ಒಟ್ಟು 20 ಕಡೆಗಳಲ್ಲಿ , 11 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಯ್ಯ ರಂಗಯ್ಯ ಪ ತಮ್ಮವರೆಂದು ತಾಳಿ | ಸುಮ್ಮನಿರುವವರಲ್ಲ ||ಹಮ್ಮಿಲಿ ಹರಿಸಿ ಬಂದು ನಮ್ಮನೆ ದೂರುವರೋ 1 ಮೊಸರನ್ನೆಲ್ಲ ಸುರಿದಾನೆಂದುಸುರು ಹಾಕಿದರೆ |ನಮ್ಮ ಹೆಸರಿಗೆ ಮರಗಿ ಮುಖವು ಹಸಿರಿಡುದಯ್ಯಾ 2 ಬಾಲಕರ ಹೆಗಲನೇರಿ | ಪಾಲನೆಲ್ಲವಕಿತ್ತೆಳೆದು |ಬಾಲೇರ ಬಳಲಿಸುವದು ಬಾಲ ಬೇಕೇನೋ 3 ಸರಿಯಿಲ್ಲದವರ ಕೂಡ | ಮರೆಯಿಲ್ಲದೆ ಮಾತಾಡಿ |ಸೆರಗ ಸೆಳೆದರೆ ನಮ್ಮ ಹಿರಿಯತನವೇನೋ 4 ಚಿಕ್ಕತರದವರು ನಮಗೆ | ಸೊಕ್ಕಿನವನೆಂಬುವರು |ರುಕ್ಮಭೂಷಗೆ ಈ ಮಾತು ತಕ್ಕದಹುದೇನೋ 5
--------------
ರುಕ್ಮಾಂಗದರು
(ಕಾಲಜ್ಞಾನ) ಮೈಯ್ಯವ ಮರಿಯ ಬ್ಯಾಡಿರೋ | ಮತ್ರ್ಯದೊಳಗ ಕಲಿರಾಯ ನರಸುತನ | ಪ್ರಬಲ ವಾಯಿತು ಕೇಳಿರೋ ಪ ಬೀಳು ಬಿದ್ದಾವೋ ಧರ್ಮದಾ ಭೂಮಿಯು | ಅಧರ್ಮವೇ ಹೆಚ್ಚೀತು | ಹೇಳಲಿನ್ನೇನವಗುಣಿಗಳು ಪ್ರಕಟಿಸಿ | ಕೇಡು ತಂದಾರು ಜಗಕೆ | ಖೂಳರ ಹಿರಿತನವು ಒಳ್ಳೆವರಾ |ಮಾನ ಮನ್ನಣೆ ಹೋದಾವು | ಮನೆಯ ಕೊಂಡುಂಬುವರು 1 ಮರ್ಯಾದೆಗಳ ಬಿಟ್ಟಾರೋ | ಕುಲಕ ಮಾತವ ತಾಹರು | ಹಗೆ ಹಾರೋ | ಹುಸಿನುಡಿದು ಮನೆ ದೈವವನೇ ಮಾರಿ | ಹದಗೆಟ್ಟು ಹೋಗುವರೋ 2 ಒಡಲು ಕಾಮಾಟಿಕೆಯಾ ಎರಡರಿಂದ | ಕೋಣ-ನಂದದಿ ಬಗಿದು | ಪಡಿ ಕೊಟ್ಟು ಸಲಹುವ ಒಡಿಯ ನೆಚ್ಚರ ವಿಲ್ಲಾ | ಮರಹು ಕತ್ತಲೆ ಮುಸುಕಿ | ಪೊಡವಿಲಿ ಭಕುತಿ ಮಾರ್ಗ ಮುಗ್ಗಿತು | ಎಲ್ಯಾರಿದ್ದರ ಹೋಲಿಕೆಯು 3 ಕಡಲ ಶಯನನ ದಾಸನೆಂದರೆ ಬಾಗರು | ನೀಚರಿಗೆರಗುವರು ಕನ್ಯರೈದು ವರುಷಕ ಗಂಡನ | ಸಂಗವ ಬಯಸುವರು | ಇನ್ನೇನು ಏಳು ಬರುಷದ ಬಾಲೇರು | ಗರ್ಭವ ಧರಿಸುವರು | ಅಣ್ಣಾ ತಂಗಿಗೆ ಮದುವೆ ಮುಂದಕ | ಆದಾವೋ ಜಗದೊಳಗ | ಜಾತಿ ಸಂಕರ ವಾಹುದು 4 ಯಾತ್ರೆಯು ನಿಲ್ಲುವವು | ನೀರು ತೋರವೆಲ್ಲಿ 5 ಶಾಸ್ತ್ರಗಳು ಮರೆವುದು | ಸಾರಿದಾ ಬೋಧವಿದು6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
(ಕೋಲ ಹಾಡು) ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀ ರಾಮನ ಬಲಗೊಂಬೆ ರನ್ನದ ಪ. ಭೂಮಿಯೊಳಗೆ ಸೀತಾರಾಮನು ಜನಿಸಲು ಸೀಮೆಯ ನಾರಿ ಜನರೆಲ್ಲ ರನ್ನದಾ ಸೀಮೆಯ ನಾರಿ ಜನರೆಲ್ಲ ನೆರೆದು ಸು ಪ್ರೇಮದಿ ಪಾಡಿ ನಲಿದರು ರನ್ನದಾ 1 ಕುಂಡಲ ಕಂಠ ಮಾಲೆಯ ನೊಸಲಾ ತಿಲಕವು ರನ್ನದ ಮಾಲೆಯ ತಿಲಕನೊಸಲೊಳಗಿರಿಸಿದ ಬಾಲೇರು ಕೂಡಿ ನಲಿವುದ ರನ್ನದ 2 ಸಾರಸಂಭವ ಕ್ಷೀರ ವಾರುಧಿ ತಡಿಯಲ್ಲಿ ಭೋರನೆ ಬಂದು ಸ್ತುತಿಸಲು ರನ್ನದ ಭೋರನೆ ಬಂದು ಸ್ತುತಿಸಲು ರಾಮವ ತಾರನಾಗುವೆನೆಂದು ನುಡಿದನು ರನ್ನದ 3 