ಒಟ್ಟು 22 ಕಡೆಗಳಲ್ಲಿ , 15 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಎರಡು ಮೃಗ ಬ್ಯಾಟಯಲಿ ಹೊರಟ್ಹೋಗುವಾ ಯಕ್ಷಾನುಗರಿಂದ ತಾ ಮೃತನಾಗುವಾ ಮಗ ಬಾರಾನೆಂದು ತಾಯಿ ಮಿಡುಕುತಾ ರಾಜ್ಯ ಅಗಲಿ ಹೋಗ್ವಳು ತಾ ಹುಡುಕುತಾ 7 ಅಂತ:ಕರುಣ ತಾಪದಲಿ ಕಾಡಾಕಿಚ್ಚಿ ನಂತದೊಳಗೆ ಬೀಳೋಳು ಗಾಡಾ ಚಿಂತೆಯಾಕೆ ನೃಪಹೋಗಿನ್ನ ನಿ ಶ್ಚಿಂತೆಯಿಂದಲಿ ರಾಜ್ಯ ಮಾಡಿನ್ನ 8 ಎಂದು ಹಸ್ತವ ಶಿರದಲ್ಲಿಟ್ಟು ಆ ನಂದದಿಂದಲಿ ವರಗಳನು ಕೊಟ್ಟು ಮುಂದನಡೆದ ಪಕ್ಷಿವಾಹನನು ಜಗ ದ್ವಂದ್ಯ 'ಶ್ರೀ ಅನಂತದ್ರೀಶ' ನು 9 ಪದ ಆದಿ ಮೂರುತಿ ಶ್ರೀರಮೇಶಾ ತನ್ನ ಧಾಮಕ್ಕ್ಹೋದನು ಮೋದರಹಿತನಾಗಿ ಬಾಲದೀರ್ಘ ಉಸುರಗಳದನು ಪೋದನೆಂದು ದು:ಖದಿಂದ ತಿರುಗಿ ಪುರಕ ನಡದನು ಯಾದವೇಶ ಹಾ ಮುರಾರಿ ಎಂದು ಆಗ ನುಡದನು 1 ಪೂರ್ವ ಪುಣ್ಯದಿಂದ ನಿನ್ನ ರೂಪ ಯನಗ ತೋರಿದಿ ಶರ್ವಮಿತ್ರಯೆನ್ನಾ ವಿಷಯ ಮಡುವಿನೊಳಗ ಹಾಕಿದಿ ಸರ್ವಕಾರ್ಯ ಬಿಟ್ಟು ಕರುಣಾದಿಂದ ಆಗ ನೋಡಿದಿ ಗರ್ವಯುಕ್ತನಾಗಿ ಯನ್ನಬಿಟ್ಟು ಈಗವೋಡಿದಿ 2 ಸಿಕ್ಕಿದಂಥ ದಿವ್ಯಮಾಣಿಕ್ಯ ಕಳದಂತಾಯಿತು ಫಕ್ಕನೆದ್ದು ಕುಳಿತು ಕಂಡಾಕನಸಿನಂತಾಯಿತು ಮಿಕ್ಕ ವಿಷಯ ಭೋಗ ಬೇಡಿ ಜನ್ಮ ವ್ಯರ್ಥವಾಯಿತು ತಕ್ಕ ಮುಕ್ತಿ ಬೇಡಲಿಲ್ಲಾ ಯನ್ನ ಬುದ್ಧಿ ಹೋಯಿತು 3 ಕ್ಲೇಶ ಬಿಟ್ಟು ಈಗ ಬಹಳ ವಿಷ್ಯ ಸೌಖತು” ಏಸು ಜನ್ಮ ಪೂಜೆ ಮಾಡಿದಾರು ದೇವ ದೊರಕನು ಮಾಸ ಪಂಚದಿಂದ ಯನ್ನ ದೃಷ್ಟಿ ವಿಷಯ ನಾದನು 4 ಆಶಿಇಂದ ಆಗ ವಿಷಯ ಸËಖ್ಯವನು ದೈವಕೆ ಮಾಡಿಕೊಂಡು ಹೀಂಗ ಮನಸ್ಸಿನಲ್ಲಿ ಬಂದ ಪಟ್ಟಣಕೆ ಕೊಂಡ ಪುರಸಮೀಪಕೆ 5 ಶ್ಲೋಕ ಆಗ ನೋಡಿದ ಒಬ್ಬ ಧ್ರುವನ್ನಾ ವೇಗ ಪುಟ್ಟಿತು ಮನಸಿಗೆ ತನ್ನ ಬ್ಯಾಗ ಪೇಳಿದ ಅರಿಸಿನ ಮುಂದಾ ಬಾಗಿ ಬಿನ್ನಯಿಸಿ ತಾನಯ ದಿಂದಾ 1 ಪದ ರಾಜಭೂಪಾನೆ ನಿನ ಕಂದ ಬಂದಾ|| ಪೂಜಿಸಿ ದೇವೇಶನ ಛಂದದಿಂದ || ಪರಿಪರಿಯಿಂದಾ ಗುರುಕೃಪೆಯಿಂದಾ | ತಿರುಗಿ ಇಲ್ಲಿಗೆ ಕ್ಷೇಮದಿಂದಲಿಂದಾ 1 ಪುಣ್ಯಗಳಿಂದಾರಣ್ಯದಲಿಂದಾ ಸಣ್ಣಬಾಲನು ಭಾಳನಂದದಿಂದಾ 2 ಅನಂತರದಿಂದಾ ಅನಂತ ಸÉೀವಿಂದಾ 'ನಂತ್ರಾದೀಶನಾ’ ದಯದಿಂದ ಲಿಂದಾ 3 ಆರ್ಯಾ ಕಾಂಬೆನು ಯಂದಾ ಹುಟ್ಟಿತು ಆನಂದಾ1 ಪದ ರಾಗ :ಶಂಕರಾಭರಣ ಆದಿತಾಳ ಸುದ್ದಿ ಹೇಳಿದಾತಾಗೆ ಬೇಕಾದ್ದು ಕೊಟ್ಟು ಹರುಷದಿಂದ ಯದ್ದು ರಥವಾನೇರಿ ತಾ ಸನ್ನದ್ಧ ನಾದನು 1 ಇಬ್ಬರ ಹೆಂಡಿರ ಕೂಡಿ ಒಬ್ಬ ಪುತ್ರನಿಂದ ಕೂಡಿ ಅಬ್ಬರದಿಂದಲಿ ತಾ ಉಬ್ಬುಬ್ಬಿ ನಡದಾನು 2 ಮಂತ್ರಿಗಳು ವಿಪ್ರಾರು(ಗಳು) ಮಂತ್ರಜ್ಞಾರು ಮಾನವಾರು ಸಂತ್ರೋಧಾರ ನಡದಾರು ಬಜಂತ್ರಿ ಘೋಷಾದಿ 3 ಮೃದಂಗ ಘೋಷ ಸಾರಿಸಾರಿ ನುಡದಾವು ಅಬ್ಬಾರದಿಂದಲಿ 4 ತಂಬೂರಿಘೋಷಾ ಜಾಣೆ ರಾಮಂಜುಳಗೀತಾವಾಣಿ ಘೋಷಾವು 5 ಅಂಗಾನೇರು ಕುಂಕುಮಾದಿ ಮಂಗಲ ಭೂಷಾದಿಂದ ಶೃಂಗಾರಿಸಿ ಕೊಂಡಾರು ಕುರಂಗ ನೇತೆÀ್ರರು 6 ಧಟ್ಟಿ ಪೀತಾಂಬರನುಟ್ಟ ಬಟ್ಟಾ ಕುಚದಲ್ಯೊಪ್ಪುವಾ ಕಠ್ಠಾಣಿ ಮೋಹನ ಮಾಲೆನಿಟ್ಟು ಕೊರಳಿಗೆ 7 ರಂಬೇರು ವೀಳ್ಯವ ಮೆದ್ದು ತಾಂಬೂಲಗಲ್ಲಾದಲ್ಯೊತ್ತಿ ತುಂಬಿ ಹರುಷದಿಂದ ಚಂದ್ರ ಬಿಂಬ ಮುಖಿಯರು 8 ಮೀರಿದಾ ಸಂಭ್ರಮದಿ ಶೃಂಗಾರವನು ಮಾಡಿಕೊಂಡು ಥೋರಾಗನ್ನಡಿಲಿ ತಮ್ಮ ಮಾರಿ ನೋಡೋರು 9 ಕುಡಿಗಣ್ಣ ನೋಟಾದವರು ನಡಸಣ್ಣಾದಿ ಬಳಕುವರು ಮಂದ ನಡಗಿ ವಂತರು 10 ಪಟ್ಟಾಣದಿಂದಲಿ ವಳ್ಳೇ ಧಿಟ್ಟನಾರಿಯರು ಕಾಲಾ ಬಟ್ಟಿನಲಿ ಕಾಲುಂಗುರ ಮೆಟ್ಟಿ ನಡದಾರು11 ಪರಿಪರಿ ವಿಲಾಸದಿಂದ ಕರದಲ್ಲಿ ಕರತಳಾನಿಕ್ಕಿ ಕಿರಿನಗಿಯಿಂದಲ್ಲೆ ನಗುತಾ ಬರುವುತೀಹರು 12 ಹಿಂಡುಜನರಾಗಳ ಕೂಡಿಕೊಡು ರಾಜಾಬಂದು ಮಗನಾರಥವಾನಿಳುದು ಅಪ್ಪಿಕೊಂಡಾ ಹರುಷದಿ 13 ಮೂಸಿ ನೋಡಿತನ್ನ ಜಲಜಾ ಲೋಚನಗಳಿಂದ ಜಲವಾಧರಿಸಿದ 14 ಛಂದಾದಿ ಬಾಲಾನು ತನ್ನ ತಂದಿ ಪಾದಾದೊಳು ಯರಗಿ ಪಾದ ಬಂದು ಯರಗಿದ 15 (ತಾಯಿಯರ ಪಾದಗಳಿಗೆ ಪೋರ ಬಂದು ಯರಗಿದ) ಸಾಧುತಂದಿತಾಯಿ ಆಶೀರ್ವಾದ ಯುಕ್ತನಾಗಿ ತನ್ನ ಮೋದ ಬಟ್ಟಾಳು 16 ಏಳಯ್ಯಾ ಎಳಯ್ಯಾಯೆಂದು ಭಾಳಾನಂದಾದಿಂದ ಲ್ಯಪ್ಪಿ ಭಾಳಾಯುಷ್ಯಾವಂತನಾಗೊ ಬಾಲಾಯೆಂದಾಳು 17 ಉತ್ತಮ ಧ್ರುವನು ತಾತಾ ಗುಣೋತ್ತಮ ಇಬ್ಬರು ಕೂಡಿ ಅತ್ಯಂತ ಹರುಷಗೊಂಡಾರಂತ:ಕರುಣದಿ 18 ಇಂದಿಗೆ 'ಅನಂತಾದ್ರೀಶಾ’ ಹೊಂದಿಸಿದಾ ನಮ್ಮಿಬ್ಬರಾ ನೆಂದು ಮಾತನಾಡಿದರು ಕಂದರಿಬ್ಬಾರು 19 ಛಂದ ಹೆತ್ತ ತಾಯಿಗೆ ಚಿತ್ತಸಂಭ್ರಮಾ ಮತ್ತ ಜನರಿಗೆ ಚಿತ್ತ ವಿಭ್ರಮಾ ಪುತ್ರನಷ್ಟಿ ತಾ ಯೆತ್ತಿಕೊಂಡಳು ಸುತ್ತ ಚಿಂತಿಯಾ ಮರ್ತುಬಿಟ್ಟಳು 1 ಸುಂದರಾಂಗಿಯ ಆನಂದ ಬಾಷ್ಪದಾ ಬಿಂದು ಸ್ನಾನವು ಕಂದ ಮಾಡಿದಾ ಮುಂದ ರಥದಲ್ಲಿ ಬಂದು ಕುಳಿತನು ಮುಂದಿರುವ ಬಾಲನ ಒಲಿದು ನೋಡುತಾ ಮೊಲಿಯ ಪಾಲು ಚೆಮ್ಮಿ ತಲಿಯಲಿ ಹರುತಾ ಹಲವು ರಾಜ್ಯಕೆ ಮುಂದ ಸೂಚನಾ2 ಕುದರಿಸೈನ್ಯದಿಂದ ನಡದನು ಭಾಳ ಬಿರುದಿನಾ ಕಾಳಿ ಊದುತಾ ತಾಳ ವಾದ್ಯವು ಭಾಳ ನುಡುವುತಾ ಕೇಳಿಪುರದಲ್ಲಿ ಬಾಲಪುರುಷರು ಮಾಳಿಗಿಯಲಿ ಭಾಳ ನಿಂತರು 3 ಉತ್ತಮಾರ್ಯರು ಮತ್ತ ಸ್ತ್ರೀಯರು ಹತ್ತಿ ಮಾಳಿಗಿ ಸುತ್ತ ನಿಂತರು ಯೆತ್ತ ನೋಡಲು ರತ್ನ ಭೂಷಿತಾ ಉತ್ತುಮಾ ಪುರಿ ಭರ್ತ ಪಾಲಿತಾ 4 ಸಾಲು ಸಾಲಕೆ ವಿಶಾಲ ಮಂಟಪಾ ಸಾಲ ದೀಪದಿ ಭಾಳ ಶೋಭಿಪಾ ಸೆಲ (ಚೆಲ್ವ?) ಮುತ್ತಿನ ಸಾಲಯಳಿಗಳು ಮ್ಯಾಲ ಮಲ್ಲಗಿ ಮಾಲಕಿಗಳು 5 ಆರ್ಯಾ ಮಂದ ಮಾರುತಾನಿಂದ ಭಾಳಮಕರಂದ ಪುಷ್ಟದಾ ವಾಸನವು ಮುಂದ ಪತಾಕಿಗಳಿಂದ ಕಣ್ಣಿಗೆ ಛಂತ ತೋರಿಪಾ ಪಟ್ಟಣ್ಣವು 1 ವೇಗದಿಂದ ರಥ ಸಾಗಿಸಿ ಧ್ರುವ ಛಂ ದಾಗಿ ನಡೆದನು ಪುರದೊಳಗೆ ಬ್ಯಾಗ ಗೋಪುರದ ಬಾಗಿಲದಾಟಿ ಪೋಗಿ ಕುಳಿತನು ಸಭಿಯೊಳಗೆ 2 ಬಾಲನ ಕಂಡು ಭೂಪಾಲನು ಹಿಗ್ಗುತಾ ಭಾಳಪುಟ್ಟಿ ಮನದುದ್ರೇಕಾ ಕಾಲ ಮೂಹೂರ್ತದ ವ್ಯಾಳಯವು ಸಾಧಿಸಿ ಬಾಲಗ ಮಾಡಿದ ನಭಿಷೇಕಾ3 ಕೊಟ್ಟರಾಜ್ಯವನು ಪಟ್ಟಗಟ್ಟಿ ಮುಂ ದಿಟ್ಟ ಶಿಖಾ ಮುದ್ರಿಕಿಯನ್ನು ಅಷ್ಟ ವಿಭೂತಿಗ¼ಷ್ಟು ಕೊಟ್ಟು ಸಂ ತುಷ್ಟನಾದ ಭೂಪತಿ ತಾನು 4 ಛಂದದಿ ದೇವರಿಗೊಂದಿಸಿ ಧ್ರುವ ಆ ನಂದದಿ ಬ್ರಾಹ್ಮರಿಗೆರಗಿದನು ತಂದಿ ತಾಯಿಗಳಿಗೊಂದಿಸಿ ಬಹುತ್ವರ ದಿಂದ ಏರಿದಾ ಪೀಠವನು 5 ಸುಂದರ ಸಭಿಯಲಿ ಬಂದು ಕೂಡಲು ದೇ ವೇಂದ್ರನಂತೆ ಬಹು ಶೋಭಿಸಿದಾ ಬಂಧು ಜನರಿಗ್ಯಾನಂದವ ತೋರುತ ಚಂದ್ರಮನಂತೆ ಶೋಭಿಸಿದ 6 ಝಗಿಝಗಿ ತೋರುವ ಬಗಿಬಗಿ ಕುಪ್ಪುಸ ಬಿಗಿಬಿಗಿ ಇಂದಲಿ ತೊಟ್ಟವರು ಲಗು ಬಗೆಯಿಂದಲಿ ನಗಿನಗಿ ಮಾತಿನ ಸೊಗಸು ಗಾರಿಕೆ ಬಲ್ಲವರು 7 ಥೊರಮುತ್ತು ಜರತಾರ ಮಯದ ಉಡ ಗೊರಿ ತಂದರು ಆ ಜನರು ಸಾರ ಸಿಂಹಾಸನಯೇರಿದ ಧ್ರುವನಿಗೆ ಆರುತಿ ತಂದರು ನಾರಿಯರು 8 ಮುತ್ಹಚ್ಚಿದ ಹೊಸ ನತ್ತುಗಳಿಂದಲಿ ಮತ್ತಿಷ್ಟೊಪ್ಪುವ ಮುಖದವರು ಪುತ್ಥಳಿ ಸರಘುನ ಮುತ್ತಿನ ಸರಗಳು ಉಳ್ಳವರು9 ಹತ್ಹೊರಷುದ ಮ್ಯಾಲ್ಮತ್ತೆರಡೊರ್ಷದ ಉತ್ತಮ ಪ್ರಾಯದ ಬಾಲಿಯರು ಮತ್ತ ಕಾಲುಂಗರ ವತ್ತೊತ್ತಿ ನಡುವುತ ಗತ್ತಿನಿಂದಲೆ ನಡುವುವರು 10 ಪದ ತಂದ್ರು ಆರುತಿ ಚಂದ್ರ ಮುಖಿಯಾರು ತಂದ್ರು ಆರುತಿ ಬಹು ಸುಂದರ ಸುಗುಣೇರು ಪ ಚಂದುಟಿ ಕಚ್ಚುತ ನಿಂದ್ರದ ಮದದ ಗ ಜೇಂದ್ರ ಗಮನಿಯರು ಬಂದ್ರಾಗಲೇ ದೇ ವೇಂದ್ರನ ಸಮರಾಜೇಂದ್ರನÀ ಸುತಗೆ ಅ.ಪ ಬಣ್ಣಗಾರಿಕೆಯಲಿ ಸಣ್ಣಕುಂಕುಮನಿಟ್ಟ ಕಣ್ಣಕುಡಿ ಹುಬ್ಬು ಕುಣಿಕುಣಿಸ್ಯಾಡುತ ಹೆಣ್ಕೋಕಿಲ ಸ್ವರ ಸಣ್ಕಂಠದಿ ನುಡಿ ಸಣ್ಕದಿ ಪಾಡುತ 1 ಕೈ ಬೆರಳಿಗೊಪ್ಪುವ ಹರುಳಿನುಂಗುರ ಇಟ್ಟವರು ಯರಳಿಯಂತೆ ಹೊರಹೊರಳಿ ನೋಡಿ ಮುಂ ಗುರುಳ ಗೂದಲಾ ತೀಡುವರು ಜಾಣಕಾಂತಿಯರು 2 ಮೇಲ್ಮಾಟದ ಬಗಿಯುಲ್ಮಾತಾಡುತ ಬಲ್ಮೋಹದಿ ಬಹು ಮೆಲ್ಲಮೆಲ್ಲನೆ ಹೆಜ್ಜೆ ನೆಲ್ಲ ಮ್ಯಾಲಿಕ್ಕುತ ಸೊಲ್ಮುಡಿನೇವರಿಸಿ ಮ್ಯಾಲ್ಮಲ್ಲಿಗಿ ಸರಗಳ ಮುಡಿಯವರು 3 ಸದ್ರಸ ಕುಂಕುಮ ಮುದ್ರಾಂಕಿತ ಕುಚ ಘದ್ರಿಸುತಲಿ ಬಹು ಉದ್ರೇಕದಿ `ಅನಂತಾದ್ರೀಶನ ' ಮುದ್ರಿಕಿ ಪದಗಳು ಘದ್ರಿಸಿ ನುಡಿವುತಾ ಭದ್ರಾಂಗಿಯರು 4 ಪದ ಮಂಗಳ ಮೂರುತಿ ಬಾಲಾಗೆ ಶ್ರೀ ನೃಪಾಲಾಗೆ ಮಂಗಳ ಗುಣಶೀಲಾಗೆ ಮಂಗಳಮೂರುತಿ ಛಂದಾ ಬಗಿಯಿಂದಾ ಪ ಶುಭದಿಂದಾ ಆನಂದದಿಂದಾ ಅಂಬೂಧಿಯೊಳಗಾಡಿ ಗಂಭೀರಾಗಿರಿಪೊತ್ತಾ ಜಾಂಬುನದಾಕ್ಷಾರಿ ವರ ಪ್ರಿಯಾಗೆ ಗಂಭೀರಾ ನೃಸಿಂಹಾನ ನೆಂಬಿ ರಕ್ಷಿತ ನೀಗೆ ರಂಭೇರು ಕರುಣಾದಿ ನೋಡಿ ಒಡಗೂಡಿ ಕೊಂಡಾಡಿ ತ್ವರಗೂಡಿ ಪಾಡಿ 1
--------------
ಅನಂತಾದ್ರೀಶ - ಕಥನಕಾವ್ಯಗಳು
