ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದ್ಧರಿಸೆನ್ನಯ್ಯ ಮುದ್ದು ಶ್ರೀಹರಿಯೆ ಬಿದ್ದು ಬೇಡುವೆ ನಿಮ್ಮ ಪಾದಪದ್ಮದೊಳು ಪ ಬದ್ಧಗುಣ ಬಚ್ಚಿಟ್ಟು ಶುದ್ಧ ಮನದವನಂತೆ ಸುದ್ದಿ ಹೇಳುತ ಸತತ ಕದ್ದು ತಿನ್ನುವ ಎನ್ನ ಬದ್ಧ ಮನಸಿನ ಡೊಂಕ ತಿದ್ದು ಬೇಗದೊಳು 1 ನಂಬಿಗುಳ್ಳವನಂತೆ ಹೇಳುವ ಪರರ ಅಂಬುಜಾಕ್ಷಯರೊಲುಮೆ ಹಂಬಲವ ಮನದಿ ತುಂಬಿಕೊಂಡಿಹ್ಯ ಎನ್ನಡೊಂಕ ಶಂಭುವಿನುತನೆ ತಿದ್ದಿ ಇಂಬುಗೊಡು ಜವದಿ 2 ಸಫಲಮಾನಿಸನಂತೆ ಜಪಮಾತುಗಳಾಡಿ ಕಪಟತ್ವದಿಂದಿತರ ಅಪಹರಿಸುವ ಕುಪಿತ ಮನಸಿನ ಡೊಂಕ ಅಪರೂಪತಿದ್ದಿ ನುತ ಸುಫಲದಾಯಕ ಹರಿ ಕೃಪೆಮಾಡು ಜವದಿ 3 ಹಸುತೃಷಳಿದವನಂತೆ ವಸುಧೆಜನರಿಗೆ ತೋರಿ ಬಸವಳಿದು ಬಾಯಾರಿ ದೆಸೆಗೆಟ್ಟು ಪರರ ಅಶನ ಬೇಡುಂಬ ಪುಸಿಯ ಮನಸಿನ ಡೊಂಕ ಹಸನಾಗಿ ತಿದ್ದಿ ಲಕುಮೀಶ ಒಲಿ ದಯದಿ 4 ಪಾಮರಮನದ ದುಷ್ಕಾಮಿತಗಳನೆಲ್ಲ ಕ್ಷೇಮದಿಂ ಕಡೆಹಾಯ್ಸಿ ಸ್ವಾಮಿಯೇ ನಿಮ್ಮ ನಾಮಧ್ಯಾನದ ನಿತ್ಯನೇಮವನು ಪಾಲಿಸಿ ಪ್ರೇಮದ್ಹಿಡಿಕರ ಶ್ರೀರಾಮಪ್ರಭುತಂದೆ 5
--------------
ರಾಮದಾಸರು
ಯಾರ ಕೃತಕವು ಇದು ವಿಚಾರವನು ಮಾಡಿ ಕಾರಣೀಕದ ಸ್ವಪ್ನ ಕಾಣುತಿದೆ ನೋಡಿ ಪ ಕಾಳ ಮೇಘಧ್ವನಿಯು ಗಾಳಿ ಮಳೆ ಮಿಂಚುಗಳು ಧಾಳಿ ಇಡುತಿಹ ಸಿಡಿಲು ಬಹಳ ಕತ್ತಲೆಯು ಹಾಳೂರ ಮಧ್ಯದೊಳು ಬೀಳುತಿಹ ವಾರಿಗಳು ಮೃಗ ಮೈಮೇಲೆ ಬೀಳುವುದ 1 ವೃಷ್ಟಿ ತೀರುವ ತನಕ ಇಟ್ಟೆಡೆಯೊಳಿರುತಿರ್ದು ಕೆಟ್ಟ ಪಥದಲಿ ಚಾರುಗಟ್ಟಿವಿಳಿದು ಗಟ್ಟಿಯಾಗಿಹ ಚಳಿಯು ಹುಟ್ಟಿ ಕೈಕಾಲುಗಳು ಒಟ್ಟಾಗಿ ಕೂಡಿರ್ದು ದೃಷ್ಟಿ ಬಿಡುತಿಹುದು 2 ಬಿಸಿನೀರ ಮಳೆಯೊಳಗೆ ನುಸಿತ ಗುಣೆಯಸೆಯೊಳಗೆ ಎಸೆದು ತೋರುವ ಉರಿಯ ಹಸಿಯ ಮೆಣಸಿನೊಳು ಗಸಣಿಯನು ಕೈಕೊಂಡು ಕಸಮುಸುರೆಯಾಗಿರ್ದು ಉಸುರಲಾರದೆ ತೃಷೆಯ ಹಸಿದ ಬಳಲಿಕೆಯ 3 ನಿಂದೆಯಾಗಿಹ ಮೃಗದ ಚಂದವನು ಮೈಗೊಟ್ಟು ಬಂದುದೆನಗೈಶ್ವರ್ಯ ಎಂದು ಹರುಷಿಸುತ ಮಂದಹಾಸದ ಒಳಗೆ ಬಂಧನದಲಿರುತಿರ್ದು ಮುಂದುವರಿದು ವ್ಯಸನದೊಳು ಬಂದಿರ್ದ ಬಗೆಯ 4 ಮೂರು ಮಂದಿಯು ಬಂದು ಸೇರಿದರು ದೂರಿಡುವ ಆರು ಕರೆದರು ತಾನು ಬಾರೆನೆಂಬ ಮೇರೆಯಾಗಿಯೆ ಬಪ್ಪ ಮೂರಾರು ತಾ ಬಿಡುವ ಸಾರಿ ಚೋರತ್ವದಲ್ಲಿ ಪರವೂರ ಸುಲಿವ 5 ಮೇಲು ದುರ್ಗವ ಕಂಡು ಗಾಳಿಗೋಪುರವನ್ನು ಆಳ ಬಲುಹುಳ್ಳವನು ಅವಸರದೊಳು ನೂಲಯೇಣಿಯನಿರಿಸಿ ಏರಿಳಿದು ಬಾಹಾಗ ಕಾಲು ಜಾರಿಯೆ ಬಸಿದ ಶೂಲದೊಳು ಬೀಳುವುದು 6 ಹೀಗಿರುವ ಕೃತ್ಯಗಳು ನಾಗಶಯನನಿಗರುಹು ಬೇಗದೊಳು ಪರಿಹರಿಪ ಯೋಗವನು ಕೊಡುವ ನಾಗಗಿರಿವಾಸನಹ ವರಾಹತಿಮ್ಮಪ್ಪ ತೂಗುವನು ತೊಟ್ಟಿಲೊಳು ಆಗುವುದನಿತ್ತು 7
--------------
ವರಹತಿಮ್ಮಪ್ಪ
ಯಾರು ಇಕ್ಕುವರೆಂದು ಹಾರೈಸುವೈ ಆತ್ಮ ಸೋರುತಿದೆ ಮನೆಯೆಲ್ಲ ನಾರುತಿದೆ ಸ್ಥಳವು ಪ ಒಲೆಯೊಳಗೆ ಉರಿಯಿಲ್ಲ ಜಲವಿಲ್ಲ ಬಾವಿಯೊಳು ಕಲಹ ಮಾಳ್ಪಳು ತನ್ನ ಕುಲವನಿತೆಯು ಹೊಲುಬುದಪ್ಪಿಯೆ ಇಲ್ಲಿ ಬರಬಹುದೆ ನೀನೀಗ ಫಲವುಳ್ಳ ಮನೆಗಳನು ಸೇರೆಲವೊ ಆತ್ಮ 1 ಬಾಗಿಲಿಲ್ಲದ ಮನೆಯು ಬಹಳ ಕಗ್ಗತ್ತಲೆಯು ಕೂಗುವುದು ಹುಲಿ ಕರಡಿ ಇದಿರಿನೊಳಗೆ ಬೇಗದೊಳು ಇಲ್ಲಿಂದ ಸಾಗುವುದೆ ಸೌಖ್ಯಗಳು ನಾಗಶಯನನ ಗುಡಿಯ ಸೇರೆಲವೊ ಆತ್ಮ 2 ಒಟ್ಟೆಗಡಿಗೆಯ ಒಳಗೆ ಇಟ್ಟಿರ್ದ ಬುತ್ತಿಗಳು ಕೆಟ್ಟ ಕ್ರಿಮಿಗಳು ಬಂದು ಬಹಳ ಹಳಸಿದವು ಬಟ್ಟಲಿಡುವವರಿಲ್ಲ ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬುವುದುಂಟೆ ದುಷ್ಟರೊಳು ಆತ್ಮ 3 ಹಾಳು ಮನೆಯನು ನಿನಗೆ ತೋರಿಕೊಟ್ಟವರಾರು ಬೀಳುವುದು ಮೇಲೆ ಹದಿನಾರು ಭಿತ್ತಿಗಳು ಏಳು ಇಲ್ಲಿರಬೇಡ ಕಾಳಸರ್ಪನು ಬಂದು ಕಾಲ ಕಚ್ಚ್ಚುವನಲ್ಲೊ ಎಲೆ ದುಷ್ಟ ಆತ್ಮ 4 ಮೂರು ಮಾತನು ಮೇಲೆ ಯಾರ ಕೂಡಾಡಿದೆಯೊ ಆರು ಪಥದಲಿ ನೀನು ಮೀರಿ ನಡೆದೆ ಕೇರಿಯಾಗಿರ್ದ ಹದಿನೆಂಟು ಅಂಗಡಿಯೊಳಗೆ ಆರ ವ್ಯಾಪಾರವನು ಕೇಳಿದೈ ಆತ್ಮ 5 ಹತ್ತು ತಾಸಿನ ಮೇಲೆ ತುತ್ತು ಕೊಡುವವರಾರು ಬತ್ತುವುದು ಕೈಕಾಲು ಬಳಲಿಕೆಯೊಳು ಮತ್ತೇಳು ಮಂದಿ ತಾವತ್ತತ್ತ ಸಾರುವರು ಕರ್ತುಗಳ ನಾ ಕಾಣೆ ನೀ ಕೇಳೊ ಆತ್ಮ 6 ಎಂಟು ಮಂದಿಯು ತನಗೆ ನೆಂಟರೆಂಬಾಶೆಯೊಳು ಗಂಟ ಕಟ್ಟಿಯೆ ಮನದಿ ಮರುಗುತಿರಲು ಗಂಟಲೊಣಗಿಯೆ ವಾಯು ಕಂಠದೊಳು ಪೋಪಾಗ ನಂಟರನು ನಾ ಕಾಣೆ ಆಲಿಸೈ ಆತ್ಮ 7 ಆಯವಿಲ್ಲದ ಮನೆಯು ಛಾಯೆ ಇಲ್ಲದ ಮಡದಿ ದಾಯವಿಲ್ಲದ ಊರು ಕರಕಷ್ಟವು ಬಾಯ ಹೊಯ್ಯೆಂಬರೊಳು ನ್ಯಾಯ ಸೇರುವುದೆ ಉ- ಪಾಯದಲಿ ಸಾರೆಲೆವೊ ಸಾರಿದೆನು ಆತ್ಮ 8 ಮೂಡಗಿರಿವಾಸನೊಳು ಬೇಡಿಕೊಂಡರೆ ನಿನಗೆ ನೀಡುವನು ಧರ್ಮವನು ಧೈರ್ಯನಾಗಿ ಬೀಡುಬಿಟ್ಟಲ್ಲಿಂದ ಓಡುವುದು ಸುಖದೊಳಗೆ ಕೂಡುವುದು ವರಾಹತಿಮ್ಮಪ್ಪನೊಳು ಆತ್ಮ 9
--------------
ವರಹತಿಮ್ಮಪ್ಪ