋಹಕ ನಿನ್ನ ಚರಣ ವೆಂಕಟೇಶ37 ಮಂಗಳ ಕಲ್ಯಾಣ ರೂಪಂಗೆ ಅದ್ಭುತಾಕಾರಂಗೆ ಮಾಲ್ಯಪೀತಾಂಬರಾಂಗದ ಶೋಭಿತಂಗೆ ಶಾಲ್ಯನ್ನ ಸಂಪ್ರೀತ ಶ್ರೀ ವೇಂಕಟೇಶಂಗೆ ಬಾಲ್ಯಕುಂದದವಂಗೆ ಜಯಮಂಗಳ 38 ಭಕ್ತಪರಿಪಾಲಂಗೆ ಜಗದಾದಿ ಮೂಲಂಗೆ ಭಕ್ತಿದಾತಾರಂಗೆ ರಮೆಯರಸಂಗೆ ಮುಕ್ತಿ ಸೌಖ್ಯವನೀವ ಶ್ರೀವೇಂಕಟೇಶಂಗೆ ಶಕ್ತಿ ಸ್ವರೂಪಂಗೆ ಶುಭಮಂಗಳ 39 ಶೇಷಾದ್ರಿ ವಾಸಂಗೆ ದಿನಕರ್ತ ಭಾಸಂಗೆ ಕ್ಲೇಷದಾರಿದ್ರ್ಯಾದಿ ಪರಿಹಾರ ಕರ್ತಂಗೆ ಶೇಷ ಪಂiÀರ್iಂಕಂಗೆ ಶ್ರೀ ಶ್ರೀನಿವಾಸಂಗೆ ದೋಷಾಪಹಾರಂಗೆ ಜಯಮಂಗಳ 40 ಅರವಿಂದ ವದನಂಗೆ ಅರವಿಂದ ಲೋಚನಗೆ ಅರವಿಂದನಾಭನಿಗೆ ಅರವಿಂದ ಗಾತ್ರಗೆ ಅರವಿಂದ ಪಾದನಿಗೆ ಅರವಿಂದ ಭೂಷನಿಗೆ ಅರವಿಂದ ಹಸ್ತಂಗೆ ಶುಭಮಂಗಳಂ 41 ಹಿಂದಿನಾಚಾರ್ಯರಿಗೆ ಮುನಿಮುಖ್ಯಭಕ್ತರಿಗೆ ಇಂದಿನಾ ಭೂದೇವಿ ನೀಳಾದಿ ವಧುಗಳಿಗೆ ಮಂದಾಕಿನೀಧರಗೆ ಇಂದ್ರ ದಿಕ್ಪಾಲರಿಗೆ ವಂದಿಪೆನು ಮಂಗಳಾಚರಣೆ ಮಾಡಿ 42 ಫಲಶ್ರುತಿ ಹನ್ನೆರಡು ಮಾಸವು ತಪ್ಪದೆ ಹಾಡಿದರೆ ಮುನ್ನಮಾಡಿದ ಪಾಪವೆಲ್ಲ ಕಳೆಯುವುದು ಪನ್ನಗಾರಿಧ್ವಜನ ಕರುಣೆಯೊದಗುವುದು ಬನ್ನಗುಡುವನರಕಬಾಧೆ ತಪ್ಪುವುದು 43 ಶ್ರಾವಣಾಶ್ವೀಜದಲಿ ಮಾರ್ಗಶಿರ ಮಾಸದಲಿ ಭಾವಭಕ್ತಿಯಲಿಂತು ಹಾಡುವರಿಗೆ ನೋವು ಕಾಲನಭಟರ ಕಾಟನಶಿಪುದು ಹರಿಯ ಭಾವುಕರು ಸತ್ಕರಿಸಿ ಕರೆದೊಯ್ವರು 44 ಅಪ್ಪ ಮಾಂಗಿರಿರಂಗನಪ್ಪಣೆ ಪಡೆದಿದನು ಒಪ್ಪಿಸುವೆನೈ ನಿನಗೆ ವೇಂಕಟೇಶ| ತಪ್ಪು ನೆಪ್ಪುಗಳನ್ನು ಮನ್ನಿಸೈ ಜಗದೀಶ ಒಪ್ಪದಿಂ ಸಕಲರನು ಪೊರೆ ವೇಂಕಟೇಶ|| 45
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
(ಆ) ಮಹಾಲಕ್ಷ್ಮೀ ಸ್ತುತಿಗಳು ಅರಿತು ಸಿಂಗರಮಾಡಿ ಅರಿತು ಸಿಂಗರ ಮಾಡಿ ಪ ಗರುವ ಚೆನ್ನಿಗರಾಯ ಬರುತಿಹನೆ ಬೇಗಾ ಅ.ಪ ಅಳಿಕುಂತಳೆಗೆ ನೋಡಲಲರ್ದ ಸಂಪಿಗೆ ಯೇಕೆ ಚೆಲುವ ಜಾಜಿಯ ಕಮ್ಮಲರ ತುರುಬಿರಮ್ಮಾ ಹೊಳೆವ ಚಂದಿರಮುಖಿಗೆ ವಳಿನವೇತಕೆ ಕೈಗೆ ಅಲರ್ದ ನೈದಿಲೆ ಕುಸುಮವನೆ ಕೊಡಿರೆಯಮ್ಮಾ 1 ಕೀರವಾಣಿಗದೇಕೆ ಜವ್ವಾಜಿ ಪರಿಮಳವು ಚಾರುಕತ್ತುರಿ ಹದನ ಮಾಡಿರಲು ಮುನ್ನಾ ತೋರ ಕುಚಗಿರಿಗಳಿಗೆ ವಜ್ರಭೂಷಣವೇಕೆ ಹಾರವಿದೆ ತಂದಿರಿಸಿ ಮಂಜುಳವಿದೆನಿಸೀ 2 ಲಾವಣ್ಯನಿಧಿಯೀಕೆ ಬೇರೆ ಸಿಂಗರವೇಕೆ ತೀವಿದಂಗದಕಾಂತಿ ನಯನ ವಿಶ್ರಾಂತೀ ಶ್ರೀವೇಲಪುರದಲ್ಲಿ ನೆಲಸಿಹ ಕರುಣದಿಂದ ದೇವ ವೈಕುಂಠಕೇಶವನರಸಿಯೀಕೇ 3
--------------
ಬೇಲೂರು ವೈಕುಂಠದಾಸರು
(ಬಾಲಕೃಷ್ಣ ವರ್ಣನೆ) ಕಂಸಾರಿ ಕೃಷ್ಣಾ ಕಾಡದಿರೆನ್ನನು ಪ ಹಳ್ಳದ ತಡಿಯಲ್ಲಿ ಮಳಲು ತೋಡಿ ತೋಡಿ ಗೊಲ್ಲಿತೆರೊಡÀನಾಡಿ ಕಲಿತ್ಯೋ ಬೆಡಗಾ ಅಹಿನೇರಿ ಹುಡುಗಾ ಮಾಡಿದಿ ತುಡುಗಾ 1 ನೀರಿಗ್ಹೋಗುವಾಗ ದಾರಿಗಡ್ಡಕಟ್ಟಿ ನಾರಿ ನೀನಾರೆಂದ್ವಿಚಾರಿಸುವೀ ದೂರದಲ್ಲಿರುವಿ ಬದಿಯಲ್ಲಿ ಬರುವಿ ಬೇರೆ ಕರೆವೆ ಈ ಬುದ್ಧಿ ತರವೆ 2 ವರ ಕದರುಂಡಲಗಿ ಹನುಮಯ್ಯನೊಡೆಯನೆ ನಿನಗೆಣೆಯಿಲ್ಲವೊ ವನಜನಾಭಾ ವನಿತೆಯರೆಲ್ಲಾ ಒಲಿಸಿದೆಯಲ್ಲಾ ಮನುಜನಲ್ಲಾ ಮಾಯದ ಗೊಲ್ಲಾ 3
--------------
ಕದರುಂಡಲಗಿ ಹನುಮಯ್ಯ
(ಬ್ರಹ್ಮಾಂಡ ಪುರಾಣದ ಕರುಣಾಕರ ಸ್ತೋತ್ರದ ಅನುವಾದ) ಶ್ರೀ ರಮಣನೆ ನಮೋ ಎಂದು ನುತಿ ಪೇಳ್ವೆನಿಂದು ಪ. ನಿನ್ನನು ದೂಡದಿರನ್ಯರ ಬಳಿಗೆ ಪಾದ ಕಾಪಾಡು ದೇಹವ ದಾಢ್ರ್ಯದೊಳಗೆ 1 ಈಶನು ನೀ ಎನಗೆಂದಿಗು ನಿನ್ನ ದಾಸನಾದುದರಿಂದ ಪೋಷಕರನು ಕೃಪೆಯಿಂದ 2 ಎನ್ನ ಭರಣಕನ್ಯರಸಡ್ಯೆಯೇನು ಕಂಬುರುಹಾಕ್ಷಾಶ್ರಿತ ಕಾಮಧೇನು 3 ಫಣಿರಾಜಶಯನ ಶ್ರೀಕಾಂತ ಎನಗೆ ಸಿದ್ಧಾಂತ 4 ಕಲ್ಕಿರುವ ಸ್ವಾಪಲ್ಕಿವರದ ನಿನ್ನ ಶುಲ್ಕದಾಸಗೆ ಭಯವಿಲ್ಲ ಫಲ್ಕಸ ಪಾವನ ಮನದಿ ನೀಯಿರಲನ್ಯ ಕಲ್ಕಗಳುಂಟೆ ಭೂನಲ್ಲ 5 ಹೆಚ್ಚಾದರ್ಥಗಳುಂಟೆ ಪೇಳು