ಎಣೆಯಾರೊ ನಿನಗೆ ಹನುಮಂತರಾಯ ಪ. ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತಜನಮಂದಾರ ಪವನಸುಕುಮಾರ ಅ.ಪ. ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತನಡೆನಡೆದು ಮುದ್ರಿಕೆಯ ಪಡೆದು ಮುದದಿದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತಕೊಡುಕೊಡುತ ಕುಸ್ತ್ತರಿಸಿದಂಥ ಹನುಮಂತ1 ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲಚರಚರನೆ ಸೀಳಿ ಸಂಭ್ರಮದಿಂದಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನುಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ 2 ಫಳಫಳನೆ ಆರ್ಭಟದಿಂದ ರಾವಣನ ನಳನಳನೆ ಬೆಳೆದ ನಂದನವ ಕಿತ್ತುಖಳಖಳನೆ ನಗುತ ದಶಕಂದರನ ಗುದ್ದಿ ಬಂದೆಭಳಿಭಳಿರೆ ಹಯವದನ ದಾಸ ನಿಸ್ಸೀಮ 3
--------------
ವಾದಿರಾಜ
ಎಂಥ ಶೂರನೊ ರಾಮ ಎಂಥ ಧೀರನೊ ಪ ಕಂತುಹರನ ಧನುವನೆತ್ತ ಪಂಥದಿಂದ ಮುರಿದು ಬಿಸುಟ ಅ.ಪ. ಹಲವು ಶೂರರಾಜರದನು ಚಲಿಸಲಾಗದ ಧನುವ ಸುಲಭದಿಂದಲೆತ್ತಿ ಮುರಿದು ಲಲನೆ ಸೀತೆಯೊಲಿಸಿದವನು 1 ಸಕಲ ಕ್ಷತ್ರಿಯರನು ಗೆಲಿದು ಪ್ರಕಟನಾದ ಪರಶುರಾಮ ಶಕುತಿಯನ್ನು ತಾನು ಪರಮ ಯುಕುತಿಯಿಂದ ಗೆಲಿದು ಬಂದ 2 ಸಾಲು ಶಿರನ ಕೀಟವೆಂದು ಬಾಲದಲ್ಲಿ ತಂದ ವೀರ ವಾಲಿಯನೇಕ ಬಾಣದಲಿ ಲೀಲೆಯಿಂದಲಿರಿದ ಜಾಣ 3 ಹತ್ತನಾಲ್ಕು ಲೋಕಗಳನು ಸುತ್ತಿಗೆಲಿದು ಖ್ಯಾತನಾದ ಹತ್ತು ತಲೆಯ ದುಷ್ಟನನ್ನು ಕತ್ತು ಕಡಿದು ಕೆಡಹಿದವನು 4 ರಾಸಿ ದೈತ್ಯರನ್ನು ಕೊಂಡು ದೇಶವನ್ನು ಉದ್ಧರಿಸಿದ ವಾಸವಾದಿ ಸುರನುತ ರಂ- ಗೇಶವಿಠಲರೇಯನವನು 5
--------------
ರಂಗೇಶವಿಠಲದಾಸರು
ಎದ್ದರಾಳಲ್ಲೆಂದು ಬಿದ್ದಿರುವೆನೊ ನಾನು ಮಧ್ವರಮಣನೆ ದಯದಿ ಉದ್ಧರಿಸೆಲೊ ಪ ಏನು ಮಾಡಿದರೇನು ಮಾಡದಿದ್ದರೆ ಏನು ಕಾಣಲಾರೆನೊ ನೀನೆ ತಿಳಿಸಿ ಪೊರೆಯೊ ಕಾನನದಿ ತಿರುತಿರುಗಿ ತೊಳಲಿ ಬಳಲುತಲಿ ಬಲು ದೀನನಾದೆನೊ ಶಕುತಿಯುಕುತಿ ಹೋಗಿ1 ನುಡಿದೆ ನಾ ನೂರೆಂಟು ಅಡಿಯಿಡಲು ಬಲು ಕುಂಟು ಕಡೆಗಾಲದರಿವಾಗಿ ಬಳಲುತಿಹೆನೊ ಸಡಲಿತೆನ್ನಯ ದೇಹ ಸಿಡಿಯಿತೆನ್ನಯ ಮೋಹ ನಡೆಯಾಟವೆನಗಿನ್ನು ಸಾಧ್ಯವಿಲ್ಲವು ದೇವ 2 ಕೊಟ್ಟರೆ ಹೊಗಳುವರು ಕೊಡದಿರಲು ಬೊಗಳುವರು ಕೊಟ್ಟೆನ್ನ ಕರವೆರಡು ಬೆಂಡಾದವೊ ಸುಟ್ಟಿತೆನ್ನಯ ಕೋಪ ನಿಷ್ಠುರದಿ ಬೇಸತ್ತು ಇಷ್ಟು ಜೀವನ ಸಾಕೊ ಕೃಷ್ಣ ಮೂರುತಿಯೇ3 ಗುಣವಿಲ್ಲ ಧನವಿಲ್ಲ ತನುವಿಲ್ಲ ಮನವಿಲ್ಲ ಹೊಣೆ ಹೊರೆವುದೆಂತೆಂದು ಕೈ ಬಿಡದಿರೊ ತೃಣ ಗಿರಿಯನೊದೆಯುವುದು ಒನಕೆ ತಾ ಚಿಗುರುವುದು ವನಜನಾಭನೆ ನಿನ್ನ ಮನಕೆ ಬರಲು 4 ನಾನೇನು ಬಲ್ಲೆ ನಿನಗೇನು ರುಚಿಯೆಂಬುದನು ನಾನರಿತರೂ ನಿನಗೆ ಕೊಡಬಲ್ಲನೆ ನಾನೇಕೆ ಜನಿಸಿದೆನೋ ನೀ ಬಲ್ಲೆ ನಾನರಿಯೆ ಏನೆಂದು ಕೋರದೆಲೆ ಪೊರೆಯಬೇಕೊ 5 ಸಾಯುವರ ನೋಡಿ ಮನ ನೋಯುವುದು ಮೂರುಕ್ಷಣ ಮಾಯಾಪಾಶವು ಮುಸುರೆ ಮರೆವುದೆಲ್ಲ ಪ್ರಾಯದವನಂತೆ ಬಲು ಹೇಯ ಕೃತ್ಯಗಳಾಸೆ ನಾಯಿಬಾಲದ ಡೊಂಕು ತಿದ್ದಿ ಪೊರೆಯೊ 6 ನಂಬಿದವರೆಲ್ಲ ಬಲು ಸಂಭ್ರಮದಲಿರುವರೊ ಅಂಬಿಗನ ತೆರನಾದೆ ನದಿ ದಾಟಿಸಿ ತುಂಬಿರುವ ಮನದಾಸೆ ಹಂಬಲಿಕೆ ನೀಡಿ ತಿರಿ ದುಂಬುವನ ಕನಸಿನಂತಾದವೆನಗೆÀ7 ಇಂದು ನಾನಿಟ್ಟಿಲ್ಲ ಮುಂದೆ ಎನಗೇನು ಬೇಕೆಂದರಿಯೆನೊ ಹಿಂದಾದುದಂತಿರಲಿ ಇಂದಿರುವದಿರಲಿ ಮನ ಮಂದಿರದ ದಾನವರ್ಪಿಸುವೆ ನಿನಗೆ 8 ಮನೆಗೆ ತಾ ಯಜಮಾನ ಕೆಣಕೆ ಬದುಕುವರುಂಟೆ ಕುಣಿಯುತಿದ್ದರು ಜನರು ನುಡಿದ ತೆರದಿ ತನುಸಡಲಿ ಬೀಳಲದ ಕೊನೆಗಾಲವೆಂದರಿತು ಮನೆ ಹೊರಗೆ ಕಸದಂತೆ ಬಿಸುಡುವುದ ನೋಡಿ9 ತುಂಬು ಸಂಸಾರದಲಿ ಸಂಭ್ರಮವನೇಕಗಳು ಸಂಭ್ರಮದಿ ನಿನ್ನ ಹಂಬಲವೇತಕೆ ಕಂಬ ಸಡಲಿದ ಮನೆಯ ತೆರದಿ ದೇಹವು ಸಡಲೆ ಡೊಂಬನಾಟವನಾಡಿ ಚಂಬು ಪಿಡಿದಂತೆ 10 ಕೆಲಸವಿರುವಾಗ ಬಲು ಹೊಲಸು ನಿದ್ರೆಯ ಮಾಡಿ ಹೊಲಸು ವಿಷಯದಿ ಬಹಳ ಎಚ್ಚೆತ್ತೆನೊ ಕಲಿಯು ಕರೆದೌತಣವನಿತ್ತೆ ನಾ ಬಹುವಿಧದಿ ಬಲಿಕೊಡುವ ಕುರಿಯಂತೆ ಬಳಲುತಿರುವೆನೊ ದೇವ 11 ಮರೆವು ಜನತೆಗೆ ದೊಡ್ಡವರವೆಂದು ನೀ ಕೊಟ್ಟೆ ಗಿರಿಯಂಥ ಕಷ್ಟಗಳ ಮರೆಯಲಾಯ್ತೊ ಅರಿವು ಕೊಡದಂತೆ ನಾ ಮರೆತೆನೆಂಬಪರಾಧ ಸರಿತೂಗುವುದೆ ಇದಕೆ ಗುರಿ ಯಾರೊ ದೇವ 12 ಸಾಧು ಜನರಿರುವರೊ ಮೇಧಾವಿಗಳು ಇಹರೊ ಮಾದರಿಯ ಜೀವನವ ತೋರ್ಪರಿಹರೊ ಸಾಧುವಲ್ಲವೊ ನಾನು ಮೇಧಾವಿಯಲ್ಲ ಹೊಸ ಮಾದರಿಯ ತಿರುಕನೆಂದರಿತು ಪೊರೆಯೊ13 ಅರೆಕ್ಷಣವು ನಿನ್ನನು ಸ್ಮರಿಸಲಾರದ ಜನರು ಅರಮನೆಗಳಲ್ಲಿ ವಾಸಿಸುವುದೇಕೊ ಕರಚರಣವಿಲ್ಲದ ಕಪೋತಿಕ ನಿನ್ನಯ ನಾಮ ಕಿರಿಚುತಿರುವುದ ನೋಡಿ ಹರುಷವದೇಕೊ 14 ಗಿಣಿಯಂತೆ ರಾಮ ರಾಮ ಎಂದರೇನು ಫಲ ಫಣಿಯಂತೆ ಸಾಷ್ಟಾಂಗ ನಮಿಸಲೇನು ಋಣಿಯಂತೆ ಧನಿಕನಲ್ಲಿ ಹಲ್ಲುಗಳ ಕಿರಿದರೇನು ಮನವಿಟ್ಟು ಕೆಲಸ ಮಾಡುವುದರಿಯದೆ 15 ಮನಕೆ ಬಂದುದನೆಲ್ಲ ಮಾಡÀುವವರಿರುವರೊ ಮನಕೆ ಶಾಂತಿಯ ಮಾಡುವವರ ಕಾಣೆ ಕನಕವೆರಿಚಿದರಿಲ್ಲ ವನವ ಸೇರಿದರಿಲ್ಲ ಮನಮಂದಿರದಲಿ ನೀ ಇಣಿಕಿನೋಡುವ ತನಕ 16 ಲಂಚಗಳ ಕೊಟ್ಟು ಫಲಗಳ ಬೇಡುವವನಲ್ಲ ಸಂಚುಮಾಡಲು ಶಕುತಿ ಯುಕುತಿಯಿಲ್ಲ ವಂಚಕರ ಬಹುಮತ ಪ್ರಪಂಚದಲಿ ನೀನೊಬ್ಬ ಹೊಂಚು ಕಾಯುತಲಿರುವ ಎಂಬುದರಿತು 17 ರೈಲು ಬಂಡಿಗಳಲಿ ಐಲುಪೈಲುಗಳನ್ನು ಮೌಲ್ಯವಿಲ್ಲದೆ ಸಾಗಿಸುವುದನರಿತು ಕಾಲು ಕಣ್ಣೆಲ್ಲದ ಕಪೋತಿಯೊ ನಾನೊಂದು ಮೂಲೆಯಲಿ ಕುಳಿತು ಬರಲವಕಾಶವೀಯೊ 18 ನಿನ್ನ ಗುಣಗಳನರಿಯೆ ನಿನ್ನ ವರ್ಣಿಸಲರಿಯೆ ನಿನ್ನ ಸೇರಲು ಎನಗುಪಾಯವಿಲ್ಲ ಕನ್ನ ಕತ್ತರಿಯ ಕಾಣಿಕೆಯೊಂದೆ ಸಾಧ್ಯವೊ ಇನ್ನು ತಲೆ ಎತ್ತಿನೊ ಪ್ರಸನ್ನನಾಗುವ ತನಕ 19
--------------
ವಿದ್ಯಾಪ್ರಸನ್ನತೀರ್ಥರು
ಎಷ್ಟು ಸಾಹಸವಂತ ನೀನೆ ಬಲವಂತದಿಟ್ಟಮೂರುತಿ ಭಳಭಳಿರೆ ಹನುಮಂತ ಪ. ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಗಳಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೊ ಅ.ಪ. ರಾಮರಪ್ಪಣೆಯಿಂದ ಶರಧಿಯ ದಾಟಿಆ ಮಹಾ ಲಂಕೆಯ ಕಂಡೆ ಕಿರೀಟಸ್ವಾಮಿಕಾರ್ಯವನು ಪ್ರೇಮದಿ ನಡೆಸಿದಿಈ ಮಹಿಯೊಳು ನಿನಗಾರೈ ಸಾಟಿ1 ದೂರದಿಂದಸುರನ ಪುರವ[ನ್ನು] ನೋಡಿಭರದಿ ಶ್ರೀರಾಮರ ಸ್ಮರಣೆಯನು ಮಾಡಿಹಾರಿದೆ ಹರುಷದಿ ಸಂಹರಿಸಿ ಲಂಕಿಣಿಯನುವಾರಿಜಮುಖಿಯನು ಕಂಡು ಮಾತಾಡಿ 2 ರಾಮರ ಕ್ಷೇಮವ ರಮಣಿಗೆ ಪೇಳಿತಾಮಸ ಮಾಡದೆ ಮುದ್ರೆನೊಪ್ಪಿಸಿಪ್ರೇಮದಿಂ ಜಾನಕಿ ಕುರುಹನು ಕೊಡಲಾಗಆ ಮಹಾ ವನದೊಳು ಫಲವನು ಬೇಡಿ 3 ಕಣ್ಣ್ಣಿಗೆ ಪ್ರಿಯವಾದ ಹಣ್ಣ[ನು] ಕೊಯ್ದುಹಣ್ಣಿನ ನೆವದಲಿ ಅಸುರರ ಹೊಯ್ದುಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತಬಣ್ಣಿಸಿ ಅಸುರರ ಬಲವನು ಮುರಿದು4 ಶೃಂಗಾರವನದೊಳಗಿದ್ದ ರಾಕ್ಷಸರಅಂಗವನಳಿಸಿದೆ ಅತಿರಣಶೂರನುಂಗಿ ಅಸ್ತ್ರಗಳ ಅಕ್ಷಯಕುವರನಭಂಗಿಸಿ ಬಿಸುಟಿಯೊ ಬಂದ ರಕ್ಕಸರ 5 ದೂರ ಪೇಳಿದರೆಲ್ಲ ರಾವಣನೊಡನೆಚೀರುತ್ತ ಕರೆಸಿದ ಇಂದ್ರಜಿತುವನೆಚೋರಕಪಿಯನು ನೀ ಹಿಡಿತಹುದೆನ್ನುತಶೂರರ ಕಳುಹಿದ ನಿಜಸುತನೊಡನೆ 6 ಪಿಡಿದನು ಇಂದ್ರಜಿತು ಕಡುಕೋಪದಿಂದಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದಗುಡುಗುಡುಗುಟ್ಟುತ ಕಿಡಿಕಿಡಿಯಾಗುತನಡೆದನು ಲಂಕೆಯ ಒಡೆಯನಿದ್ದೆಡೆಗೆ 7 ಕಂಡನು ರಾವಣನುದ್ದಂಡ ಕಪಿಯನುಮಂಡೆಯ ತೂಗುತ್ತ ಮಾತಾಡಿಸಿದನುಭಂಡುಮಾಡದೆ ಬಿಡೆನೋಡು ಕಪಿಯೆನೆಗಂಡುಗಲಿಯು ದುರಿದುರಿಸಿ ನೋಡಿದನು 8 ಬಂಟ ಬಂದಿಹೆನೊಹಲವು ಮಾತ್ಯಾಕೊ ಹನುಮನು ನಾನೆ 9 ಖುಲ್ಲ ರಕ್ಕಸನೆತೊಡೆವೆನೊ ನಿನ್ನ ಪಣೆಯ ಅಕ್ಷರವ 10 ನಿನ್ನಂಥ ದೂತರು ರಾಮನ ಬಳಿಯೊಳುಇನ್ನೆಷ್ಟು ಮಂದಿ ಉಂಟು ಹೇಳೊ ನೀ ತ್ವರಿಯಾನನ್ನಂಥ ದೂತರು ನಿನ್ನಂಥ ಪ್ರೇತರುಇನ್ನೂರು ಮುನ್ನೂರು ಕೋಟಿ ಕೇಳರಿಯಾ11 ಕಡುಕೋಪದಿಂದಲಿ ಖೂಳರಾವಣನು ಸುಡಿರೆಂದ ಬಾಲವ ಸುತ್ತಿ ವಸನವನುಒಡೆಯನ ಮಾತಿಗೆ ತಡೆಬಡೆಯಿಲ್ಲದೆಒಡನೆಮುತ್ತಿದರು ಗಡಿಮನೆಯವರು 12 ತÀಂದರು ವಸನವ ತಂಡತÀಂಡದಲಿಒಂದೊಂದು ಮೂಟೆ ಎಂಬತ್ತು ಕೋಟಿಯಲಿಚಂದದಿ ಹರಳಿನ ತೈಲದೊಳದ್ದಿಸೆನಿಂದ ಹನುಮನು ಬಾಲವ ಬೆಳೆಸುತ 13 ಶಾಲು ಸಕಲಾತ್ಯಾಯಿತು ಸಾಲದೆಯಿರಲುಬಾಲೆರ ವಸ್ತ್ರವ ಸೆಳೆದುತಾರೆನಲುಬಾಲವ ನಿಲ್ಲಿಸೆ ಬೆಂಕಿಯನಿಡುತಲಿಕಾಲಮೃತ್ಯುವ ಕೆಣಕಿದರಲ್ಲಿ14 ಕುಣಿಕುಣಿದಾಡುತ ಕೂಗಿ ಬೊಬ್ಬಿಡುತಇಣಿಕಿನೋಡುತ ಅಸುರರನಣಕಿಸುತಝಣಝಣಝಣರೆನೆ ಬಾಲದಗಂಟೆಯುಮನದಿ ಶ್ರೀರಾಮರ ಪಾದವ ನೆನೆಯುತ 15 ಮಂಗಳಂ ಶ್ರೀರಾಮಚಂದ್ರ ಮೂರುತಿಗೆಮಂಗಳಂ ಸೀತಾದೇವಿ ಚರಣಂಗಳಿಗೆಮಂಗಳವೆನುತ ಲಂಕೆಯ ಸುಟ್ಟುಲಂಘಿಸಿ ಅಸುರನ ಗಡ್ಡಕೆ ಹಿಡಿದ 16 ಹತ್ತಿತು ಅಸುರನ ಗಡ್ಡಮೀಸೆಗಳುಸುತ್ತಿತು ಹೊಗೆ ಬ್ರಹ್ಮಾಂಡಕೋಟಿಯೊಳುಚಿತ್ತದಿ ರಾಮರು ಕೋಪಿಸುವರು ಎಂದುಚಿತ್ರದಿ ನಡೆದನು ಅರಸನಿದ್ದೆಡೆಗೆ 17 ಸೀತೆಯಕ್ಷೇಮವ ರಾಮರಿಗ್ಹೇಳಿಪ್ರೀತಿಯಿಂ ಕೊಟ್ಟಕುರುಹ ಕರದಲ್ಲಿಸೇತುವೆ ಕಟ್ಟಿ ಚತುರಂಗ ಬಲಸಹಮುತ್ತಿತು ಲಂಕೆಯ ಸೂರೆಗೈಯುತಲಿ 18 ವೆಗ್ಗಳವಾಯಿತು ರಾಮರ ದಂಡುಮುತ್ತಿತು ಲಂಕೆಯ ಕೋಟೆಯ ಕಂಡುಹೆಗ್ಗದ ಕಾಯ್ವರ ನುಗ್ಗುಮಾಡುತಿರೆಝಗ್ಗನೆ ಪೇಳ್ದರು ರಾವಣಗಂದು 19 ರಾವಣಮೊದಲಾದ ರಾಕ್ಷಸರ ಕೊಂದುಭಾವಶುದ್ಧದಲಿ ವಿಭೀಷಣ ಬಾಳೆಂದುದೇವಿ ಸೀತೆಯನೊಡಗೊಂಡಯೋಧ್ಯದಿದೇವ ಶ್ರೀರಾಮರು ರಾಜ್ಯವಾಳಿದರು 20 ಶಂಖದೈತ್ಯನ ಕೊಂದೆ ಶರಣು ಶರಣಯ್ಯಶಂಖಗಿರಿಯಲಿ ನಿಂದೆ ಹನಮಂತರಾಯಪಂಕಜಾಕ್ಷ ಹಯವದನನ ಕಟಾಕ್ಷದಿಬಿಂಕದಿ ಪಡೆದೆಯೊ ಅಜನಪದವಿಯ21
