ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಳಿಗೆ ಪೆಣ್ಣೆಂದು ನುಡಿಯುವರೊ ನರರು ಅವಳೆ ಮುರಿದುತಿನ್ವ ರಕ್ಕಸ್ಯೆಂದೆನ್ನಿರೊ ಪ ಮುದ್ದು ಮುಖವನೆ ತೋರಿ ಬುದ್ಧಿನಾಶನ ಗೈದು ಶುದ್ಧಪದ್ಧತಿ ಕೆಡಿಸಿ ಇದ್ದಾಸ್ತಿಯಳಿದು ಬದ್ಧನೆನಿಸಿ ಮುಂದೆ ಬೇಡಿದ್ದು ಕೊಡದಿರೆ ಬಿಡದೆ ಒದ್ದು ನೂಕ್ವದರಿಯದೆ ಶುದ್ಧ ಮೂರ್ಖರಾಗಿ1 ತಂದೆ ತಾಯಿನಗಲಿಸಿ ಬಂಧುಬಳಗ ದೂರೆನಿಸಿ ಮಂದಿ ಮಕ್ಕಳೊಂದುಗಳಿಗೆ ಹೊಂದಿಇರಗೊಡದೆ ತಂದದ್ದೆಲ್ಲ ತಿಂದು ನಿಂದೆಯಾಡುತ ಯಮನ ಬಂಧಕ್ಕಟ್ಟುವುದರಿಯದೆ ಮಂದಮತಿಗಳಾಗಿ 2 ತನುಮನಧನ ಸೆಳೆದು ಘನತೆನಾಶಿಸಿ ಮುಂದೆ ಬಿನುಗರಲಿ ಬಿನುಗೆನಿಸಿ ತಿನುವುದೊಂದಿನದಿ ಮನದರಿತು ನೋಡದಿರು ಘನಮುಕ್ತಿಯನ್ನು ಕೊಡುವ ವನಜಾಕ್ಷ ಶ್ರೀರಾಮನಂ ಘನನೆಂದರಿಯದಲೆ 3
--------------
ರಾಮದಾಸರು
ಏನಬೇಡಲಿ ನಿನ್ನ ನಾ ಬಯಸಿ ಸ್ವಾಮಿ ಐಹಿಕ ಸುಖ ನಿಖಿಲ ಪುಸಿಯಾಗಿ ಪ ವನಿತೆಯನು ಬೇಡಲೆ ತನಗೆ ಅಲ್ಲದೆ ಮತ್ತೆ ಮನೆತುಂಬ ಮರಿಮಾಡಿ ತಿನಿಸಿಗ್ಹಾಕೆಂದು ಅನುಗಾಲ ಬೆನ್ನ್ಹತ್ತಿ ತಿನುತಿಹ್ಯಳು ಹರಿದ್ಹರಿದು ಬಿನುಗರಲಿ ಬಿನುಗೆನಿಸಿ ಘನತೆಯನು ಕೆಡಿಸಿ 1 ಘನವೆಂದು ನಂಬಿ ನಾ ಧನವನಾಪೇಕ್ಷಿಸಲೆ ಸನುಮತದಿ ಒತ್ತಟ್ಟಕ್ಷಣ ಕೂಡ್ರಗೊಡದೆ ದಣಿವಿಕಿಲ್ಲದೆ ದುಡಿಸಿ ಅಣುಮಾತ್ರ ಸುಖಕೊಡದೆ ಚಿನುಮಯಾತ್ಮನೆ ನಿನ್ನ ನೆನವೆ ಮರೆಸುವುದು 2 ಭೂಮಿಯನು ಬೇಡಲೆ ಸ್ವಾಮಿಯಂತೆ ಸೇವೆಗೊಂಡು ತಾಮಸದಿ ನೂಕಿ ಬಲು ಪಾಮರೆನಿಸುವುದು ಸ್ವಾಮಿಯೆನ್ನಯ ಸಕಲ ಕಾಮಿತ ಕಡಿದು ನಿಮ್ಮ ನಾಮಬಲ ಕರುಣಿಸು ಶ್ರೀರಾಮ ಪ್ರಭುತಂದೆ3
--------------
ರಾಮದಾಸರು
ಚೋದ್ಯ ಚೋದ್ಯ ಹರಿ ನಿನ್ನ ಆಟ ಸುಲಭವಲ್ಲಾರಿಗೆ ತಿಳಿಯದೀ ಮಾಟ ಪ ಉಣಿಸುವವರೊಳು ನೀನೆ ಉಣುತಿರುವವರಲಿ ನೀನೆ ಉಣಿಸುಣಿಸಿ ಅಣಕಿಸುವ ಬಿನುಗರಲಿ ನೀನೆ ಮಣಿಯುವವರೊಳು ನೀನೆ ಮಣಿಸಿಕೊಂಬರಲಿ ನೀನೆ ಕ್ಷಣಕ್ಷಣಕೆ ಬದಲ್ವಾಗ ಬಣ್ಣಕಗರಲಿ ನೀನೆ 1 ಹೊಡೆಯುವವರಲಿ ನೀನೆ ಹೊಡೆಸುವವರಲ್ಲಿ ನೀನೆ ಹೊಡೆಸಿಕೊಳ್ವರಲಿ ನೀನೆ ಬಿಡಿಸುವವರಲಿ ನೀನೆ ದುಡಿಯುವವರಲಿ ನೀನೆ ದುಡಿಸಿ ಕೊಂಬರಲಿ ನೀನೆ ಬಡವರಲಿ ನೀನೆ ಬಲ್ಲಿದರೊಳ್ನೀನೆ 2 ಕೊಟ್ಟೊಡೆಯರಲಿ ನೀನೆ ಬಿಟ್ಟೋಡ್ವರಲಿ ನೀನೆ ಕೊಟ್ವೊವಚನತಪ್ಪುವ ಭ್ರಷ್ಟರಲಿ ನೀನೆ ಶಿಷ್ಟನಿಷ್ಟರಲಿ ನೀನೆ ಬಿಟ್ಟಾಡ್ವರಲಿ ನೀನೆ ಇಟ್ಟಿಟ್ಟು ಹಂಗಿಸುವ ದುಷ್ಟರಲಿ ನೀನೆ 3 ಪಾಪಿಷ್ಟರಲಿ ನೀನೆ ಕೋಪಿಷ್ಟರಲಿ ನೀನೆ ಶಾಪಿಸುವರಲಿ ನೀನೆ ಶಾಪಕೊಂಬರಲಿ ನೀನೆ ತಾಪತ್ರದಲಿ ನೀನೆ ಭೂಪತಿಗಳೊಳು ನೀನೆ ಅಪಾರ ಸೃಷ್ಟಿ ಸರ್ವವ್ಯಾಪಕನು ನೀನೆ 4 ಇನ್ನರಿದು ನೋಡಲು ಅನ್ಯವೊಂದಿಲ್ಲವು ನಿನ್ನಪ್ರಭೆಯೆ ಸಕಲ ಜಗವನ್ನು ಬೆಳಗುವುದು ನಿನ್ನ ರೂಪವೆ ಜಗ ಎನ್ನಯ್ಯ ಶ್ರೀರಾಮ ಭಿನ್ನಬೇದ ಬಿಡಿಸೆನ್ನ ಧನ್ಯನೆನಿಸಯ್ಯ 5
--------------
ರಾಮದಾಸರು