ತಡಮಾಳ್ಪದಾಶ್ಚರ್ಯ ಕೇಳು ದಯಾಳು 6 ತಾಯೆ ತನ್ನಣುಗಗೆ ಗರವನಿಕ್ಕೆ ಬೇರೆ ಕಾಯುವರುಂಟೆ ಬೇಗದಲಿ ಲೋಕದಲಿ 7 ದಾತ ಪರಿತ್ರಾತ ಜ್ಞಾತದಯಾನ್ವಿತನೆಂದು ಪಾಲಿಸು ಗುಣಸಿಂಧು 8 ನೀ ನಿರ್ವಹಿಸುವಿಯೆಂದು ತಿಳಿದೆ ಎನ್ನಯ ವಾರ್ತೆಗೊಳದೆ9 ನೀ ಬಿಡದಿರು ಹರಿಯೆ ಸರ್ವಾರ್ಥದಾಯಕ ಎನ್ನ ದೊರೆಯೆ 10 ಎಂದು ಪೇಳ್ದೆದು ಶ್ರುತಿ ನಿಂದು ಭವ ಬೇಗ ಓಡಿ ಬಂದು 11 ಎನ್ನೊಳ್ಯಾಕೆ ನಿರ್ದಯವು ಬೇಗ ಪರಿಹರಿಸಾಧ್ಯಾತ್ಮಿಕಾರ್ತಿ 12 ಶಕುತಿಯದ್ಭುತವಲ್ಲ ಸ್ವಾಮಿ ಬಹುದು ಸುಪ್ರೇಮಿ 13 ಪಂಡಿತಜನರು ಲೋಕದಲಿ ಪುಂಡರೀಕಾಕ್ಷ ನೀನರಿವಿ 14 ದಯೆದೋರು ಭೃಂಗಾಳಕಾಂತ ದಿನಕಾಂತ ದಯೆದೋರೊ ಬೇಗ ನಿಶ್ಚಿಂತಾ 15 ಕರಗಳ ಮುಗಿದು ಸ್ವೀಕರಿಪುದು ಬುಧುರರಿದು. 16
--------------
ತುಪಾಕಿ ವೆಂಕಟರಮಣಾಚಾರ್ಯ
ಅದು ನಿರಾಲಂಬ ಅದು ನಿರಾಲಂಬಅದು ನಿರಾಲಂಬ ಕೇಳದು ನಿರಾಲಂಬ ಪ ತನು ಹಂಗು ಇಲ್ಲದೆ ಮನ ಹಂಗು ಇಲ್ಲದೆತನಗೆ ತಾನಿಹುದದು ನಿರಾಲಂಬ 1 ಬುದ್ಧೀಂದ್ರಿಯಕೆ ಅತ್ತ ಅಹಂಕಾರಕೆ ಅತ್ತಸುದ್ದಿಲ್ಲದಹುದದು ನಿರಾಲಂಬ 2 ಇಂದ್ರಿಯಕೆ ನಿಲುಕದೆ ಇಂದ್ರಿಯಕೆ ಸುಖಿಸದೆಇಂದ್ರಿಯಗಳರಿಯದುದು ನಿರಾಲಂಬ3 ಅರಿವುದು ಕಾಣದೆ ಮರೆವುದುತೋರದೆ ಅದು ಚಿದಾನಂದ ಅದು ನಿರಾಲಂಬ 4 ಬಹಿರಂತಲ್ಲದೆ ಬೇರೆಂಬುದಿಲ್ಲದೆಮಹಾ ಬೆಳುದಿಂಗಳದೆ ನಿರಾಲಂಬ 5
--------------
ಚಿದಾನಂದ ಅವಧೂತರು
ಅನ್ನದಾನದ ಸುಖ ನಿನಗಲ್ಲದೆ ಬೇರೆಅನ್ಯ ಜನರೊಳಗುಂಟೆ ಜನ್ಯ ಜನಕಾ ಪ ಸಹಿತ ಒಂದು ಕೂಸು ಬರಲುಜಗತ್ ಕೋಶ ಅನ್ನವ ಮಾಡಿ ನೀ ಸಮರ್ಪಿಸಿದೆ 1 ಕೊಟ್ಟ ಅನ್ನಕೆ ಸಮ ಇಷ್ಟನ್ನವೇನುಂಬಿಇಷ್ಟು ಜನರು ಬಲಿಕೊಟ್ಟು ಭುಂಜಿಪರು 2 ಇಂದಿರೇಶಗೆ ಕೊಟ್ಟ ದಾನದಿ ಶತಾನಂದನಾದಿಯೇಮುಕ್ತಿ ಮಂದಿರದೊಳಗೆ ಹರಿತಂದು ತೋರೆನಗೆ 3
--------------
ಇಂದಿರೇಶರು