--------------
ವಾದಿರಾಜ
ಕರುಣೆ ತೋರೋ ಕಣ್ಣ ತೆರೆದು ಗುರುವು ನೀನೆ ಗತಿಯು ನೀನೆ ಪ ತ್ವರದಿ ಜಪವ ಪೂರ್ಣ ಮಾಡಿ ಕರವ ಶಿರದಲಿಡುತ ಅ.ಪ. ಸಿರಿಯ ವರನ ಪರಮ ಭಕುತ ಸಿರಿದಮಣಿಗಳಲ್ಲಿ ನೀನು ಹಿರಿಯ ಅಹುದೊ ಜಗದ ಗುರುವೆ ಪರಮ ಕರುಣಾಕರನೆ ದೇವ 1 ಹರಿಯ ಆಜ್ಞದಂತೆ ನೀನು ಸರುವ ಪ್ರಾಣಿಗಳಲಿ ನಿಂದು ಹಿರಿದು ಜಪವನಾಚರಿಸಿ ಅವರು ಅರಿಯದಂತೆ ನಿರುತ ಪೊರೆವೆ 2 ಶರಧಿ ಮಥನದಿಂದ ಬಂದ ಗರಳನಂದು ಭುವನಗಳನು ಉರುಹುತಿರಲು ಹರಿಯ ಮನವ ಅರಿತು ನೀನು ಭರದಿ ಕುಡಿದೆ 3 ಪೊಗಳಲವೆ ನಿನ್ನ ಮಹಿಮೆ ಸುಗುಣಮಣಿ ಭಾರತಿಯ ಪತಿಯೆ ಅಗಜೆಯರಸನನ್ನು ಪೆತ್ತ ನಗಧರನ ಪ್ರೀತಿ ಪಾತ್ರ 4 ಅಜನಪದಕೆ ಅರುಹನಾದೆ ದ್ವಿಜ ಫಣೀಶಾದಿಗಳ ಗುರುವೆ ಭಜನೆಗೈವೆನೆಂತು ನಿನ್ನ ತ್ರಿಜಗವಂದ್ಯ ತ್ರಿಜಗಪೂಜ್ಯ 5 ತ್ರೇತೆಯಲಿ ಅಂಜನಿಯಳ ಪೂತ ಗರ್ಭದಿಂದ ಬಂದು ಪೋತನಾದ ರವಿಜನನ್ನು ಪ್ರೀತಿಯಿಂದ ಸಲಹಿದೆಯ್ಯ 6 ಅಂದು ಕಪಿಯ ವೃಂದವೆಲ್ಲ ಬಂದು ಶರಿಧಿ ತಟದಿ ನಿಂದು ಮುಂದೆ ದಾರಿ ಕಾಣದಿರಲು ಸಿಂಧುವನ್ನು ದಾಟಿ ಬಂದೆ 7 ಮಂಗಳಾಂಗಿ ಸೀತೆಯನ್ನು ಕಂಗಳಿಂದ ನೋಡಿ ಹಿಗ್ಗಿ ಅಂಗನೆಯ ಪಾದಕೆರಗಿ ಉಂಗುರವನಿತ್ತ ಧೀರ 8 ಫಲವ ಸವಿವ ನೆವದಿ ನೀನು ನಲಿದು ವನವ ಮುರಿದು ತುಳಿದೆ ಕಲಹಕಿಳಿದು ಬಂದ ಅಕ್ಷನ ಬಲಿಯಹಾಕಿ ಕುಣಿಯುತಿರ್ದೆ9 ಕುಲಿಶಧರನ ಗೆಲಿದ ವೀರ ಜಲಜಭವನ ಶರವ ಬಿಡಲು ಛಲದಿ ನೀನು ಅದನು ತಡೆದು ಮಲೆತು ನಿಂತ ಮಹಿಮಯುತನೆ 10 ವನಜಭವ ನಾಮನ ಕೇಳಿ ಕನಲಿ ಬಂದಾ ಶರಕೆ ಸಿಲುಕಿ ದನುಜ ಸಭೆಗೆ ಬಿಜಯಮಾಡಿ ಅನುವ ತಿಳಿದು ಬಂದ ದೇವ 11 ರಕ್ಕಸನ ಲೆಕ್ಕಿಸದೆ ಧಿಕ್ಕರಿಸಿ ಮಾತನಾಡಿ ಪಕ್ಕಿರಥನ ಬಲುಮೆಯನ್ನು ಹೆಕ್ಕಳಿಸಿ ನೀ ಪೊಗಳಿ ನಿಂದೆ 12 ಉಕ್ಕಿ ಬಂದ ರೋಷದಿಂದ ರಕ್ಕಸನು ಚರರ ಕರೆದು ಇಕ್ಕಿರಿವನ ಬಾಲಕುರಿಯ ತಕ್ಕ ಶಿಕ್ಷೆ ಮಾಡಿರೆನಲು 13 ಸುಟ್ಟಬಾಲ ನೆಗಹಿಕೊಂಡು ದಿಟ್ಟ ನೀನು ಪುರವನೆಲ್ಲ ಅಟ್ಟಹಾಸದಿಂದ ಮೆರೆದೆ 14 ಶರಧಿ ಹಾರಿ ಬಂದು ಸತ್ಯಸಂಧ ರಾಮಗೆರಗಿ ಇತ್ತು ಚೂಡಾಮಣಿಯನವನಾ ಚಿತ್ತ ಹರುಷಗೈದ ಧೀರ 15 ಹರಿಯು ತನ್ನ ಬೆರಳಿನಲ್ಲಿ ಗಿರಿಯನೆತ್ತಿ ನಿಂತನೆಂದು ಸರುವ ಗಿರಿಗಳನ್ನು ನೆಗಹಿ ಶರಧಿಗೊಡ್ಡಿ ಸೇತುಗೈದೆ 16 ಸುರರಿಗಮೃತವಿತ್ತನೆಂದು ಅರಸಿ ಸಂಜಿವನವ ನೀನು ಭರದಿ ತಂದು ಒರಗಿ ಬಿದ್ದ ಹರಿಯ ವೃಂದಕೆರೆದು ಮೆರೆದೆ 17 ಮಂದರಾದ್ರಿಯನ್ನು ಒಡೆಯ ಅಂದು ಬೆನ್ನಲಿ ಪೊತ್ತು ನಿಂದು ಸಿಂಧುವನ್ನು ಗೆಲಿದನೆಂದು ಬಂದೆ ಹಾರಿ ಲಂಕಪುರಿಗೆ 18 ಧರಣಿಧವಗೆ ನೆರಳಿನಂತೆ ಕಾಲ ಚರಿಸಿ ನೀನು ಅರಸಿನಂತೆ ಬಂಟನೆಂಬ ಕರೆಯವಾರ್ತೆ ಖರೆಯಗೈದೆ 19 ಕಾಲನೇಮಿ ಯತಿಯ ರೂಪ ಜಾಲದಿಂದ ವೇಳೆ ಕಳೆಯೆ ಶೀಲವಂತ ಅವನ ಸೀಳಿ ಬಾಲದಿಂದ ನಗವ ತಂದೆ 20 ವ್ಯಾಸಮುನಿಯ ಯಂತ್ರದಲ್ಲಿ ವಾಸವೆಂದು ತೂರಿಕೊಳುತ ದಾಸ ಜನರ ಆಸೆಗಳನು ಬೇಸರಾದೆ ನೀ ಸಲಿಸುವೆ 21 ನೀನು ಒಲಿಯೆ ರಾಮನೊಲಿವ ನೀನು ಮುನಿಯೆ ರಾಮ ಮುನಿವ ನಾನು ನಿನಗೆ ಅನ್ಯನಲ್ಲ ಸೂನುವಲ್ಲೇ ತಿಳಿದು ನೋಡೊ 22 ನಿನ್ನ ನಂಬಿ ಸರಮೆಯರಸ ಪನ್ನಗಾರಿರಥನ ಒಲುಮೆ- ಯನ್ನು ಪಡೆದು ಹರುಷವಾಂತು ಧನ್ಯನಾದ ಧರೆಯೆ ಮೇಲೆ 23 ನಿನ್ನ ಜರೆದ ಅವನ ಅಣ್ಣ ತನ್ನ ಬಂಧು ದೇಶ ಕೋಶ- ವನ್ನು ನೀಗಿಕೊಂಡು ಕೊನೆಗೆ ಮಣ್ಣುಗೂಡಿ ಪೋದನಯ್ಯ 24 ದಂತಿಪುರದ ದೊರೆಯೆ ಮಡದಿ ಕುಂತಿದೇವಿ ಕುವರನಾಗಿ ಕಂತುಪಿತನ ಮತವ ತಿಳಿದು ನಿಂತು ಖಳರ ಸದೆದ ಶೂರ 25 ಏಕಚಕ್ರ ನಗರದಲ್ಲಿ ಶೋಕ ಪಡುತಲಿರ್ದ ಜನರ ಕಾಕು ಬಕನ ಏಕಮುಷ್ಠಿಯಿಂದ ಕೊಂದೆ 26 ಕೀಚಕಾರಿ ನಿನ್ನ ಮಹಿಮೆ ಯೋಚನೆಗೆ ನಿಲುಕದಯ್ಯ ಯಾಚಿಸೂತಿ ದೀನನಾಗಿ ಮಾಚದಂತೆ ಸಲಹೊ ಸ್ವಾಮಿ 27 ಜರೆಯ ಸುತನ ಗರುವ ಮುರಿದು