ಬಿಡಬೇಡ ರಂಗಯ್ಯ ಬಡವನೂ ಪಿಡಿಕಯ್ಯ
ಒಡೆಯ ನಿನ್ನಡಿ ಪಿಡಿದೆ ದಯೆಮಾಡೊ ಜೀಯ ಪ
ಕಡಲಣುಗಿಯಣ್ಮನೇ ಕಡೆಹಾಯ್ಸೊ ಕಷ್ಟದಿಂ
ಕಡುಮುದದಿ ಕೊಂಡಾಡಿ ಬೇಡುವೆನೊ ದೊರೆಯೆ ಅ.ಪ
ಸಪ್ತ ಋಷಿಗಳು ಸತತ ಗುಪ್ತದಿಂ ಧ್ಯಾನಿಸುತ
ತೃಪ್ತರಪ್ಪರು ಅಪ್ತ ನಿನ್ನ ನುತಿಸಿ
ಅಪ್ಪ ನೀನವರಿಂದೆ ವಿಪ್ರತ್ವವಂ ತೋರಿ
ಅಪ್ರತಿಮ ತಾರಕ ಬ್ರಹ್ಮ ಬೋಧಿಸಿದೆ 1
ಉತ್ತರೆಯ ಬಸುರೊಳಗೆ ಬ್ರಹ್ಮಾಸ್ತ್ರ ಬಾಧಿಸಲು
ಅತ್ಯಗತ್ಯದಿ ಪ್ರಭುವೆ ಚಕ್ರ ಪಿಡಿದು
ಸುತ್ತೆತ್ತಲಾಶಿಶುವ ಸಂರಕ್ಷಣೆಯಗೈದೆ
ಉತ್ತಮೋತ್ತಮ ದೈವ ನೀನೆ ಜಗದಯ್ಯ 2
ಅಂಬರೀಷನ ಮೇಲೆ ಜಂಭದಿಂ ಮುನಿ ಮುನಿಯೆ
ಕಂಬುಧಾರಿಯೆನೀಂ ಸುನಾಭ ಕಳುಹಿ
ಬೆಂಬಿಡದೆ ಸುತ್ತಿಸಲು ಇಂಬಿನಿಂ ಪದಪಡಿಯೆ
ಸಂಭ್ರಮದಿ ಕಾಯ್ದಂಥ ಸದ್ಭಕ್ತ ಬಂಧು 3
ಗಜರಾಜನಂ ಸರದಿ ಮೊಸಳೆ ಪೀಡಿಸುತಿರಲು
ನಿಜರಥಾಂಗವ ಕಳುಹಿ ನಕ್ರನಂ ಸೀಳಿ
ಅಜಪಿತನೆ ನೀನವರ ವಕ್ರ ಹರಿಸುತ ಕಾಯ್ದೆ
ತ್ರಿಜಗಾದಿ ನಾಥನೇ ಭಕ್ತಪಾಲ 4
ಶರಣ ರಕ್ಷಣೆಗಾಗಿ ನೀಂ ಸುದರ್ಶನ ಪಿಡಿದೆ
ವರದ ವೇಂಕಟರಮಣ ವೈಷ್ಣವೋದ್ಧರಣ
ಕರುಣಿ ನನ್ನಪರಾಧವಪರಿಮಿತವಿದೆ ಕ್ಷಮಿಸು
ತರಳನಂ ಕಾಪಾಡು ಜಾಜೀಶ ನೋಡು 5