ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಯ ತೋರೋ ರಂಗ ಕೈಯ ತೋರೋ ಪ. ಕೈಯ ತೋರೋ ಕರುಣೆಗಳರಸನೆ ಅ.ಪ. ಶರಧಿ ಮಥನದಿ ದೇವಾಸುರರಿಗೆ ಮೋಹಿನಿಯೋಲ್ ಸುರರಿಗೆ ಸುಧೆಯಿತ್ತು ಸುರರಿಗಾಸರೆಯನಿತ್ತಾ 1 ಶಿರಮಂ ಸದ್ಗತಿವೊಂದಿಸಿ ಹರನಂ ನಲವಡಿಸಿದ 2 ಹರನ ವರದಿ ಭಸ್ಮಾಸುರ ಗರ್ವಿತನಾಗಿ [ಆ] ಹರನಂ ಬೆನ್ನಟ್ಟಿ ಬರೆ ದುರುಳನ ದಂಡಿಸಿದಾ 3 ತರಳಧ್ರುವ ತಾಯ ಬಿರುನುಡಿಗೆ ಮನನೊಂದು ಶರಣೆನೆ ಮೈದೋರಿ ತರಳನ ಮೈದಡಹಿದ4 ಕಂದ ಪ್ರಹ್ಲಾದನ ತಂದೆಯುಗ್ರದಿ ಜಡಿಯೆ ಕಂಬದಿಂ ಬಂದು ಖಳನ ಕರುಳನು ಕಿತ್ತೆಸೆದಾ 5 ಮೊಸಳೆ ಬಾಯೊಳು ಸಿಕ್ಕಿ ಬಸವಳಿದು ಬಾಯ್ಬಿಡುತಿರೆ ಎಸೆದ ಚಕ್ರದಿ ಸೀಳಿ ನಕ್ರನ ಕರಿಯನುದ್ಧರಿಸಿದ 6 ಚಕ್ರಧರ ರುಕ್ಮಿಣಿಯ ಕೈಪಿಡಿದ7 ತರುಣಿಯಭಿಮಾನವ ನೆರೆಕಾಯ್ದು ನರನಿಗೆ ವರಸಾರಥಿಯಾಗಿ ತೇರನೆ ನಡೆಸಿದ 8 ವರಶೇಷಗಿರಿಯಲ್ಲಿ ಸ್ಥಿರವಾಗಿ ಶರಣರ ಕರೆದಾದರಿಸಿ ವರಗಳ ಕೊಡುತಿಪ್ಪ 9
--------------
ನಂಜನಗೂಡು ತಿರುಮಲಾಂಬಾ
ಮಾನವ ಸಿಂಗನಾದನು ಪ ರಂಗಮಾನವ ಸಿಂಗನಾಗಲು ಭಂಗಾರ ಗಿರಿಯ ಶೃಂಗಗಳಲ್ಲಾಡೆ ಹಿಂಗದೆ ಎಂಟು ಮಾತಂಗ ಸಪುತ ದ್ವೀ- ಪಂಗಳು ಕಂಪಿಸೆ ವಿಗಡದಿ ಅ.ಪ. ವನಜ ಭವನಂದನರಾನಂದದಿ ವನಧಿಯೊಳಿದ್ದ ವನಜನಾಭನ ವನಜಾಂಘ್ರಿ ದರುಶನಕ್ಕೋಸುಗದಿ ಘನ ವೈಕುಂಠ ಪಟ್ಟಣ ಸಾರೆ ವಿನಯರಲ್ಲದ ಜಯನು ವಿಜಯನವ- ರನು ತಡೆಯಲು ಮುನಿದೀರ್ವರಿಗೆ ದನುಜಾಂಗದಿಂದ ಜನಿಸಿರೋ ಎಂದು ಮುನಿಗಳು ಶಾಪವನ್ನು ಈಯೆ 1 ದಿಕ್ಕು ಎಂಟರೊಳು ಕಕ್ಕಸರೆನಿಸಿ ದಿಕ್ಕು ಪಾಲಕರ ಲೆಕ್ಕಿಸದಲೇವೆ ಸೊಕ್ಕಿ ತಿರುಗುವ ರಕ್ಕಸರಾಗಲು ಮುಕ್ಕಣ್ಣ ಬಲದಿಂದಕ್ಕೆ ಜದಿ ನಕ್ಕು ಪರಿಹಾಸ್ಯಕಿಕ್ಕಿ ಸರ್ವರನು ಮುಕ್ಕಿ ಮುಣಿಗಿ ಧರ್ಮಕೆ ವಿರೋಧಿಸಿ ಸಿಕ್ಕದಂತಲ್ಲಲ್ಲಿ ತುಕ್ಕುತಿರೆ 2 ಇತ್ತ ಶಾಪದಿಂದಲಿತ್ತಲೀರ್ವರಿಗಾ ಪೊತ್ತ ಸುರಾಂಗದಲಿತ್ತಲೋರ್ವವನಿಯು ಕಿತ್ತು ಒಯ್ಯಲು ಬೆಂಬುತ್ತಿ ಹರಿಯು ಕೊಲ್ಲೆ ಇತ್ತ ಹಿರಣ್ಯನುನ್ಮತ್ತದಿಂದ ಸುತ್ತುತಿರುವಾಗ ಪುತ್ರನು ಭಾಗವ ತ್ತೋತ್ತಮನಾಗಿ ಸರ್ವೋತ್ತಮ ಬ್ರಹ್ಮನ ಕರವ ಲೋ- ಕತ್ರಯವರಿವಂತೆ ಬಿತ್ತಿದನು3 ಸೊಲ್ಲು ಕೇಳುತಲಿ ಎಲ್ಲೆಲೊ ನಿನ್ನ ದೈ- ವೆಲ್ಲೊ ಮತ್ತಾವಲ್ಲೆಲ್ಲಿಹನೆನುತಲಿ ನಿಲ್ಲದರ್ಭಕನ್ನ ಕಲ್ಲು ಕೊಳ್ಳಿ ಮುಳ್ಳು ಕರವಾಳ ಬಿಲ್ಲು ನಾನಾ ಎಲ್ಲ ಬಾಧೆಯನ್ನು ನಿಲ್ಲದೆ ಬಡಿಸೆ ಎಳ್ಳನಿತಂಜದೆ ಎಲ್ಲೆಲ್ಲಿಪ್ಪನೆಂದು ಸೊಲ್ಲನು ಬೇಗದಿ ಸಲ್ಲಿಸೆನೆ 4 ಏನು ಕರುಣಾಳೊ ಏನು ದಯಾಬ್ಧಿಯೊ ಏನು ಭಕ್ತರಾಧೀನನೊ ಏನೇನು ನಾನಾ ಮಹಿಮನೊ ಏನೇನೊ ಏನೊ-ಈ- ತನ ಲೀಲೆ ಕಡೆಗಾಣರಾರೊ ದಾನವಾಭಾಸನ ಮಾನಹಾನಿ ಗೈಯೆ ಸ್ಥಾಣು ಮೊದಲಾದ ಸ್ಥಾನದಲ್ಲಿ ಸರ್ವ ದೀನರಿಗೆ ದತ್ತ ಪ್ರಾಣನಾಗ 5 ತುಟಿಯು ನಡುಗೆ ಕಟ ಕಟ ಪಲ್ಲು ಕಟನೆ ಕಡಿದು ನೇಟನೆ ಚಾಚುತ ಪುಟಪುಟ ನಾಸಪುಟದ ರಭಸ ಕಠಿನ ಹೂಂಕಾರ ಘಟುಕಾರ ನಿಟಿಲನಯನ ಸ್ಫುಟಿತ ಕಿಗ್ಗಿಡಿ ಮಿಟಿಯೆ ಹುಬ್ಬಿನ ನಿಟಿಲ ರೋಷದಿ ಮಿಟಿಯೆ ಚಂಚು ಪುಟದಂತೆ ರೋಮ ಚಟುಲ ವಿಕ್ರಮುದ್ಧಟ ದೈವ 6 ನಡುಕಂಭದಿಂದ ಒಡೆದು ಮೂಡಿದ ಕಡು ದೈವವು ಸಂಗಡಲೆ ಚೀರಲು ಬಡ ಜೀವಿಗಳು ನಡುಗಿ ಭಯವ ಪಡುತಲಿ ಬಾಯ ಬಿಡುತಿರೆ ಕಡೆಯೆಲ್ಲೊ ಹೆಸರಿಡಬಲ್ಲವರಾರೊ ತುಡುಗಿ ದುಷ್ಟನ ಪಡೆದ ವರವ ಪಿಡಿದು ಅವನ ಕೆಡಿಸಿ ಹೊಸ್ತಿಲೊ- ಳಡಗೆಡಹಿದನು ಪವಾಡದಲಿ 7 ವೈರಿಯ ಪಿಡಿದು ಊರುಗಳಲ್ಲಿಟ್ಟು ಘೋರ ನಖದಿಂದ ಕೊರೆದು ಉದರವ ದಾರುಣ ಕರುಳಹಾರ ಕೊರಳಲ್ಲಿ ಚಾರುವಾಗಿರಲು ಮಾರಮಣ ಸಾರಿಗೆ ಭಕ್ತಗೆ ಕಾರುಣ್ಯಮಾಡಿ ಶ್ರೀ ನಾರೀಶನಾನಂದದಿ ತೋರುತಿರೆ ಸುರ- ವರರ್ನೆರೆದು ಅಪಾರ ತುತಿಸಿ ಪೂ- ಧಾರೆ ವರುಷ ವಿಸ್ತಾರೆರೆಯೆ 8 ನೃಕೇಸರಿಯಾಗೆ ಭಕುತಗೆ ಬಂದ ದುಃಖವ ಕಳೆದು ಸುಖವನೀವುತ್ತ ಅಕಳಂಕದೇವ ಲಕುಮಿಪತಿ ತಾ- ರಕ ಮಂತ್ರಾಧೀಶ ಸುಕುಮಾರ ಅಖಿಳ ಲೋಕಪಾಲಕ ಪ್ರಹ್ಲಾದಗೆ ಸಖನಾಗಿ ಇಪ್ಪ ಸಕಲ ಕಾಲದಿ ಭಂಜನ ವಿಜಯವಿಠ್ಠಲ ಮುಕುತಿ ಈವ ಭಜಕರಿಗೆ9
