ಒಟ್ಟು 9 ಕಡೆಗಳಲ್ಲಿ , 9 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಿಕರವಿಲ್ಲವೆ | ವನರುಹಲೋಚನಾ ಪ ಘನಕೃಪಾಪೂರ್ಣ ನೀನೆನುವುದು ಜಗವೆಲ್ಲಾ ಎನಗದು ನಿಜವೆಂದು ಅರಿವಾಗಲಿಲ್ಲ ಅ.ಪ ವೇದ ಪುರಾಣವ ಓದಿ ತಿಳಿಯಲಿಲ್ಲ ಸಾಧುಸಂತರ ಸೇವೆ ಸಾಧಿಸಲಿಲ್ಲ ಭಾರ ನಾನಾದೆನಲ್ಲ ಆದಿಮೂರುತಿ ನಿನ್ನಾರಾಧನೆ ಮಾಡಲಿಲ್ಲ 1 ಜ್ಞಾನ ಸುಧಾರಸ ಪಾನವ ಮಾಡಲಿಲ್ಲ ದೀನತೆಯೊಳು ನಿನ್ನ ಧ್ಯಾನಿಸಲಿಲ್ಲ ದೀನರ ಸಂಗದಿ ಶ್ವಾನನಂತಾದೆನಲ್ಲ ನಾನು ನನ್ನದು ನಿನ್ನಾಧೀನವಾಗಲು ಇಲ್ಲ 2 ನಿನ್ನ ಬಿಟ್ಟನ್ಯರ ಇನ್ನು ಸೇವಿಪುದಿಲ್ಲ ಅನ್ನ ಪಾನಂಗಳೊಳಿನ್ನಾಸೆಯಿಲ್ಲ ನಿನ್ನ ನಾಮಾಮೃತವನು ಬಿಡುವವನಲ್ಲ ನಿನ್ನವನೆಂದೆನ್ನ ಮನ್ನಿಸೊ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಾಲ ವ್ಯರ್ಥ ಪ ಘನ್ನ ನಿರಯಕೆ ವೈವೋ ಸಾಧನವೋ ಗೋಪಾಲ ಅ.ಪ ಸುರರು ಬಲ್ಲರೈ ಚದುರ ತತ್ವೇಶಗಣ ಬಲ್ಲರಯ್ಯಾ ವಿಧಿಪಿತನೆ ನಿನ್ನ ಬಿಟ್ಟನ್ಯತ್ರ ಮನವಿರಲು ನಿಧನ ನೋವಿಗೆ ಮಿಗಿಲು ಪದುಮ ಮುಕ್ತರು ಸಾಕ್ಷಿ1 ಬಂಧಿಸಲು ನೀ ನಮ್ಮ ಬಿಡಿಸಿಕೊಂಬುವರುಂಟೆ ಅಂಧತಮಸಿನ ಭೋಗದಿಂದಾಹುದೊ ಸಿಂಧು ಚಿನ್ಮಯ ಕಾಯ ತಂದೆ ನಿನ್ನಯ ಕರುಣ ಉಂಬುವನೆ ಬಹುಧನ್ಯ 2 ಗೋ ಗೊಲ್ಲರಲಿ ಕರುಣ ಸುರಿದ ದೀನ ಬಂಧು ಭಾಗ್ಯಪಾಲಿಸು ಭಕ್ತಿಯೋಗವಿತ್ತು ರೋಗದಲಿ ಬಲು ನೊಂದೆ ಭಯವನ್ನು ಹೀರುವುದು ನಾಗತಲ್ಪ ಜಯೇಶವಿಠಲನೆ ಉದ್ಧರಿಸು 3
--------------
ಜಯೇಶವಿಠಲ
ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರುತಿರು ಹೇ ಮನುಜ ಪ ಕ್ಲೇಶಪಾಶಂಗಳ ಹರಿದು ವಿಲಾಸದಿಶ್ರೀಶನ ನುತಿಗಳ ಪೊಗಳುತ ಮನದೊಳುಅ ಘಾಸಿ ಮಾಡಿದ ಪಾಪಕಾಶಿಗೆ ಹೋದರೆ ಹೋದೀತೆಶ್ರೀಶನ ಭಕುತರ ದೂಷಿಸಿದಾ ಫಲಕಾಸು ಕೊಟ್ಟರೆ ಬಿಟ್ಟೀತೆಭಾಷೆಯ ಕೊಟ್ಟು ನಿರಾಶೆಯ ಗೈದ ಫಲಕ್ಲೇಶಗೊಳಿಸದೆ ಇದ್ದೀತೆಭೂಸುರಸ್ವವ ಹ್ರಾಸ ಮಾಡಿದ ಫಲಏಸೇಸು ಜನುಮಕು ಬಿಟ್ಟೀತೆ 1 ಜೀನನ ವಶದೊಳು ನಾನಾ ದ್ರವ್ಯವಿರೆದಾನಧರ್ಮಕೆ ಮನಸಾದೀತೆಹೀನ ಮನುಜನಿಗೆ ಜ್ಞಾನವ ಬೋಧಿಸೆಹೀನ ವಿಷಯ ಅಳಿದ್ಹೋದೀತೆಮಾನಿನಿ ಮನಸದು ನಿಧಾನವಿರದಿರೆಮಾನಾಭಿಮಾನಗಳುಳಿದೀತೆಭಾನುಪ್ರಕಾಶನ ಭಜನೆಯ ಮಾಡದಹೀನಗೆ ಮುಕುತಿಯು ದೊರಕೀತೆ2 ಸತ್ಯಧರ್ಮಗಳ ನಿತ್ಯವು ಬೋಧಿಸೆತೊತ್ತಿನ ಮನಸಿಗೆ ಸೊಗಸೀತೆತತ್ವದ ಅರ್ಥವ ವಿಚಿತ್ರದಿ ಪೇಳೆಕತ್ತೆಯ ಚಿತ್ತಕೆ ಹತ್ತೀತೆಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿಮುತ್ತು ಕೊಟ್ಟರೆ ಮಾತನಾಡೀತೆಕತ್ತುರಿ ತಿಲಕವನೊತ್ತಿ ಫಣೆಯೊಳಿಡೆಅರ್ತಿಯ ತೋರದೆ ಇದ್ದೀತೆ 3 ನ್ಯಾಯವ ಬಿಟ್ಟನ್ಯಾಯವ ಪೇಳುವನಾಯಿಗೆ ನರಕವು ತಪ್ಪೀತೆಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆಘಾಯವಾಗದೆ ಬಿಟ್ಟೀತೆತಾಯಿತಂದೆಗಳ ನೋಯಿಸಿದವನಿಗೆಮಾಯದ ಮರಣವು ತಪ್ಪೀತೆಮಾಯಾಜಾಲವ ಕಲಿತ ಮನುಜನಿಗೆಕಾಯ ಕಷ್ಟವು ಬಿಟ್ಟೀತೆ 4 ಸಾಧು ಸಜ್ಜನರ ನೋಯಿಸಿದ ಮಾಯಾವಾದಿಗೆ ನರಕವು ತಪ್ಪೀತೆಬಾಧಿಸಿ ಪರರರ್ಥವ ದೋಚುವವಗೆವ್ಯಾಧಿಯು ಕಾಡದೆ ಬಿಟ್ಟೀತೆಭೇದವೆಣಿಸಿ ಬಲು ಕ್ಷುದ್ರವ ಕಲಿತರೆಮೋದವೆಂದಿಗು ಆದೀತೆಕದ್ದು ಒಡಲ ಪೊರೆವವನ ಮನೆಯೊಳುಇದ್ದದ್ದು ಹೋಗದೆ ಉಳಿದೀತೆ5 ಅಂಗಜ ವಿಷಯಗಳನು ತೊರೆದಾತಗೆಅಂಗನೆಯರ ಸುಖ ಸೊಗಸೀತೆಸಂಗ ದುಃಖಗಳು ಹಿಂಗಿದ ಮನುಜಗೆಶೃಂಗಾರದ ಬಗೆ ರುಚಿಸೀತೆಇಂಗಿತವರಿತ ನಿಸ್ಸಂಗಿ ಶರೀರ ವ-ಜ್ರಾಂಗಿಯಾಗದೆ ತಾನಿದ್ದೀತೆಮಂಗಳ ಮಹಿಮನ ಅಂಘ್ರಿಯ ಕಾಣದಮಂಗಗೆ ಮುಕುತಿಯು ದೊರಕೀತೆ 6 ಕರುಣಾಮೃತದಾಭರಣವ ಧರಿಸಿದಶರಣಗೆ ಸಿರಿಯು ತಪ್ಪೀತೆಕರುಣ ಪಾಶದುರವಣೆ ಹರಿದಾತಗೆಶರಣರ ಕರುಣವು ತಪ್ಪೀತೆಅರಿತು ಶಾಸ್ತ್ರವನಾಚರಿಪ ಯೋಗ್ಯಗೆಗುರು ಉಪದೇಶವು ತಪ್ಪೀತೆವರ ವೇಲಾಪುರದಾದಿಕೇಶವನಸ್ಮರಿಸುವನಿಗೆ ಮೋಕ್ಷ ತಪ್ಪೀತೆ 7
--------------
ಕನಕದಾಸ
ನಾನೇನ ಮಾಡಿದೆ ತಪ್ಪುಗಳನ್ನ ನಾನೇನ ಮಾಡಿದೆ ದೇವರದೇವ ಪ ನಿನ್ನ ದಾಸರ ತಪ್ಪನೆಣಿಸದೆ ಪೊರೆಯುವೆ ನಾನೊಬ್ಬ ದಾಸನೆಂದರಿದು ನೀ ಪೊರೆಯೊ 1 ಭೃಗುವಂತೆ ನಿನ್ನಯ ಎದೆಗೆ ತುಳಿಯಲಿಲ್ಲ ನಗವೈರಿಯಂತೆ ಯುದ್ಧವ ಮಾಡಲಿಲ್ಲ 2 ಅಂಗಾಧಿಪತಿಯಂತೆ ಕೊಂದೆನೆಂದರಿತಿಲ್ಲ ಗಂಗೆಯ ಸುತನಂತೆ ಫಣಿಗೆ ಹೊಡೆಯಲಿಲ್ಲ 3 ನಿನ್ನ ಬಿಟ್ಟನ್ಯ ದೇಶಕೆ ಪೋಗಲಿಲ್ಲಾ 4 ಭಾವದಿ ನುಡಿದಂತೆ ನಿನಗೇನು ಪೇಳಿಲ್ಲ 5 ನಿನ್ನಾ ಕುವರರು ಸುಭದ್ರೆಯ ಮದುವೆಯ ಚೆನ್ನಾಗಿ ತಡೆದಂತೆ ತಡೆಯಲಿಲ್ಲವೊ ನಾನು6 ವಸುದೇವ ದೇವಕಿ ಮುಖ್ಯರಂತೆ ನಿನ್ನ ಮಾ- ನುಷನೆಂದು ನಾನೇನು ತಿಳಿದುಕೊಂಡಿಲ್ಲ 7 ಮೌಲಿಯ ಕದ್ದಂತೆ ಕದ್ದುಕೊಂಡಿಲ್ಲ8 ರಾಜೇಶಹಯಮುಖ ಭಜಕರೊಳಗೆ ಮತ್ತೆ ನಿತ್ಯ ಭಕ್ತರಾರಿಹರು 9
--------------
ವಿಶ್ವೇಂದ್ರತೀರ್ಥ