ಭರದಿ ಅವನ ತನುವ ಸೀಳಿ ಧರಣಿಧವರ ಸೆರೆಯ ಬಿಡಿಸಿ ಪರಮ ಹರುಷಗರೆದ ಧೀರ 28 ದುರುಳ ದುಶ್ಶಾಸನನ ಅಂದು ಧುರದಿ ಕೆಡಹಿ ಉರವ ಬಗೆದು ತಿರೆಯ ಹೊರೆಯ ಹರಿಸಿದಂಥ ಸರುವ ಪುಣ್ಯ ಹರಿಗೆ ಇತ್ತೆ 29 ಮಲ್ಲಯುದ್ಧದಲ್ಲಿ ನೀನು ಖುಲ್ಲ ದುರ್ಯೋಧನನ ತೊಡೆಗ ಸುರರು ನೋಡಿ ಫುಲ್ಲ ಮಳೆಯಗರೆದರಾಗ 30 ಸೃಷ್ಟಿಕರ್ತ ಕೃಷ್ಣ ನಿನ್ನ ಇಷ್ಟದೈವವೆಂದು ಅವನ ನಿಷ್ಠೆಯಿಂದ ಭಜಿಸಿ ಇಳೆಯ ಶಿಷ್ಟ ಜನರ ಕಷ್ಟ ಕಳೆದೆ 31 ಖಲರು ನಿನ್ನ ಬಲುಮೆ ನೋಡಿ ಗೆಲುವು ತಮಗೆ ಆಗದೆಂದು ಕಲಿಯುಗದಿ ವಿಪ್ರರಾಗಿ ಇಳೆಯ ಧವನ ಹಳಿಯುತಿರಲು 32 ಜಡಜನೇತ್ರ ನಿನ್ನ ಕರೆದು ಅಡಗಿಸಿವರವಾದವೆನಲು ನಡುವೆ ಮನೆಯು ಎಂಬ ದ್ವಿಜನ ಮಡದಿ ಗರ್ಭದಿಂದ ಬಂದೆ 33 ಯತಿಯು ನೀನೆಂದೆನಿಸಿಕೊಂಡು ಚ್ಯುತಿ ರಹಿತ ಪ್ರೇಕ್ಷರಿಂದ ಶ್ರುತಿಪುರಾಣ ವೇದಮಂತ್ರ ತತಿಗಳನು ಪಠಣಗೈದೆ 34 ಹರಿಯೆ ಹರನು ಹರನೆ ಹರಿಯೆಂ- ದುರುಳ ಖಳರ ಕರೆದು ಕರೆದು ಜರೆದು ಭರದಿ ಹರಿಯೆ ಶರಣೆಂದರುಹಿ ಮೆರೆದೆ 35 ಮಾಯ ಮತವ ಧಿಕ್ಕರಿಸಿ ನ್ಯಾಯ ಶಾಸ್ತ್ರವನ್ನು ರಚಿಸಿ ಕಾಯಭವನ ಪಿತನ ಹಳಿದ ನಾಯಿಗಳನು ಬಡಿದು ನಿಂದೆ 36 ಕೃತಕಭಾಷ್ಯ ರಚಿಸಿದಂಥ ದಿತಿಜರನ್ನಾನತರ ಮಾಡಿ ಗತಿಯ ತೋರಿ ಜನಕೆ ಸತ್ಯಾ- ವತಿಯ ಸುತನ ಒಲುಮೆ ಪಡೆದೆ 37 ಮಧ್ವಮತವ ಉದ್ಧರಿಸಿ ಶುದ್ಧವಾದ ಬುದ್ಧಿಗಲಿಸಿ ಹದ್ದುವಾಹನ ಮುದ್ದುಕೃಷ್ಣನ ಶ್ರದ್ಧೆಯಿಂದ ಬದ್ಧಗೈದೆ 38 ಅಷ್ಟಮಠವ ರಚನೆ ಮಾಡಿ ಶಿಷ್ಟಜನರ ಬಾಧೆ ಕಳದೆ ತುಷ್ಟರಾದ ದ್ವಿಜರು ನಿನ್ನ ಎಷ್ಟು ಪೊಗಳಿ ತೀರದಯ್ಯ 39 ದಾನಧರ್ಮವ ಮಾಡಲಿಲ್ಲ ಜ್ಞಾನಮಾರ್ಗ ಹಿಡಿಯಲಿಲ್ಲ ದೀನತನದ ಭವಣೆಯಿಂದ ನಾನು ಮರುಗಿ ಬಂದೆನೀಗ 40 ವಚನ ಮಾರ್ಗದಲ್ಲಿ ನಿನ್ನ ಪ್ರಚನೆ ಮಾಳ್ಪೆ ಕೇಳೊ ದೇವ ರಚಿಸಲಾರೆ ನಿಯಮಗಳನು ಉಚಿತ ತೋರಿದಂತೆ ಮಾಡೊ 41 ನಾರಸಿಂಹ ರಾಮಕೃಷ್ಣ ನಾರಿ ಸತ್ಯವತಿಯ ಮಗನ ಮೂರುತಿಗಳ ಹೃದಯದಲ್ಲಿ ಸೇರಿ ಭಜಿಪ ಭಾವಿ ಬ್ರಹ್ಮ 42 ವಾಯು ಹನುಮ ಭೀಮ ಮಧ್ವ ರಾಯ ನಿನ್ನ ನಂಬಿ ಬಂದೆ ಮಾಯ ಪಾಶದಿಂದ ಬಿಡಿಸಿ ಕೃಪಣ ಬಂಧು 43 ಜನುಮ ಜನುಮದಲ್ಲಿ ನೀನೆ ಎನಗಿ ಜನನಿ ಜನಕನಾಗಿ ಕನಸು ಮನಸುನಲ್ಲಿ ನಿನ್ನ ನೆನೆಸುವಂತೆ ಮತಿಯ ನೀಡೊ 44 ತುಂಗಭದ್ರ ತೀರ ವಾಸ ಭಂಗಬಾಳನು ಹೊರೆಯಲಾರೆ ಮಂಗಳಾಂಗ ಕಳುಹೊ ಎನ್ನ ರಂಗಈಶವಿಠಲ ಪುರಿಗೆ 45
--------------
ರಂಗೇಶವಿಠಲದಾಸರು
ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ ಪ ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಿಕಿ ಇಣಿಕಿ ನೋಡುವಿರಿಕಣಕ ಕುಟ್ಟೋ ಒನಕಿಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ 1 ಹುಗ್ಗಿ ಮಾಡೋ ಅಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿಹುಗ್ಗಿ ಮಾಡೋ ಸೌಟಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ 2 ಹಿರಿಯ ಹಾದಿಲಿ ಓಡುವಿರಿ ಕರಿಯ ಬೂದಿಲಿ ಹೊರಳುವಿರಿಸಿರಿ ಕಾಗಿನೆಲೆಯಾದಿಕೇಶವನ ಸ್ಮರಿಸದವರ ಗತಿ ತೋರುವಿರಿ 3 * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ದುರ್ಜನರ ಸಂಗವನು ತ್ಯಜಿಸು ಮನವೆ, ಸಾಧು ಸಜ್ಜನರ ಸಂಗವನು ಭಜಿಸಿ ಸುಖಿಯಾಗೆಲವೊ ಪ ದುಷ್ಟ ವ್ಯಾಘ್ರನ ಕೈಯ ಮುಟ್ಟಿ ಹಿಡಿ ತರಬಹುದು ಅಟ್ಟಿಬಹ ಮದಕರಿಯ ಕಟ್ಟಬಹುದು ಕೃಷ್ಣಸರ್ಪನ ಹುತ್ತ ಕಲಕಿ ಜೀವಿಸಬಹುದು ದುಷ್ಟಾತ್ಮರಾದವರ ಬಿಟ್ಟು ಕಳೆ ಮನವೆ 1 ಚೇಳಬಾಲದ ಉರಿಯ ಜ್ವಾಲೆ ತಾಳಲುಬಹುದು ಕಾಲಮೇಘದ ಸಿಡಿಲು ಬೀಳಬಹುದು ಶೂಲಪಾಣಿಯ ಫಣೆಯ ಆಲಿ ಕೀಳಲುಬಹುದು ಕಾಳುಮೂಳರ ಸಂಗ ಮರೆದು ಕಳೆ ಮನವೆ 2 ಹರಿವ ಗರಗಸಿನಲ್ಲಿ ಶಿರವನೊಡ್ಡಲುಬಹುದು ಬೆರಸಿಬಹ ಕಾಡ್ಗಿಚ್ಚ ಧರಿಸಬಹುದು ಸರಿಸದಲಿ ನಿಂತು ಕೇಸರಿಯ ಕೆಣಕಲುಬಹುದು ಮರೆಸಿ ಕೊರಳನು ಕೊಯ್ವ ನರರ ಮರೆ ಮನವೆ 3 ಒಂದು ಜಾತಿಗೆ ವಿಷವು ಪುಚ್ಚದೊಳಗಿರುತಿಹುದು ಮ- ತ್ತೊಂದು ಜಾತಿಗೆ ದಂತದೊಳಗೆ ವಿಷವು ಒಂದು ಜಾತಿಗೆ ಮೈಯ ಅಂದವೆಲ್ಲವು ವಿಷವು ಹಿಂದೆಯಾಡುವ ನುಡಿಯು ಘೋರ ವಿಷ ಮನವೆ 4 ತೇರ ಕಂಡರೆ ತೊಲಗು ಮಾರೈದನಾಕ್ಷಣದಿ ವಾರುವಗೆ ಕಡೆ ಸಾರು ಈರೈದು ಮಾರುವನು ದಾರಿಯನು ಬಿಡು ಗಜಕೆ ಮೂರು ಸಾವಿರವನ್ನು ಊರ ಬಿಡು ದುರ್ಜನರ ಸೇರದಿರು ಮನವೆ 5 ಸತ್ಯವಂತರ ಕಂಡರರ್ಥಿಯಿಂದಲೆ ಎರಗು ನಿತ್ಯದೊಳು ಶ್ರೀಹರಿಯ ಕೀರ್ತನೆಯ ಮಾಡು ಉತ್ತಮೋತ್ತಮ ಪದವ ಹತ್ತಿಸುವವರ ಬೇಡು ಧೂರ್ತಮನುಜರ ಸಂಗ ಕಿತ್ತು ಕಳೆ ಮನವೆ 6 ಶುದ್ಧಮನವೆ ಎನ್ನ ಬುದ್ಧಿಯೊಳಗಡಗಿರ್ದು ಉದ್ಧರಿಸು ವರಾಹತಿಮ್ಮಪ್ಪನನು ನೆನೆದು ಮದ್ದನರೆ ಜನ್ಮದೊಳು ಮರಳಿಬಾರದ ಹಾಗೆ ಗದ್ದುಗೆಯ ಹಾಯ್ಕೆನ್ನ ಹೃದಯ ಮಧ್ಯದಲಿ 7
