ಒಟ್ಟು 9 ಕಡೆಗಳಲ್ಲಿ , 6 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ಯಾಸೆಪಡಬೇಡ ಅಸ್ಥಿರ ಸಂಸಾರ ಮತ್ತನಾಗದಿರೆಲವೊ ಪ ವೆತ್ಯಸ್ತ ಸ್ಥಿತಿಯಿಂದಾನಿತ್ಯಾ ಶರೀರವಿದು ಅ.ಪ ಜನರಾಡುವುದು ಕೇಳಿ ಮನಕೆ ಬಂದುದ ಕೋರಿ ಅನುಮಾನ ಚಿತ್ತನಾಗಿ ವನಿತೆಯರ ಬಲೆಯೊಳು ಸಿಲುಕಿ ಮೋಹಭ್ರಾಂತಿ ವಶನಾಗಿ ಧರ್ಮಾಧರ್ಮಗಳ ತಿಳಿಯದೆ 1 ಹೇಯ ಸುಖವ ಬಯಸಿ ಆಯಾಸ ಪಡುತಲಿ ಬಾಯ ಬಿಡುತ ಸತತ ನೋಯುತಾ ನುಡಿಯುತ ಕ್ರೋಧ ಲೋಭದಿ ಮುಳುಗಿ ನಾಯಿಯಂದದಿ ತಿರಿಗಿ ನಾನಾ ವಿಧದಲಿ 2 ದಾನಧರ್ಮಗಳಿಲ್ಲ ಜ್ಞಾನಸತ್ಯಗಳಿಲ್ಲ ಧ್ಯಾನವು ಮೊದಲೇ ಇಲ್ಲ ಮಾನಾಭಿಮಾನ ಅಜ್ಞಾನದಿ ಮುಳುಗಿ 3 ಪರರೊಡೆವೆಯ ತಂದು ಒಡಲ ಹೊರೆಯುತಲ- ನೆರೆಹೊರೆ ನೋಡಿ ಅವರಂತೆ ನಾನಿರಬೇಕೆಂದ 4 ಕರ್ಮ ಭಿನ್ನಇವರಿಗೆಲ್ಲ ಮುನ್ನಿನ ಕರ್ಮದಿ ಫಲ ಬೆನ್ನಬಿಡದು ಎಂದು ಪೇಳುವ ಶಾಸ್ತ್ರಗ- ಳನ್ನು ನಂಬದಲೆ ನಿನ್ನನ್ನೆ ನೀ ಪೊಗಳಿ ಕೊಂಡು 5 ನ್ಯಾಯಾರ್ಜಿತ ದ್ರವ್ಯದಿಂದ ಕಾರ್ಯಗಳವು- ಪಾಯದಂದಲಿ ನಡೆಸಿ ತಾಯಿ ಮಕ್ಕಳ ನೋಡುವಂತೆ ದೀನರಿಗೆ ಸ- ಹಾಯ ಮಾಡುತ ಜ್ಞಾನಿಗಳ ಸೇವಿಸುತಿಹರು 6 ಪೊರೆವೊ ಭಾರಕರ್ತ ಗುರುರಾಮವಿಠಲ ತಾ ಶರಣಾದವರಿಗೆ ಭಯವೇನು ಸ್ವಾಮಿ ಸರ್ವರ ಪಾಲಿಸುವನು ನಿನ್ನನು ಮಾತ್ರ ಬಿಡುವನೆ 7
--------------
ಗುರುರಾಮವಿಠಲ
ನಾ ನಿನ್ನ ಮರೆತರೆ ನೀ ಯನ್ನ ಮರೆವರೆ ದೀನ ವತ್ಸಲ ರಂಗ ದಾನವಾಂತಕ ಕೃಷ್ಣ ಪ ಜ್ಞಾನಗಮ್ಯನೆ ನಿನ್ನ ಧ್ಯಾನ ದೊಳಿಟ್ಟೆನ್ನ ಮಾನದಿಂದಲಿ ಕಾಯೋ ಶ್ರೀನಿವಾಸ ಪ್ರಭುವೆ ಅ.ಪ. ದಿನಕರನ ಜನರು ನೆನೆಯದೆ ಬಿಟ್ಟರೆÉ ಜನರನ್ನು ಬೆಳಗದೆ ದಿನಕರ ಬಿಡುವನೆ ಹೀನವಿಷಯದಿ ಮುಳುಗಿ ತೇಲುವ ಎನ್ನ ನೀನಾಗಿ ಪೊರೆದರೆ ಘನತೆಯಲ್ಲವೆ ದೇವಾ 1 ಪೆತ್ತ ಮಕ್ಕಳು ಬಲು ಕತ್ತೆಗಳಾದರು ಹೆತ್ತ ತಾಯಿಯು ತಾನು ಎತ್ತದೆ ಬಿಡುವಳೆ ಮತ್ತನಾನಾದರು ಉತ್ತಮೋತ್ತಮಸ್ವಾಮಿ ವಾತ್ಸಲ್ಯತೋರಯ್ಯ ಹಸ್ತಿವರದ ಧೊರೆಯೇ 2 ಗೋವತ್ಸಹಾಲಿಗೆ ಗೋವಿನಗುದ್ದಲು ತವಕದಿ ಉಣಿಸದೆ ಗೋವು ಬಿಡುವುದೇ ತವಪಾದ ಕಮಲದಿ ಅವಿನೀತನಾದರೆ ಸುವಿವೇಕ ಜ್ಞಾನವ ಈಯದಿರುವರೇನೋ 3 ಕರಿ ಧೃವ ಭಕ್ತರ ಪೊರೆಯಲಿಲ್ಲವೆ ನೀನು ಘೋರಪಾಪಗಳ ತರಿದೆ ಅಜಾಮಿಳಗೇ ವರವಿತ್ತು ವ್ಯಾಧಗೆ ವರಕವಿಯೆನಿಸಿದೇ ಭಾರವೆ ನಾನಿನಗೆ ಕರುಣಾಸಾಗರ ರಂಗ 4 ಜಯಮುನಿ ಅಂತರ ವಾಯುವಿನೊಳಗಿಪ್ಪ ರಾಯ ಶ್ರೀಕೃಷ್ಣವಿಠಲನೆ ನಂಬಿದೆ ಕಾಯವಚ ಮನದಿ ಜೀಯನೆ ಗತಿಯೆಂಬೆ ನೋಯಿಸದೆ ಭವದಿ ದಯಮಾಡಿ ಸಲಹಯ್ಯ 5
--------------
ಕೃಷ್ಣವಿಠಲದಾಸರು
ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವನೆ ರಂಗಾ ಪ ಅಪತ್ತೆ ಬರಲಿ ಅತಿಶಯದ ಕ್ಲೇಶವೇ ಬರಲಿ ಕೋಪ ಕಾಮಾದಿಗಳು ವೆಗ್ಗಳಿಸಲಿ ಪಾಪದ ರಾಶಿಗಳು ಬಂದು ಬೆನ್ನಟ್ಟಲಿ ಶ್ರೀಪತಿ ನಿನ ಪಾದವನು ಬಿಡಬಲ್ಲನೆ 1 ಬಟ್ಟೆ ಅತಿ ಕಠಿಣವಾಗಲಿ ಯಮನಾಳು ಬಲು ಭಯಂಕರರಾಗಲಿ ಯಮನು ದಂಡಿಸಿ ತೀವ್ರ ನಿರಯದೊಳಗೆ ಇಡಲಿ ಕಮಲನಾಭನೆ ನಿನ್ನ ಪಾದವನು ಬಿಡಬಲ್ಲನೆ2 ಲೋಕದೊಳಗಿದ್ದ ಜನರಿಗೆ ಬಪ್ಪ ದೋಷಗಳು ಏಕವಾಗಿ ಎನಗೆ ಬರಲಿ ಇಂದೆ ನಾ ಕಳವಳಿಸಿದರು ನಿನ್ನಂಘ್ರಿಯಗಳಾಣೆ ಶ್ರೀಕಾಂತ ವಿಜಯವಿಠ್ಠಲರಂಗ ಕೇಳೊ3
--------------
ವಿಜಯದಾಸ