ಅರಿ ಬೇಗನೇ ಪರಮಾತ್ಮ ನೀನೈ ಪರತತ್ವನಾ ತ್ವರಿತದಲಿ ತಿಳಿಯೊ ಪ ಮೂರು ತಾಣಗಳ ಮೀರಿ ಗೋಚರಿಪ ತೋರುತಿಹ ಈ ದೇಹಾದಿಗಳಿಗೆ ಬೇರೆಯಾಗಿಪುದೆ ಪರಮಪದವು ಧೀರ ನೀನರಿಯೊ ಅದೆ ನಾನು ಎಂದು 1 ಕೋಶಪಂಚಕವ ಲೇಸಾಗಿ ಕಳೆದು ವಾಸನೆಯ ಪಾಶವನೆ ಹರಿದೊಗೆದು ಕ್ಲೇಶ ಪಡುವದನು ತ್ಯಜಿಸಿ ಮುದದಿ ನಾಶರಹಿತಾದ ಪದವು ತಾನೆಂದು 2 ಜನನಮರಣಗಳಿಗಾಚೆಗಿರುವಂಥ ಮನವಾಣಿಗಳಿಗೆ ನಿಲುಕದಿರುವಂಥ ಘನಪದವು ಇದುವೆ ಪರಮಾತ್ಮನೈ ಅನುನಯದಿ ಪೇಳ್ವ ಗುರುಶಂಕರಾರ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಅರಿವರಾರೆಲೋ ನಿನ್ನ ಅಗಮ್ಯ ಚರಿತ ಚರಣದಾಸರ ಪರಮ ಆನಂದಭರಿತ ಪ ದೇವರುಂಟೆಂಬ ಕೆಲವಾಧಾರಪುಟ್ಟಿಸಿದಿ ದೇವರಿಲ್ಲೆಂಬ ಹಲವು ಆಧಾರ ತೋರಿಸಿದಿ ಜೀವಬ್ರಹ್ವೈಕ್ಯೆಂಬುಪಾಯಗಳ ಸ್ಥಾಪಿಸಿದಿ ಆವರೀತಿಗು ಕಾವದೇವ ನಾನೆಂದಿ 1 ಜೀವವೆ ಮಾಯೆಯೆಂದು ಕಾಯವೆ ಕರ್ಮವೆಂದು ಭಾವಿಗಳ ಕೈಯಿಂದ ಬರೆಸಿದೆಯೋ ನಿಂದು ಜೀವಜೀವರಲಿ ಜಡ ಜೀವ ಬೇರೆನಿಸಿದಿ ಜೀವಜೀವರ ಜೀವ ಚೈತನ್ಯರೂಪ 2 ವೇದ ಸುಳ್ಳೆಂಬ್ಹಲವು ವಾದಿಗಳ ನಿರ್ಮಿಸಿದಿ ವೇದ ಅಹುದೆಂಬ ನಿಜವಾದಿಗಳ ಪುಟ್ಟಿಸಿದಿ ನಾದಬ್ರಹ್ಮವುಯೆಂಬ ಹಾದಿ ರಚಿಸಿದಿ ಸರ್ವಸಾಧನಕೆ ಒಲಿದು ಪ್ರಸನ್ನ ನೀನಾದಿ 3 ಬಗೆಬಗೆಯ ವಚನದಿಂ ಬಗೆಬಗೆಯ ನಿಗಮದಿಂ ಬಗೆಬಗೆಯ ರೂಪದಿಂ ನಿಗವಿಟ್ಟು ಸರ್ವರನು ಬಗೆಗೊಂಡು ಬೆಳಗುವೆಯೊ ಜಗಭರಿತನಾಗಿ 4 ಅವಸಾಧನವೊಲ್ಲೆ ಜಾವಜಾವಕೆ ನಿಮ್ಮ ದಿವ್ಯಸ್ಮರಣೆಯ ಎನ್ನ ಭಾವದೊಳು ನಿಲಿಸಿ ದೇವದೇವರ ದೇವ ದೇವ ಶ್ರೀರಾಮ ತವ ಸೇವಕನೆನಿಸೆನ್ನ ಕಾಯೊ ಕೈಪಿಡಿದು 5
--------------
ರಾಮದಾಸರು