ನಿನ್ನಬಿಟ್ಟನ್ಯಬಲ ಮುನ್ನಿಲ್ಲಸ್ವಾಮಿ ಎನ್ನಯ್ಯ ವಿಶ್ವೇಶ ಪನ್ನಂಗಶಾಯಿ ಪ ಇನಚಂದ್ರ ಮಂಗಳಬುಧಗುರು ಭಾರ್ಗವ ಶನಿರಾಹುಕೇತು ನವಮಹರ್ದಶನು ನೀನೆ ಘನನಿಮ್ಮ ಮಹಿಮೆಯಿಂ ವಿಧವಿಧದಿ ಸೃಷ್ಟಿಗೈ ದೊನರುಹ ಭುವನಂಗಳಾಳುವವ ನೀನೆ 1 ನಕ್ಷತ್ರಯೋಗಾದಿಕರಣಂಗಳು ನೀನೆ ಪಕ್ಷಮಾಸ ಸರ್ವಕಾಲ ವಾರ ತಿಥಿ ನೀನೆ ಸುಕ್ಷೇತ್ರಯಾತ್ರ ಮಹಪುಣ್ಯತೀರ್ಥವು ನೀನೆ ಸಾಕ್ಷಾತ ನಿಖಿಲ ಶುಭಮುಹೂರ್ತಗಳು ನೀನೆ 2 ಪರಮವೇದ ಪುಣ್ಯಪುರಾಣಕಥೆ ನೀನೆ ವರ ನಿಖಿಲ ಶಾಸ್ತ್ರರ್ಥ ಮೂಲವಿಧಿ ನೀನೆ ಚರಣದಾಸರ ಪ್ರಾಣಪದಕ ಶ್ರೀರಾಮಯ್ಯ ಸ್ಥಿರಮೋಕ್ಷ ಪಾಲಿಪ ಶ್ರೀಗುರುವು ನೀನೆ 3
--------------
ರಾಮದಾಸರು
ಬಿಟ್ಟನ್ಯಭಜನೆಯ ಕಂಡು ಪ ಹೊಚ್ಚಿ ಸುಳಿದಟ್ಟಿ ಸುಡುವ ಅಡವಿಗಿಚ್ಚಿನ ಭಯಕೆ ಬೆಚ್ಚಿ ಅರಗಿನ ಮನೆಯ ಹೊಗುವವನಂತೆ ಅಚ್ಚರಿಯೆನಿಸೆ ದಹಿಪ ತಾಪತ್ರಯಕ್ಕಳುಕಿ ತುಚ್ಛ ದೈವಗಳ ಮರೆಯೊಗುವ ಮನುಜರಕಂಡು 1 ಉರಿಯ ಮಳೆಗರೆಯುತಿರೆ ತೃಣಗೇಹವನು ಹೊಕ್ಕು ಹರಣವನುಳುಹಿಕೊಂಬೆನೆಂಬಂತೇ ಉರುಬೆ ನಾನಾ ರೋಗಗಳುಳುಹಲು ಹಲವು ದೈವಗಳಿ ಗೆರಗಿ ಜೀವನಕೆ ಕಳಕಳಿಪ ಮನುಜರ ಕಂಡೂ 2 ಮುಗಿಲಗಲ ಧರೆ ಜರಿಯುತಿರೆ ಹುಲ್ಲಿನಣಬೆಯೊಡ್ಡಿ ಮಿಗೆ ಬಾಳ್ವೆನೆಂಬ ಮರುಳನಂದದೀ ಉಗಿದಸಿಯ ಮೃತ್ಯುವಿನ ಭಯಕೆ ನಾನಾದೇವ ತೆಗಳಮರೆಯೊಗುವ ಮನುಜರ ಕಂಡು 3 ಘುಡು ಘುಡಿಸಿ ಸಿಡಿಲೆರಗುತಿರೆ ತನ್ನ ಕೈ ವಿಡಿದ ಕೊಡೆಯ ಮರೆಗೊಂಡುಳಿವೆನೆಂಬಂತೇ ಮುಡಿವಿಡಿದೆಳೆವ ಕಾಲನ ಭಯಕೆ ನಾನಾದೈವ ದಡಿವಿಡಿದೆರಗಿ ಹಲು ಬಿಡುವ ಮನುಜರ ಕಂಡು 4 ಯಾತಮುಳಿದರೆ ಜಗದಲುಳಿದವರಾರು ಮ ತ್ತೀತನುಳುಹಿದನನು ಕೊಂದವನಾವ ಇ ದೇತಕರಿಯರೋ ನರರು ಅಕಟಕಟ ವೈಕುಂಠ ನಾಥ ಪರಿಪೂತನ ಪದಕಮಲವ ಭಜಿಸರೆಂದು 