ನಿನಗೆ ನಾ ಬ್ಯಾಡಾದನೆ ಘನಕೃಷ್ಣ ಮಾನಿನಿಯ ಕಿಂತ ಕೊನೆಯೆ ಪ ಎನ್ನ ಕಣ್ಣಿಗೆ ತೋರದೆ ಬೆನ್ನಲ್ಲಿ ಮಾನಿನಿಗೆ ನೀ ತೋರಿದ್ಯಾ ಮನ್ನಿಸುವ ನಿತ್ಯದಲಿ ಮುನ್ನ ನಿನಗೆ ನಾ ದ್ವೇಷಿಯಲ್ಲವೋ 1 ಒಳಗೆ ನೀನಿರುವಿ ಎಂದೂ ತಿಳಿದು ಬಲು ತೊಳಲಿ ಶರಣು ಬಂದರೆ ಪೊಳೆಯದಲೆ ಮನಸಿನೊಳಗೆ ಕೊಳಲು ಕರೆ ಬಾಲೇಗೆ ನೀ ತೋರಿದ್ಯಾ 2 ಸುಳ್ಳು ಇದು ಎಂದ್ಹೇಳಲು ಸಲ್ಲದೆಲೊ ಕಳ್ಳ ನೀನೆಂದು ಬಂದೆ ಪುಲ್ಲನಾಭನೆ ತೋರೆಲೊ ಮಲ್ಲನೆ ಗಲ್ಲ ಪಿಡಿದು ಮುದ್ದಿಪೆ 3 ನೀರದಸಮ ಕಾಂತಿಯ ನಾರಿಮಣಿ ಬೀರಿದಳೊ ಶ್ರೀಕೃಷ್ಣನೆ ಕರುಣಸಾಗರನೆಂಬೊದು ಮರೆತು ನೀ ದೂರ್ಹೋಗಿ ನಿಲ್ವರೇನೊ 4 ಮೂರು ವಯಸೆಂದ್ಹೇಳರೊ ಚಾರುತರಾಭರಣ ಇಟ್ಟಿಹನೆಂಬುರೊ ಈ ರೀತಿ ಅಬಲೆಯರು ನಿರುತದಲಿ ಧರೆಯೊಳಗೆ ಪೇಳ್ವುದರಿಯಾ5 ಎಂದಿಗಾದರು ನಿನ್ನನು ಪೊಂದದೆಲೆ ಇಂದಿರಾಧವ ಬಿಡುವನೆ ತಂದೆ ಶ್ರೀ ಮಧ್ವರಾಯ ಛಂದದಲಿ ಮುಂದೆ ತಂದೆಳೆವ ನಿನ್ನ 6 ನೀ ಬಿಟ್ಟರೇ ಕೆಡುವೆನೆ ಶ್ರೀ ಭೀಮನೊಬ್ಬ ಬಲ ಸಾಕೆಲೊ ಅಪಾರ ದೈವ ನಿನ್ನ ಕೊಬ್ಬುತ ತಬ್ಬಿ ನಾ ನಿನ್ನೊಲಿಸುವೆ7 ಮಾನದಿಂದಲಿ ತೋರೆಲೊ ನಿನಗಿದು ಘನತೆಯಲ್ಲವೊ ಜೀಯನೆ ಮುನ್ನ ಮಾಡ್ದುಪಕೃತಿ ಮರೆತೆಯಾ8 ಇನಿತು ವಂಚಿಸಿ ಪೋದರೆ ನಾ ನಿನ್ನ ಹೀನ ಗುಣದವನೆನ್ನುವೆ ಮನ್ನಿಸಿ ಸಲಹೋ ಬ್ಯಾಗ ಶ್ರೀ ನರಹರಿಯೆ ನಾ ಭಿನ್ನೈಸುವೆ9
--------------
ಪ್ರದ್ಯುಮ್ನತೀರ್ಥರು
ಪಾಪೇಂದ್ರಿಯಗಳಿಗೆರಗಿ ಪರಹಿತಾರ್ಥವ ಮರೆದು ವ್ಯಾಪಾರ ವಿಷಯಂಗಳಲ್ಲಿರೆ ಯಮನೊಯ್ದು ಕೋಪಾಟೋಪದಲಿಂದ ದಂಡಿಸಿ ತಮಸಿನ ಕೂಪದಲ್ಲಿ ಹಾಕದಲೆ ಬಿಡುವನೆ ಮರುಳೆ ಪ ಉಡಿಗೆ ತೊಡಿಗೆ ಇಡಲು ಮಡದಿಯಳ ಮುಖ ನೋಡಿ ಕಡು ಹಿಗ್ಗಿ ಹುಗ್ಗಿ ಪಡಗದಂತೆ ಹಿರ್ರನೆ ಪಿಡಿದು ಗಲ್ಲವ ಮುಟ್ಟಿ ಮುಡಿಗೆ ಮುಡಿವಾಳವನು ತಡಿಯದಲೆ ಮುಡಿಸುತ್ತಲಿ ಕಕ್ಕಸ ಕುಚ ವಡನೊಡನೆ ನೋಡಿ ಸುಖಬಡುತಾ ಬಿಡದೆ ಕಾಳ್ಯಾಡುವುದು ಸುಡುಸುಡು ಮಾಡಿದರಿನ್ನಾವ ಗತಿ ಮರುಳೇ 1 ನೆಂಟರು ಮನೆಗೆ ಬರಲು ವಂಟಿಯಂತೆ ಮೊಗವ ಸೊಂಟ ಮಾಡಿಕೊಂಡು ಕಂಠವನು ತರ್ಕೈಸಿ ಕುಂಟವಾರ್ತೆಯ ಕೇಳಿ ಬಂಟನು ನಾನೆಂದು ತೊಂಟತನ ಬಗೆ ತೋರುತಾ ಉಂಟಾದ ಗೋಧಿಯ ಸೊಂಟೆ ಬೆಲ್ಲನು ತಂದು ಹೆಂಟಿಯಂತೆ ಹದಿನೆಂಟು ಕಡುಬನೆ ಕೊರಿಸಿ ವಂಟಿಲಿ ಕುಳಿತು ಸುಂಡಿಗೆಯನ್ನು ಚಾಚುತ್ತಾ ಎಂಟು ಮಡಿಸದೆ ವಾರ್ತಿ ಪೇಳುತಲಿ ಮರುಳೇ 2 ಇಂದು ನಮ್ಮನೆ ಪ್ರಸ್ತÀವೆಂದು ಆರಾದರೂ ಬಂದು ಪೇಳಲು ಊರ ಹಂದಿಯಂತೆ ಕಾಯಿದು ಒಂದು ಕಾಳು ತಿನದೆ ಸಂದಿಗೊಂದಿ ಸುತ್ತಿ ಸಂಧ್ಯಾಕಾಲ ವಾನರಾಗುತ್ತ ಚಂದದಿಂದ್ಯುಕ್ತಿಯೊಳು ದ್ವಂದ್ವದಲಿ ಕುಳಿತಿವರು ತಂದೆ ತಾಯಿ ಕಡೆ ಬಂಧುಬಳಗವೆಂದೂ ಒಂದಿಷ್ಟು ಕಡಿಮೆ ತಿನ್ನದೆ ಪರರ ಒಡವೆಯನು ತಿಂದು ಡರ್ರನೆ ತೇಗಿ ನಸುವ ನಗುವ ಮರುಳೇ3 ನಾಡಾಡಿ ಚಾಡಿ ಮಾತಾಡಬೇಕಾದರೆ ಖೋಡಿ ನಾಲಿಗೆ ದೊಡತಾಗಿ ಬಾಹಿನೀ ನಿಡಿ ಲಟಲಟವೆನುತಾ ಕೋಡಗದಂತೆ ಕುಳಿತು ಹೇಡಿ ಪರನಿಂದೆಗಳಿಗೆ ಬಾಡದಲೆ ಬತ್ತದಲೆ ಮಾಡಿದ ಮಹಾಪುಣ್ಯ ಕಾಡಿಗೊಪ್ಪಿಸಿ ಕೊಟ್ಟ ಮೂಢ ಗಾರ್ಧಬನಂತೆ ಓಡಾಡಿ ಬಳಲಿ ನಾಡಾಡಿ ಸುದ್ದಿಗಳಿಗೆ ಬಿಡಿ ಬಿಡಿಂದಾ ತಿರುಗುವಾ ಹೀನ ಮರುಳೇ 4 ಸಂಸಾರವೆಂಬಾ ಸಾರಾ ಸಾಗರ ಮಧ್ಯ ಹಿಂಸನಾಗದೆ ಬಿಟ್ಟು ಇದರಂತೆ ಭಕುತಿ ಮರು ದಂಶ ಗುರು ಮಧ್ವಮುನಿರನ್ನನಾ ಶ್ರೀ ಚರಣ ಸಂಶಯವಿಲ್ಲದಲೆ ನಂಬಿ ಸಂಸಾರ ಉತ್ತರಿಸು ಸಂದೇಹ ಇದಕಿಲ್ಲ ಕಂಸಾಸುರನ ಪ್ರಾಣಹರ ಎನ್ನ ಮನಸ್ಸಾ ಹಂಸ ಶ್ರೀ ವಿಜಯವಿಠ್ಠಲನ್ನ ಪಾದದಾ ಪಾಂಶವೊ ಮಾಡಿ ಗತಿಯಲಿ ಬಾಳು ಮರುಳೇ5
--------------
ವಿಜಯದಾಸ
ಭೇದ ಪೇಳುವೆನೆ ತಮೊ ಯೋಗ್ಯ ಪೂರ್ಣ ಬೊಧರ ಮತ ಬಿಡುವನೆ ಮುಕ್ತಿಯೋಗ್ಯ ಪ ಸತ್ಯ ನುಡಿವನೆ ಅಪಕಾರಿ ಪರರ ವಿತ್ತಪಹರಿಸುವನೆ ಬಲು ಉದಾರಿ ಹತ್ಯ ಮಾಡುವನೆ ಉಪಕಾರಿ ನಿತ್ಯ ಚಿತ್ತ ಚಂಚಲಿಸುವನೆ ಧರ್ಮದಾದಿ 1 ಪರನಾರಿ ಸಹೋದರ ಹೀನ ಕಂಡಾ ಉ ತ್ತರಗಳನಾಡುವನೆ ಆವಾಗ ಮೌನ ತರತಮ್ಮ ಪೇಳುವನೆ ಕೋಣ ತನ್ನ ಹರಣವೊಪ್ಪಿಸಿಕೊಂಬುವನೆ ಪ್ರವೀಣಾ 2 ಭ್ರಷ್ಟನೆನೆಸುವನೆ ಧನ್ಯ ಪರರ ಇಷ್ಟಾರ್ಥ ಕೆಡಿಸುವನೆ ಬಲು ಮಾನ್ಯ ಕಷ್ಟ ಬೇಡುವನೆ ರಾಜನ್ಯ ವಿಜಯ ವಿಠ್ಠಲನ್ನ ಪೂಜೆ ಮಾಡುವನೆ ಗುಣಶೂನ್ಯ 3
--------------
ವಿಜಯದಾಸ
ವಾಯ ದೇವರ ಮಹಿಮಾ ವರ್ಣನೆ ಮೂರವತಾರ , ಷಟ್ಪದಿ ಶ್ರೀರಮೇಶ ವಿಧೀರ ವಿಪವೃತ್ರಾರಿ ವಿನುತ ಸರ್ವಾಧಾರ ನಿರುಪಮನೆ ಸ್ವತಂತ್ರಗುಣಾರ್ಣವ ಪ್ರಭುವೇ | ಪತಿ ಓಂಕಾರ ವ್ಯಾಹೃತಿ ವಾಚ್ಯ ಸರ್ವಪ್ರೇರಕ ಬಲಸುಭಾಸಕ ಹರಿಯೆ ವಾಗ್ರಸನೆ ನಮಿಪೆ 1 ಆಪ್ತನೆಂದರೆ ಪ್ರಾಣ ಸರಿ ಪರಮಾಪ್ತ ಹರಿಯ ಯಥಾರ್ಥಜ್ಞಾನ ಪ್ರಾಪ್ತಿ ಮಾಡಿಸಿ ವಿಷ್ಣು ಕರುಣವ ಕೊಡಿಸುವನು ತಾನು | ಆಪ್ತ ನೆನ್ನೆಯಥಾರ್ಥ ಪೇಳುವ ಮತ್ತೆ ನಿಶ್ಚಯ ಜ್ಞಾನವುಳ್ಳವ ಶಕ್ತ ಕರುಣ ಪಟುತ್ವಯುತನಿರ್ವಂಚನೆಗಳಿಂದ 2 ಶಿಷ್ಯ ವಾತ್ಸಲ್ಯ ಯುತ ಗುರುಸರಿ ವಿಶ್ವ ಜನಕನ ಪ್ರಥಮ ಭಕ್ತಶ್ವಾಸಗಿಂತಲು ಬೇರೆಯವನಿಲ್ಲ ಪವಮಾನನವ | ದೋಷ ಸಂಶಯ ರಹಿತ ಹರಿ ವಿಶ್ವಾಸ ಪಾತ್ರ ವಿಶೇಷ ಮಹಿಮಸುರಾಶ್ರಯ ನಿವನು ವಂಶನೆ ನಿಸುವ ಸೂತ್ರಗಾನಮಿಪೆ 3 ಯಾವ ಜ್ಞಾನ ಬಲ ಸ್ವರೂಪ ಸುದೇವ ಕ್ರೀಡಾದಿ ಗುಣಯುತ ಭವನಾವಿಕ ಪ್ರಭು ವಾಯುವಿನಗುಣ ಚರಿತೆ ವೃಂದಗಳ | ಪಾವನ ಬಳಿತ್ಥಾದಿ ಶೃತಿಗಳು ಸಾವಧಾನದಿ ಪೊಗಳುವವೊ ಆಭಾವಿ ಬ್ರಹ್ಮನ ಮೂಲ ರೂಪವುಜ್ಞಾನ ಬಲಮಯವು 4 ಮೂಲ ರಾಮಾಯಣ ವಿಶೇಷವ ಪೇಳುವ ಹನುಮನೇ ಪ್ರಥಮ ನಿಹಖೂಳ ದಿತಿ ಜನ ಸೈನ್ಯ ಮಾರಕ ಭೀಮ ನೆರಡೆನ್ನಿ | ಶೀಲ ಸಖಗಳ ನೀವ ಶಾಸ್ತ್ರವ ಪಾಲಿಸಿದ ಗುರು ಮಧ್ವರಾಯರೆ ಮೂಲ ಮುಖ್ಯ ಪ್ರಾಣ ದೇವನ ಮೂರನೆಯ ರೂಪ 5 ಪ್ರಾಣ ನೀತ್ರಯ ರೂಪಗಳು ಸಮವೆನ್ನುವದು ಸರ್ವ ವಿಷಯದಿ ಮುಕ್ಕಣ ಪ್ರಮುಖರ ಜ್ಞಾನ ದಾತೃವಿಗಿನ್ನು ಸಮವುಂಟೆ | ಜ್ಞಾನ ವಾಚಕ ಹನುಮ ಶಬ್ದವು ಪೂರ್ಣ ಹರಿ ಸಂದೇಶವೈದನು ಜಾನಕಿಗೆ ನಿರ್ದೋಷ ವಾಕ್ಯಗಳನ್ನು ಧೀಮಂತ 6 ಪಂಚರಾತ್ರಾಗಮ ಪುರಾಣ ವಿರಂಚಿ ಜನಕನ ತೋರ್ಪವೇದವು ವಂಚಿಸದ ಇತಿಹಾಸಗಳು ಕೂಡುತಲಿ ಸಪ್ತಗಳ | ಮಿಂಚಿಸುತ ಸುಜ್ಞಾನ ಪಾಪದ ಸಂಚಯ ತರಿವ ಕಾರಣದಿ ಬಲಿವಂಚಕನ ಭಕ್ತರು ಕರೆಯುವರು ಸಪ್ತಶಿವ ವೆಂದು7 ಶಾಸ್ತ್ರ ವಚನಕೆ ಮಾತೃ ವೆಂಬರು ಸಪ್ತ್ರ ಶಿವಕರ ಮಾತೃಗಳ ಧರಿಸಿಪ್ಪ ನಿವನೆಂದು | ಖ್ಯಾತನಾಗಿಹ ಭೀಮ ನಾಮದಿ ತೀರ್ಥವೆನ್ನಲು ಶಾಸ್ತ್ರವಿದಿತವು ಮತ್ತೆ ಮಧುವೆನೆ ಸುಖವು ಮುಕ್ತಿಯನೀವ ಶಾಸ್ತ್ರವನು 8 ಇತ್ತ ದೇವನೆ ಮಧ್ವನೆಂಬರು ಸುತ್ತುತೀತ್ರಯ ನಾಮದರ್ಥವ ನಿತ್ಯ ತಿಳಿಯುತ ಪಠಿಸಿ ಪಾಡಲುವಾಯು ದೇವನನು | ಭಕ್ತ ಬಾಂಧವನಾತ ವಲಿಯುತ ತತ್ವವೇತ್ತನ ಮಾಳ್ವ ನಿಶ್ಚಯ ಭೃತ್ಯನಾನೆಂತೆಂದು ಮಧ್ವರ ಸಾರಿ ಭಜಿಸುತಿರಿ9 ಪ್ರೌಢ ಮಧ್ವಗೆ ಪೂರ್ಣ ಪ್ರಜ್ಞನೆ ಈತ ಶ್ರುತಿ ಸಿದ್ದ | ಬೀಡು ಮಾಡಿಹ ವಿದ್ಯೆ ನೂಕುತ ತೊಂಡ ನೆಂದಿವರಡಿಗೆ ಬೀಳಲು ಪಾಂಡುರಂಗನ ಬಿಚ್ಚಿ ತೋರುವ ಗೋ ಸಮುದ್ರದಲಿ10 ಏನ ಪೇಳಲಿ ಏನಪೇಳಲಿ ಜ್ಞಾನನಿಧಿ ಸರ್ವಜ್ಞ ಗುರುವರ ತಾನು ಗೈದ ಮಹೋಪಕಾರವ ಮುಕ್ತಿಯೋಗ್ಯರಿಗೆ | ಜ್ಞಾನ ಬಾಹುದೆ ಬಿಟ್ಟರೀತನ ಶೂನ್ಯವೆ ಸರಿ ಎಲ್ಲ ಆತಗೆ ಮನ್ನಿಸುವನೆ ಅನನ್ಯವನು ಹರಿ ಶರಣು ಆಚಾರ್ಯ 11 ಈತನೇ ಆನಂದ ತೀರ್ಥನು ಈತನೇ ಆಚಾರ್ಯ ನಿಶ್ಚಯ ಈತನೇ ಸರಿಮಾತರಿಶ್ವನು ವಾಯುವಿನರೂಪ | ಈತ ಚರಿಸುವ ಶಾಸ್ತ್ರವ್ಯೂಹದಿ ದೈತ್ಯರಿಂದಾಚ್ಛಾದಿತ ಗುಣಯುತ ಆತ್ಮಪೂರ್ಣಾನಂದ ದೇವನ ಶಾಸ್ತ್ರಮಥಿಸುತಲಿ 12 ಸಾರ ವೃಂದಕ್ಕೆ ಚುಚ್ಚುವನು ದುರ್ವಾದಿ ಮತಗಳ ಕೆಚ್ಚೆದೆಯವನು ಗರ್ಜಿಸುತವೇದೋಕ್ತವಾಕ್ಯಗಳ | ಹೆಚ್ಚು ಹೆಚ್ಚೇ ಸರಿಯು ವಿಷ್ಣುವು ಸ್ವಚ್ಛ ಪೂರ್ಣಾನಂದ ಸುಖಮಯ ಪೃಚ್ಛ ಪರಿವಾರ ಸರಿ ವಿಧ್ಯಾದಿಗಳು ಹರಿಗೆಂದು 13 ಕಚ್ಚಿಲತೆಗಳ ಬಿಸುಡುವಂದದಿ ನುಚ್ಚು ಮಾಡುವ ಪ್ರಶ್ನೆನೀಕವ ಅಚ್ಚನಾರಾಯಣನೆ ಪ್ರೇರಕ ನಿವಗೆ ಜನಕನಿಹ | ಮೆಚ್ಚು ಮಗ ಶ್ರೀ ಲಕ್ಷೀ ದೇವಿಗೆ ರಚ್ಚೆತನುವನು ಕಿತ್ತುವೋಡಿಸಿ ಹೆಚ್ಚಿಸುವ ಸುಜ್ಞಾನ ದೀಪವ ಹರಿಯ ಪ್ರಧಮಾಂಗ14 ಕೊಟ್ಟು ಉಂಗುರ ಸುಟ್ಟುಲಂಕೆಯ ಬಿಟ್ಟು ಕಾಮವ ಮೆಟ್ಟಿಖಳರನು ಜಟ್ಟಿ ಹನುಮನು ಪಟ್ಟ ಪುತ್ರನ ಪದವಿ ಸಾಧಿಸಿದ | ಹುಟ್ಟಿ ಕುಂತಿಲಿ ಕುಟ್ಟಿ ಕುರುಕುಲ ಇಟ್ಟು ಮನದಲಿ ದಿಟ್ಟ ಕೃಷ್ಣನ ಅಟ್ಟಿ ಹಾಸದಿ ಮೆರೆದ ಭೀಮನು ಜ್ಞಾನ ಭಾಸ್ಕರನು15 ಹುಟ್ಟು ಸಾವಿನ ಕಟ್ಟು ಬಿಡಿಸಲು ಘಟ್ಟ ದಡಿಯಲಿ ಭಟ್ಟನೆನಿಸುತ ಬಟ್ಟೆ ತವಕದಿ ಭ್ರಷ್ಟದಸ್ಯುಗಳ | ಕೆಟ್ಟ ಮತಗಳ ಸುಟ್ಟು ವಾದದಿ ಸೂತ್ರ ಭಾಷ್ಯವ ನೆಟ್ಟ ಸಂತರ ಮನದಿ ವಿಷ್ಣುವ ಶ್ರೇಷ್ಠಗುರುಮಧ್ವ16 ಏಕೆ ಭಯ ನಮಗಿನ್ನು ನಿರಯದ ಏಕೆ ಸಂಶಯ ಮುಕ್ತಿ ವಿಷಯದಿ ಏಕೆ ಕಳವಳ ಮಧ್ವರಾಯರ ಶಾಸ್ತ್ರ ಪೀಯೂಷ | ಜೋಕೆಯಿಂ ಪ್ರತಿದಿನವು ಸೇವಿಸೆ ಶ್ರೀಕಳತ್ರನು ಕೈಯ ಬಿಡುವನೆ ನಾಕಪತಿಯಿಂಬಿಟ್ಟು ಸಲಹುವ ಶಾಸ್ತ್ರಸಿದ್ಧವಿದು 17 ಹೆಚ್ಚು ಮಾತೇಕಿನ್ನು ಹರಿಮನ ಮೆಚ್ಚುಯೆನಿಸಿಹ ಮಧ್ವರಾಯರು ಬಿಚ್ಚಿತೋರಿದ ತೆರದಿ ಶೃತಿಗಳ ಭಜಿಸಿಖಳ ಜನಕೆ | ಬಚ್ಚಿಡುತ ವಿಜ್ಞಾನ ಮರ್ಮವ ನುಚ್ಚು ನೂಕುತ ದುರ್ಮತಕಿಡಿರಿ ಕಿಚ್ಚು ಕಮಲೇಶ ನೊಲಿಮೆಗೆ ಬೇರೊಂದು ಪಥವಿಲ್ಲ 18 ನಮ್ಮಹಿರಿಯರ ಖಿನ್ನನುಡಿಗಳ ನೊಮ್ಮನದಿ ನೀವೆಲ್ಲ ಕೇಳಿರಿ ರಮ್ಮೆಯರಸಗೆ ಸಮ್ಮತದ ಸಚ್ಛಾಸ್ತ್ರದರ್ಪಣವ | ಹೆಮ್ಮೆಯಿಂದಲಿ ಕೊಟ್ಟು ಬಂದೆವು ಒಮ್ಮೆಯಾದರು ನೋಡುವರೆ ಈ ನಮ್ಮ ಸಂತತಿ ಹಾ ಹರಿ ಹರೀಯೆಂಬ ಕ್ರಾಂತಿಯುತ19 ಉಣ್ಣಿರುಣ್ಣಿರಿ ಮಧ್ವಕಂದರೆ ಭವ ಹುಣ್ಣುವಳಿಯಿರಿ ಅಣ್ಣ ಪ್ರಾಣನದಯವ ಯಾಚಿಸಿಘನ್ನ ಶಾಸ್ತ್ರಾನ್ನ | ಅನ್ನ ಶೃತಿಗಳು ವಿವಿಧ ಸ್ಮøತಿಪ ಕ್ವಾನ್ನ ಪಾಯಸ ಗೀತೆ ಭಕ್ಷ್ಯಗಳೆನ್ನಿ ಬಗೆ ಬಗೆ ಸರ್ವ ಮೂಲವ ಸೂತ್ರಗಳೆ ಸಾರು 20 ತುಪ್ಪವೆನ್ನಿರಿ ನ್ಯಾಯ ಸುಧೆಯನು ಗೊಪ್ಪರಾಜರ ಗ್ರಂಥ ಹಲ್ಪವು ಅಪ್ಪರಾಯರ ವಾಣಿ ಕ್ಷೀರವು ದಾಸ ಸಾಹಿತ್ಯ | ತಪ್ಪದೆಲೆ ತಿಂಬಂಥ ತಿಂಡಿಯು ಚಪ್ಪರಿಸಿ ಭಾರತದ ಕೂಟನು ವಪ್ಪುವನು ಶ್ರೀ ಕೃಷ್ಣ ದೇವನು ಭಕ್ತ ನುಣ್ಣಲಿವ 21 ಎಂತು ಪೊಗಳಲಿ ನಿಮ್ಮ ಗುರುವರ ಹಂತ ಸುರಗಣ ವೆಲ್ಲ ನಿಮ್ಮಡಿ ನಿಂತು ಪಡೆದರು ಜ್ಞಾನ ಪ್ರಾತರ್ನಾಮಕನೆಶರಣು | ಕಂತೆ ಮತಗಳ ನಾಶಗೈದನ ನಂತ ಮಹಿಮನೆ ದೀನ ನಾನಿಹೆ ಕುಂತಿ ನಂದನ ನೀನೆ ತಿಳಸೈ ಸಕಲ ಶಾಸ್ತ್ರಾರ್ಥ 22 ಮೂರ್ತಳೆನಿಸುವ ಚಂದ್ರಮಾನಿನಿನಾಥ ಸೂರ್ಯ ನೊಳ್ ಆದಿತ್ಯ ನಾಮದಿ ನಿಂತು ದಿಕ್ಪತಿಗಳಿಗೆ ಶಕ್ತಿಗಳ | ಇತ್ತು ಸೃಷ್ಠಿಯ ಕಾರ್ಯ ವೆಸಗುವೆ ಉತ್ತರಾಯಣ ಪಗಲು ಮಾನಿಯೆ- ನಿತ್ಯ ಪ್ರೇರಿತ ನೀಪ್ರಜಾಪತಿನಾಮ ಹರಿಯಿಂದ 23 ಖ್ಯಾತ ಮೂರ್ತಾ ಮೂರ್ತ ಧಾರಕೆ ತತ್ವಪತಿಗಳ ಪೋಷತನುವಲಿ ಮೃತ್ಯುಹಾಗಶನಾಪಿಪಾಸಾಪಾನ ನಾಮಗಳ | ಎತ್ತಿ ನಡಿಸುವೆ ದೇಹ ಕಾರ್ಯವ್ರಾತ ಬಿಡಲೇನೊಂದು ನಡೆಯದು ಮಾತರಿಶ್ವನೆ ನಿಧಿಗು