ಅರೋಗಣೆಯ ಮಾಡೊ ಅಂಜನಾದ್ರಿಯ ವಾಸ ಆಲಸ್ಯವೇತಕೋ ಆಯಿತು ವೆಂಕಟೇಶ ಪ ತಳಿಗೆಯ ತೊಳೆದಿಟ್ಟು ಸುಳಿಬಾಳೆ ಎಲೆಯಿಕ್ಕಿ ನಳಿನಲೋಚನೆಯರುಗಳಿಂದ ಅಭಿಘರಿಸಿ ಎಳೆಯ ಮಾವಿನ ಮಿಡಿಯು ಉಪ್ಪು ಬೇವಿನ ಸೊಪ್ಪು ಹುಳಿಗೂಡಿ ಅರೆದಿಟ್ಟ ಶುಂಠಿ ಕಡಲೆ ಹಂಬೆ 1 ಕಣಿಲೆ ಕಂಚಿನಕಾಯಿ ಅಣಿಲೆ ಅಂಬಟನೆಲ್ಲಿ ಒಣಗಿದ ಮೆಣಸಿನ ಉರಿಯು ಉಪ್ಪಿನ ಹೆರೆಯು ಕಣುಮನಕ್ಕೊದಗಿಯೇ ಅಣಿಯಾಯಿತೆಡೆಯೊಳು 2 ಹೆರೆದ ತೆಂಗಿನಕಾಯ ಅರೆದ ಸಾಸಿವೆಯಿಕ್ಕಿ ಅರೆದು ಬೇಯ್ಸಿದ ಓಗರದೊಳು ಕಲಸಿಟ್ಟು ತರಿದ ಗುಳ್ಳದಕಾಯಿ ಹಾಗಲು ಕುಂಬಳಕಾಯಿ ಕೊರೆದ ಬಾಳೆಯಕಾಯಿ ಹುರಿದದೇ ತುಪ್ಪದಿ 3 ಸಣ್ಣಕ್ಕಿಯೋಗರವು ಬೆಣ್ಣೆಕಾಸಿದ ತುಪ್ಪ ಗಿಣ್ಣಲನೊರೆಹಾಲು ಸಣ್ಣ ಮೆಣಸು ಸಾರು ಅನ್ನ ಚಿತ್ರಾನ್ನವು ಮೊಸರನ್ನ ಹೆಸರ್ಹುಗ್ಗಿ ಉಣ್ಣಬಾರೆಲೋ ನೀನು ಇನ್ನು ತಡ ಬೇಡ 4 ಕೇಸಕ್ಕಿಯೋಗರವು ದೋಸೆ ಪಾಯಸವನ್ನು ಬೀಸು ಹಾರಿಗೆಯತಿರಸವು ಮಂಡಿಗೆಯು ಏಸು ಹೋಳಿಗೆ ಬೇಕೈಸನೀ ಉಣಲೇಳು 5 ಚಕ್ಕುಲಿ ಕರಜಿಯಕಾಯಿ ಮನೋಹರವು ಚೊಕ್ಕ ಬಿಳಿಯ ಬೇಳೆಸುಕ್ಕಿನುಂಡೆಯು ಕದಳಿ ರಸಾಯನವು ಇಕ್ಕಿಸಿಕೊಳ್ಳೊ ನೀ ಮಕ್ಕಳಾಟಿಕೆ ಬೇಡ 6 ಏಲಕ್ಕಿ ನಾಗರನಿಂಬೆ ಬೇವಿನಸೊಪ್ಪು ಮೇಲೆ ಒಗ್ಗರಿಸಿದ ನೀರು ಮಜ್ಜಿಗೆಯು ಹಾಲು ಮೊಸರು ಹಸಿಮಜ್ಜಿಗೆ ಸಹವಾಗಿ ಜಲವು ಮುಟ್ಟದ ಹಾಗೆ ಬೇರೆ ಬೇರಿರಿಸಿದೆ 7 ಗಾಯಿತ್ರಿ ಮಂತ್ರದಿಂ ತೋಯವ ಪ್ರೋಕ್ಷಿಸಿ ಬಾಯೊಳು ಪ್ರಣವವನು ಜಪಿಸಲಾಕ್ಷಣದಿ ರಾಯವೆಂಕಟಪತಿಯು ಆಪ್ಯಾಯನವ ಮಾಡಿ ದಾಯವಾಗಿತ್ತನು ಭಕ್ತಜನರಿಗೆಲ್ಲ 8 ಈ ರೀತಿಯಿಂದಲೆ ಆರೋಗಿಸುವುದೆಂದು ವಾರಿಜನಾಭನ ಸಾರಿ ವರ್ಣಿಸಲು ಮೋರೆಯ ಪ್ರಸಾದ ಕರೆದು ಇವನು ನಮ್ಮ ವರಾಹತಿಮ್ಮಪ್ಪನೊಂದುಗೂಡಿರುವನು 9
--------------
ವರಹತಿಮ್ಮಪ್ಪ
ಅಶೆ ಅಳಿಯದೆ ಮನದ ರೋಷವಡಗದೆ | ವೇಷ ದಂಭಕಗೆಲ್ಲಿ ಶಿವಯೋಗವು ಪ| ತನ್ನ ತಾನರಿಯದೆ ಉನ್ಮತ್ತದಿಂದಲಿ ನನ್ನದು ನಾನೆಂದು ಜಲ್ಪಿಸುತ || ಕುನ್ನಿಯಂದದಿ ಕೋಟಲೆ ಯೊಳಗಿಹ ಹೀನ ಮನುಜಗೆಲ್ಲಿ ಶಿವಯೋಗವು 1 ಎಲಬು ತೊಗಲು ಮಲ ಮೂತ್ರದಿ ತೋರುವ | ಹೊಲಸಿನ ದೇಹವು ತಾನೆನುತ || ಹಲವು ಪಾಪಂಗಳನು ಹೇಸದೆ ಮಾಡುವ | ಕುಲಹೀನನಿಗೆಲ್ಲಿ ಶಿವ ಯೋಗವು 2 ಆರು ವೈರಿಗಳಿಗೆ ವಶವಾದನು ಈ ದೀನ | ವಾರಿಜನಾಭನ ಚರಣವನು || ಸೇರಿ ತನ್ನ ಹಿತವ ಮಾಡಿಕೊಳ್ಳದಾ- |ಚಾರಿಗೇಡಿಗೆಲ್ಲಿ ಶಿವ ಯೋಗವು 3 ಮೂರು ದೇಹಕೆ ಮೀರಿ ಬೇರೆ ತಾನಾಗದೆ | ಆರು ಇಂದ್ರಿಯಗಳಿಗೆ ವಶವಾಗಿಯು || ನಾರಿಯರ ಸಂಗ ಸುಖವ ಬಯಸುವ | ಕ್ರೂರ ಮನುಜನಿಗೆಲ್ಲಿ ಶಿವ ಯೋಗವು 4 ಶ್ರೀ ಗುರು ವಿಶ್ವಪತಿಯ ಪದ ಕಮಲವ | ಬೇಗದಿ ಸೇರಿ ಸುಖಿಯಾದೆ || ರಾಗರೋಷದಿ ತನ್ನಾಡಿತವ ತಾ ಮರೆತಂಥ | ಭೋಗಲಂಪಟಗೆಲ್ಲಿ ಶಿವಯೋಗವು ? 5
--------------
ನರಸಿಂಹ
ಅಳಿವ ಬಾಳ ನಂಬುತಲೀಗ ತಿಳಿ ತಿಳಿಯೊ ಧೀರನಾಗಿ ಪರಾಶಾಂತಿಯ ಬೇಗ ಪರಾಶಾಂತಿಯಬೇಗ ಪ ದೊರಕುವದೆ ಶಾಂತಿ ಜೀವನೆ ಹೊರಹೊರಗೆ ನೋಡಲು ಅರಿ ನಿನ್ನ ಹೃದಯದೋಳ್ ಸಲೆನಾಸಿಪುದು ತಿಳಿಯಲು ಮೂಲಸ್ವರೂಪ ನಿನ್ನ 1 ಈ ದೇಹ ನಾನು ಎಂಬ ಭ್ರಾಂತಿ ಬೇಗ ತ್ಯಜಿಸುತ ಬಾಧಿಸುತ ಬುದ್ಧಿಯನ್ನು ಬೇರೆಯಾಗಿ ತಿಳಿಯುತ ಬಾಧಾರಹಿತ ನಾ ವಾದ ಪದವೆ ನಾನಿಹೆನೆನುತ 2 ಈ ನಿರ್ವಿಕಲ್ಪವಾದ ಸ್ಥಿತಿಯೇ ತಾನಿಹೆನೆಂದು ಅನುಭವದಿ ತಿಳಿದುಕೊಳ್ಳು ಪರಾಶಾಂತಿಯದೆಂದು ನೀನೇ ಪ್ರಶಾಂತರೂಪನಿರಲು ಶೋಕಿಸಬೇಡ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಆತ್ಮಲಿಂಗ ಭವನದಿಆತ್ಮಲಿಂಗ ಭವನದಲಿ ವಿಚಿತ್ರವನೆ ಕಂಡುಆತ್ಮನೆಂತಿಹನೆಂದು ಅರಸನಾ ಬಲಗೊಂಡುಆತ್ಮನಾನೆರಡೆಂಬ ಅವಿ ವಾಚ್ಯನಳಿಗೊಂಡುಆತ್ಮನಾಗಿರುತಿಪ್ಪನು ಪ ಪರಿ ಪರಿಯ ಸರಗಳನೆ ಕಂಡೆಮಾತಿಗುತ್ತರಿಸದಿಹ ಮಹಾ ಮಹಿಮೆಯ ಕಂಡೆ 1 ಈಕ್ಷಿಸಿಯೆ ವಸ್ತುವನ ಏಳು ಬಾಗಿಲು ಕಂಡೆದಕ್ಷಿಣೋತ್ತರ ಎಂಬುದರ ಬಾಗಿಲನು ಕಂಡೆಅಕ್ಷಯಾಗಿಹ ಲಕ್ಷವಹ ದಿಡ್ಡಿಯನೆ ಕಂಡೆರಕ್ಷಕನಾಗಿಹನ ರಾಗದಲಿ ಕಂಡೆ 2 ಪಂಚಇಂದ್ರಿಯಗಳೆಂಬ ಪರಿಚಾರಕರನು ಕಂಡೆಕಿಂಚ ಕೆಲಸಕ್ಕಿರುವ ಕರ್ಮೇಂದ್ರಿಯರ ಕಂಡೆಸಂಚರಿಪ ಮೂರೆರಡು ಸತ್ಪ್ರಾಣಿಗಳ ಕಂಡೆವಚನಾಂತಃಕರಣ ವರ್ತಕರ ಕಂಡೆ 3 ಸತ್ಯಗುರು ಪೂರಿತಹ ಸಾರಣೆಯ ಕಂಡೆತಥ್ಯವೆನಿಸುವ ಶಾಂತ ತೋರಣವ ಕಂಡೆಅತ್ಯಧಿಕ ಬುದ್ಧಿಯ ರಂಗವಲ್ಲಿಯ ಕಂಡೆಎತ್ತ ನೋಡಿದಡತ್ತ ಎಸೆದಿಹುದ ಕಂಡೆ 4 ಆರು ಅಂತಸ್ಥನು ಕಂಡೆ ಅಲ್ಲಿರುವವರ ಕಂಡೆಬೇರೆ ಮೂರಿಹ ಮಧ್ಯ ರಂಗಗಳ ಕಂಡೆಘೋರ ಘೋಷಣ ಪ್ರಣವ ಘಂಟನಾದವ ಕಂಡೆಸಾರವಮೃತ ಕಲಶ ಪಾನಕವ ಕಂಡೆ 5 ಜ್ಯೋತಿ ಎಂದೆನ್ನುತಿಹ ಜ್ಯೋತಿರ್ಮಯನ ಕಂಡೆಸಾತಿಶಯ ಗರ್ಭಗುಡಿ ಶೀಘ್ರದಲಿ ಕಂಡೆಆತುರದಲೊಳ ಪೊಕ್ಕು ಆತ್ಮಲಿಂಗವ ಕಂಡೆಪೂತು ರಕ್ಷಿಸು ಎಂದು ಪೂಜೆ ಕೈಗೊಂಡೆ 6 ನಿತ್ಯ ನಿಶ್ಚಲ ನಿಷ್ಕಲಂಕ ನಿಜನೆ ಎಂದುಪ್ರತ್ಯಗಾತ್ಮ ಪರಬ್ರಹ್ಮನೆ ಸ್ಥಿರವೆಂದುಸತ್ಯ ಸಂವಿದ್ರೂಪ ಸಕಲಕಧಿಪತಿ ಎಂದುಅತ್ಯಧಿಕ ಚಿದಾನಂದ ಆತ್ಮ ತಾನೆಂದು7
--------------
ಚಿದಾನಂದ ಅವಧೂತರು
ಆತ್ಮವೇ ಜೀವಾತ್ಮನುಆತ್ಮ ಬೇರೆ ಜೀವಾತ್ಮ ಬೇರೆಯಲ್ಲ ಪ ಅರಸು ಎಂಬವ ಹೋಗಿ ಚಾಕರನಾಗಿರೆಅರಸು ಬೇರೆ ಚಾಕರ ಬೇರೆ ತಿಳಿ1 ಬ್ರಹ್ಮಚಾರಿಯು ಹೋಗಿ ಯತಿಯಾಗಿ ಕುಳಿತರೆಬ್ರಹ್ಮಚಾರಿಯು ಬೇರೆ ಯತಿ ಬೇರೆ ತಿಳಿ2 ಸಾಧಕನು ಹೋಗಿ ಸಾಧ್ಯನು ಆಗಿರೆಸಾಧಕನು ಬೇರೆ ಸಾಧ್ಯನು ಬೇರೆ ತಿಳಿ 3 ಆತ್ಮನೆಂಬುವ ಹೋಗಿ ಜೀವನೇ ಆಗಿರೆಆತ್ಮನು ಬೇರೆ ಜೀವನು ಬೇರೆ ತಿಳಿ 4 ಒಬ್ಬ ಉಪಾಧಿಯಿಂದಲಿ ನಾನು ಎರಡಿರೆಒಬ್ಬ ಚಿದಾನಂದ ತಾನೆ ಸತ್ಯ ಸತ್ಯ 5
--------------
ಚಿದಾನಂದ ಅವಧೂತರು
ಆರು ಕೊಟ್ಟರು ಕೊಟ್ಟರಾರುಂಡರಾರಿಲ್ಲಿಬೇರೆ ನಾ ನೀ ನಾನೆಂದು ಕೆಡುವುದೀ ಲೋಕ ಪಕಾಲ ಚ್ಟೇಸಿತು ಕರ್ಮವು ಕೊಟ್ಟಿತೀ ಕಿವಿಗಳಾಲಿಸಿತು ಕಂಡಿತಕ್ಷಿಗಳೆಂದಿತಂಘ್ರಿಲೀಲೆಯಲಿ ಕೈಪಿಡಿಯುತಾ ಘ್ರಾಣಿ ಘ್ರಾಣವೀ ಲೋಲ ಚಿತ್ತವನುಸಂಧಾನಗೆಯ್ತು 1ಪ್ರಾಣ ಒಳಕೊಂಡಿತನ್ನವನು ಸಂಕಲ್ಪಿಸಿತುದೀನ ಮನಮತಿಗೆ ನಿಶ್ಚಯವಾುತೂತಾನಿದರೊಳಾರು ಕೊಂಬವನೊ ಕೊಡುವನೊ ದುರಭಿಮಾನದಿಂ ಕೆಡುತಿಹರು ನೀನು ನಾನೆಂದು 2ಭಾನು ಜಲದಲಿ ಪೊಳೆಯಲದರ ಕಂಪಾದಿಗಳುಭಾನುವಿನದೆಂದು ಭ್ರಮಿತರು ಬಗೆವ ತೆರದಿಜ್ಞಾನಮಯ ನಾದಾತ್ಮ ಹಮ್ಮಿನೊಳ್ಪೊಳೆಯಲಜ್ಞಾನದಿಂದೀ ರಾಸಿ ನಾನೆನ್ನುತಿಹರೊ 3ಈಯನಿರ್ವಚನೀಯ ಜೀವತ್ವವೆಂದರಿದುಕಾಯದಲಿ ಕೂಟಸ್ಥ ಸತ್ಯವೆಂದೂಮಾಯದಿಂದ ತೋರಿ ತಾನೀ ವಿಶ್ವಪುಸಿ ಎಂದುಹೇಯ ಭೋಗದಲನಾಸಕ್ತನಾಗಿರದೆ 4ತಾನು ನಿರ್ಲೇಪನೆಂದರಿಯದೆ ಶರೀರಾಭಿಮಾನದಿಂ ಗೋಪಾಲ ಯತಿಯ ಚರಣವನೂಸಾನುರಾಗದಲಿ ಸೇವಿಸದೆ ಮಿಥ್ಯಾವಿಷಯದೀನತೆಯನೈದಿ ರಾಗಾದಿಗಳ ಬಿಡದೆ 5
--------------
ಗೋಪಾಲಾರ್ಯರು
ಆವ ಕರ್ಮವಿಲ್ಲ ಆವ ಧರ್ಮವಿಲ್ಲವೋ |ಕೇವಲಾನಂದಭಾವ ಬೋಧದಲ್ಲಿ ಬೆರೆಯಲು ಪ ತನುವು ಬೇರೆ ಮನವು ಬೇರೆ | ಮನದ ಒಳಗೆ ನೆನಹು ಬೇರೆ | ತನುವು ಮನವು ನೆನವಿಗಿನ್ನು | ಸಾಕ್ಷಿಯಾಗಿಹ | ಚಿನುಮಯಾತ್ಮ ತಾನೆ ತನಗೆ | ಜನನ ಮರಣ ಎಂಬುದೆಲ್ಲ | ಮನದ ಆಟವೆಂದು ತಿಳಿದು | ಉನ್ಮನದಿ ಘನದಿ ನಲಿವಗೆ 1 ಸತ್ಯ ಶರಣರಡಿಯ ಪಿಡಿದು | ತತ್ತ್ವ ಶಾಸ್ತ್ರವನ್ನು ತಿಳಿದು |ನಿತ್ಯಾನಿತ್ಯವನು ವಿವರಿಸುತಲಿ | ಭಕ್ತಿಯಿಂದಲಿ ||ನಿತ್ಯ ಪೂರ್ಣ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು |ಚಿತ್ತದಲ್ಲಿ ತಿಳಿದುಕೊಂಡು | ಮಿಥ್ಯವೆಲ್ಲ ಕಳೆದಗೆ 2 ಹಿಂದಾದುದ ನೆನಿಸಲಿಲ್ಲ | ಮುಂದೆ ಒಂದು ಬಯಸಲಿಲ್ಲ |ಬಂದುದೆಲ್ಲ ಸುಖವು ಎಂದು ಶಾಂತದಿಂದಲಿ ||ತಂದೆ ಭವತಾರಕನ | ಹೊಂದಿ ಪೂರ್ಣ ವಸ್ತುವಾಗಿ |ಬಂಧನವನು ಕಡಿದು ಕೊಂಡು | ಆನಂದದಲಿರುವವಗೆ 3
--------------
ಭಾವತರಕರು