--------------
ವರಹತಿಮ್ಮಪ್ಪ
ನಾನೇನು ನಿನ್ನಯ ಚರಣವ ಮಾಣೆನು ಪ ಮಾನವ ಕಾಯ್ವರನನ್ಯರ ಕಾಣೆನು ಅ.ಪ. ಕಣ್ಣನು ಬಿಡುತಲಿ ಬಿರಿಬಿರಿ ನೋಡುತಿಣ್ಣನೆ ಬೆಟ್ಟದ ಮೇಲೆ ಬಿಸಾಡುಮಣ್ಣನುಗ್ಗಲು ಹಲ್ಲಲ್ಲಿ ತೋಡುಸಣ್ಣನ ಉಗುರಿಲಿ ಹರಿಕೊಂಡು ನೋಡು 1 ಕಾಲಲಿ ತಲೆಯನು ತುಳಿಯುತೋಡಾಡುಮೇಲಾಗಿ ಕೊಡಲಿಯನೊಗೆದು ಈಡಾಡುಬಾಲದ ಮಂಗನ ಕರಡಿಯ ಛೂಬಿಡುಸೋಲಿಸಲಾವುದೆ ತಂತ್ರವ ಹೂಡು 2 ಮೃದು ನುಡಿಯಲಿ ಅವಮಾನಿಸಿ ನೂಕುಕುದುರೆಯ ತಂದೆನ್ನ ಮೈಮೇಲೆ ಹಾಕುಗದುಗಿನ ವೀರನಾರಾಯಣ ಸಾಕುಪದಗಳ ಸೇವೆಯು ನಿತ್ಯದಿ ಬೇಕು 3
--------------
ವೀರನಾರಾಯಣ
ಪ್ರಾಣನ ನೋಡಿರೈ ಮುಖ್ಯಪ್ರ್ರಾಣನ ಪಾಡಿರೈ ಪ. ಕ್ಷೋಣಿಯೊಳಗೆ ಎಣೆರಹಿತ ಪಾವನಚರಿತ ಸದ್ಗುಣಭರಿತಅ.ಪ. ಅಂಜನೆ ಸುತನೊ ಮಹಾ ಅದ್ಭ್ಭುತನೊತರÀಣಿ ಮಂಡಲಕೆ ಮುಟ್ಟಿಹಾರಿದ ಬಲದ ಶ್ರುತಿಯೊ ವಿಕ್ರಮಗತಿಯೊಸುರರಾಯುಧ ನೆಗ್ಗಿಸಿದ ಕಪಿಯಗ್ರಣಿಯೊ ವಜ್ರದ ಖಣಿಯೊಶರಣ ವಂದಿತ ಚರಿತ ಮೂರ್ಲೋಕ ಗುರುವೊ ಕಲ್ಪತರುವೊ1 ರಾಮ ಪದಾಂಬುಜ ಬಿಂಬಪರಾಗ ಮಧುಪನೊ ದೇವಾಧಿಪನೊತಾಮಸ ರಾವಣನೆದೆಗೊತ್ತಿದ ಈ ಕರವೊ ಸಿಡಿಲಬ್ಬರವೊಪ್ರೇಮದಿ ರಣದೊಳಗ್ಹಾರಿ ರಥವನೊದ್ದ ಮಾರುತಿಯೊ ಪುಣ್ಯ ಮೂರುತಿಯೊರೋಮಕೆ ಸಿಲ್ಕದ ಹನುಮನ ಬಾಲದ ಸರಳೊ ದೈತ್ಯರಿಗುರುಳೊ 2 ಪಾದ ಪಡೆದಂಥ ಪದವೊ ಸಾಗರ ಮದವೊನೆನೆಯಲು ದುರಿತನಿವಾರಣ ಕರುಣಾವಾರಿಧಿಯೊ ಭಕ್ತರ ಸುಧೆಯೊಅನುದಿನದಲಿ ಹಯವದನನ ನೆನೆಯುವ ದಯವೊ ಗತಿ ಆಶ್ರಯವೊ3
--------------
ವಾದಿರಾಜ
ಪ್ರಾಣನ್ನೋಡೀರೇ ಮುಖ್ಯ ಪ್ರಾಣನ್ನೋಡಿರೇ ಪ ಕ್ಷೋಣಿಯೊಳಗ ಸುಖ ಬೀರುವ ಪಾದನ ಚರಿತಾ ಸದ್ಗುಣ ಭರಿತಾ ಅ.ಪ. ನರಲೀಲೆಯಲವ - ತರಿಸದ ಅಂಜನಿ ಸುತ-ನೊ ಮಹಾದ್ಬುತನೋ ಮಲೆಯೊ ವಿಕ್ರಮ ಸ್ಥಿತಿಯೋ 1 ಸುರರಾಯುಧವನೆ ಲೆಕ್ಕಿಸ ಕಪಿ ಯಾಗ್ರಣಿಯೊ ವಜ್ರದ ಖಣಿಯೋ ಶರಣರ ವಾಂಛಿತ ಪೂರಿಪ ಮೂಲೋಕ ಗುರುವೋ ಕಲ್ಪ ತರುವೋ2 ರಾಮ ಪದಾಂಬುಜ ಕೊಂಬ ಪರಾಗ ಮಧುಪನೋ ದೇವಾಧಿ ಪನೋ ಪ್ರೇಮದಿ ರಣದಲಿ ಹರಿರಥವಾದ ಮೂರುತಿಯೋ ಪುಣ್ಯ ಮೂರುತಿಯೋ3 ತಾಮಸ ರಾವಣ ನೆದಿಗೊತ್ತದ ಕರಮೋ ಸಿಡಿಲದ ಧರಮೋ ಮ್ಯೋಮಕ ಮೀರುವ ಹನುಮನ ಬಾಲದ ಸರುಳೋ ದೈತ್ಯರ ಉರುಳೋ4 ಕ್ಷಣದಲಿ ಸಂಜೀವನ ಗಿರಿ ತಂದಿಹ ಪದವೋ ಸಾಧುರ ಮುದಮೋ ವನಜ ಭವನ ಪದವಿಯ ಪಡಕೊಂಡಾ ತಪಮೋ ತಾ ಅಪರೂಪಮೋ 5 ದುರಿತ ನಿವಾರಿಪ ಕರುಣಾ ನಿಧಿಯೋ ಭಕ್ತರ ಸುಧೆಯೋ ಅನುದಿನ ಮಹಿಪತಿ ನಂದನ ಸಲಹುವ ದಯಮೋ ಗತಿ ಆಶ್ರಯಮೋ ||6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರೆಯದೆ ಸಲಹೆನ್ನನು ಯಾದವಗಿರಿ- ದೊರೆ ಮಂಗರಾಯ ನೀನು ಸರ್ವಜೀವೋತ್ತಮನೆ ನಿನ್ನನು ಮರೆಯಹೊಕ್ಕೆನು ಮಾರುತಾತ್ಮಜ ಕರೆದು ಭಕÀುತರಿಗ್ವರವ ನೀಡುವೊ ಭಾರತೀಶ ಪ ಸೀತಾವಲ್ಲಭ ರಾಮರ ಪಾದಾಂಬುಜ ದೂತನೆಂದೆನಿಸಿದೆಯೊ ಮಾತೆಗಿಟ್ಟ ಮುದ್ರಿಕೆಯನು ಘಾತಕ ರಾವಣನ ಪುರಕೆ ಕಾರ್ತೀಕದುತ್ಸವ ಮಾಡಿ ಮಂಗ- ಳಾರ್ತಿ ಬೆಳಗಿದೆ ಬಾಲದಿಂದ 1 ಬಕ ಹಿಡಿಂಬಕ ಕೀಚಕ ಕಿಮ್ಮೀರ ಮಾಗಧ ಮುಖ್ಯ ಪ್ರಮುಖರನು ಸಕಲ ಅನುಜರ ಸಹಿತ ದುರ್ಯೋಧನನ ಪ್ರಾಣವ ಸೆಳೆದÀು ಬ್ಯಾಗನೆ ನಕುಲ ಧರ್ಮಜನಾ ಸಾದೇವ ದ್ರೌಪದಿಗೆ ಸುಖ ಸಂತೋಷ ನೀಡಿದೆ 2 ಮಧ್ಯಗೇಹರಲ್ಲಿ ಜನಿಸಿ ಸುಜನರಿಗೆ ಶುದ್ಧಶಾಸ್ತ್ರವ ಬೋಧಿಸಿ ಗೆದÀ್ದು ಮಾಯಾವಾದಿಗಳ ವಾದಪ್ರ- ಸಿದ್ಧನೆನಿಸಿದೆ ಮಧ್ವಮುನಿ ಮುದ್ದು ಭೀಮೇಶಕೃಷ್ಣನ ಪ್ರ- ಸಿದ್ಧಿ ಮಾಡಿದೆ ಪರಮ ಗುರುವೆ 3
--------------
ಹರಪನಹಳ್ಳಿಭೀಮವ್ವ
