ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನು ನಾನುಗೋ- ವಿಂದ ನಿನ್ನಯ ಪಾವನ್ನ ಪಾದವನ್ನು ನಾ ಪೊಂದಿಸೇವಿಸಿ ಆನಂದಪಡುವುದಕಿನ್ನು ಕರುಣಿಸೈ ಮುನ್ನ ಪ ಪೊಂದಿ ಮಹದಾನಂದ ಪಡೆಯಲು ಕಂದಿಕುಂದಿತು ತನುಮನೇಂದ್ರಿಯ ಇಂದೆ ತೋರಿಸೊ ಪಾದಕಮಲವ ಅ.ಪ ಬಾಲತನದಲಿ ನಾನು ಶ್ರೀಲೋಲ ನಿನ್ನಿಂದ ಪಾಲಿತನಾದೆನೊ ಬೆಲೆಯುಳ್ಳ ಆಯುವನೆಲ್ಲ ಕಳೆದು ಬಿಟ್ಟೆನು ನಾನು ಕೆಲಕಾಲದಲಿ ನಾ ಕಲುಶಕ್ರಿಯೆಗಳನ್ನು ಫಲವಿಲ್ಲದೆಸಗಿದೆನು ಎಲ್ಲರೊಳು ನೀ ನೆಲಸಿ ಜೀವರ ಎಲ್ಲಕರ್ಮವ ಮಾಡಿಸಿ ಫಲವೆಲ್ಲ ಅವರಿಗೆ ಇತ್ತು ನೀ ನಿರ್ಲಿಪ್ತನೆಂದು ತಿಳಿಯದಲೆ ಖುಲ್ಲಮಾನವರೊಡನೆ ಬೆರೆತು ಪುಲ್ಲಲೋಚನ ನಿನ್ನ ಮರೆದು ಇಲ್ಲ ಎನಗೆ ಎಣೆಯೆನುತ ನಾ ಬಲುಹೆಮ್ಮೆಯಿಂದಲಿ ದಿನಗಳ ಕಳೆದೇ ಇಲ್ಲನಿನಗೆಸರಿಯಿಲ್ಲ ನೀ ನಿಲ್ಲದಾಸ್ಥಳವಿಲ್ಲ ಜಗದಾ ಎಲ್ಲ ಕಾಲಗಳಲ್ಲಿ ಇಹ ಶ್ರೀನಲ್ಲ ನೀನೆಲ್ಲ ಬಲ್ಲೆಯೊ 1 ಬರಿದೇ ಕಾಲವ ಕಳೆದೇ ಶ್ರೀಹರಿಯೆ ನಿನ್ನಯ ಸ್ಮರಣೆಯನ್ನು ಮಾಡದೇ ಪರಿಪರಿಯ ತನುಮನ ಕ್ಲೇಶಗಳಿಗೊಳಗಾದೆ ನಾಮಸ್ಮರಣೆಯೊಂದಲ್ಲದೇ ಇನ್ನೆಲ್ಲಾ ಬರಿದೇ ಪರಮಕರುಣಾಶರಧಿ ಎಂಬುವ ಕರಿಧ್ರುವಬಲಿಮುಖ್ಯರೆಲ್ಲರ ಪೊರೆದ ಕೀರುತಿ ಕೇಳಿ ನಂಬಿದೆ ಶರಣಜನಮಂದಾರನೆಂದು ಅರಿಯೆ ನಾನವರಂತೆ ಸಾಧನ ಅರಿತು ಮಾಡುವ ಪರಿಯು ತಿಳಿಯದು ಬಿರುದು ಭಕ್ತಾಧೀನನೆಂದು ಹರಿಯೆ ನಿನ್ನಯ ಮರೆಯಹೊಕ್ಕೆನು ದುರಿತಶರಧಿಯೊಳಾಡುತಿರುವನ ಉ- ತ್ತರಿಸಲೊಂದೇ ನಾವೆಯಂತಿಹ ಚರಣಸ್ಮರಣೆಯಕೊಟ್ಟು ರಕ್ಷಿಸು ಪುರುಷಸೂಕ್ತಸುಮೆಯ ಜೀಯಾ2 ಶೇಷಗಿರಿಯವಾಸ ಶ್ರೀ ಶ್ರೀನಿವಾಸ ದೋಷರಹಿತ ಸರ್ವೇಶ ಮನೋ- ಕಾಶದಲಿ ಅನವರತ ನಿಲ್ಲೊ ಶ್ರೀಶಾ ಬಿಡಿಸೆನ್ನ ಭವಬಂಧ ಗ್ರಂಥಿಯ ಪಾಶಾ ಹರಿಸುವುದು ಕ್ಲೇಶಾ ಶ್ರೀಶ ನಿಗಗತಿಶಯವೆ ಎನ್ನಯ ವಿಷಯದಭಿಲಾಷೆಗಳ ಬಿಡಿಸೀ ದೋಷರಹಿತನ ಮಾಡಿಸೀ ಎನ್ನ ಪೋಷಿಸೋ ನಿನ್ನಸ್ಮರಣೆಯಿತ್ತು ದ್ವಾಸುಪ- ರ್ಣ ಶ್ರುತಿಗಳಿಂದಲಿ ಈಶ ದಾಸರ ಭಾವ ತಿಳಿಯದೆ ಮೋಸಹೋದೆನೊ ಬೋಧೆ ಇಲ್ಲದೆ ವಾಸುದೇವನೆ ರಕ್ಷಿಸೆನ್ನನು ಏಸುಕಾಲಕು ನೀನೆ ಗತಿ ಎಂದು ಆಸೆ ಮಾಡುವೆ ನಿನ್ನ ಕರುಣಕೆ ಬೇಸರದಲೆ ಮೊರೆಯ ಲಾಲಿಸಿ ಶ್ರೀಶ ಶ್ರೀ ವೆಂಕಟೇಶನೆ 3
--------------
ಉರಗಾದ್ರಿವಾಸವಿಠಲದಾಸರು
ಗುರುಸುಶೀಲೇಂದ್ರ | ಚರಣವಾರಿಜ ಯುಗ್ಮ ಸ್ಮರಿಸುವ ನರರು ಶ್ರೀಹರಿದಾಸರು ಪ ಹರಿವರ ಸುಮಚಾಬ್ಧಿ | ಹರಿಣಾಂಕರೆನಿಸಿದ ವರಸುವೃತೀಂದ್ರರ ತೀರ್ಥರ ಕರಕಮಲಜ ಅ.ಪ ಮಾಸ ತ್ರಯದಿ ಸಡಗರದಲಿ ಮಹ ಸಭೆ ನಿರ್ಮಿಸಿ ಪೊಡವಿಯೊಳಿದ್ದ ಭೂಸರರಾಜ್ಞ ಪತ್ರ ಬರಮಾಡಿ ವಿದ್ವಾಂಸರ ಒಡಗೂಡಿ | ಮಧ್ವಾಗಮನವನು ನೋಡಿ ಬೆಲೆಯುಳ್ಳವೆಗ್ಗಳ ಒಡವೆ ಉಡುಪಗಳನು ಕರುಣಿಸಿ ಮೃಷ್ಟಾನ್ನ ದ್ವಿಜರಿಗೆ ಕಡು ಸುಪ್ರೇಮದಿ ಸಲಿಸಿ | ಮುದ ಬಡಿಸಿ ಜಡಕುಮಾಯ್ಗಳ | ಗಡಣ ಜಡಧಿಗೆ ವಡೆಯ ತಾನೆನಿಸಿ ಕ್ರೋಢ ಜಾಸ್ಥಿತ | ಒಡೆಯ ಶ್ರೀಗುರು ರಾಘವೇಂದ್ರರ ಅಡಿಗಳಾಬ್ಜಕಾ ರಡಿಯಂತೊಪ್ಪುತ | ಬಿಡದೆ ಸಂತತ ಧೃಢದಿ ಸೇವಿಸಿ ಜಡಜ ಜಾಂಡದಿ ಮೆರೆದ ಅಸ್ಮದ್ 1 ತರಣಿ ಕುಲೇಂದ್ರನ ಕರುಣವೆಷ್ಟಿವರೊಳು ಅರುಹಲಾರೆ ವರಕಾಪ್ಯಾಸನ ಪುರಕೆ ಎರಡಾರು ಯತಿಗಳ ವತಿಯಿಂದ ತಮ್ಮಯ ಶಿಷ್ಯ ತತಿಯಿಂದ ಬಹುವಿಧ ಬಿರುದಾವಳಿಯಿಂದ ತೆರಳಿ ಶಶಿರವಿವರ ಸುವಾದ್ಯಧ್ವಾನ ಮೊಳಗಿಸುತ ‌ಘನ ಭಕ್ತಿ ಪರವಶರಾಗಿ ಸುರಚಿರ ಕನಕಮಣಿ ಧನ ತನುಮನ ತ್ವರಿತ ತೃಣ ಬಗೆಯ ದೇವಕಿ ತರಳ ರುಕ್ಮಿಣಿ ವರ ಮುರಾಂತಕÀ ಚರಣಗರ್ಪಿಸುತ | ಆನಂದಪಡುತ ಸರ್ವಮುನಿ ಜನಗಳಿಗೆ ಬಲು ಉಪಚರಿಸಿ | ಮನ್ನಣೆ ಧರಿಸಿ ಹರುಷದಿ ವರ ಸುಧೀಂದ್ರರ ಕರಜರನು ನೆರೆಸ್ಥಾಪಿಸಿ ಆಶ್ಚÀರ್ಯ ಚರಿತ 2 ಪತಿ ಶೃತಿ ಶಾಸ್ತ್ರಾರ್ಥ ಚತುರ ತನದಿ ಪಡೆದು ವಿತತ ಮಹಿಮನಾದ ಪತಿತ ಪಾವನ ಶಾಮಸುಂದರನ ಸ್ತುತಿಸುತಲಯ ಚಿಂತನೆ ಗೈಯುತ ಶ್ರೀಯುತ ಸಂಸ್ಥಾನಮತಿ ವಿಶಾರದರಾದವರ ಸುವೃತೀಂದ್ರ ತೀರ್ಥರಿಗೆ ಹಿತದಿಂದ ಒಪ್ಪಿಸಿ | ಯತಿ ಧೀರೇಂದ್ರರ ಚಾರುಸ್ಥಳದೊಳಗೆ ತನುವಿತ್ತು | ಹರಿಪುರಪಥವ ಪಿಡಿದೈದಿದರು ಚನ್ನಾಗಿ | ಸೇವಿಪ ಜನರಿಗೆ ಅತಿದಯದಿ ಮನೋರಥವ ನೀಡುತ ಸತತ ಮಾಣದೆ ಪರಮ ಭಕುತಿಲಿ ಪೃಥ್ವಿ ಸುರಕರ ಶತಪತ್ರಗಳಿಂದ ನುತಿಸಿಕೊಳುತಲರ್ಚನೆಗೊಂಬ 3
--------------
ಶಾಮಸುಂದರ ವಿಠಲ
ಜ್ಞಾನಶೂನ್ಯಗಾತ್ಮದನುಭವವ್ಯಾಕೆ ಹೀನ ಸಂಸಾರಿಗೆ ಪರದ ಸುದ್ದ್ಯಾಕೆ ಪ ಕತ್ತೆಗೆ ಬೆಲೆಯುಳ್ಳ ಉತ್ತಮ ಜೀನ್ಯಾಕೆ ಕೃತ್ರಾಮಗೆ ಸತತ ಸತ್ಪಥದ ಬೋಧ್ಯಾಕೆ ತೊತ್ತಿಗ್ಹೋಗುವಗರಸೊತ್ತಿಗಧಿಕಾರವ್ಯಾಕೆ ಮಿಥ್ಯೆಮತಿಗ್ಯಾತಕ್ಕೆ ಉತ್ತಮರ ನೆರೆಯು 1 ನಂಬಿಗಿಲ್ಲದವಗ್ಯಾಕೆ ಗುಂಭದ ಮಾತುಗಳು ಜಂಬಕೊಚ್ಚುವವಗ್ಯಾಕೆ ಗಂಭೀರತನವು ಅಂಬುಜಾಕ್ಷನ ಚರಿತ ಡಂಭನಿಗ್ಯಾತಕ್ಕೆ ಗೊಂಬೆಯಾಟಗಾರಗ್ಯಾಕೆ ತಂಬೂರಿ ತಬಲ 2 ದಾನಧರ್ಮದ ಮಹಿಮೆ ಜೀನನಿಗೆ ಏತಕ್ಕೆ ಗೋಣು ಮುರಿವವಗ್ಯಾಕೆ ದೈನ್ಯಮಾತುಗಳು ನಾನಾ ಬಯಕೆಯುಳ್ಳ ಮಾನವಗೆ ಭಕ್ತಜನ ಪ್ರಾಣ ಶ್ರೀರಾಮ ನಿಮ್ಮ ಧ್ಯಾನವಿನ್ಯಾಕೆ 3
--------------
ರಾಮದಾಸರು