ಪಾಲಿಸು ದಯಾಕರನೆ ನೀಲಮೇಘಶ್ಯಾಮ
ಪಾಲಿಸು ದಯಾಕರನೆ ಪ
ಪಾಲಿಸು ಎನ್ನ ಕರುಣಾಳು ವ್ಯಾಲಮಾಲ
ಬಾಲನ ದಯದಿಂ ಮಾಲತುಲಸೀವನ ಅ.ಪ
ಬಂದುಬಿದ್ದೆನಯ್ಯ ಸಂಸಾರ ದಂದುಗ
ವೆಂಬ ಮಾಯಬಲೆಯೊಳು ನೊಂದು
ಕಾಯ ಬಂಧನಿವಾರಿಸಯ್ಯ
ನೊಂದಿಸಿ ಅರ್ಥವ ತಂದು ಸತಿಯು ಸುತ
ರೆಂದು ಸಲಹಿ ಯಮ ಬಂಧಕೀಡಾದೆನು
ಮುಂದೆ ಇಂಥ ಬವಣಿಂದೆ ತಾರದೆನ್ನ 1
ರಿಣವೆಂಬ ಸೂತಕಿದು ಎನ್ನಗೆ
ಘನವಾಗಿ ಕಾಡುವುದು ಇನ್ನಿದು ಜನು
ಜನುಮದಿ ಬಿಡದು ಬೆನ್ನತ್ತಿ ಬರ್ಪುದು
ಗನ್ನಗತಕನಾಗಿನ್ನು ಭವಭವಂಗ
ಬನ್ನ ಬಡಲಿಬೇಕೊ
ಮನ್ನಿಸಿ ದಯದಿಂ ನಿನ್ನ ಕೃಪೋದಕ
ವನ್ನು ತಳೆದು ಬೇಗೆನ್ನ ಶುದ್ಧಮಾಡು 2
ಆಗಿಹೋದದ್ದ್ಹೋಯ್ತು ಮುಂದಿಹ್ಯ
ಭೋಗ ಬೇಡ ಜಗತ್ತು ಪಾಲನೆ
ಬಾಗುವೆ ಮನವರಿತು ಚರಣಕೆ ಶಿರವಿತ್ತು
ಭೋಗಭಾಗ್ಯದಾಸೆ ನೀಗಿಸಿ ಈ ಭವ
ಸಾಗರ ದಾಂಟಿಸು ಯೋಗಿಗಳರಸನೆ
ನಾಗಶಯನ ದಯಮಾಡಿ ದಾಸನ ದು
ರ್ಭೋಗ ದೂರಮಾಡು ಜಗಮೋಹ ಶ್ರೀರಾಮ 3