ರಂಗ ನಿನ್ನ ನಂಬಿದೆ ಮಾಂಗಿರಿ ಶೃಂಗಾರಪೂರ್ಣ ಶುಭಾಂಗ ಶ್ರೀಕಾವೇರಿ ಪ ಮಂಗಳ ಮದನಾಂಗ ಗಿರಿಧರ ರಥಾಂಗ ಕೃಪಾಂಗ ಅ.ಪ ಬಾಲದಿವಾಕರ ತೇಜೋಲ್ಲಾಸ ಶೀಲ ಸುಗುಣಾ ಸಂಭೂಷಿತ ವೇಷ 1 ನೀಲ ನೀರದ ತಾರ ಸರೋರುಹ ಲೋಲ ಬಂಧುರ ನಯನಯುಗ 2 ಮೂಲಾಧಾರ ವೈಕುಂಠಪುರೀಶ ಹಾಲಾಹಲಧರ ಮಾಂಗಿರಿ ಪರೇಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸುತ್ತಲು ಕಾಣೆನು ಪಿರಿಯ ಸುಖಮುನಿಗೆ ಸರಿಯನೋಡಿವನ ಪರಿಯ ಚಿತ್ತಜನ ಪೆತ್ತ ಹರಿಯಭಕ್ತನಿವನತಿ ಶಕ್ತನರಿಯ ಪ . ವಿಷಯಂಗಳ ತೊರೆದ ವಿಮಲ ಶಾಸ್ತ್ರದಿ ಮೆರೆದಅಸದುಕ್ತಿಯ ಜರೆದ ಅಹಿತರೆಲ್ಲರ ಮುರಿದಋಷಿ ಇವ ನಮ್ಮ ಪೊರೆದ ರಸಿಕರರ್ಥಿಯ ಕರೆದಹೃಷೀಕೇಶಗೆ ವರದ ಪಿರಿಯ ದೈವನೆಂದೊರೆದ1 ಹಿಂದೆ ಹನುಮಂತನಾದ ಹೀನರಾವಣನ್ನ ಪುರದಮಂದಿಯನೆಲ್ಲರ ಸದೆದ ಮನೆಯ ತನ್ನ ಬಾಲದಮಂದ ವಹ್ನಿಯಿಂದುರುಪಿದÀ ಮರಗಳ ಚೆಂದದಿ ಕೆಡಹಿದಇಂದಿರೆಗೆ ರಾಮನುಡಿದ ಇಷ್ಟವಾರ್ತೆಯ ಪೇಳಿದ 2 ಭೀಮನಾಗಿ ಕಲಿಯ ಗೆದ್ದ ಭೀತ ದುಃಶ್ಯಾಸನ್ನನೊದ್ದತಾಮಸ ಮಾಗಧನ ಸೀಳ್ದ ತನ್ನ ನಂಬಿದವರನಾಳ್ದಸ್ವಾಮಿ ಹಯವದನನಿರ್ದ ಸೀಮೆಯರ್ತಿಯ ಬಿಡಿಸಿಬಾಳ್ದಆ ಮಹಾ ಭುಜಬಲನೆ ಮಧ್ವಾಚಾರ್ಯನೆಂಬುದು ನಿಗಮಸಿದ್ಧ3
--------------
ವಾದಿರಾಜ
ಸುಂದರ ಕಾಂಡ ರಾಮಾಯಣ ಸಿರಿ ಸಿರಿ ಹನುಮನಾ ||ಮೆರೆವ ಸಚ್ಚರಿತೆ ಮಮ | ಗುರುವೆ ನುಡಿಸೀದಷ್ಟುಒರೆವೆ ಕೇಳ್ಪುದು ಸಜ್ಜನಾ ಪ ಗೃಹ ಮೇಧಿ ಇರುವ ಬಗೆ | ಬಹು ಪರೀಯಲಿ ತೋರಿಗುಹ ವನಂಗಳನೆ ಚರಿಸೀ |ಗೃಹಿಣಿಯನು ಕಾಣದಲೆ | ಬಹು ನಟಸಿ ನರರಂತೆಮಹ ಮಹಿಮ ರಾಮ ಬರಲೂ 1 ಪತಿ ದಶರಥನ | ಸುತನ ಕಂಡೆರಗಿ ರವಿಸುತಗೆ ರಾಜ್ಯವನೆ ಕೊಡಿಸೀ 2 ರಾಮನಾಣತಿ ಪೊತ್ತು | ಭೂಮಿಜೆಯ ವಾರ್ತೆಯನುನೇಮದಲಿ ತರುವೆ ನೆನುತಾ ||ಆ ಮಹಾ ಶರಧಿಯನು | ಧೀಮಂತ ಲಂಘಿಸುತಭೂಮಿಜೆಯ ಕಂಡು ಎರಗೀ 3 ಪತಿ | ರಾಮನ್ನ ಕಂಡ ಪರಿಆಮೋದದಲ್ಲಿರುತಿರೇ 4 ಶ್ರೀ ಲೋಲ ರಾಮನಿಗೆ | ಆಳಾಗಿ ಇರಲೊಂದುವಾಲುಳ್ಳ ಕಪಿಯು ಬಂದೂ ||ಕೇಳುವರು ಇಲ್ಲದಲೆ | ಪೋಲಾಗಿ ಹೋಯ್ತೆಂಬಕೀಳು ನುಡಿಗವಕಾಶ ಕೊಡದೇ 5 ವಂದೆರಡು ಹಣ್ಣಾನು | ತಿಂದ್ಹೋಗುವೇನೆಂದುಇಂದೀವರಾಕ್ಷಿಯ ಬೇಡುತಾ ||ನಂದೀಸಿ ಅಶೋಕ | ನಂದನ ವನವ ಮದಸಿಂಧೂರ ನಂತೆಸಗಿದೇ 6 ಕೋಟ್ಯಶೀತಿಯು ನಿ | ಶಾಟ ಯೂಥಪ ಸಹಸಾಷ್ಟ ಕಾಯುತ ಮುಖ್ಯರಾ ||ಖೇಟ ರಾವಣ ಸೇನೆ | ಕೂಟ ಮೂರರಲೊಂದುರೋಟಿಸುತ ನೀ ಮೆರೆದೆಯೋ 7 ಅಕ್ಷೋಹ್ಣಿ ಬಲ ಸಹಿತ | ರಾಕ್ಷಸಾಧಿಪ ಸುತನುಅಕ್ಷಯ್ಯ ಕುವರ ಬರಲೂ ||ಪಕ್ಷೀಂದ್ರ ತೆರ ಪಿಡಿದು | ಈ ಕ್ಷಿತಿಗೆ ಅಪ್ಪಳಿಸೆತಕ್ಷಣದಲಸು ನೀಗಿದಾ 8 ಮಂದಜಾಸನ ವರದಿ | ಇಂದ್ರಜಿತು ಮದವೇರಿಬಂದೆಸೆಯೆ ಬ್ರಹ್ಮಾಸ್ತ್ರವಾ ||ಛಂದದಲ್ಯೋಚಿಸುತ | ಬಂಧನಕೆ ನೀನಾಗಿನಂದದ ಲ್ವೊಳಗಾದೆಯೋ 9 ತೆತ್ತೀಸ ಕೋಟಿ ದೇ | ವತ್ತೀಗಳಿಗೆಲ್ಲಾಉತ್ತೂಮನಾದ ನೀನೂ ||ಸುತ್ತೀಸಿ ಬಾಲವನು | ಹತ್ತೂತಲೆಯವನನೆತ್ತೀಯ ಮೇಲ್ ಕುಳಿತೆಯೋ 10 ನಾರೀಯ ಚೋರ ನಿ | ನ್ನಾರೆಂದು ಕೇಳಾಲುಮಾರುತ್ತರವಿತ್ತು ಜರಿದೇ ||ಮಾರೀಚ ಮೊದಲಾದ | ನೂರಾರು ರಕ್ಕಸರದೂರೋಡಿಸೀದವನ ದೂತಾ 11 ಕೋಟಲೆಗಳ ಕೊಟ್ಟ | ತಾಟಕಾದೀ ದೈತ್ಯಕೂಟಗಳ ಸಂಹರಿಸಿದಾ ||ಕೂಟಸ್ಥ ಲೋಕಗಳ | ನೋಟದಲಿ ದಹಿಪ ವೈರಾಟ ಪ್ರಭುವಿನಾಳೂ 12 ಕೇಳೆಲೋ ರಾವಣನೇ ತಿಳಿಯಯಾ ನೀನು ನಿನ್‍ಹುಳುವೆಂದು ನಿಜ ಬಾಲದೀ |ಸಿಲುಕಿಸಿ ಜಲನಿಧಿ | ನಾಲಕ್ಕು ಮುಳುಗಿದವಾಲಿ ಪೆಸರನು ಮರೆತೆಯಾ 13 ತಾಲಮರಗಳ ಶೀಳಿ | ವಾಲೀಯನೆ ಕೊಂದರ್ಕಬಾಲಗೇ ರಾಜ್ಯ ಕೊಡಿಸೀ ||ಕೋಲಿನಿಂ ನಿಮ್ಮೆಲ್ಲ | ಹೂಳುವ ರಾಮನಆಳು ನಾನೆಂದು ತಿಳಿಯೋ 14 ರಕ್ಕಸ ಪತಿಯಾಜ್ಞೆ | ಇಕ್ಕಿ ತಲೆಯಾ ಮೇಲೆರಕ್ಕಸರೆಲ್ಲ ತವ ಪುಚ್ಛ ||ಕಿಕ್ಕಲೂ ಉರಿ ಲಂಕೆ | ಪೊಕ್ಕು ಪುರವನೆ ದಹಿಸಿಅಕ್ಕರದಿ ವನದಿ ಹಾರೀ 15 ಕಾಯ ಸಹಿತರ ನೋಡಿಪ್ರೀಯ ದ್ವಾರ್ತೆಯ ನರುಹಲೂ ||ಗೇಯ ಹನುಮನ ತುತಿಸಿ || ರಾಯಗೆರಗುವ ವನದಿಕಾಯ ಕುಪ್ಪಳಿಸುತಿರಲೂ 16 ಕಾತುರತೆಯ ಕಪಿ | ಜಾತೆಗಳ ಸಂತೈಸಿಪ್ರೀತಿಯಿಂ ಮಧುವನವನಳಿದ ||ಸೀತೆಯನು ಕಂಡಂಥ | ವಾರ್ತೆಯನು ಪೇಳೆ ರಘುಜಾತ ನಿನ್ನನು | ಅಪ್ಪಿದಾ 17 ಎರಡೇಳು ಭುವನದೊಳು | ಇರುವರೇ ನಿನ್ಹೊರತುಹರಿಗೆ ಪ್ರೀತ್ಯಾಸ್ಪದನು ಎನಿಸೀ ||ಮೆರೆವ ಭಕ್ತಾಗ್ರಣಿಯೆ | ಎರಗುವೆನು ತ್ವತ್ವದಕೆಹರಿಭಕ್ತಿ ಕರುಣಿಸಯ್ಯಾ 18 ಉದಯಕಾಲದಲೆದ್ದು | ಮುದದಿಂದಲೀ ಪದವಸದಯ ಹೃದಯರು ಪಠಿಸಲೂ ||ಬದಿಗ ಗುರು ಗೋವಿಂದ | ವಿಠಲನೋಳ್ ಸದ್ಭಕ್ತಿವದಗಿ ಪಾಲಿಪ ಹನುಮನೂ 19
--------------
ಗುರುಗೋವಿಂದವಿಠಲರು