ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವದೆನೆಗೆ ಪ್ರೀತಿ ಎಂದೆಂಬಿಯಾ | ದೇವ ದೇವಕಿ ತನುಜ ಬಿನ್ನಪವ ಮಾಡುವೆನೊ ಪ ದೊರೆತನವಲ್ಲೆ ಧನವಲ್ಲೆ ಒಬ್ಬರ ಬಳಿಯ | ಹಿರಿಯತನವಲ್ಲೆ ಹಿಗ್ಗುವುದು ವಲ್ಲೆ | ಹರಿ ನಿನ್ನ ಚರಣಗಳ ಸ್ಮರಿಸುವ ಭಾಗವತರ | ಅರಮನೆಯ ಬೀದಿಯಲಿ ಹೊರಳುವ ಭಾಗ್ಯವ ಕೊಡು 1 ಪಂಡಿತನಾಗಲಿವಲ್ಲೆ ಫಲವಲ್ಲೆ ನಾವು ಪ್ರ | ಚಂಡ ಯೋಗಗಳೊಲ್ಲೆ ಯಾಗವಲ್ಲೆ | ಥಂಡ ಥÀಂಡದಿ ನಿನ್ನ ಕೊಂಡಾಡುವರ ಬಳಿಯ | ಕೊಂಡರಾಗಿಪ್ಪವರ ಸೇರುವ ಭಾಗ್ಯವ ಕೊಡು 2 ಅಂದಣವೇರಲಿವಲ್ಲೆ ಆತ್ಮಸುಖವಲ್ಲೆ ನಾ | ನೆಂದು ಪೇಳುವರ ಸಂಗತಿಯವಲ್ಲೆ | ನಿತ್ಯ | ನಿಂದಂಗಳದೊಳಗೆ ಯಿಪ್ಪ ಭಾಗ್ಯವ ಕೊಡು 3 ರಸ ರಸಾಯನ ವಲ್ಲೆ ಹಸನಾದ ಪಟ್ಟಿ ರಂ | ಜಿಸುವದುವಲ್ಲೆ ರಾಗಗಳುವಲ್ಲೆ | ವಸುದೇವ ಸುತ ನಿನ್ನ ಪೆಸರು ಎಣಿಸುವವರ | ಶಿಶುವಾಗಿ ಬದಕುವ ಕುಶಲ ಭಾಗ್ಯವ ಕೊಡು 4 ಪುಣ್ಯ ತೀರ್ಥಗಳು ನಿನ್ನ ಮನಸಿಗೆ ಬಂದ | ವನ್ನು ಮಾಡಿಸು ಬಿಡದೆ ಮನ್ನಿಸೆನ್ನ | ಚನ್ನ ಮೂರುತಿ ಚೆನ್ನ ವಿಜಯವಿಠ್ಠಲರೇಯ | ಎನ್ನ ವಂದನೆಯನ್ನು ಮುನ್ನು ನೀ ಕೈಕೊಂಡು5
--------------
ವಿಜಯದಾಸ
ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ ಪ್ರಾಣನಾಯಕನ ತಿಳಿವುದೊಂದೆ ಜ್ಞಾನಾಭ್ಯಾಸ ಮಾಡಿ ಧ್ರುವ ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು ಯಾಕೆ ಸಾರ ಸಂಜೀವನಿಲ್ಲದೆ ನೂರು ಗಿಡಮೂಲಿಕೆ ಯಾಕೆ ನೆರೆ ಇಲ್ಲದೆ ಸಾಧುಸಜ್ಜನರು ಸರ್ವಬಳಗವ್ಯಾಕೆ ಪರಮ ತತ್ವಜ್ಞಾನ ಒಂದಿಲ್ಲದೆ ಸುರಿಯುವ ಮಾತಿನ್ಯಾಕೆ 1 ಪ್ರಾಣವಿಲ್ಲದ ಸುಂದರವಾದ ಶರೀರ್ಯಾಕೆ ಕಾಲ ಬದಕುವುವದ್ಯಾಕೆ ಸ್ವಾನುಭವದ ಸುಖ ನೆಲೆಯುಗೊಳ್ಳದೆ ಒಣ ಡಂಭವ್ಯಾಕೆ ತಾನಾಗಿಹ್ಯ ವಸ್ತು ದೊರಕಿಲ್ಲದೆ ನಾ ನೀನೆಂಬುದ್ಯಾಕೆ 2 ಶ್ರೀ ಹರಿಮಹಿಮೆಯ ಸೋಹ್ಯ ತಿಳಿಯದೆ ದೇಹ್ಯವ್ಯಾಕೆ ಗುಹ್ಯಗುರುತವಿಲ್ಲದೆ ಸಾಯಸಬಡುವದ್ಯಾಕೆ ಸಾಹ್ಯಮಾಡುವ ಸದ್ವಸ್ತು ನೋಡದ ಕಣ್ಣು ನೋಟವ್ಯಾಕೆ ಮಹಿಪತಿಸ್ವಾಮಿ ಸದ್ಗುರುಪಾದ ಕಾಣದ ಜನ್ಮವ್ಯಾಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು