ಒಟ್ಟು 10 ಕಡೆಗಳಲ್ಲಿ , 4 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೇಶ ಭವಬಂಧನ ಬಿಡಿಸೊ ನಿನ್ನಾನಂದದೊಳಿರಿಸೊ ಪ ಸಿಂಧುಶಯನ ಗೋವಿಂದ ಮುರಾರೆ ಅಚಿಂತ್ಯಾದ್ಭುತ ಶೌರೆ ಅ.ಪ. ತಾಳಲಾರೆನೊ ಈ ತಾಪತ್ರಯ ಹರಿಸೊ ನಿನ್ನವನೆನಿಸೊ ಕಾಲಕರ್ಮ ಕೋಟಲೆ ತಪ್ಪದಲ್ಲ ನೀ ಕೇಳೆನ್ನ ಸೊಲ್ಲ ವಾಕು ಪಾಲಿಸಿ ಎನ್ನನು ಪಾರುಗಾಣಿಸೊ ಫಣಿರಾಜಶಯ್ಯ 1 ಪರಿಪರಿಯಿಂದಲಿ ಜನ್ಮ ಧರಿಸಿ ಕರೆದುತಂದೆ ಈ ಜನ್ಮದಿ ನಿಂದೆ ಅರಿಯದವರಂತಿರುವರೆ ಕಾಯುವ ಕರುಣಿ ನೀನು ದೀನಜನ ಸುರಧೇನು 2 ಅಂಬರ ಮಣಿಯಂತೆ ಬಿಂಬ ಮೊಳಗ್ಹೊಳೆದು ದುರಂತ ಕರ್ಮಂಗಳ ಕಳೆದು ಹಂಬಲಿಸುವ ಭಕುತರ ಬೆಂಬಲಿಗನೆನಿಸಿ ಸಂತತ ನಿನ್ನ ಸುಖಸಿರಿಯ ಸುರಿಸೊ 3 ಬಿಂಬವು ಒಲಿದರೆ ಪ್ರತಿಬಿಂಬ ಫಲಸುವದುಂಟು ಈ ಮಾತು ನಿಘಂಟು ಬಾಂಬೊಳೆ ಹರಿಸಿದ ಹರಿ ಮಾನಿಧಿವಿಠಲ ನೀನಲ್ಲದಿನ್ಯಾರೋ ದೇವರ ದೇವಾ 4
--------------
ಮಹಾನಿಥಿವಿಠಲ
ಕರುಣಾ ಪೊಂದಿರೆ ಕೊರತೆಗಳುಂಟೆ ಶ್ರೀ ನರಹರಿಯ ಪ ನರಿಗಳ ಕೂಗಿಗೆ ಹುಲಿಯಂಜುವುದೆ ಬಿರುಗಾಳಿಗೆ ದೊಡ್ಡ ಗಿರಿ ನಡುಗುವುದೆ ಅ.ಪ ನಾನು ತಾನೆಂದು ಕುಣಿಯುತಲಿದ್ದ ಮಾನವರನು ಜರಿದು ನೀನೆ ಸೇವೆಯನು ಮಾಡೆಂದೆನುತ ತಾನೊಲಿಯುತಲಿ ಹೀನ ಜನರು ಅಪಮಾನವ ಬಯಸಲು ನಾನಿಹೆನೆನ್ನುವ ಜಾನಕಿನಾಥನ 1 ಬಂಧುಗಳೆನ್ನ ನಿಂದಿಸುತಿಹರು ಒಂದನೂ ಕೊಡೆಯೆಂದು ಹಿಂದು ಮುಂದೆನಗೆ ಕುಂದು ಕೋರುವರು ಒಂದನರಿಯರು ಮುಂದೆ ಎನಗೆ ಬಲು ತೊಂದರೆಗಳಿರುವು ವೆಂದು ಪೇಳುವರು ಮಂದರಧರನ 2 ಧನಿಕನಲ್ಲೆಂದು ಅಲ್ಲಗೆಳೆಯುವರು ಧನವಿಲ್ಲದಿರಲು ಘನತೆ ಎಂತೆಂದು ಜರಿಯುತಲಿಹರು ಮನವನರಿಯರು ಧನ ಪಿಶಾಚಿಯನು ಮನದಿಂದ ತೊಲಗಿಸಿ ಮನದಲಿ ನೆಲಸಿಹ ವನರುಹ ನಯನನ 3 ನಂಬಿದರೆಮ್ಮ ಧನಕನಕಗಳ ತುಂಬುವೆವೆಂಬ ಜಂಭದ ಮಾತ ನಂಬದೆ ಇರಲು ಹಂಬಲಿಸುವರು ನಂಬುವ ಭಕುತರ ಹಿಂಬಾಲಿಸುತಲಿ ಬೆಂಬಲಿವೀಯುತವ ಅಂಬುಜನಾಭನ 4 ಚತುರನಲ್ಲೆಂದು ಅತಿದೂರುವರು ಹಿತರಂತೆ ನಟಿಸಿ ಮಿತಿಮೀರಿ ಎನಗೆ ಬೋಧಿಸುತಿಹರು ಮನ್ಮತಿಯನರಿಯರು ರತಿಪತಿಯೆನ್ನನು ಪ್ರಸನ್ನನಾಗಿ ದಿವ್ಯ ಗತಿ ತೋರುತಲಿರೆ ಚತುರತೆಯೇತಕೆ 5
--------------
ವಿದ್ಯಾಪ್ರಸನ್ನತೀರ್ಥರು
ಕರುಣಿಸು ದೇವದೇವ ಸೆರಗೊಡ್ಡಿ ಬೇಡುವೆನಭವ ಪರಿಹರಿಸು ಎನ್ನ ಕರುಣಾಳು ಲಕ್ಷ್ಮಿಯ ಜೀವ ಪ ಅಂಬುಧಿಶಾಯಿಯೆ ನಿನ್ನ ಭಜಿಪೆ ಪಾವನ್ನ ಅಂಬುಜಸಂಭವಪಿತನೆ ಕಂಬುಕಂಧರಪ್ರಿಯಸಖನೆ ಅಂಬುಧಿಯಸಂಜಾತೆರಮಣ ಬೆಂಬಲಿಸಿ ಕಾಯೊ ಬಡವನ್ನ 1 ಸುಂದರಕಾಯ ಇಂದಿರೆಯ ಪ್ರಾಣಪ್ರಿಯ ಬಂಧನದ ಬಡತನ ಕಳಿಯೊ ವಂದಿಸಿ ಮರೆಹೊಕ್ಕೆ ಜೀಯ 2 ಈಸೀಸಿ ಸಂಸಾರನಿಧಿಯ ಬೇಸತ್ತು ಬಿಡುವೆನೊ ಬಾಯ ಘಾಸಿ ಮಾಡದೆ ಸಲಹಯ್ಯ 3
--------------
ರಾಮದಾಸರು
ಕೇಳವ್ವ ತಂಗಿ ಕೇಳವ್ವ ಕೇಳಿ ತಿಳಿದು ನೀ ಬಾಳವ್ವ ಪ ನೀಲವರ್ಣನ ಕೃಪೆಯ ಪಡೆಯಲಿಕ್ಕೆ ನಾಳೆಂದರೆ ಮನೆಹಾಳವ್ವ ಅ.ಪ ಅಂಬುಜಾಕ್ಷನ ಪಾದಪಕಮಲವ್ವ ನೀ ನಂಬಿದ್ದಿ ಬಿಡಬೇಡ ಸಂಗವ್ವ ನಂಬಿದ ಭಕ್ತರ ಬೆಂಬಲಿಸಾತನು ಇಂಬುಗೊಟ್ಟು ಕಾಯ್ವ ಸಂಭ್ರಮ ಕೀರ್ತೆವ್ವ 1 ಒಂದೆ ಮನಸಿನ ಬಾಗವ್ವ ಗೋ ವಿಂದನ ವರಪಡಿ ಚೆಂದವ್ವ ಮಂದರಧರನ ಹೊಂದಿಕೊಳ್ಳಲಿಕ್ಕೆ ಹಿಂದು ಮುಂದು ನೋಡಬೇಡ ಮುಕ್ತ್ಯವ್ಯ 2 ಒಂದಿನ ಹೋಗ್ವುದು ಸತ್ಯವ್ವ ತಂಗಿ ಸಂದೇಹ್ಯ ಪಡಬೇಡ ಹುಚ್ಚವ್ವ ತಂದೆ ಶ್ರೀರಾಮ ಗತಿಯೆಂದು ನಂಬಲು ನಿನಗೆ ಬಂಧನವೆಲ್ಲ ಬೈಲವ್ವ 3
--------------
ರಾಮದಾಸರು
ಜಗದೀಶ ವಿಠ್ಠಲನೆ | ಮಗುವ ಕಾಯೋ ಪ ಹಗಲಿರುಳು ಬೆಂಬಲಿಗ | ನಾಗಿ ನೀ ಕರುಣದಲಿಬಗೆಬಗೆಯ ಸುಖವಿತ್ತು | ಹಗರಣವ ಕಳೆಯೋ ಅ.ಪ. ಮರುತ ಮತ ತತ್ವಗಳ | ಅರಿವಿಕೆಯ ಕೊಡು ಇವಗೆಹರಿಗುರೂ ಸತ್ಸೇವೆ | ಪರಮ ಹರುಷದಲೀನಿರುತ ಗೈಯ್ಯು ಮನವ | ಕರುಣಿಸುವುದೆಂದೆನುತಪರಿಪರಿಯ ಪ್ರಾರ್ಥಿಸುವೆ ಶರಧಿಜೆಯ ರಮಣಾ 1 ಕಾಕು ಸಂಗವ ಕೊಡದೆ | ನೀ ಕೊಟ್ಟು ಸತ್ಸಂಗತೋಕನನು | ಪೊರೆಯೆಂದು | ನಾ ಕೇಳ್ವೆ ಹರಿಯೇಬೇಕಾದ ವರ ಇವಗೆ | ನೀ ಕೊಡುತ ಕಾಯುವುದುಶ್ರೀಕಾಂತ ಬೇಡುವೆನೊ ನೀ ಕರುಣಿ ಎನುತಾ 2 ಪಾವಪಾನಿಯ ಪ್ರೀಯ | ಝಾವ ಝಾವಕೆ ನಿನ್ನಪಾವನ ಸ್ಮøತಿಯಿತ್ತು | ಕಾವುದೈ ಹರಿಯೇಪಾವು ಮದ ಹರ ಗುರೂ | ಗೋವಿಂದ ವಿಠ್ಠಲನೆನೀವೊಲಿವುದಿವಗೆಂದು | ಭಾವದಲಿ ಬೇಡ್ವೆ 3
--------------
ಗುರುಗೋವಿಂದವಿಠಲರು
ಜಯವ ಪಾಲಿಸಿ ಸಲಹೆ ಜನನಿ ಜಯಲಕ್ಷ್ಮಿ ಜಯಂಕರಿ ಪ ಭಯವಿಮೋಚನೆ ಭಜಿಪೆ ನಿನ್ನ ಜಯವ ವೊಂದಿಸಿ ಭವದಿ ಎನ್ನ ದಯದಿ ಬೆಂಬಲಿರ್ದು ಬಿಡದೆ ಕೈಯ ಪಿಡಿದು ಕಾಯೌ ಸುದಯೆ 1 ಜ್ಞಾನಜ್ಯೋತಿ ಸುಪ್ರಕಾಶ ಮಾಣದಿತ್ತು ಮಮತೆಯಿಂದ ಹಾನಿತಾರದೆ ಪೊರೆಯೆ ಸತತ 2 ಕಾಮಿತಾರ್ಥ ಪೂರ್ಣೆ ಸುತಗೆ ಭೂಮಿಯಾತ್ರೆ ವಿಜಯನೀಡು ಶಾಮಸುಂದರ ಸ್ವಾಮಿ ಶ್ರೀ ರಾಮನ ಪಟ್ಟದರಾಣಿ ಕರುಣಿ 3
--------------
ರಾಮದಾಸರು
ಧ್ಯಾನದ ತುತೂರಿ ಹಿಡಿಯೊ ಸಾಗರ ಶಾಯಿಯೆ ಮೂಜಗ ಧಣಿಯೆಂದು ಜಾಗಟೆ ಡÀಣ್ ಡಣ್ ಬಡಿಯೊ ಪ ಅನುದಿನ ಮನಮುಟ್ಟು ನೆನೆಯುವ ಭಕ್ತರ ಮನದೆಣಿಕೆಯನು ನೀಡುವ ಕನಿಕರದಿಂ ಕಾಪಾಡುವ ಜನಕಜೆವಲ್ಲಭ ತನ್ನವರನು ಬಿಟ್ಟು ಕ್ಷಣ ಅಗಲಿರೆನಾ ವನಜನಾಭನೆಂದು 1 ಎಡೆಬಿಡದೊಡತೊಳ ಧೃಢದಿಂ ಭಜಿಪರ ಕಡುದಯಾದೃಷ್ಟಿಯಿಂ ನೋಡುವ ಸಡಗರದವರೋಳಾಡುವ ಮೃಡವಂದಿತ ತನ್ನಡಿಯ ದಾಸರ ಕರಪಿಡಿದು ಬಿಡದೆ ಕಾಯ್ವ ಸಡಗರದೊಡನೆಂದು 2 ನರಹರಿ ಚರಣವ ಪರಿಪರಿ ಸ್ಮರಿಪರ ದುರಿತರಾಸಿ ದೂರ ಮಾಡುವ ಬರುವ ಸಂಕಟ ನಿವಾರಿಸುವ ಜರಾಮರಣ ದೂರಮಾಡಿ ಪರಮ ಪರತರ ಸಿರಿಸೌಭಾಗ್ಯ ಕರುಣಿಪ ಸ್ಥಿರವೆಂದು 3 ಚಿತ್ತಜತಾಪನ ಸಚ್ಚರಿತವನು ನಿತ್ಯ ಬಿಡದೆ ಕೊಂಡಾಡುವರ ಭಕ್ತ ಜನರ ನೋಡಿ ಬಾಗುವರ ಮೃತ್ಯುಬಾಧೆ ಗೆಲಿ ಸತ್ಯಾನಂದವ ನಿತ್ತು ಪೊರೆವ ಹರಿ ಸತ್ಯ ಸತ್ಯವೆಂದು 4 ದೀನರಾಪ್ತನಾದ ಧ್ಯಾನಮೂರುತಿ ತನ್ನ ಧ್ಯಾನಿಸುವರ ಬೆಂಬಲಿಸುವ ಮಾನದಿಂದ ಭವಗೆಲಿಸುವ ಏನು ಬೇಡಲಾನಂದ ದೀಯ್ವನು ಪ್ರಾಣೇಶ ಶ್ರೀರಾಮ ದೇವ ದೇವನೆಂದು 5
--------------
ರಾಮದಾಸರು
ನೀಚಕೃತ್ಯದ ಮನಸೇ ನಿನಗೆ ತುಸು ನಾಚಿಕಿಲ್ಲಲೆ ಹೊಲಸೆ ಪ ಪ್ರಾಚೀನಹಿರಿಯರ ಯೋಚಿಸಿನೋಡದೆ ನೀಚತನದ ಆಲೋಚನೆಯೊಳು ಬಿದ್ದು ಅ.ಪ ಕುಂತಿಸುತನ ರಥವ ನಡೆಸಿದನು ಅ ತ್ಯಂತ ಕೃಪೆಯಿಂದ ಹರಿಯು ಕಂತುಜನಕ ಭಕ್ತ ಚಿಂತಾಯಕನೆಂದು ಅಂತರಂಗದಿ ಭಜಿಸಿ ಸಂತಸ ಪಡುವಲ್ಲಿ 1 ಅಂಬರೀಷನೆಂಬುವ ನೃಪಗೆ ಮುನಿ ಡೊಂಬೆಯಿಂಬ (?) ಶಾಪಿಸಲು ಅಂಬುಜಾಸನ ಬಂದು ಬೆಂಬಲಿಸಿ ನೃಪನನ್ನು ಇಂಬಿಟ್ಟು ಪೊರೆದದ್ದು ನಂಬಿ ಭಜಿಸವಲ್ಲಿ 2 ಭೂಮಿಪ ಬಲಿಚಕ್ರನ ಬಾಗಿಲ ಕಾಯ್ದ ಪ್ರೇಮದಿಂ ರಮೆಯರಸನು ಪ್ರೇಮದಿಂ ಭಕುತರ ಕಾಮಿತವೀಯಲು ಕಾಮಧೇನೀತನೆಂದು ನೇಮದಿಂದರವಲ್ಲಿ 3 ಗೌತಮ ಮುನಿಸತಿಯು ಪಾಷಾಣವಾಗಿ ಕ್ಷಿತಿಮೇಲೆ ಎರಗಿರಲು ಕ್ಷಿತಿಜಾತೆಪತಿ ತಾನು ಅತಿಹಿತದ ಕೃಪೆಯಿಂದ ಪತಿತಗೈದವನೆಂದು ಸ್ತುತಿಸಿ ಒಲಿಸವಲ್ಲಿ 4 ಹನುಮಂತನೊಡೆಯನಾದ ಜನಕಜೆಪತಿ ವನಜಾಕ್ಷ ಶ್ರೀರಾಮನ ಘನತರಮಹಿಮೆಯ ಅನುದಿನಕೊಂಡಾಡು ಘನಮುಕ್ತಿ ಸಾಮ್ರಾಜ್ಯ ಕನಿಕರದಿಂ ಕೊಡುವ 5
--------------
ರಾಮದಾಸರು
ಪೊರೆದ್ಯಾಕೋ ಸೀತಾನಾಥ ತಂದೆ ಮಂದರಧರ ಎನ್ನೊಳ್ದಯ ಮಾಡಲೊಲ್ಲ್ಯಾಕೋ ಸೀತಾನಾಥ ಪ ಕರಿರಾಜ ನಿಮ್ಮಯ ಚರಣ ಸರೋಜಕ್ಕೆ ಸೀತಾನಾಥ ಹರಿ ಬರೆದೋಲೆ ನಿನ್ನನು ಕರೆಕಳುಹಿದನೇನೊ ಸೀತಾನಾಥ ತರುಣಿ ದ್ರೌಪದಿ ತನ್ನ ಅವಮಾನಕಾಲಕ್ಕೆ ಸೀತಾನಾಥ ಸಿರಿವರ ನಿನ್ನ್ವೊಯ್ಕುಂಠಕೆ ತಾರು ಕೊಟ್ಟಿರ್ದಳೇ ಸೀತಾನಾಥ 1 ಕಂಬದಿ ಬಾರೆಂದಂಬುಧಿಗೆ ಬಂದ್ಹೇಳ್ದನೇ ಸೀತಾನಾಥ ಡೊಂಬೆ ಮಾಡುವ ದೂರ್ವಾಸಮುನಿಯಂದು ಸೀತಾನಾಥ ನಿನ್ನ ಬೆಂಬಲಿಟ್ಟು ಅಂಬರೀಷ ವ್ರತಗೈದನೇ ಸೀತಾನಾಥ 2 ವರಧ್ರುವ ಧರೆಯೊಳು ಜನಿಸುವ ಕಾಲಕ್ಕೆ ಸೀತಾನಾಥ ದೇವ ಕರವ ಪಿಡಿದು ನಿಮ್ಮ ಜೊತೆಲಿ ಕರೆತಂದನೇ ಸೀತಾನಾಥ ಪರಮಪಾಪಿ ಅಜಮಿಳನಗೆ ಪದವಿಯು ಸೀತಾನಾಥ ದೇವ ಕರುಣಿಸಿದವನಿನಗೆ ನೆರವಾಗಿರ್ದನೇನೊ ಸೀತಾನಾಥ 3 ಛಲದ ರಾವಣನಳಿದು ವರವಿಭೀಷಣನಿಗೆ ಸೀತಾನಾಥ ಲಂಕ ಕರುಣಿಸಿ (ದಿವೈಕುಂ) ಠ ಬಾಗಿಲೊಳಿರ್ದನೇ ಸೀತಾನಾಥ ಸೀತಾನಾಥ ಅವ ಇಳೆಯೊಳು ನಿಮಗೆ ಪಕ್ಷದ ಗೆಳೆಯನೆ ಸೀತಾನಾಥ 4 ಹಿಂದಿನ ಹಿರಿಯರವರನು ದುರಿತದಿಂ ಸಲಹಿದಿ ಸೀತಾನಾಥ ಇದು ಚೆಂದವೆ ನಿನಗೆ ಕಂದನ ಬಿಡುವುದು ಸೀತಾನಾಥ ಕಂಟಕ ಬೇಗ ಬಯಲ್ಹರಿಸಯ್ಯ ಸೀತಾನಾಥ ರಂಗ ಸಿಂಧುಶಯನ ಮಮ ತಂದೆಯೇ ಶ್ರೀರಾಮ ಸೀತಾನಾಥ 5
--------------
ರಾಮದಾಸರು
ಸರಿಯೇನು ನಿನಗಿದು ಸರಸಿಜನಯನನೆ ಚರಣ ಭಜಿಪರೊಳು ಕರುಣಿಸದಿರುವಿ ಪ ದೀನಜನರ ಬಂಧು ನೀನೆ ನಿರ್ದಯನಾದರಿ ನ್ನೇನು ಗತಿಯು ಎನಗೆ ಪ್ರಾಣಾಂತರ್ಗತನೆ ಹೀನ ನಿನಗಲ್ಲೇನೈ ಗಾನವಿಲೋಲ 1 ಇಂದಿರೇಶಾನಾಥಬಂಧುವೇ ನೀ ದಯಾ ಸಿಂಧು ನೀ ಸಲಹೆಂದು ಬಂದು ಮರೆಯ ಬಿದ್ದೆ ಬಂದ ಸಂಕಟದೊಳಗಿಂದ ಸಲಹದಿರೆ ಕುಂದು ನಿನಗಲ್ಲೇನೈ ಮಂದರನಿಲಯ 2 ನಂಬಿದ ಭಕ್ತರ ಇಂಬುದಾಯಕನು ನೀ ನೆಂಬ ಬಿರುದ್ಹೊತ್ತಿರುವಿ ಅಂಬುಜನಯನ ನಂಬಿದೆನು ನಿನ್ನ ಪಾದಾಂಬುಜ ದೃಢವಾಗಿ ಬೆಂಬಲಿ (ರ್ಪೊ) ರೆಯೆನ್ನ ಸಂಭ್ರಮದಿ ಶ್ರೀರಾಮ 3
--------------
ರಾಮದಾಸರು