ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನವಂತನಾದವನೆ ಘನವಂತ ಜಗದಿ ಧನವಂತನಾಗದವ ಹೆಣಕೆ ಕಡೆ ಇಹ್ಯದಿ ಪ ಧನಿಕನ ಮನೆಮುಂದೆ ದಿನಕರನ ಪ್ರಭೆಯಂತೆ ಜನಸಮೂಹ ನೆರೆಯುತಿಹ್ಯದನುದಿನವು ಬಿಡದೆ ಮಣಿದು ಅವನಿಗೆ ತಮ್ಮ ಮನೆಯ ಪರಿವ್ಯಿಲ್ಲದೇ ಮನ್ನಿಪರು ಅವನೊಚನ ಘನಭಕುತಿಲಿಂದ 1 ಸಿರಿಯಿಲ್ಲದವ ಬಂದು ಶರಣೆಂದು ಕರಮುಗಿಯೆ ಗರುವದಿಂ ಕೂಡ್ರುವರು ಶಿರವೆತ್ತಿ ನೋಡದೆ ತಿರುಕುದೆ ಇವನು ಹೆರಕೊಂಡು ತಿನಲಿಕ್ಕೆ ತಿರುಗುವನು ಎಂದೆನುತ ತಿರಿಸುವರು ಹೀನ 2 ಬಂಧುಬಳಗವುಯೆಂದು ಬಂದು ಕರೆಯಲವನ ಮುಂದೆ ನುಡಿಯುವರು ನಿನ್ನ ಮಂದಿರಕೆ ಬಂದು ಚಂದದಿಂದುಂಡೇವೇನೆಂದು ಜರೆವರು ಮನಕೆ ಬಂದ ತೆರದವನ ಮನನೊಂದಳಲುವಂತೆ 3 ಹತ್ತಿರದವರಾರು ಹತ್ತಿರಕೆ ಬಾರರು ಸತ್ತ್ಹೆಣನ ಕಂಡಂತೆ ಮತ್ತಿವನ ಕಂಡು ಅತ್ತಿತ್ತ ಪೋಗುವರು ಸುತ್ತಿ ಪಥಸೇರುವರು ಆರ್ಥಿಲ್ಲದವನಿರವು ವ್ಯರ್ಥ ಮತ್ರ್ಯದೊಳು 4 ಹರಿದ್ಹೋಗ ಸಿರಿಯೆಂದು ಅರಿಯದೆ ಗರುವದಿ ಚರಿಸುವ ಅಧಮಜನರಿರವೇನು ಜಗದಿ ಗರುವಿಕರ ಸಿರಿಗಿಂತ ಶರಣರ ಬಡತನವೇ ಪಿರಿದೆಲೋ ಶ್ರೀರಾಮ ಅರಿದು ನಾನು ಬೇಡ್ವೆ 5
--------------
ರಾಮದಾಸರು
ನರಹರಿಯ ಗುಣ ಕೊಂಡಾಡುವುದೇ ಲೇಸು ಮುರಲೀಧರನೊಲಿಸಿ ಪರಗತಿ ಸುಖವ ಬಯಸು ಪ ಸುಳ್ಳುಮಾತಾಡಿ ಧನಗಳಿಸುವುದಕಿಂತಲಿ ಒಳ್ಳೆಯವನೆನಿಸುವ ಬಡತನವೇ ಲೇಸು ಕಳ್ಳತನದಿಂದಲಿ ಕದ್ದು ತಿಂಬುವುದಕಿಂತ ಕೇಳಿ ಸಿಕ್ಕಷ್ಟುಂಡು ಇರುವುದೇ ಲೇಸು 1 ಸಾಲದಿಂದರಮನೆಯ ಕಲ್ಪಿಸಿರುವುದಕಿಂತಾ ಸಾಲಿಲ್ಲದ ಮನೆಯಲ್ಲಿಹುದೇ ಲೇಸು ಕಾಲನ ದೂತರಿಂದೆಳೆಸಿಕೊಳ್ಳದೇ ಲಕ್ಷ್ಮೀ ಲೋಲನಾ ಪಾದದಲ್ಲಿರುವುದೇ ಲೇಸು 2 ಅನ್ಯ ಸ್ತ್ರೀಯರ ಸುಖವ ಬಯಸಿ ಕೆಡುವುದಕಿಂತ ತನ್ನವಳ ಕೂಡ ಬಡಿದಾಡುವುದೇ ಲೇಸು ಹೊನ್ನು ಹೆಣ್ಣು ಮಣ್ಣಿಗಾಸೆ ಮಾಡದೇ ಮನಸನ್ನ ಸಿರಿಪತಿಗೆ ಒಪ್ಪಿಸುವುದೇ ಲೇಸು 3 ತಾನು ಮಾಡಿದೆನೆಂಬುದಕಿಂತ ಹರಿಯ ಆಧೀನವೆಂದರಿಯುವುದು ಪರಮ ಲೇಸು ಶ್ವಾನಗೆ ಮಾಂಸವನು ತಿನಿಸಿ ಸಲಹುವುದಕಿಂತ ಜ್ಞಾನಿಯಾದವನ ಸಲಹುವುದೇ ಲೇಸು 4 ದುಷ್ಟ ಮನುಜನು ಮಾಡುವ ಕೃಪೆಗಿಂತಲೂ ಶ್ರೇಷ್ಠ ನರರಿಂದ ಬೈಸಿಕೊಳ್ಳವುದೇ ಲೇಸು ಕೆಟ್ಟ ಸಂಸಾರ ಸುಖ ಬೇಡುವುದಕಿಂತ ಹನುಮೇಶ ವಿಠಲನ ಧ್ಯಾನದ ಸುಖವೇ ಲೇಸು 5
--------------
ಹನುಮೇಶವಿಠಲ
ಸುಮ್ಮನೆ ದೂರುವರೇ ಅಮ್ಮಯ್ಯ ಎನ್ನ ಸುಮ್ಮನೆ ದೂರುವರೇ ಪ ತಮ್ಮಯ ಸರಸಕೆ ಸಮ್ಮತಿ ಕೊಡದಿರೆ ಕಣ್ಮಣಿಯರುಗಳೆಲ್ಲಾ ಅ.ಪ ಕ್ಷೀರಚೋರನೆಂಬೋರೇ ಅಮ್ಮಯ್ಯ ಇವರ ಕೋರಿಕೆ ನಡೆಸದಿರೆ ಕ್ಷೀರ ಸಾಗರಶಾಯಿ ನಾರಾಯಣ ನಾನೆ ಕ್ಷೀರಕೆ ಬಡತನವೇ ಅಮ್ಮಯ್ಯ 1 ತುಂಟನೆಂಬೋರೆ ಎನ್ನ ಅಮ್ಮಯ್ಯ ಇವರ ತಂಟೆ ಏತಕೆ ಎನಗೆ ತುಂಟತನದಿ ಪಾಪ ಗಂಟು ಹೋಯಿತೆ ವೈ ಕುಂಠಪತಿಯೇ ಸಾಕ್ಷಿ ಅಮ್ಮಯ್ಯ 2 ಮಾಯಗಾರನೆಂಬೋರೆ ಅಮ್ಮಯ್ಯ ಎನ್ನ ತೋಯಜಾಕ್ಷಿಯರೆಲ್ಲ ಮಾಯಕೆ ಸಿಲುಕದೆ ಮಾಯೆಗೊಡೆಯನಾಗೆ ಜಾಯಮಾನವಲ್ಲವೇ ಅಮ್ಮಯ್ಯ 3 ಯಾರಿಂದೆನಗೇನೆ ಅಮ್ಮಯ್ಯ ಎನ್ನ ಜಾರನೆಂಬೋರೆ ಎಲ್ಲಾ ಯಾರು ಒಪ್ಪುವರೇ ಕುಮಾರನಲ್ಲವೆ ನಾನು ಮಾರಜನಕ ನಾನೆ ಅಮ್ಮಯ್ಯ 4 ಎನ್ನ ಮಾತನು ಕೇಳೆ ಅಮ್ಮಯ್ಯ ಈಗ ಕನ್ನೆಯರಿಗೆ ಪೇಳೆ ಇನ್ನಾದರು ಇವರು ಅನ್ಯಾಯವ ಬಿಟ್ಟು ಎನ್ನನು ಪೊಗಳಿದರೆ ಅಮ್ಮಯ್ಯ ಪ್ರಸನ್ನನಾಗುವೆನೆಂದು 5
--------------
ವಿದ್ಯಾಪ್ರಸನ್ನತೀರ್ಥರು