ಆರ್ಯುರ್ದಾತ ನೆನಿಸಿರ್ಪೆ 24 ಅನ್ನ ವಿಧಿಯಿಂ ಕೊಂಬೆ ಸಮಸರಿ ಯನ್ನ ಬ್ರಹ್ಮಗೆ ಜೀವ ಗಣತಾವುಣ್ಣಲಾರರು ನಿನ್ನ ಬಿಡೆ ಪ್ರಾಣದಿ ಪಂಚಕನೆ | ಸ್ವಪ್ನ ನಿದ್ರಾ ಸಮಯದೊಳ್ ಹರಿಯನ್ನು ಕೂಡಿರೆ ಕರಣಪರು ಘನಯಜ್ಞ ನಡಿಸಿ ಸರ್ಮರ್ಪಿಸುವೆ ನೀನೊಬ್ಬ ದೇವನಿಗೆ 25 ನಿನ್ನ ನಂಬಿದ ಭಕ್ತನಿಗೆ ಭವ ಹುಣ್ಣು ಮುಟ್ಟದು ವಿಷ್ಣು ವಲಿಯುತ ಮನ್ನಿಸುವ ಹರಿಯಾಜ್ಞೆಯಿಂಮುಕ್ತಿದನು ನೀ ಹೌದು | ವಿಶ್ವ ವಂಶನೆ ನಿನ್ನ ಮಹಿಮೆಯಗಣ್ಯ ಸಿದ್ಧವು ನಿನ್ನ ಧೊರೆ ಹರಿ ಒಬ್ಬ ಜೀವೋತ್ತುಮನೆ ಅಶರೀರ26 ಜ್ಞಾನ ಬಲ ಐಶ್ವರ್ಯಗಳು ಪರಿಪೂರ್ಣ ಸರಿ ವೈರಾಗ್ಯ ಹಾಗೆಯೆ ಪ್ರಾಣನಿನ್ನಲಿ ಕರಿಸುವೆಯೊ ಆಧ್ಯರ್ಧ ನಾಮದಲಿ | ಮಾನ್ಯ ವಿಷ್ಣುಸಹಾಯ ನಿನಗೈನ್ಯೂನ ವಿಲ್ಲವು ಯಾವ ತೆರದಲುಕಾಣೆ ಅಪಜಯ ಜೀವ ಸಾಧನೆಯೆಲ್ಲ ನಿನ್ನಿಂದ 27 ಶೇಷಗಸದಳ ನಿನ್ನ ಪೊಗಳಲು ಶೇಷ ಸರಿ ಬಡದಾಸನಹೆ ವಿಶ್ವಾಸದಿಂ ಸಂವತ್ಸರನೆ ನೀಕಾಯಬೇಕೆಂಬೆ | ಏಸು ಜನ್ಮಗಳನ್ನು ಕೊಟ್ಟರು ಶ್ವಾಸ ಪತಿತವ ಮತದಿ ಪುಟ್ಟಿಸಿ ದಾಸ ಭಾಗ್ಯವ ನೀಡು ಹರಿಯೊಳ್ ಶುದ್ಧ ಭಕ್ತಿಯುತ28 ಎರಡು ಸಹ ಮೂವತ್ತು ಲಕ್ಷಣ ವಿರುತಿಹ ಜಗದ್ಗುರುವೆ ವಿಷ್ಣುವಿಗೆರಡು ಎರಡು ಸರಿಯೆಂತೆಂದು ಸ್ಥಾಪಿಸಿ ಎರಡು ವಿದ್ಯೆಗಳಿರವು ತೊರುವ ಲೆರಡು ಸುಖಗಳ ಪಡೆಯೆಸಾಧನ ಮಾರ್ಗ ನೀಡ್ವೆಬತ 29 ಸರ್ವ ಶಕ್ತನೆ ಶರ್ವ ವಿನುತನೆ ಸರ್ವ ಸರ್ವಗ ಹಿರಿಯ ತನಯನೆ ಸರ್ವ ಜಗದಾಧಾರ ಪೋಷಕ ಸರ್ವ ತೋವರನೆ | ಸರ್ವ ಕಾಲದಿ ಸರ್ವ ದೇಶದಿ ಸರ್ವ ಗುಣದಿಂ ಹರಿಯ ಯಜಿಸುವ ಸರ್ವ ಸದ್ಗುಣ ಪೂರ್ಣ ದೋಷವಿದೂರ ಸರ್ವಜ್ಞ 30 ಹಿಂದೆ ಪೂರ್ವಜರೆಲ್ಲ ಕೂಡುತಲೊಂದು ಪಾಯವಗೈದು ಮೃತ್ಯುವತಂದು ದಿವಿಜ ವೃಂದಕೆ ಕುಂದು ವದಗಿಸಲು | ಕಂದುತಳಿಯಲ್ ನಿಖಿಲ ಸುರಗಣ ಕುಂದು ಮೃತ್ಯುವ ಗೈದು ಪುಡಿಪುಡಿ ವಂದನಾರ್ಹನು ಒಬ್ಬನೀನೇ ಯೆಂದು ಸ್ಥಾಪಿಸಿದೆ 31 ಪಾಹಿ ಅಮ ಶುಚಿ ಯೊಗ ಕ್ಷೇಮನೆ ಪಾಹಿ ಅಮರಲಲಾಮ ಅನಿಲನೆ ನಿರವದ್ಯ | ಪಾಹಿ ಸತ್ಯ ವಿಶುದ್ಧ ಸತ್ವನೆ ಪಾಹಿ ಲಕ್ಷ್ಮೀ ಪುತ್ರ ಭೃತ್ಯನೆ ಪಾಹಿ ಜೀವಗ ಬಾದರಾಯಣಪ್ರೀಯ ಮಹರಾಯ 32 ಪಾಹಿ ಹನುಮನೆ ಭೀಮ ಮಧ್ವನೆ ಪಾಹಿ ದುರ್ಮತ ಧ್ವಾಂತ ಸೂರ್ಯನೆ ಪಾಹಿ ನತಜನ ಪಾಲ ಪ್ರಾಣನೆ ಪಾಹಿ ಶ್ರೀಸುತನೆ | ಪಾಹಿ ಜಗದಾಧಾರ ಸೂತ್ರನೆ ಪಾಹಿ ಸಾಮನೆವಂಶ ದೂರನೆ ಪಾಹಿ ಹರಿಯಚ್ಛಿನ್ನ ಭಕ್ತನೆ ಪಾಹಿ ವಿಜ್ಞಾನ 33 ಪಾಹಿ ಋಜುಪತಿ ವಾಯುಕೂರ್ಮನೆ ಪಾಹಿ ಜೀವ ಲಲಾಮ ಗುಣನಿಧಿ ಪಾಹಿ ಶುಚಿ ಸರ್ವಜ್ಞ ಸಾಮಗಭಾವಿ ಶತಮೋದ | ಪಾಹಿ ಸತ್ಯನೆ ಕಲಿವಿದಾರಣ ಪಾಹಿ ಗುರು ಗೋವತ್ಸ ರೂಪಿಯೆ ಪಾಹಿ ಮಿಷ್ಣು ಪದಾಬ್ಜಮಧುಕರ ಭಾರತೀ ಕಾಂತ 34 ಪಾಹಿ ಅಮೃತನೆ ವಿಶ್ವರಜ್ಜುವೆ ಪಾಹಿ ಬೃಹತೀ ಛಂದ ಮಾನಿಯೆ ಪಾಹಿ ಹಂಸೋಪಾಸಕ ಪ್ರಭು ಆಖಣಾಶ್ಮಸಮ | ಪಾಹಿ ಸಾಯಂಖ್ಯಾತ ಜೀವಗ ಪಾಹಿ ಜಗಚೇಷ್ಠಾ ಪ್ರವರ್ತಕ ಪಾಹಿ ಅನಿಲನೆ ಶೇಷವಿಪಶಿವ ವಂದಿತಾಂಘ್ರಿಯುಗ 35 ಪಾಹಿ ಪರಿಸರ ಪಂಚ ಕೋಶಗ ಪಾಹಿ ಗುಣನಿಧಿ ಕೊವಿದೋತ್ತಮ ಪಾಹಿ ನಮಿಸುವೆ ಅಣುಮಹದ್ಘನ ರೂಪ ವಿಖ್ಯಾತ | ಪಾಹಿ ವಿಶ್ವಗ ವ್ಯಸನ ವರ್ಜಿತ ಪಾಹಿ ಹರಿಯನು ನಿತ್ಯನೋಳ್ಪನೆ ಪಾಹಿ ವಿಷ್ಣುದ್ವಾರ ಶರಣೈ ಪಾಹಿ ಹರಿ ಸಚಿವ 36 ಜಯ ಜಯವು ಶ್ರೀ ಹನುಮ ಭೀಮಗೆ ಜಯ ಜಯವು ಶ್ರೀ ಮಧ್ವರಾಯಗೆ ಜಯ ಜಯವು ತತ್ವೇಶರರಸಗೆ ಮುಖ್ಯಪ್ರಾಣನಿಗೆ | ಜಯ ಜಯವು ಜಯತೀರ್ಥ ಹೃಸ್ಥಗೆ
--------------
ಕೃಷ್ಣವಿಠಲದಾಸರು
ಸುಲಿದ ಬಾಳೆ ಹಣ್ಣು ಸುಟ್ಟು ತಿನ್ನಬೇಡಿರೊ ಹಳೆಯ ಜನರ ಅನುಭವಗಳ ಹಳಿಯಬೇಡಿರೊ ಬಿಳಿಯ ವಸ್ತುವೆಲ್ಲ ಕ್ಷೀರವಲ್ಲ ಕಾಣಿರೊ ಥಳಥಳಿಸುವುದೆಲ್ಲ ರಜತವಲ್ಲ ಕಾಣಿರೊ ಸಿರಿಯು ಬಂದ ಕಾಲದಲ್ಲಿ ಮೆರೆಯಬೇಡವೋ ಶಿರವು ಗಟ್ಟಿಯೆಂದು ಕಂಬ ಗುದ್ದಬೇಡವೊ ಮನಕೆ ತುಷ್ಟಿಕೊಡದ ಕಾರ್ಯಗಣನೆ ಬೇಡವೊ ಅನುವಿನಲ್ಲಿ ಪಿಡಿದ ಕಾರ್ಯ ಕೊನೆಯಗಾಣಿಸೊ ಹಾವು ಕೊಂದು ಹದ್ದುಗಳಿಗೆ ಹಾಕಬೇಡವೊ ಗೋವು ಕೊಂದು ಪಾದರಕ್ಷೆ ದಾನಬೇಡವೊ 10 ಅರಿಯದ ಜನರಲ್ಲಿ ಅಂತರಂಗಬೇಡವೊ ಪರರ ಗೋಪ್ಯ ತಿಳಿದರೆ ಬಹಿರಂಗಬೇಡವೊ ಜಂಭ ಕೊಚ್ಚಬೇಡವೊ ರಗಳೆ ರಂಪದಿಂದ ಪರರ ಒಲಿಸಬೇಡವೊ ಗೆದ್ದರಾ ಎತ್ತು ಬಾಲವನ್ನು ಹಿಡಿಯಬೇಡವೊ ಒದ್ದರೆ ಅದು ಹಲ್ಲುಗಳನು ಕಿರಿಯಬೇಡವೊ ಮೂರ್ಖ ಜನಗಳಲ್ಲಿ ವಾದ ಮಾಡಬೇಡವೊ ಮಕ್ಕಳೆದುರಿನಲ್ಲಿ ಗ್ರಾಮ್ಯವಚನ ಬೇಡವೊ ಬಳಿಕ ಮಾತನಾಡುವನು ಗೆಳೆಯನಲ್ಲಯ್ಯ ಕುಳಿತು ತಿನ್ನುವವನು ಸಾಹುಕಾರನಲ್ಲಯ್ಯ 20 ಗಂಟು ಜಗಳ ಕದನಗಳಲಿ ತಂಟೆಬೇಡಯ್ಯ ನಂಟರಿಷ್ಟರಲ್ಲಿ ಭಂಟನಾಗಬೇಡಯ್ಯ ನಾಕು ಜನರ ಮಾತ ಮೀರಿ ನಡೆಯಬೇಡÀಯ್ಯ ಪೋಕರಿ ಜನಗಳಲಿ ಮೂಕ ಬದಿರನಂತಿರೊ ಕಾಲದಲ್ಲಿ ಕೆಲಸಮಾಡಿ ಮುಗಿಸೆಲೊ ನಾಳೆ ನಾಳೆಯೆಂಬ ಕೆಲಸ ಹಾಳು ಕಾಣಿರೊ ಬಿಂಕದಿಂದ ಹರಿಗುರುಗಳ ಮರೆಯಬೇಡಯ್ಯ ಸಂಕಟ ಬಂದಾಗ ವೆಂಕಟೇಶ ಬರುವನೆ ಸಾಲ ಸೋಲ ಮಾಡಿ ದಾನ ಧರ್ಮ ಬೇಡಯ್ಯ ಕೇಳದಿರಲು ನೀತಿ ಹೇಳ ಹೋಗಬೇಡಯ್ಯ 31 ಪರರು ನೋಯುವಂಥ ಮಾತನಾಡಬೇಡಯ್ಯ ಉರಿವ ಒಲೆಗೆ ಉಪ್ಪುಕಾಳನೆರಚಬೇಡಯ್ಯ ನೆರೆಯು ಬಾಳುತಿರಲು ನೋಡಿ ಕರಗಬೇಡಯ್ಯ ಬರಿದೆ ಅಯ್ಯೊ ಪಾಪವೆನಲು ಮರುಕವಲ್ಲವೊ ದುರುಳ ಜನಗಳಲ್ಲಿ ಸರಳನಾಗಬೇಡಯ್ಯ ಹರಿಯ ಭಜನೆಯಲ್ಲಿ ಮನದಿ ನಾಚಬೇಡವೊ ತಿರುಕನಂತೆ ಜ್ಞಾನದ ಭಿಕ್ಷೆಯನು ಬೇಡೆಲೊ ತುರುಕನಂತೆ ಕಾಮದ ತಲೆ ಬಡಿದು ಜೀವಿಸೊ ಸಜ್ಜನಗಳು ಸಮ್ಮತಿಸುವ ಮಾರ್ಗದಲಿ ನಡಿ ದುರ್ಜನಗಳು ಪೇಳಿ ತೋರಿದೆಲ್ಲವನು ಬಿಡಿ40 ಫಲದ ಚಿಂತೆಯಿಲ್ಲದಂತೆ ಧರ್ಮಗಳಿಸಿರೊ ಫಲವು ಹರಿಯಧೀನ ಕೆಲಸ ಮಾತ್ರ ನಿನ್ನದೊ ಧ್ಯಾನ ಮಾಡದಿರಲೊ ಮನದಿ ದುಷ್ಟ ವಿಷಯದ ಧ್ಯಾನದಿಂದ ವಿಷಯದಲ್ಲಿ ಸಂಗ ಬರುವುದೊ ಸಂಗದಿಂದ ದುಷ್ಟಭೋಗ ಕಾಮ ಬರುವುದೊ ಭಂಗವಾದ ಕಾಮದಿಂದ ಕೋಪ ಬರುವುದೊ ಕೋಪದಿಂದ ಮನದಲಿ ವ್ಯಾಮೋಹ ಬರುವುದೊ ಈ ಪರಿಮೋಹದಲಿ ಸ್ಮರಣೆ ನಾಶಪಡುವುದು ಸ್ಮøತಿಯು ತಪ್ಪಿದವನ ಬುದ್ಧಿಮೃತಿಯು ಪೊಂದಲು ಕ್ಷಿತಿಯೊಳವಗೆ ಸರ್ವನಾಶವೆಂದು ನುಡಿಯಿದೆ 50 ಜ್ಞಾನಕೆ ಸಮ ಸಂಪತ್ತಿಲ್ಲ ಜನಕೆ ಲೋಕದಿ ಮೌನಕೆ ಸಮ ಗುಹ್ಯಕೆ ಪಾಲಕರಿಲ್ಲವೊ ಜ್ಞಾನ ಸರ್ವಕರ್ಮಗಳನು ದಹಿಸಿಬಿಡುವುದೊ ಜ್ಞಾನದಿಂದ ಪರಮಶಾಂತಿ ಪಡೆಯುಬಹುದೆಲೊ ಚಿರತನ ವರ್ಣಾಶ್ರಮಗಳ ಧರ್ಮ ಬಿಡದಿರೊ ಮಿತಿಯ ಮೀರಿ ಭೋಜನವನು ಮಾಡಬೇಡವೊ ಕಾಲ ಕಳೆಯಬೇಡವೊ ಲೋಕವ ಭಯಪಡಿಸಬೇಡ ನಡೆನುಡಿಗಳಲಿ ಲೋಕಕೆ ಭಯಪಡಲಿಬೇಡ ಧರ್ಮ ಪಥದಲಿ 60 ಶತುಮಿತ್ರರಲ್ಲಿ ಒಂದೆ ಭಾವ ಪಡೆಯೆಲೊ ಸ್ತೋತ್ರ ನಿಂದೆಗಳಿಗೆ ಹಿಗ್ಗಿ ಕುಂದಬೇಡವೊ ಭಕ್ತಜನರ ನಡೆನುಡಿಗಳ ನಿಂದಿಸದಿರೆಲೊ ಯುಕ್ತರವರು ಹಿರಿಯ ದಯಕೆ ಪಾತ್ರರಿವರೊ ಜಗವು ಸತ್ಯ ಬಗೆ ಬಗೆಯಲಿ ಸೊಗಸ ನೋಡೆಲೊ ಜಗಕೆ ಕರ್ತನೋರ್ವಗೆ ಕೈ ಮುಗಿದು ಬೇಡೆಲೊ ದೇಶಕಾಲ ಪಾತ್ರವರಿತು ದಾನ ಮಾಡೆಲೊ ಆಸೆ ಮೋಸಗಳಿಗೆ ಮನವ ಲೇಸು ಕೊಡದಿರೊ ಪರರ ಮನವು ಕೆದರದಂತೆ ನಿಜಹಿತ ನುಡಿಯು ಗುರುತರ ವಾಚನಿಕ ತಪವ ಮರೆಯಬೇಡವೊ 70 ಸರ್ವಕರ್ಮ ಫಲಗಳನ್ನು ಬಿಡುವನೆ ಯತಿಯು ಗರ್ವಮತ್ಸರಾದಿಗಳನು ಬಿಡುವುದೆ ಮತಿಯು ಶರಣು ಹೊಡೆಯೊ ಕರುಣಮಯನ ಚರಣಯುಗಳದಿ ಕರಗತವಾಗುವುದು ನಿನಗೆ ಇಹಪರ ಸುಖವು ಮಮತೆ ಬಿಟ್ಟು ಜಗದಿ ತಗಲಿ ತಗಲದೆ ಇರೆಲೊ ಕಮಲಪತ್ರಗಳಲಿ ಜಲದ ಕಣಗಳ ತೆರದಿ ಶುದ್ಧ ಧರ್ಮಲೇಶವು ತಲೆ ಕಾಯಬಲ್ಲದೊ ಪದ್ಮನಾಭ ಜನರ ಚಿತ್ತಶುದ್ಧಿ ನೋಡುವ ನಾನೆ ಬ್ರಹ್ಮನೆಂಬ ವಾದ ಬಾಳಬಲ್ಲದೆ ತಾನೆ ಬೀಳಲಿರುವ ಮರಕೆ ಕೊಡಲಿ ಏತಕೆ 80 ಜ್ಞಾನತೀರ್ಥಗಳಲಿ ಮುಳುಗಿ ಸ್ನಾನ ಮಾಡೆಲೊ ಜ್ಞಾನಕೆ ಜ್ಯೋತಿಗಳ ಬೆಳಕು ಕಾಣುತಿರುವುದೊ ದಾರುಣ ಸಂಸಾರ ಜಲದಿ ಪಾರುಗಾಣಲು ಧೀರನಾಗಿ ಈಜುವವಗೆ ತಾರಣ ಸುಲಭ ತಲೆಯ ಮೇಲೆ ಕೈಯನಿಟ್ಟು ಕೂಡ ಬೇಡವೊ ಬೆಳಸಿದಂತೆ ತರುಲತೆಗಳು ಫಲಕೊಡುವುದೊ ಮುಂದೆ ಇಟ್ಟ ಹೆಜ್ಜೆಗಳನು ಹಿಂದೆಗೆಯದಿರೊ ಮಂದಿಗಳಿಗೆ ಫಲದಲಿ ಸಂದೇಹ ಬೇಡವೊ ಹುಳಿಯ ರಕ್ತವಿರುವತನಕ ತಲೆಯು ಬಾಗದು ಕಾಲ ಸಾಲದೊ 90 ಪರರ ನುಡಿಗಳನ್ನು ಕದ್ದು ಕೇಳಬೇಡವೊ ಅರಿತು ನಿನ್ನ ಹರಿಯು ಗುದ್ದಿ ಬುದ್ಧಿ ಕಲಿಸುವ ಚಾಡಿಯಾಡ ಬೇಡ ಚಾಡಿ ಕೇಳಬೇಡವೊ ಸೇಡನು ತೀರಿಸುವ ಹೇಡಿಯಾಗಬೇಡವೊ ನಿನ್ನ ಮಾನದಂತೆ ಪರರ ಮಾನವೆಂದರಿಯೆಲೊ ಅನ್ನ ಹಾಕುವವರ ಹರಿಸಿ ಘನ್ನವೆನಿಸೆಲೊ ಕುಲವ ಶೋಧಿಸುತಲಿ ಕನ್ಯೆದಾನ ಮಾಡೆಲೊ ತಲೆಯ ಕ್ರಾಪು ಯೋಗ್ಯತೆಗೆ ಪ್ರಮಾಣವಲ್ಲವೊ ಕರವ ಪಿಡಿಯೆಲೊ ಥಳಕು ಬೆಳಕು ನೋಡಿ ಬಲೆಗೆ ಬೀಳ ಬೇಡವೊ 100 ಗಾಳಿಯು ಬಂದಾಗ ಬೇಗ ತೂರಿ ಕೊಳ್ಳಲೊ ಕಾಲದ ಸ್ಥಿತಿಯರಿತು ತಗ್ಗಿ ಬಗ್ಗಿ ನಡೆಯೆಲೊ ಮೇಲಿನ ದರ್ಜೆಯಲಿ ನಡೆದು ಕೇಳಬೇಡವೊ ನಾಲಗೆ ಚೆನ್ನಿರುವ ನರಗೆ ಜಗಳವಿಲ್ಲವೊ ಇರುಳು ಕಂಡ ಬಾವಿಗೆ ನೀ ಉರುಳಬೇಡವೊ ಶಕ್ತಿ ಇರುವ ಕಾಲದಲ್ಲಿ ಉತ್ತಮನೆನಿಸೊ ಶಕ್ತಿಯಲ್ಲಿದಾಗ ಇದ್ದು ಸತ್ತ ಪ್ರಾಯವೊ ಸ್ವೊತ್ತಮ ಜನರಲ್ಲಿ ನಿಯತ ಭಕ್ತಿ ಮಾಡೆಲೊ ಭಕ್ತಿಯಿಲ್ಲದವಗೆ ಮುಕ್ತಿಯಿಲ್ಲ ಕಾಣಿರೊ 110 ಪಾಪಿಯಾಗಬೇಡ ಇತರ ಜನರ ವಂಚಿಸಿ ಕೋಪ ಮಾಡಬೇಡ ಕೊಟ್ಟ ಋಣವ ಕೇಳಲು ಕೂಪ ಕೂರ್ಮದಂತೆ ಜಗವ ನೋಡಬೇಡವೊ ರೂಪುರಂಗುಗಳಿಗೆ ಮನವ ಸೋಲಬೇಡವೊ ಹಡೆದ ಮಕ್ಕಳುಗಳ ಕಾಲದಲ್ಲಿ ತಿದ್ದೆಲೊ ಗಿಡದಲಿ ಬಗ್ಗಿಸದ ಮರವು ಬಗ್ಗಲಾರದೊ ಕೊಡಲಿಯನ್ನು ಸೇರಿ ಮರದ ಕಾವಿನಂದದಿ ನಡತೆ ಕಲಿಸದಿದ್ದರವರು ಬುಡಕೆ ತರುವರೊ ಗಳಿಸಿದವನ ಧನವು ಬಳಸಿದವನಿಗೆಂದರಿಯೆಲೊ ಬಳಸಲು ನೀತಿಯಲಿ ಧನವ ಗಳಿಸಿ ಸುಖಿಸೆಲೊ 120 ತಿಳಿದು ಮರ್ಮ ಕಲಿ ಪುರುಷನ ನೆಲಕೆ ತುಳಿಯಿರಿ ಗುಹ್ಯ ತತ್ವ ಪೇಳಬೇಡವೊ ನಾಯಿಗಳಿಗೆ ಹವ್ಯದಾನ ಮಾಡಬೇಡವೊ ಕಾಯುವ ಗುರುಚರಣವೆ ಬಲುಶ್ರೇಯವೆನ್ನದೆ ಕರ್ಮ ಸುಡುವುದೆ ಉಣಲು ಬದುಕಬೇಡ ಜಗದಿ ಬದುಕಲು ಉಣೆಲೊ ಜನನ ಮರಣ ನಿಯತ ಕಾಲಗಳಲಿ ಬರುವವೊ ಕೊನೆ ಮೊದಲುಗಳಿಲ್ಲವು ಈ ಜಗಪ್ರವಾಹಕೆ ತನಗೆ ತಾನೆ ಬೀಳದು ಜಗದಾಖ್ಯ ವೃಕ್ಷವು 130 ತಾಳಿದವನು ಬಾಳುವನೆಂದರಿತು ನಡೆಯೆಲೊ ಗಾಳಿಗುದ್ದಿ ಕರಗಳನ್ನು ನೋಯಿಸದಿರೆಲೊ ಬಾಲನೆಂದು ಅರಿತು ಸತತ ಜ್ಞಾನವ ಗಳಿಸೆಲೊ ನಾಳೆಯ ದಿನ ನಂಬದಂತೆ ಧರ್ಮಗಳಿಸೆಲೊ ಹರಿಯುಕೊಟ್ಟ ಕಾಲದಲ್ಲಿ ಪರರ ರಕ್ಷಿಸೊ ಹರಿಯು ಕೊಡದ ಕಾಲದಲ್ಲಿ ಹರುಷ ಬಿಡದಿರೊ ದೂಷಕರನು ಎಂದಿಗು ನೀ ದ್ವೇಷಿಸದಿರೆಲೊ ಹೇಸಿಗೆಯನು ನಾಲಿಗೆಯಲಿ ತೆಗೆದುಬಿಡುವರೊ ಹಳ್ಳಕೆ ಬಿದ್ದವನಮೇಲೆ ಕಲ್ಲೆಸೆಯದಿರೊ ಟೊಳ್ಳು ಹರಟೆಗಾರನೆದರು ನಿಲ್ಲ ಬೇಡವೊ 140 ಒಳ್ಳೆಯ ಫಲಕೊಡುವ ಕಾರ್ಯಗಳು ಚಿಂತಿಸೊ ಜಳ್ಳು ಹುಲ್ಲಿಗಾಗಿ ಬೆವರು ಸುರಿಸಬೇಡವೊ ಬಿಂದು ಬಿಂದು ಸೇರಿ ಸಿಂಧುವಾಯಿತೊ ಹಿಂದಿನ ಮೊಳೆಯಿಂದ ದೊಡ್ಡ ವೃಕ್ಷವಾಯಿತೊ ಒಂದನು ಇನ್ನೊಂದು ಸೇರಿ ಕೋಟಿಯಾಯಿತೊ ಮಂದಿಗಳಿದನರಿತು ಪುಣ್ಯರಾಶಿ ಗಳಿಸಿರೊ ನೆರಳು ನೀರು ಕೊಟ್ಟ ಜನರ ಮರೆಯ ಬೇಡವೊ ಸರಿಯುತಿರುವ ಮಾರಿ ಮಸಣಿ ಕರೆಯಬೇಡವೊ ಅರಿಯದ ಅಜ್ಞಾನಿಯೊಡನೆ ಸರಸಬೇಡವೊ ತರುಗು ತಿನ್ನುವವನ ಕೇಳಬೇಡ ಹಪ್ಪಳ 150 ದೇಹಿಯೆಂದು ಬಂದವನಿಗೆ ನಾಸ್ತಿಯೆನದಿರೊ ಸಾಹಸವನು ಮಾಡದಿರೊ ಪ್ರಬಲ ಜನರಲಿ ಮೋಹಕೆ ತುತ್ತಾಗದಿರೆಲೊ ಪರಸತಿಯರಲಿ ದೇಹಕೆ ಬಲ ಶುದ್ಧಿ ಕೊಡುವ ನಿಯಮ ಬಿಡದಿರೊ ಭಾಗ್ಯಹೀನ ಬಡವನೆಂದು ಜರಿಯಬೇಡವೊ ಯೋಗ್ಯತೆಯನು ತಿಳಿಯಲು ಬಲು ಸುಲಭವಲ್ಲವೊ ಶ್ಲಾಘ್ಯವಾದ ಮೂಲಿಕೆಗಳನರಿಯೆ ಸುಲಭವೆ ಯೋಗ್ಯತೆಯನುಸರಿಸಿ ಬರುವ ಭಾಗ್ಯ ಬೇರಿದೆ ಖ್ಯಾತಿಗಾಗಿ ಆತ್ಮಸ್ತುತಿಯ ಮಾಡಬೇಡವೊ ಕೋತಿಯಂತೆ ಕುಣಿಯಬೇಡ ಸರಿಸಮರೊಳಗೆ 160 ಮೂತಿ ತಿರುಗಬೇಡ ಪರರ ಹಿತನುಡಿಗಳಿಗೆ ಸೋತ ಹಾಸ್ಯ ಮಾಡಬೇಡ ರಸಿಕ ಜನರಲಿ ಹಿರಿಯರು ಸಂದೇಹಪಡುವ ಮಾರ್ಗ ತ್ಯಜಿಸೆಲೊ ಬರಿಯ ಮಾತನಾಡಿ ಬೆನ್ನು ತಟ್ಟ ಬೇಡವೊ ಪರರ ಹಳ್ಳಕ್ಕಿಳಿಸಿ ಆಳ ನೋಡಬೇಡವೊ ಕರಕೆ ಸಿಕ್ಕಿದಾಗ ಹಲ್ಲು ಕಿರಿಯಬೇಡವೊ ಅರಳು ಹುಡುಕಬೇಡವೊ ಎದೆಯು ಒಡೆಯುವಂತೆ ಸುದ್ದಿ ಪೇಳಬೇಡವೊ ಬೀದಿಯಲಿರುವ ಜನಗಳ ಬೇಸರಿಸಬೇಡವೊ ಬೆದೆಯಲಿರುವ ದುರುಳನನ್ನು ಕೆಣಕಬೇಡವೊ 170 ಊರು ಕುರಿಯ ಕಾದು ಗೌಡನೆನಿಸಬೇಡವೊ ದೂರು ತರುವ ಜನರ ಕ್ಷಣದಿ ನಂಬಬೇಡವೊ ನಾರಿಯ ಸಾಹಸವ ನಂಬಿ ದುಡುಕಬೇಡವೊ ಎರಡು ಕರವು ಸೇರದೆ ಚಪ್ಪಾಳೆಯಾಗದು ಕುರುಡನು ತೋರಿಸುವುದೆಲ್ಲ ಮಾರ್ಗವಾಗದು ಕರಡಿಯು ಮೈಯಪರಚಲದು ಸೌಖ್ಯವಾಗದು ಗುರುಗಳ ಬಿಟ್ಟೋದಲು ಉಪದೇಶವಾಗದು ಹರಿಯಭಕುತಿ ಹರಿಯದಿರಲು ಗಾನವಾಗದು ಬರಿಯ ಸ್ವರಗಳುರುಳಿಸೆ ಕೀರ್ತನೆಯದಾಗದು 180 ಕರದಿ ತಟ್ಟೆ ಹೊಳೆಯುಂತಿರೆ ಪುರಾಣವಾಗದು ಕಿರಿಯ ಜನರ ಗುಣಗಾನವು ಭಜನೆಯಾಗದು ಅಕ್ಕಿಗಾಗಿ ಅಲೆವರೆಲ್ಲ ದಾಸರಾಗರು ಬೆಕ್ಕಿನಂತೆ ಕಣ್ಣು ಮುಚ್ಚಿ ಯತಿಗಳಾಗರು ಚಿಕ್ಕ ಜಿರಳೆ ಮೀಸೆಯಿರಲು ರಾಯರಾಗದು ಚಿಕ್ಕ ಕೊಳೆಯ ಚೌಕ ಧರಿಸೆ ಮಡಿಯದಾಗದು ಕದ್ದು ಅವಿತುಕೊಂಬರೆಲ್ಲ ಗರತಿಯಾಗರು ಮದ್ದು ಮಾಟ ಮಾಡುವವರು ಸುದತಿಯಾಗರು ಶುದ್ಧ ಧೈರ್ಯ ನಡತೆಯಿಂದ ನಿಂದ್ಯರಾಗರು ಬುದ್ಧಿ ಬದುಕು ಹೇಳುವವರು ದ್ವೇಷಿಯಾಗರು 190 ರೀತಿ ನೀತಿಗಳನು ಪರಗೆ ಹೇಳಲು ಸುಲಭ ಮಾತನಾಡಿದಂತೆ ಮಾಡಿ ತೋರುವರಿಹರೇ ತಾತನ ಕಾಲದಲ್ಲಿ ನುಡಿದ ಮಾತಿದಲ್ಲವು ಹೋತನ ಗಳಸ್ತನವಿದಲ್ಲ ಕೂತು ಕೇಳರಿ ಗಾದೆಗಳನು ವೇದವೆಂದು ಪೇಳಲುಚಿತವು ಮಾದರಿ ಅಣುಶಕ್ತಿಯಿಂದೆ ಗಾದೆ ಗಾದೆಗು ಪರಮ ಭಾಗವತರ ಚರಿತೆಯೋದಿ ನೋಡಿರಿ ಅರಿಯಬಹುದು ನುಡಿದ ನೀತಿಸಾರವೆಲ್ಲವ ನಾಡುನುಡಿಗಳೆಂದು ಮರೆಯಬೇಡವೆಂದಿಗು ಪಾಡಿದರೆ ಪ್ರಸನ್ನ ಹರಿಯು ನೀಡುವ ಫಲವ 200
--------------
ವಿದ್ಯಾಪ್ರಸನ್ನತೀರ್ಥರು
ಕೂಡಿಕೊಂಡಾಡಲೊಲ್ಲರೊ-ರಂಗಯ್ಯ ನಿನ್ನ |ಕೂಡಿಕೊಂಡಾಡಲೊಲ್ಲರೊ ಪಕೇಡಿಗನಿವ ನಮ್ಮ ಕೆಲಸ ಕೆಡಿಪನೆಂದು ಅ.ಪತನ್ನ ತಾಯ ಒಡಹುಟ್ಟಿದಣ್ಣನ ಕೊಂದವನಿವ |ಅನ್ನಿಗರ ಬಿಡುವನೆ? ಎಂದೆಲ್ಲರು ಮಾತಾಡಿಕೊಂಡು 1ತರಳಪುಟ್ಟನೆಂದು ಕರೆದು ಸಲಹಿದರೆ |ಬೆರಳನೆಣಿಸಿ ಕೊಂದ ಕೊಲೆಗಾರನೆಂದು ನಿನ್ನ 2ಆವ ಕಾಯುತ ಹೋಗಿ ಹಾವಿನ ಮಡುವ ಧುಮುಕಿ |ಠಾವವಿಲ್ಲ ಮಾಡಿದ ಕೇವಲ ಹೀನನೆಂದು 3ಗೊಲ್ಲತಿಯರ ಮನೆ ಪೊಕ್ಕು ಪಾಲ್ಬೆಣ್ಣೆ ಮೊಸರುಗಳು |ನಿಲ್ಲದೆ ತಿಂಬುವನಿವ ಕಳ್ಳ ಕೃಷ್ಣನೆಂದು 4ಕರುಣಾಕರಸಿರಿಪುರಂದರವಿಠಲನೆ |ಧರೆಯ ನರರು ನಿನ್ನಚರಿಯಪರಿಯ ಕಂಡು5
--------------
ಪುರಂದರದಾಸರು