ಪೃಥಿವಿ ನಾಯಕ ದಶರಥನಲ್ಲಿ ಜನಿಸಿದ ಕಥನೀಯ ಸುಗುಣ ಸಂಭೃತ ರಾಮರನ್ನದ ಕಥನೀಯ ಸುಗುಣ ಸಂಭೃತ ರಾಮ ಕೌಸಲ್ಯ ಸುತನೆಂದು ನಗುತ ಮನ್ಮಥನ ಜನಕನಿಗೆ 4 ಕೌಶಿಕ ಮುನಿಯ ಮಹಾಶೆ ಪೂರಿಸಿ ಯಜ್ಞ ಘಾಸಿ ಮಾಡಿದ ರಾಮ ಘಾಸಿ ಮಾಡಿದ ಜಗ ದೀಶನು ಸಕಲಾಭಿಲಾಷಾ ಪೂರಿಪೆನೆಂದು 5 ಪಾದ ಪಲ್ಲವವಿರಿಸುತ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ರಾಮ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ಸಿರಿ ನಲ್ಲ ಶಿವನ ಮಹ ಬಿಲ್ಲ ಮುರಿದನು 6 ಭೂತಳಾಧಿಪಜನವ್ರಾತಮಂಡಲದೊಳು ಸೀತೆಯನೊಲಿಸಿ ಶುಭದಿಂದ ರನ್ನದಾ ಸೀತೆಯನೊಲಿಸಿ ಶುಭದಿಂದ ಸ್ವಜನ ಸ- ಮೇತಾಯೋಧ್ಯಗೆ ಬಂದ ಖ್ಯಾತ ರಾಘವನಿಗೆ 7 ಜನಕನ ವಾಕ್ಯದಿಂದ ಜನಕಾತ್ಮಜೆಯ ಕೂಡಿ ವನಕಾಗಿ ನಡೆತಂದ ವನಜಾಕ್ಷ ರನ್ನದಾ ವನಕಾಗಿ ನಡೆ ತಂದ ವನಜಾಕ್ಷನಲ್ಲಿ ಶೂ- ರ್ಪನಖಿಯ ಮಾನಭಂಗವನು ಗೈದ ರನ್ನದಾ 8 ಖರದೂಷಣಾದಿ ದೈತ್ಯರ ಕೊಂದು ಮಾರೀಚ ದುರುಳನ ಸದೆದಾ ಧುರಧೀರ ರನ್ನದ ದುರುಳನ ಸದೆದಾ ಧುರಧೀರ ಶ್ರೀ ರಾಮ ಪರಿಪಾಲಿಸೆಮ್ಮನು ಕರುಣಾಳು ರನ್ನದ 9 ಪಾತಕಿ ದಶಕಂಠ ಸೀತೆಯನೊಯ್ದನೆಂದು ಕಾತರಗೊಂಡಂತೆ ಜನಕೆಲ್ಲ ರನ್ನದಾ ಕಾತರಗೊಂಡಂತೆ ಜನಕೆಲ್ಲ ತೋರ್ದ ರಘು ನಾಥನ ಮೊಖಲೀಲೆ ಖ್ಯಾತಿಯ ಪೊಗಳುತ10 ಮಂದರಾವಣ ಮೋಸದಿಂದ ಕೆಡಹಿದಂಥ ತಂದೆಯ ಸಖನಿಗಾನಂದ ಪದವನಿತ್ತ ತಂದೆಯ ಸಖನಿಗಾನಂದವ ಸಲಿಸಿ ಕ- ಬಂಧನ ದೈತ್ಯಯೋನಿ ಇಂದ ಬಿಡಿಸಿದಗೆ 11 ಬೇಡತಿ ಶಬರಿಯನ್ನು ನೋಡಿ ರಕ್ಷಣೆ ಮಾಡಿ ಪ್ರೌಢ ಮಾರುತಿಯಿಂದ ಕೂಡಿದ ರನ್ನದಾ ಪ್ರೌಢ ಮಾರುತಿಯನ್ನು ಕೂಡಿ ರವಿಜನ ಕಾ ಪಾಡಿ ವಾಲಿಯ ವಧೆ ಮಾಡಿದ ರನ್ನದಾ 12 ಪ್ರಾಣಾತ್ಮಜನು ನಾಗವೇಣಿಯ ವಾರ್ತೆಯ ತಾರೆ ಜಾಣತನದಲಿದ ಕ್ಷೀಣಾಂಬುಧಿಯೊಳಂದು ಜಾಣತನದಲಿದ ಕ್ಷೀಣಾಂಬುಧಿಯೊಳು- ಪ್ರ ವೀಣತನದಿ ಸೇತು ಕಾಣಿಸಿದವನಿಗೆ 13 ದೋಷಿ ರಾವಣನನು ನಾಶಗೈದಸುರಾರಿ ನೀಶ ನೀನೆನುತ ವಿಭೀಷಣಗೊರವಿತ್ತಾ ಈಶ ನೀನೆನುತಲಿವಿಭೀಷಣಗೊರವಿತ್ತ ವೈರಿ ಜಗದೀಶ ರಾಮನಿಗೆ 14 ಸೃಷ್ಟಿಜಾತೆಯ ಕೂಡಿ ಪಟ್ಟಾಭಿಷೇಕಗೊಂಡು ಶಿಷ್ಟ ರಕ್ಷಕನಾದ ಸಿರಿನಾಥ ರನ್ನದಾ ಶಿಷ್ಟ ರಕ್ಷಕನಾದ ಸಿರಿನಾಥ ವೆಂಕಟ ಬೆಟ್ಟದೊಡೆಯ ನಮ್ಮಭೀಷ್ಟವ ಕೊಡುವನ 15
--------------
ತುಪಾಕಿ ವೆಂಕಟರಮಣಾಚಾರ್ಯ
ಆವ ಕುಲವೊ ರಂಗ ಅರಿಯಬಾರದು ಪ. ಆವ ಕುಲವೆಂದರಿಯಬಾರದು ಗೋವುಕಾವ ಗೊಲ್ಲನಂತೆಪಾರಿಜಾತದ ವೃಕ್ಷÀವ ಸತ್ಯಭಾಮೆಗೆ ತಂದಿತ್ತನಂತೆ ಅ.ಪ. ಗೋಕುಲದಲ್ಲಿ ಪುಟ್ಟಿದನಂತೆ ಗೋವಳರೊಡನೆ ಆಡಿದನಂತೆತಾ ಕೊಳಲನೂದಿ ಮೃಗಪಕ್ಷ್ಷಿಗಳ ಮರುಳುಮಾಡಿದ ದೇವನಂತೆ 1 ಕಾಲಲ್ಲಿ ಶಕಟನ ಒದ್ದನಂತೆ ಗೂಳಿಯ ಕೊಂಬ ಕಿತ್ತನಂತೆಕಾಳಿಂಗನ ಹೆಡೆಯ ತುಳಿದು ಬಾಲೇರಿಗೊಲಿದ ದೇವನಂತೆ2 ಗೊಲ್ಲತೇರ ಮನೆಗಳಲ್ಲಿ ಕಳ್ಳತನವ ಮಾಡಿದನಂತೆಮೆಲ್ಲನೆ ಪೂತನಿ ಅಸುವ ಹೀರಿ ಬಲ್ಲಿದ ಕಂಸನ ಕೊಂದನಂತೆ 3 ಸರ್ಪ ತನ್ನ ಹಾಸಿಗೆಯಂತೆ ಪಕ್ಷಿ ತನ್ನ ವಾಹನವಂತೆÀರ್ಪಭೂಷಣ ಮೊಮ್ಮಗನಂತೆ ಮುದ್ದುಮುಖದ ದೇವನಂತೆ4 ತರಳತನದಿ ಒರಳನೆಳೆದು ಮರನ ಕೆಡಹಿ ಮತ್ತವರ ಸಲಹಿದುರುಳ ರಕ್ಕಸರನು ಕೊಂದ ಚೆಲುವ ಹಯವದನನಂತೆ 5
--------------
ವಾದಿರಾಜ
ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕಂಡ್ಯಾ ಕೂಸಿನ್ನಚಂಡನಾಡುತಾಲೆ ಬಾಲೆರ್ಹಿಂಡು ಕೂಡಿ ಬಂದನಂತೆ ಪ ದಂಡದಿಂದ ಚಿನ್ನಿ ಬಾಲೇರ್ಹಿಂದಿನೋಳು ಚಿಮ್ಮಿದನಂತೆಕಂಡಕಂಡ ನಾರಿಯರೆಲ್ಲ ಪುಂಡ ಕೃಷ್ಣರೆಂಬರಂತೆ 1 ದುಂಡು ಮುಖದೊಳಿಟ್ಟು ವೇಣುದಂಡವನೂದಲು ಕೃಷ್ಣಹಿಂಡು ನವಿಲು ಪಕ್ಷಿಗಳು ಮಂಡಲ ಕಟ್ಟಿದವಂತೆ 2 ದೃಷ್ಟಿಯಾದೀತೆಂದು ಕೂಸಿಗೆ ಎಷ್ಟು ಹೇಳಿದೆ ಮನೆಬಿಟ್ಟು ಪೋಗಬ್ಯಾಡೆಂದರೆ ಕೃಷ್ಣ ಘಳಿಗೆ ನಿಲ್ಲವಲ್ಲ 3 ಇಂದಿರೇಶ ಎನ್ನ ಮನೆ ಮುಂದಲಾಡೆಂದ್ಹೇಳಿದರೆನಂದ ವೃಜದಿ ಪೊಕ್ಕು ಬಹಳ ದುಂದು ಮಾಡುವನು ಕೃಷ್ಣ 4
--------------
ಇಂದಿರೇಶರು
ಕೋಲು ಕೋಲೆನ್ನಕೋಲೆ ಕೋಲು ಕೋಲೆನ್ನಕೋಲೆ ಸದ್ವಸ್ತುವಿನ ಬಲಗೊಂಬೆಕೋಲೆ ಧ್ರುವ ಕೋಲುನಿಕ್ಕುತ ಬನ್ನಿ ಬಾಲೇರೆಲ್ಲರು ಕೂಡಿ ಮ್ಯಾಲ್ಯೆ ಮಂದಿರದ ಹಾದೀಲಿ ಕೋಲೆ ಮ್ಯಾಲೆ ಮಂದಿರದೊಳು ಬಾಲಮುಕುಂದತಾನು ಲೋಲ್ಯಾಡುತ ಒಳಗಿದ್ದಾನೆ ಕೋಲೆ 1 ಆದಿಗಿಂತಲ್ಯದೆ ಹಾದಿ ಅನಾದಿಯು ಸಾಧಿಸ ಬನ್ನಿ ಒದಗಿನ್ನು ಕೋಲೆ ಸಾಧಿಸಿ ಬರಲಿಕ್ಕೆ ಸಾಧ್ಯವಾಗುತಲ್ಯಾದೆ ಭೇದಿಸಿ ನೋಡಿ ಮನದಲಿ ಕೋಲೆ 2 ಕಣ್ಣಿನೊಳಿಹ್ಯ ಬೊಂಬೆಕಾಣಬರುತ್ತದೆ ಜಾಣ್ಯೇರು ನೀವು ತಿಳಕೊಳ್ಳಿಕೋಲೆ ಜಾಣ್ಯೇರು ನೀವು ಕಾಣದೆ ಹೋಗಬ್ಯಾಡಿ ಜಾಣ್ರಿಸುತ್ಹಾನೆ ಸದ್ಗುರು ಕೋಲೆ 3 ಸದ್ಗುರುಪಾದಕೆ ಸದ್ಭಾವವಿಟ್ಟು ನೀವು ಸದ್ಭೋಧ ಕೇಳಿ ಸಾಧಿಸಿ ಕೋಲೆ ಸಾಧಿಸಿ ಕೇಳಿ ನೀವು ಬುಧಜನರೊಡಗೂಡಿ ಚದುರತನದಲಿ ಅತಿ ಬ್ಯಾಗೆ ಕೋಲೆ 4 ಅರಹುವೆಂದ ಸೀರೆಯನುಟ್ಟು ಕುರವ್ಹೆಂಬ ಕುಪ್ಪಸಲಿ ಇರವಂತಿ ಪುಷ್ಪಲಿ ಮುಡಿದಿನ್ನು ಕೋಲೆ ಮುಡಿದು ಬರಲು ಪೂರ್ಣ ಒಡಗೂಡಿ ಬರುತಾನೆ ಬಡವನಾ ಧಾರಿ ಬಲಗೊಂಬೆ ಕೋಲೆ5 ಬಲಗೊಂಬೆ ಸಾಧನವು ನೆಲೆಗೊಂಡು ಮಾಡಬೇಕು ವಲವ್ಹಾಂಗ ತಾನೆ ಶ್ರೀಹರಿ ಕೋಲೆ ಶ್ರೀಹರಿ ಮುಂದೆ ನೀವು ಸೋಹ್ಯ ತಿಳಿದುಬನ್ನಿ ಸಾಹ್ಯಮಾಡುವ ಇಹಪರಕೆ ಕೋಲೆ 6 ದಾತ ಮಹಿಪತಿಸ್ವಾಮಿ ಸಹಕಾರನೊಬ್ಬ ಶ್ರೀಪತಿಕೋಲೆ ಶ್ರೀಪತಿಸ್ತುತಿ ಕೊಂಡಾಡಲಿಕ್ಕೆ ಪೂರ್ಣ ಭುಕ್ತಿ ಮುಕ್ತಿಯ ನೀಡು ತಾನೆ ಕೋಲೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಚದುರೇ ವೃಂದಾವನದೊಳು ನಿಂತಿಹನ್ಯಾರೇ ಪೇಳಮ್ಮಯ್ಯಾ ಪ ಸತ್ ಸಖಿಯರಿಗುಣಿಸುವ ಜಾರಚೋರ ಶ್ರೀಕೃಷ್ಣ ಕಾಣಮ್ಮಾ ಅ.ಪ. ನೀರೇ ನೋಡೋಣು ಬನ್ನಿರಿ ಎಂದುಈ ಬಾಲೇರು ಗೋಪಾಲನ ಗಾನಕೆ ಬಂದು ಬೆದರುತ ಮನದೊಳು ಮದನಾಟಕೆ ನಿಂದೂಮೋರೆಯ ತಿರುವುತ ಅಂದು ಮಾರನಯ್ಯ ತವ ಚಾರುಧರಾಮೃತ ಸೂರೆಗೈಯ್ಯೋ ಸದ್ಧೀರಿಯರೊ ನಾವು 1 ಬಾಲೆ ನಿನ್ನಾಳುವ ದಾರಿ ಬ್ಯಾರಿಲ್ಲಾ ಕಾಲಬಂದೊದಗದು ಕೇಳೆನ್ನ ಸೊಲ್ಲ ಮತ್ತಾವದೊ ತಂಗಾಳಿ ಬೀಸುವ ವ್ಯಾಳೆ ಬಂತಲ್ಲಾ ಮೋಹಿಸಿ ಬಂದೆವೊ ನಲ್ಲಾ ಫುಲ್ಲಲೋಚನ ಮೃದು ಮಲ್ಲಿಗೆ ಮುಡಿಸಿ ಮೆಲ್ಲಗೆ ಮರ್ದಿಸು ಮೃದು ಚಲ್ವಯರುಹರೆ 2 ಸಿಂಧೂ ರಾಜಕುಮಾರಿಯ ರಮಣ ಶರದಿಂದೂ ಮಂಡಲ ಮುಟ್ಟುತಲಿದೆ ಧ್ವನಿ ಹಸನಾ ಶಂಭೂರ ಶತ್ರಾದಿಗಳುಗರೆವರು ಪೂಮಳಿ ನಾನಾ ಗಣಶಿರಿಸುತ ಮರುಳಾಗಿ ಪೂ ಬಾಣಾನಾಟವನೋಡುತ ನಾರಿಯ ತ್ಯಜಿಸದೆ ಪರನಾರಿಯ ರೂಪದಿಂದ್ರಮಿಪ ಮುರಾರೇ 3 ಸುರನದಿ ಸ್ಮರಸುತ ರಾಣಿ ನಾಟ್ಯವನಾಡುತ ನವನವ ಪಾಡುತ ದಿದ್ಧಿದ್ಧಿಮಿಕಿಟ ತಾಂ ತಾಳದಿ ನಲಿಯುತ 4 ಶಶಿಸೂರ್ಯನೆಳಸನ್ನಿಭ ಪ್ರಖನಕರಾ ಸರಸೀಜಾದಳ ನುತ ಭಾವಿ ಸಮೀರಾ ಷಟ್ ಶತ ಬಂದು ವಿಂಶತಿಹಂ ಸಾಖ್ಯ ಮಂತ್ರ ಸಹಸ್ತಾದಿಂದ ಸೇವಿಪ ಮಧ್ವಮಧೀಶನ ಲೀಲೆಯನೆನಿಪರ ಬಂದು ತೋರುವಾತ ತಂದೆವರದಗೋಪಾಲವಿಠಲನು 5
--------------
ತಂದೆವರದಗೋಪಾಲವಿಠಲರು
ದಿಮ್ಮಿ ಸಾಲೆ ರಂಗ ದಿಮ್ಮಿ ಸಾಲೆ ಪ. ದಿಮ್ಮಿ ಸಾಲೆನ್ನಿರೊ ಗೋಮಕ್ಕಳೆಲ್ಲ ನೆರೆದುಗೋಪಾಂಗನೇರÀ ಮೇ¯ ಒಪ್ಪಿ ಭಸ್ಮ ಸೂಸುತಅ.ಪ. ಶಂಖನಾದ ಕೊಳಲ ಭೇರಿ ಪೊಂಕದಿ ಪಂಚಮಹಾವಾದ್ಯದಿಅಂಕವತ್ಸಲನ ನಿರಾತಂಕದಿಂದ ಹಿಡಿವ ಬನ್ನಿ1 ಗಂಧ ಕಸ್ತೂರಿ ಪುನುಗು ಚೆಂದದಿಂದ ಲೇಪಮಾಡಿನಂದಗೋಪಸುತನ ಮೇಲೆ ತಂದು ಸೂಸಿ ಭಸ್ಮವ 2 ಎರಳೆಗಣ್ಣಿನ ಬಾಲೇರು ಹರುಷದಿಂದ ಬಂದು ನಿಂತುವರದ ಕೆÉೀಶವನ ಮೇಲೆ ಪರಿದು ಸೂಸಿ ಭಸ್ಮವ 3 ಮತ್ತೆ ಕುಶಲದ ಬಾಲೆಯರುಗಳಿತ್ತೆರದಲಿ ಬಂದು ನಿಂತುಚಿತ್ತಜನಯ್ಯನ ಮೇಲೆತ್ತಿ ಸೂಸಿ ಭಸ್ಮವ 4 ವಾದಿರಾಜಗೊಲಿದು ಬಂದು ಸೋದೆಪುರದಲ್ಲಿ ನಿಂದಮೋದಿ ಹಯವದನನ ಮೇಲೆ ಪರಿದು ಸೂಸಿ ಭಸ್ಮವ5
--------------
ವಾದಿರಾಜ
ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋಸೃಷ್ಟಿಯ ನಾರಿಯರೆಲ್ಲ ಕಣ್ಣಿಟ್ಟು ಹೀರುವರೋ ನಿನ್ನ ಪ ಪುಟ್ಟ ಪದಕಮಲದಿ ಮೆಟ್ಟಿ ರತುನ ಪಾದುಕಾಇಟ್ಟ ಕಿರುಗೆಜ್ಜೆ ಪೆಂಡ್ಯೆ ದಿಟ್ಟತನದಿಘಟ್ಟಿ ಸಾಸಿರ ಬಾಳುವ ಪಟ್ಟೆಯನೆ ಬಿಗಿದುಟ್ಟು ಮೇಗಿಲ್ಲದ ಬೆಲೆಯಾದ ಪಟ್ಟದುಡುದಾರವಿಟ್ಟು 1 ಸಿರಿಯಿರುವ ಉರದಲ್ಲಿ ಪರಿಮಳ ಗಂಧವ ಪೂಸಿಪರಿಪರಿ ಪದಕ ಮುತ್ತು ಸರ ವೈಜಯಂತಿಕೊರಳ ಕೌಸ್ತುಭದ ಕಾಂತಿ ನಿರುಪಮ ಶ್ರೀವತ್ಸಲಾಂಛನ ಸರಿಗೆ ತಾಳಿ ಪದಕವು ಸೇರಿದ ಮುತ್ತಿನ ಜಲ್ಲೆ 2 ಉಗುರ ಗೋರಂಟಿ ಛಾಯಾ ಚಿಗುರು ಪೋಲುವ ಬೆರಳುಬಗೆಬಗೆ ರತುನಂಗಳ ನಗಗಳನಿಟ್ಟುನಗವನೆತ್ತಿದ ಭುಜಕೆ ಬಿಗಿದ ಬಾಹುಪುರಿ ಕೆಂಪುನಿಗಿನಿಗಿಗುಟ್ಟುವ ಕಾಂತಿ ನಗುತಿದೆ ಬಾಲಭಾನುವ 3 ನಾಸಿಕ ಲಲಾಟಚೆಲುವ ಪುಬ್ಬು ಕಸ್ತೂರಿಯ ತಿಲಕ ಒಪ್ಪುವ ಮುಖದಿ 4 ಕೋಟಿ ಹೊನ್ನು ಬಾಳುವ ಕಿರೀಟವಿಟ್ಟು ಕಡೆಗಣ್ಣನೋಟದಿಂದ ತರುಣೇರ ಪೋಟಿ ಮಾಡುತಚಾಟು ಮಾತುಗಳಾಡುತ ಪೊಟ್ಟನಂತೆ ತಿರುಗಿದರೆನೀಟಲ್ಲವೋ ನಿನಗದು ಪಾಟಲಾಧರನೆ ಕೇಳು 5 ಬಿಂಕದಿಂದ ಎರಡು ಕರದಿ ಶಂಖ ಚಕ್ರವ ಪಿಡಿದುಅಂಕಿತ ವೇಣುನೂದುತ ಶಂಕೆ ಇಲ್ಲದೆ ಮಂಕು ಮಾಡುತ ಬಾಲೇರ ಪಂಕಜಾಕ್ಷ ಸುಳಿದರೆÉಮಂಕುಗಾರನೆಂದು ನಿನ್ನ ಅಂಕಿತ ಮಾಡುವರಲ್ಲೋ 6 ಮಂಗಳಮೂರುತಿ ಮುಂಚೆ ಶೃಂಗಾರಗಳನೆ ಮಾಡಿಪೊಂಗೊಳಲನೂದುತ ಶ್ರೀರಂಗ ಸುಳಿದರೆಹೆಂಗಳ ರಂಭೇರೊಂದಾಗಿ ಕಂಗಳಿಡಲು ಉನ್ನಂತರಂಗವಿಠಲಗಲದಿರೋ ಹಿಂಗದೆ ನರಸಿಂಗನೇ 7
--------------
ಶ್ರೀಪಾದರಾಜರು
ನೋಡಿರೆ ನೋಡಿರೆ ನಂದನ ಕಂದನ| ಆಡುವ ಆಟದ ಘನ ಮಹಿಮೆಯನು| ರೂಢಿಲಿ ಶಿಶುವೆಂದವರ ನುಡಿ ಮಾಡುವ ಬಲುಕುಂದಾ ಪ ದುರುಳತನವ ಬಲು ಮಾಡಲೈಶೋಧೆಯು| ತರಳನ ಚರಣವ ನೆರೆ ಕಟ್ಟಿದರೆ| ಒರಳವ ನೆಳೆದೊಯ್ದಾ ಭರದಲಿ ಮರಗಳ ನಡ ಮುರಿದಾ 1 ಸಿಕ್ಕಿದ ಗೋವಳನೆನುತಲಿ ಬಾಲೇರು| ಅಕ್ಕರದಲಿ ಹಿಡಿದೆಳೆತರಲವರಾ| ಮಕ್ಕಳ ರೂಪವನು ಆಗುತೆ ಠಕ್ಕಿಸಿ ಹೋಗುವನು2 ತಂದೆ ಮಹಿಪತಿ ನಂದನ ಪ್ರಭುವಿನಾ| ನಂದನ ಲೀಲೆಯ ಹೇಳಲೆನ್ನಳವೇ| ಒಂದಲ್ಲ ಎರಡಲ್ಲ ನೆಲೆಯನು ಇಂದುಧರನೇ ಬಲ್ಲ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪ್ರಸನ್ನ ಶ್ರೀನಿವಾಸ ಕಲ್ಯಾಣ ಜಯ ಜಯ ಜಯ ಶ್ರೀನಿವಾಸ ಕೃತಿ ಮಾಯಾ ಶ್ರೀಶ ಭಯಬಂಧಮೋಚಕ ಜೀಯ ಆಹ ಸುಂದರ ಚಿನ್ಮಯಾನಂದ ಜ್ಞಾನಾತ್ಮನೆ ಮಂದಜಭವ ಸುರವೃಂದ ಸಂಸೇವ್ಯ ಜಯ ಪ ಸುರಸರಿತ ತೀರದಿಂದ ಸುರಮುನಿ ಭೃಗು ಬಂದು ನಿನ್ನ ಪರಸಮರಹಿತನೆಂದರಿತ ಆಹ ಸಿರಿಯು ನಿನ ಭಾವವನುಸರಿಸಿ ಬೇಗ ಕರವೀರ ಪುರ ಪೋಗೆ ಗಿರಿಪುತ್ತ ಪೊಕ್ಕೆಯೊ 1 ಮೇರುಸುತನೆ ಹಾಟಕಾದ್ರಿ ವೀರ ಭಕುತ ವೃಷಭಾದ್ರಿ ಸರೀಸೃಪಾವರಿಸಿದ ಸೌರಭ್ಯಗಿರಿಯಿದು ಪರವೇಂಕಟಾದ್ರಿಯು ಹರಿತು ವಿಪ್ರನ ಪಾಪ 2 ನೀನಿದ್ದ ಸ್ಥಳವೇ ವೈಕುಂಠ ನಿನಗಾರು ಸಮರುಂಟೆ ಶ್ರೀಶ ದೀನ ಸುಜನರಿಗೆ ನಂಟ ಆಹ ಧೇನು ಪಾಲ್ಗರೆಯಲು ಪಾಲಕ ಹೊಡೆಯಲು ದೀನರಕ್ಷಕ ನೀನು ಶಿರಸಿತ್ತು ಪೊರೆದೆಯೊ 3 ಏಳು 2ತಾಳದ ಉದ್ದ ರಕ್ತ ತಾಳಲಾರದೆ ಬಿದ್ದ ಗೋಪ ಚೋಳರಾಯಗೆ ಕೊಟ್ಟೆ ಶಾಪ ಆಹ ಪೇಳಬಲ್ಲೆನೆ ನಿನ್ನ ಅತಿಶಯ ಲೀಲೆಯ ಶೀಲ ಸುರರ ಗುರು ಚಿಕಿತ್ಸೆಯನೈದಿದೆ 4 ಸ್ವಗತ ಭೇದವಿಲ್ಲದಂಥ ಸ್ವಚ್ಛ ಚಿತ್ಸುಖಮಯನಂತ ಸ್ವಾನಿರ್ವಾಹಕ ವಿಶೇಷ ಆಹ ಶ್ವೇತವರಾಹನ ಸಂವಾದದಿಂದಲಿ ಸ್ವೀಕರಿಸಿದೀ ಸ್ಥಳ ಮೊದಲು ಪೂಜೆಯ ಕೊಟ್ಟು 5 ಸರಸ್ವತೀ ಸ್ವಾಮಿ ಪುಷ್ಕರಣಿ ಸುರಮುನಿನರರಿಗೆ ಸ್ನಾನ ಪರಸುಖಮಾರ್ಗ ಸೋಪಾನ ಆಹ ಸುರತಟಿನ್ಯಾದಿ ಸುತೀರ್ಥಗಳೆಲ್ಲವು ಸರಿತವಾಗಿರುತವೆ ಈ ಸ್ವಾಮಿ ತೀರ್ಥದಿ 6 ಆದಿಕಾರಣ ನಿನ್ನ 3ಲೀಲಾ ಮೋದಸಂಭ್ರಮವನ್ನು ನೋಡೆ ಕಾದುಕೊಂಡಿಹರು ಕೋವಿದರು ಆಹ ಸಾಧು ಸಂಭಾವಿತ ಬಕುಳಾದೇವಿಯುಗೈದ ನಿತ್ಯ ಸಂತೃಪ್ತ 7 ಮಂಗಳ ಚಿನ್ಮಯ ರಂಗಾ - ನಂಗನಯ್ಯನೆ ಮೋಹನಾಂಗ ತುಂಗ ಮಹಿಮನೆ ಶುಭಾಂಗ ಆಹ ಬಂಗಾರ ಕುದುರೆ ಮೇಲಂಗನೇರಲಿ 4ಬಂದ ಶೃಂಗಾರವೇನೆಂಬೆ ಎಂದಿಗೂ ಸ್ವರಮಣ8 ತೋಂಡಮಾನ ರಾಯನಣ್ಣ ಚಂಡಭೂಪನು ಆಕಾಶ ಕಂಡನು ಕಮಲದೊಳ್ ಶಿಶುವ ಆಹ ಅಖಿಳ ಕೋಟಿ ಅಸಮ ಈ ಶಿಶುವನ್ನು ಹೆಂಡತಿ ಧರಣಿಯು ಕೊಂಡಳು ಮಗಳಾಗಿ 9 ಮೂಲೇಶ ನಿನ್ನಯ ರಾಣಿ ಮೂಲಪ್ರಕೃತಿ ಗುಣಮಾನಿ ಭವ ತಾಯಿ ಆಹ ಶೀಲ ಭೂಪಾಲನ ಸುತೆ ಪದ್ಮಾವತಿಯೆಂದು 5 ಬಾಲೇರ ಸಹ ಪುಷ್ಪವನಕೆ ಬಂದಿಹಳೊ 10 ಮಹಿದೇವಿ ಕಮಲವಾಸಿನಿಯು ಬಹಿನೋಟಕ್ಕೆ ರಾಜಸುತೆಯು ಬಹು ಚಿತ್ರ ಪುಷ್ಪವ ಕೊಯ್ಯೆ ಆಹ ಮಹತಿಪಾಣಿಯು ಬಹು ವಯೋರೂಪದಲಿ ಬಂದು ಅಹಿತಲ್ಪ ಶ್ರೀಶನೆ ಪತಿಯೆಂದು ನುಡಿದ 11 ಹಾಟಕಗಿರಿಯಿಂದ ನೀನು ಬೇಟೆಯಾಡುವ ರೂಪ ತಾಳಿ ಘೋಟಕವೇರಿ ಸಂಭ್ರಮದಿ ಆಹ ಆಟವಾಡುವ ಬಾಲೆ ಬಳಿಯಲ್ಲಿ ಬಂದು ನೀ ನಾಟಕವಾಡಿದ್ದು ಪಾಡಲರಿಯೆನೊ 12 ನಿತ್ಯನಿರ್ಮಲ ಅವಿಕಾರ ಮತ್ರ್ಯರವೋಲು ನೀ 1ನಟಿಸೋ ಕೃತ್ಯಗಳರಿವರು ಯಾರೋ ಆಹ ಭೃತ್ಯವತ್ಸಲ ನೀನು ಬಕುಳೆಯ ಬಳಿ ಪೇಳಿ ಸಂತ್ಯಸಂಕಲ್ಪ ನಿನ ಸಂದೇಶ ಕಳುಹಿದೆ 13 ಪೊಂದಿದೆ ಫುಲ್ಕಸೀ ರೂಪ ಮಂಧಜಭವ ಶಿಶುವಾಗೆ ನಂದಿನಿಧರ ಯಷ್ಟಿಯಾದ ಆಹ ಮಂದಜಭವಾಂಡ ಗುಣಗುಲ್ಮ ಮಾಡಿ ನೀ ಕಂಧರದಲಿ ಗುಂಜ ಕಂಬುಸರವ ತೊಟ್ಟೆ 14 ನಾರಾಯಣಪುರಿಯಲ್ಲಿ ಮಾರನಯ್ಯನೆ ನಿನ್ನ ಸುಗುಣ ವಾರಿಧಿ ಪೊಕ್ಕಳು ಪದುಮೆ ಆಹ ಪುರಿಪ ಧರಣೀದೇವೀ ಪುತ್ರಿಗೆ ಜ್ವರವೆಂದು ಪರಿಪರಿ ಪರಿಹಾರ ಪರದು ನೋಡಿದರಾಗ 15 ಶುದ್ಧ ಸುಂದರ ಸುಖಕಾಯ ವೃದ್ಧ ಫುಲ್ಕಸೀ ವೇಷಧಾರಿ ಬದ್ಧ ಶೋಕರ ಬಳಿ ಪೋದೆ ಆಹ ಇದ್ದ ಸುದ್ದಿಯ ಅಬದ್ಧವಿಲ್ಲದೆ ಪೇಳಿ ಮುದ್ದು ಪದ್ಮೆಗೆ ಅನಿರುದ್ಧನೆ ಪತಿಯೆಂದೆ 16 ವಹಿಸಿ ನಿನ ಶಾಸನ ಬಕುಳ ಮಹದೇವನಾಲಯದಿಂದ ಮಹಿಳೆಯರ ಸಹ ಕೂಡಿ ಆಹ ಮಹಿದೇವಿಯಲಿ ಪೋಗಿ ವಿಹಿತ ಮಾತುಗಳಾಡಿ ಬಹು ಶುಭವಾರ್ತೆಯ ತಂದು ಪೇಳಿದಳೊ 17 ಶುಕಮುನಿ ಕರಪ್ರದವಾದ ಆಕಾಶ ನೃಪ ಲಗ್ನಪತ್ರ ಸ್ವೀಕರಿಸಿದೆ ಬಹು ಹಿತದಿ ಆಹ ವಾಗೀಶ ಶಶಿಧರ ನಾಗೇಶ ಸೌಪರ್ಣ ನಾಕೀಶ ಮೊದಲಾದ ಸುರರನು ಕರೆದೆ 18 ಶಿಷ್ಟ ಸನ್ಮುನಿಜನ ಕೂಟ ತುಷ್ಟ ಸುಮನಸ ಸಮೂಹ ಶ್ರೇಷ್ಠಸುಗಂಧಿ ಆಗಮನ ಆಹ ಸೃಷ್ಟ್ಯಾದಿಕರ್ತೆ ನಿನ ಸುಮಹೋತ್ಸವ ನೋಡಿ ಇಷ್ಟಾರ್ಥ ಪಡೆವರು ಎಷ್ಟೆಂಬೆ ವಿಭುವೆ 19 ಮಾಯ ಜಯೇಶ ಶ್ರೀವತ್ಸ ಛಾಯೇಶಗುಪಾಯ ಪೇಳಿ ತೋಯಜೆಯನು ಕರೆತಂದೆ ಆಹ ಸಿರಿ ಕೃತಿ ಕಾಂತಿ ನಿನ್ನಿಂದ ವಿಯೋಗರಹಿತರು ಎಂದೂ ಎಲ್ಲೆಲ್ಲೂ 20 ಬೃಹದಣುವಿಗೆ ಸತ್ತಾಪ್ರದನೆ ಸುಹೃದ ಸಂತೃಪ್ತ ಮುಖಾಬ್ಧೇ ದೃಢವ್ರತ ಶುಕಮುನಿಗೊಲಿದೆ ಆಹ ಬೃಹತೀ ಫಲಾನ್ನವನುಂಡು ಫೂತ್ಕಾರದಿ ಗೃಹ ಬಹಿರದಿ ಇದ್ದ ಜನರ ತೃಪ್ತಿಸಿದೆ 21 ಸುಜನರಿಗಾನಂದ ದಾತ ದ್ವಿಜರೂಢ ಜಗದೀಶ ನೀನು ಅಜಸುರರೊಡಗೂಡಿ ಬರೆ ಆಹ ಅಜಿತ ಚಿನ್ಮಯ ನಿನ್ನ ಆಕಾರ ನೃಪ ನೋಡಿ ನಿಜವಾಗಿ ಕೃತಕೃತ್ಯ ಧನ್ಯ ತಾನೆಂದ 22 ಅಜರ ಮಂದಿರ ಪೋಲ್ವ ಮನೆಯು ಪ್ರಜುವಲಿಸುವ ದಿವ್ಯ ಸಭೆಯು ನಿಜಭಕ್ತ ಪುರುಜನ ಗುಂಪು ಆಹ ದ್ವಿಜರ ವೇದಗಾನ ವಾದ್ಯ ಘೋಷಿಸಲಾಗ ನಿಜಸತಿ ಪದ್ಮೆಗೆ ಮಾಂಗಲ್ಯ ಧರಿಸಿದೆ 23 ಸುರಮುನಿಜನ ಮೂರು ವಿಧಕೆ ತರತಮ ಯೋಗ್ಯತೆ ಆರಿತು ಪರಿಪರಿ ಸಾಧನವಿತ್ತೆ ಆಹ ನೀರರುಹಜಾಂಡವು ನಿನ್ನಾಧೀನವು ಸಿರಿಭೂದೊರೆಯೇ ಶ್ರೀನಿವಾಸ ದಯಾನಿಧೆ 24 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ಚನ್ನಮಾರುತ ಮನೋಗತನೆ ಆಹ ವನರುಜಹಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 25
--------------
ಪ್ರಸನ್ನ ಶ್ರೀನಿವಾಸದಾಸರು
ವನಜನಯನನ ಮನವ ಮಧುಪ ನಂಬುವರೆಮನದೆಗೆದ ಮದನಪಿತ ವಿಠಲರೇಯಾ ಪ ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನನೆರೆದು ರತಿಪತಿಯ ಸುಖ ನೆರೆದೋರಿದತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿವಿರಹದುರಿ ತಾನಳವಡರಿ ಸುಡುತಿಹುದು 1 ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿಬಿಡದೆ ಯೆಮ್ಮನು ತನ್ನ ವಶಮಾಡಿದಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿಮಡದಿ ತಡೆದಳೊ ಮಧುರೆಯಲಿ ನಲ್ಲನ2 ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತುಇಂದುಮುಖಿ ನಾರಿಯರ ನೆರೆ ನಂಬಿಸಿನಂದನಂದನ ನಮ್ಮ ಕಾನನದೊಳೀಡ್ಯಾಡಿಇಂದು ಮಧುರೆಯ ನಾರಿಯರ ನೆಚ್ಚಿದ 3 ಕಪಟ ತಿಳಿಯಲರಿಯದೆ ನಾವುನವ ಹರಿಣಿಯಂತೆ ಮರುಳಾಗಿ ಕೇಳಿವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪಇವನ ಗುಣವರಿಯದೆ ಕಡುಕರುಣಿ ಎಂಬುವರು 4 ಭವ ಬಂಧನಗಳೆಲ್ಲ ಈಡ್ಯಾಡಿಗತಿ ನಮಗೆ ಅವನೆಂದು ಮನಸೋತೆವೋಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದಪತಿಯೊಡನೆ ಸಂಧಾನವೆಂತೊ ಎಲೊ ಮಧುಪ 5 ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿಇರುಳು ಹಗಲು ಜರಿಜರಿದಳಲುವೆವುಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೋಹರಿ ನಮ್ಮ ನೆನೆವುದಚ್ಚರಿಯಲ್ಲವೆ6 ಭೃಂಗ ಮಧುರೆಗೆ ಪೋಗಿರಂಗವಿಠಲನ ತಂದೆಮ್ಮನುಳುಹುವುದೋ 7