5 ನೀರಡಿಸಿ ಜಾಹ್ನವಿಯ ತೀರದಲಿ ಭಾವಿಯಾ ನೀರ ಕುಡಿವ ಮಾನವನ ತೆರದೀ ಹರಿಯ ಚರಣವಿರಲು ಭೂರಿದೈವಂಗಳಿನ್ನೇಕೆ ಭಜಿಸುವೆ ಮನುಜ ಹರಿ ಕಾರುಣ್ಯನಿಧಿ ವೈಕುಂಠವಲ್ಲಭ ಬೇಲೂರ ಚೆನ್ನಿಗರಾಯ ಕೃಪಾನಿಧಿಯಿರಲು 6
--------------
ಬೇಲೂರು ವೈಕುಂಠದಾಸರು
ಬೇಡಲೇತಕೆ ಪರರ ದೇಹಿಯೆಂದು ಪ ನೀಡುವಾ ಧೊರೆ ಎನಗೆ ನೀನಿರಲು ಸರ್ವದಾ ಅ.ಪ. ಗ್ರಾಸವನು ಬೇಡೆ ದೂರ್ವಾಸ ಮುನಿಗಂದನ್ನ ಅನಾ ಯಾಸದಿಂ ತತ್ಕಾಲದಲಿ ಕಲ್ಪಿಸಿ ಆ ಸಂಯಮಿಗೆ ಉಣಿಸಿ ದಣಿಸಿದ ಮಹಾ ದಾತಾ ದಾಶರಥೆ ನಿನ್ನ ಬಿಟ್ಟನ್ಯ ದೇವತೆಗಳನು 1 ಖಳ ದುಶ್ಯಾಸನನು ದ್ರೌಪದಿಯ ಸಭೆಯೊಳು ದು ಕೂಲವನು ಸೆಳೆಯೆ ದ್ವಾರಕ ಮಂದಿರಾ ಶ್ರೀ ಲೋಲ ಶ್ರೀ ಕೃಷ್ಣ ಕರುಣಿಸು ಕರುಣಿಸೆನೆ ಪಾಂ ಚಾಲಿ ಮೊರೆ ಕೇಳಿ ದಿವ್ಯಾಂಬರ ನಿಚಯವಿತ್ತೆ 2 ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ ಬಡತನವ ಕಳೆದೆ ಒಪ್ಪಿಡಿಯವಲಿಗೆ ಪೊಡವಿಯನ್ನಾಳಿಸಿದೆ ಕ್ರಿಮಿಗೊಲಿದು ಕಾರುಣ್ಯದಲ್ಲಿ ಮೃಡ ಬಿಡೌಜರೀಪ್ಸಿತ ಕೊಡುವೆ 3 ತಾಪಸೋತ್ತಮ ಮೃಕಂಡಾತೃಜಗೆ ಕಲ್ಪಾಯು ನೀ ಪೂರ್ತಿ ಮಾಡಿ ಅಲ್ಪಾಯು ಕಳೆದು ಆ ಪರ್ವತೇಶ್ವರನ ಪಟ್ಟಣವ ಸಾರ್ದು ಸಾಂ ದೀಪ ತನಯನ ತಂದ ಸರ್ವಾಂತರ್ಯಾಮಿ 4 ವಿಶ್ವ ಜೀವರಿಗನ್ನ ಕಲ್ಪಕನೆ ನೀನಿರಲು ಜ್ಞಾನ ದ್ರವ್ಯ ಅಲ್ಪ ಮಾನವರಿಗಾಲ್ಪರಿರೇನಹುದು ಅಹಿ ತಲ್ಪ ಜಗನ್ನಾಥ ವಿಠ್ಠಲ ಕಲ್ಪತರುವಿರಲು 5
--------------
ಜಗನ್ನಾಥದಾಸರು
ಮನವೆ ನೀ ಸ್ಥಿರವಾಗಿ ಹರಿಯ ಪಾದಾಂಬುಜ_ವನು ಸೇರಿ ಅಲ್ಲಿಯೆ ನಿಲ್ಲಯ್ಯ ಬಿಡದೆ ಪ ಅನುದಿನ ಸೇವಿಸಲನುವಾಗುದಯ್ಯಾಘನ ಚಂಚಲ ನೀನು ಎಚ್ಚರ ಎಚ್ಚರ ಅ.ಪ. ಅಲ್ಲಲ್ಲಿ ಇಲ್ಲೆಂದು ಎಲ್ಲೂ ಹುಡುಕಲು ಬೇಡಎಲ್ಲೆಲ್ಲ್ಯೂ ಇರುವ ಶ್ರೀವಲ್ಲಭನುಬಲ್ಲವರಾಡುವ ಸೊಲ್ಲನು ಲಾಲಿಸುಖುಲ್ಲನೆಂಬುವ ನಿಂದೆಗೀಡಾಗಬೇಡಾ 1 ನಿತ್ಯ 2 ಧ್ಯಾನದ ದಾರದಿಂ ಜಪವೆಂಬ ಗಂಟಿರಲಿಶ್ರೀನಿವಾಸನ ಪಾದವೆಂಬ ಗೂಟಕೆ ಕಟ್ಟಿಮೌನದಿಂ ಕಟ್ಟಿಸಿಕೊಂಡಲ್ಲೇ ಸುಳಿದಾಡುಸ್ಥಾನವ ಬಿಟ್ಟನ್ಯನಿಟ್ಟಿಗೆ ಪೋಗದೆ 3 ಸಕಲರ ಪಾಪವ ತೊಳೆದು ಪಾವನಗೈದುಮುಕುತಿಯ ದಾರಿಯ ತೋರುವ ನದಿಗಂಗೆಪ್ರಕಟವಾಗಿರುವಂತೆ ಚರಣದೊಳುರುಳಾಡುಭಕುತಿಯ ಬೇಡು ನೀ ಪ್ರತಿದಿನ ನೋಡು 4 ಗದುಗಿನ ವೀರನಾರಾಯಣಗೂ ನಿನಗೂ ಹೃದಯವೆ ಮಂದಿರವಲ್ಲವೆ ದೀಪದಕದಿರಂತ ಚಾಚುತ ಪೋಗಿಬರುವದೇತಕೆಸದನವ ಬಿಡದಲ್ಲೇ ಹರಿಯನು ಸೇವಿಸು 5
--------------
ವೀರನಾರಾಯಣ
ಸುಖಖರ ನೀನೆನ್ನುತಾ ಸೂರಿಗಳು ಭಜಿಸುವರೊ ನಿನ್ನ ಪ ಭವಭಯಗಳನೀಡಾಡುತ ಪಾಪರಹಿತರಾಗಿಹರು ಅ.ಪ ಭೂತದಯೆ ಪಶ್ಚಾತ್ತಾಪವಿಖ್ಯಾತಿಯಶೋದಾನ ನೀತಿಮನಃ ಪ್ರೀತಿಧ್ಯಾನ ನಿತ್ಯಾನುಸಂಧಾನ ಶ್ರೀ ತರುಣಿವರ ಪ್ರಾಣಿ ವ್ರಾತಗಳಿಗೆ ಕರ್ತನು ಯಂ ದಾತುರವಿಲ್ಲದೆ ಸರ್ವದ ಜಾತಿ ಧರ್ಮಾಚಾರದಲ್ಲಿ 1 ತನ್ನಂತಿತರರ ನೋಡುತ ಮನ್ನಣೆಯಲಿ ಸತತ ನನ್ನದು ನಾನೆಂಬುದ ಬಿಟ್ಟನ್ಯರ ನಿಂದಿಸದಲೆ ಹರಿ ನಿನ್ನಾಜ್ಞೆಯೊಳಾದುದೆಲ್ಲ ನಿನಗೆ ಸಮರ್ಪಣೆಗೈಯ್ಯುತಾ 2 ಮತಿಗೆಡದೆ ಎಚ್ಚರಿಕೆಯಿಂ ಸುಮಾರ್ಗದಿ ಸಮ್ಮುದದಿ ಪ್ರತಿ ದಿನದಲಿ ಶೃತಿ ಸ್ಮøತಿ ಸಂಮತದಿ ಸತ್ಸಂಗದಿ ಸೀತಾ- ಪತಿ ಗುರುರಾಮ ವಿಠಲ ಯಂದತಿಶಯದಲಿ ಚಿಂತಿಸುತ3
--------------
ಗುರುರಾಮವಿಠಲ