--------------
ವಿಜಯದಾಸ
ರಾಮನಾಮದಿ ಪಾಮರರಿಗೆ ಪ್ರೇಮ ಪುಟ್ಟುವುದೆ ಪ. ಭೃತ್ಯ ನ್ಯಾಯವರಿಯದ ಕಾಮಿಗಿದರೊಳು ನೇಮ ಬಪ್ಪುದೆ ಅ.ಪ. ದಾಶರಥಿ ಎನಿಸಿ ಜಗದೊಳು ಶ್ರೀಶನವತರಿಸೆ ಕೌಶಿಕನ ಮಖ ಘಾಸಿಗೈಯ್ಯುವ ದೋಷಿಗಳ ತಾ ನಾಶಗೈಸಿದ 1 ಶಿಲೆಯ ಪೆಣ್ಗೈದು ಲಲನೆ ಸೀತೆಯ ಒಲುಮೆಯಿಂ ವರಿಸಿ ಕುಲವನಳಿದನ ಛಲವ ಭಂಗಿಸಿ ಲಲನೆ ಸಹಿತದಿ ನೆಲಸೆ ಪುರದಲಿ 2 ಅನುಜ ಸ ಹಿತ ವನಕೆ ಬರೆ ಖ್ಯಾತಿ ರಾವಣನಾ ತಳೋದರಿ ಪ್ರೀತಿಸಲು ವಿಘಾತಿಗೈಸಿದ 3 ಮಾಯಾಮೃಗ ಕಂಡು ಪ್ರಿಯ ನೀಡೆನೆ ಸಾಯಕವನೆಸೆಯೆ ಕಾಯ ಬಿಡುತಿರೆ ಹೇಯ ರಾವಣ ಪ್ರಿಯಳನುಯ್ಯೆ ನೋಯ್ದ ಮನದಲಿ 4 ಬೆಟ್ಟವನೆ ಕಂಡು ಕುಟ್ಟಿ ವಾಲಿಯ ಪಟ್ಟ ಕಪಿಗಿತ್ತು ಶ್ರೇಷ್ಠ ಹನುಮಗೆ ಕೊಟ್ಟು ಉಂಗುರ ಪಟ್ಟದರಸಿಗೆ ಮುಟ್ಟಿಸೆಂದ 5 ಕೇಳಿ ಶ್ರೀ ವಾರ್ತೆ ತಾಳೀ ಹರುಷವ ಬೀಳು ಕೊಂಡಲ್ಲಿಂ ತಾಳೆ ಕೋಪವ ಕೇಳಿ ವನಧಿ ಸೀಳು ಆಗಲು ಶಿಲೆಯ ಬಿಗಿದ 6 ದುಷ್ಟ ರಾವಣನ ಕುಟ್ಟಿ ಶಿರವನು ಪಟ್ಟದರಸಿ ಕೂಡಿ ಶ್ರೇಷ್ಠ ಭರತಗೆ ಕೊಟ್ಟು ದಶರ್Àನ ಪಟ್ಟವಾಳಿದ ದಿಟ್ಟಯೋಧ್ಯೆದಿ 7 ರಾಮ ರಾಮನೆಂಬಾ ಹನುಮಗೆ ಪ್ರೇಮದಿಂದೊಲಿದು ಧಾಮ ಅಜಪದ ನೇಮಿಸಿ ಮುಂದೆ ಸೋಮನೆನಿಸಿದ ಭಾನು ವಂಶಕೆ8 ಬೆಟ್ಟದೊಡೆಯನ ಇಷ್ಟು ಮಹಿಮೆಯ ಮುಟ್ಟಿಮನ ಭಜಿಸಿ ದಿಟ್ಟ ಗೋಪಾಲಕೃಷ್ಣವಿಠ್ಠಲ ಶ್ರೇಷ್ಠನೆನ್ನುವ ಶ್ರೇಷ್ಠಗಲ್ಲದೆ 9
--------------
ಅಂಬಾಬಾಯಿ
ಸುವ್ವಿ ಸುವ್ವಾಲಿ |ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ ಪಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ 1ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದುಬುಧಜನರು | ಸುವ್ವಿ ||ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ 2ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ |ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ |ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು | ಸುವ್ವಿ 3ಮೃತ್ತಿಕೆಮಾಲೆಅಂಗಾರದಿವ್ಯ ಮಂತ್ರಾಕ್ಷತೆಯು |ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||ಎತ್ತ ಹೋದರು ಜನರಿಗೆ ಜಯಪ್ರದ ತೋರುವದು |ಕತ್ತಲಿಲ್ಲ ಶತಸಿದ್ಧ ಮತ್ತೇನುಕೇಳಿ| ಸುವ್ವಿ 4ಪಂಡಿತರು ಮೊದಲಾಗಿಹಸ್ತಿಉಷ್ಟ್ರ ಕುದುರೆಯ |ಹಿಂಡುಗಳು ತೃಷೆಯಿಂದ ಬಳಲುತಿರೆ | ಸುವ್ವಿ ||ದಂಡ ಜಗತಿಗೂರಿ ತೋಯ ತೆಗಿಸಿಯವನೀ |ಮಂಡಲದೊಳಗೆ ಪೆಸರಾದರಿವರು | ಸುವ್ವಿ 5ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ |ಲಿಟ್ಟುಕೊಂಡು ಉಣಿಸಿ ಉತ್ತಮ ವರವ | ಸುವ್ವಿ ||ಕೊಟ್ಟು ಕಳಿಸಿದ ಮೇಲೆ ಆವು ಕೊಂಚಿಯಾಗಲಿಲ್ಲ |ಗಟ್ಟಿ ಸಂಕಲ್ಪರಿವರು ಮುನಿವರರು | ಸುವ್ವಿ 6ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ |ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ | ಸುವ್ವಿ ||ನೆಪ್ಪು ಧರೆಗಾಗಲೆಂದುಗುರುಸುಧೀಂದ್ರ ಕುಮಾರ |ಸರ್ಪನ ತೋರಿಸಿ ಸುಪ್ರಖ್ಯಾತರಾದರು | ಸುವ್ವಿ 7ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ |ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ | ಸುವ್ವಿ ||ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ |ಭಜಿಸಿರಿವರನ್ನು ಮಕ್ಕಳು ಬೇಡುವವರು | ಸುವ್ವಿ 8ಮುತ್ತಿನ ಮಾಲಿಕೆನೃಪಭಕ್ತಿಯಿಂದ ಕೊಡಲಾಗಿ |ಸಪ್ತಜಿಹ್ವಗುಣಿಸಿದ ಸರ್ವರು ನೋಡಿ | ಸುವ್ವಿ ||ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ |ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು | ಸುವ್ವಿ 9ಹಿಂದೆ ಮಾಡಿದ ದುಷ್ಕರ್ಮ ತೀರ ಬಂದದನು ನೋಡಿ |ಬಂದಾಕ್ಷಣದಲ್ಲಿ ಅವನ ವಿಚಾರಿಸಿ | ಸುವ್ವಿ ||ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ |ಸಂದೇಹವಿಲ್ಲದೆ ಸುಲೋಕವನಿತ್ತರು | ಸುವ್ವಿ 10ತುಂಗಾತೀರ ಮಂತ್ರಾಲಯದಲ್ಲಿಶ್ರಾವಣಬಹುಳ |ಮಂಗಳ ಬಿದಿಗಿಯಲ್ಲಿ ನಿವಾಸವಾದರು | ಸುವ್ವಿ ||ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು |ಕಂಗಳುಸಾಲವು ನೋಡ ಹೊದ್ದ ಶಾಠಿಯ | ಸುವ್ವಿ 11ಅಂಧಕಬಧಿರಕುಂಟ ನಾನಾ ರೋಗಿಗಳು ಮತ್ತೆ |ಕಂದ ವಜ್ರ್ಯ ಮೊದಲಾದವರಿಗೆಕಾಮ್ಯ| ಸುವ್ವಿ ||ತಂದುಕೊಡುವರು ಬೇಗ ಇತರ ಸಂಶಯವಿಲ್ಲ |ಮಂದಭಾಗ್ಯರಿಗೆ ಇವರ ಸೇವೆ ದೊರೆಯದೇ || ಸುವ್ವಿ 12ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು |ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ | ಸುವ್ವಿ ||ಧಾತಾ ಪಿತ ನಿಲಯವಿದೇನೋಯೆಂದು ತೋರುವದು |ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ | ಸುವ್ವಿ 13ಪಾಡ್ಯ ಪೂರ್ವಾರಾಧನೆ ಉತ್ತರಾರಾಧನೆಗೆ |ಒಡ್ಡಿಬರುವುದು ಎಂಟು ದಿಕ್ಕುಗಳಿಂದ ಜನವು | ಸುವ್ವಿ ||ಕಡ್ಡಿಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ |ದೊಡ್ಡ ರಥವೇರಿ ಮಠವ ಸುತ್ತುವರು | ಸುವ್ವಿ 14ಇಷ್ಟೇಯೆನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು |ನಷ್ಟ ಮಾಡುವರು ದುರ್ಮತ ದಾರಿದ್ರ್ಯವ | ಸುವ್ವಿ ||ಸೃಷ್ಟಿಗೊಡೆಯ ಪ್ರಾಣೇಶ ವಿಠ್ಠಲನೆಂದು ಪೇಳ್ವರು |ಎಷ್ಟು ಪೇಳಿದರೂ ಎನ್ನಿಂದಲಿ ತೀರದು | ಸುವ್ವಿ 15
--------------
ಪ್ರಾಣೇಶದಾಸರು