--------------
ಶ್ರೀಪಾದರಾಜರು
ಹ್ಯಾಂಗಾದರು ಎನ್ನ ನೀ ರಕ್ಷಿಸ ಬೇಕೋ ಸಾಗರಶಯನ ಕೃಷ್ಣಾ ಪ ಭಾಗವತರ ಸಂಗ ಬೇಗದಿಂದಲಿ ಇತ್ತು ಹೋಗಲಾಡಿಸು ಭವವ ಶ್ರೀ ಕೃಷ್ಣ ಅ.ಪ ಬಾಲೇರ ಸಲುವಾಗಿ ಕೀಳು ಜನರಲ್ಲಿ ಶೀಲ ಜರಿದು ಯಾಚಿಸಿ ಕಾಳಿ ಮರ್ಧನ ನಿನ್ನ ಒಲುಮೆಯ ಪಡೆಯದೆ ಕಾಲ ಬಲಿಗೆ ಸಿಕ್ಕೆನೊ ಶ್ರೀ ಕೃಷ್ಣ 1 ಅಂಗಜನಾಟಕೆ ಹಗಲಿರುಳೆನ್ನದೆ ಪರ ಅಂಗನೆರ ಕೂಡಿ ಮಂಗಳಮಹಿಮ ತುರಂಗ ವದನ ದೇವ ಭಂಗಕ್ಕೆ ಗುರಿಯಾದೆನೊ ಶ್ರೀ ಕೃಷ್ಣ 2 ದುರುಳರ ಸಂಗವನೆಲ್ಲ ಜರಿದು ಶ್ರೀ ನರಹರೆ ಕಾರುಣ್ಯದಲಿ ಭಕ್ತನ ಅರಿಷಟ್ಕರನೆ ಕೊಂದು ಕರಿವರದನೆ ಘೋರ ನರಕಕ್ಕೆ ಭಯ ತಪ್ಪಿಸೋ ಶ್ರೀಕೃಷ್ಣ 3
--------------
ಪ್ರದ್ಯುಮ್ನತೀರ್ಥರು
ಕೃಷ್ಣ ಲೀಲಾನಂದ ನೋಡಿರೈಕೃಷ್ಣಾಕೃತಿಯ ಚಂದ ನೋಡಿರೈಕೃಷ್ಣ ಗೋಪಿಗಮ್ಮೆಂದ ನೋಡಿರೈಕೃಷ್ಣ ಬಾಲಮುಕುಂದನ ನೋಡಿರೈ ಪ.ಬಾಲರ ವಿಭು ಬೆಣ್ಣೆ ಮೊಸರ ಸವಿದು ಗೋಪಬಾಲೇರ ವಿಭಾಡಿಸಿ ಮೆಲುವಬಾಲರವಿಭಾ ನಖತೇಜನೊಳಾಡುವಬಾಲರ ವಿಭವವ ನೋಡಿರೈ 1ಸಮವಾಯಿ ಕಾರಣನಲ್ಲಾ ಜಗಕೆ ತಾನುಸಮವಯ ಗೋವರ್ಗೆಳೆಯನಾದನುಸಮವೆ ಇಲ್ಲೆಶೋದೆನಂದರ ಭಾಗ್ಯ ಮಗನಾದಶಾಮಮೈಯವನ ಮುದ್ದು ನೋಡಿರೈ 2ಕಣ್ಣಲ್ಲಲಸದೆ ವಿಶ್ವವ ಹೊರೆದಕಣ್ಣಿಲ್ಲೊಲಿದು ಕಟ್ಟಿಸಿಕೊಂಡನುಕಣ್ಣಲ್ಲಾಲಯವುಳ್ಳ ಪ್ರಸನ್ವೆಂಕಟೇಶನಕಣ್ಣಲಿ ಲಯವಿಟ್ಟು ನೋಡಿರೈ 3
--------------
ಪ್ರಸನ್ನವೆಂಕಟದಾಸರು
ನಿನ್ನ ಮಗನ ಮುದ್ದು ನೀನೆ ಲಾಲಿಸಮ್ಮಚಿನ್ನನೆಂದಾಡಿಸಮ್ಮಬಣ್ಣದ ಬಾಲೇರ ಭೋಗಿಪ ಚದುರತೆಸಣ್ಣವರ ಸರಸೇನಮ್ಮ ಪ.ತಾಳಬೇಕೆಷ್ಟೆಂದು ಗಾಡಿಕಾರನ ಮಾತಹೇಳಲಂಜುವೆವಮ್ಮ ನಮ್ಮಾಳುವ ಇನಿಯರ ವೇಡಿಸಿ ನಮ್ಮ ಲಜ್ಜೆಹಾಳುಮಾಡಿ ಹೋದನೆ 1ಕೃಷ್ಣ ಸಿಕ್ಕಿದನೆಂದು ನಮ್ಮ ಮಕ್ಕಳ ನಾವೆದಟ್ಟಿಸಿ ಕೊಲುವೆವಮ್ಮ ಈದೃಷ್ಟಿ ಮಾಯದಜಾಲನೋಡೆ ನಂದನರಾಣಿಸೃಷ್ಟೀಶರಿಗೆ ತೀರದು 2ಕನ್ನೆಯರೊಗ್ಗೂಡಿ ಕಳ್ಳನ ಕೈಕಟ್ಟಿನಿನ್ನೆಡೆಗೆ ತರುತಿದ್ದೆವೆಕಣ್ಣಿಯ ಕೊರಳಿನ ಕರುವೆಂದು ಜನವಾಡೆಖಿನ್ನರಾಗಿ ಹೋದೆವೆ 3ಆವಾವ ಕೇರೀಲಿಜಾರಚೋರನ ಮಾತುಆವಾವ ಮನೆಗಳಲ್ಲಿಭಾವೆಯರೆಳೆ ಮೊಲೆ ಮೂಗ ಚಿವುಟಿ ಜಾವಜಾವಕಂಜಿಸಿಕೊಂಬನೆ 4ನಾವು ಮಾಡಿದ ಸುಕೃತವೆಂತೊ ಗೋಪಾಲರೇಯಭಾವಕೆ ಮೆಚ್ಚಿದನೆದೇವರ ದೇವ ಪ್ರಸನ್ವೆಂಕಟೇಶಜೀವಕೆ ಹೊಣೆಯಾದನೆ 5
--------------
ಪ್ರಸನ್ನವೆಂಕಟದಾಸರು